Monday 25 June 2012

ಮುಂಜಾವು



ಮುಂಜಾವಿನ ಮಂಜಿನ ಹನಿ ಭುವಿಯ ಸ್ಪರ್ಷಿಸೆ
ಮಣ್ಣ ಕಂಪು ಘಮ್ಮೆನ್ನುತ ಮೂಗ ಸೋಕಿದೆ 
ಮುದುಡಿದ್ದಾ ತಾವರೆಯದು ಮೈಯ್ಯ ಚಾಚುತಾ 
ವೈಯ್ಯಾರದಿ ಗಾಳಿಯ ಜೊತೆ ನೃತ್ಯವಾಡಿದೆ

ದುಂಬಿ ಗಣವು ಮಧು ಹೀರುತ ಹಮ್ಮು ಬಿಮ್ಮಲಿ 
ಅತ್ತ ಇತ್ತ ಉತ್ಸಾಹದ ಚಿಲುಮೆ ಚೆಲ್ಲಿದೆ
ಮರದ ಮೇಲೆ  ಪುಟ್ಟ ಪಕ್ಷಿ   ಕಣ್ಣು ಪಿಳುಕಿಸಿ 
ಸಂಗಾತಿಯ ನೋಡುತ್ತಾ ಮೈಯ್ಯ ಮರೆತಿದೆ 

ಬಾನ ಮೂಲೆಯಿಂದ ರವಿಯ ಹೊನ್ನ ಕಿರಣಕೆ
ಗುಡಿಯ ಶಿಖರ ಕಳಶ ಶುಭ್ರ ಕಾಂತಿ ಚಿಮ್ಮಿದೆ 
ಸುಪ್ರಭಾತ ಗಾನದೊಡನೆ ಧೂಪದಾರತಿ 
ಶಂಖ ವಾದ್ಯ, ಗಂಟೆಯಾ ನಿನಾದ ಮೊಳಗಿದೆ 

ಭಾನುತೇಜ ವೀರನಾ ಶೌರ್ಯ ದೃಷ್ಟಿಗೆ 
ದುಷ್ಟ ಶಕ್ತಿ ಅಂಜಿಕೆಯಲಿ ಅಡಗಿ ಕೂತಿದೆ 
ಎಲ್ಲೆಡೆಯೂ ಸ್ವಚ್ಛ ಶುಭ್ರ ಬೆಳಕಿನೋಕುಳಿ 
ಜನ ಗಣವದು ಹೊಸ ಪಯಣಕೆ ಹೆಜ್ಜೆ ಹಾಕಿದೆ 

1 comment:

  1. ಮುಂಜಾವಿನ ಮಧುರವಾಗಿ ಹಾಡಿಕೊಳ್ಳಬಲ್ಲ ಗೀತೆ. ಲಯ ಭಾವ ಮತ್ತು ಮನೋಜ್ಞ ಚಿತ್ರಣದ ಸಂಗಮ.

    ReplyDelete