Saturday, 18 January 2014

ದೇವರನು ಕಂಡೆ, ನಾ ದೇವರನು ಕಂಡೆ


ಉಷೆಯ ಎಳೆ ಕಿರಣಗಳು 
ಮೈಸೋಕಿ ಮರುಕ್ಷಣಕೆ 
ಸುಮವರಳಿ ನಿಂತಾಗ 
ದೇವರನು ಕಂಡೆ, ನಾ ದೇವರನು ಕಂಡೆ

ಪುಟ್ಟ ಮೊಟ್ಟೆಯ ಒಳಗೆ
ಜೀವ ದ್ರವ್ಯವ ತುಂಬಿ 
ಮರಿ ಪುಟಿದು  ಹೊರ ಬರಲು 
ದೇವರನು ಕಂಡೆ, ನಾ ದೇವರನು ಕಂಡೆ

ಮಣ್ಣು ಗೊಬ್ಬರ ತಿನುವ  
ಹಸುರುಟ್ಟ ವೃಕ್ಷವದು 
ಸಿಹಿ ಹಣ್ಣು ಕೊಡುವಾಗ 
ದೇವರನು ಕಂಡೆ, ನಾ ದೇವರನು ಕಂಡೆ

ಅಂಧನೊಬ್ಬನು, ಅವಳ 
ಮೈಗಾಳಿ ಸೋಕಿದೊಡೆ 
ಅಮ್ಮ ಬಂದಳು ಎನಲು 
ದೇವರನು ಕಂಡೆ, ನಾ ದೇವರನು ಕಂಡೆ

ಎಲ್ಲಿಯೋ ಇರುವ ಮಗು 
ಜಾರಿ ತಾ ಬಿದ್ದಾಗ 
ತಾಯಿಯೆದೆ ಝಲ್ಲೆನಲು 
ದೇವರನು ಕಂಡೆ, ನಾ ದೇವರನು ಕಂಡೆ

ನವಜಾತ ಶಿಶುವದುವು 
ಸೊಂಪಾದ ನಿದ್ದೆಯಲಿ 
ಪುಟ್ಟ ನಗು ಬೀರುತಿರೆ 
ದೇವರನು ಕಂಡೆ, ನಾ ದೇವರನು ಕಂಡೆ

Monday, 16 December 2013

ರಸ್ತೆ


ಸಣಕೂಸನ ಮಗ ಸಿಂಬಳ ಸುರಿಸುತ್ತ ಓಡುತ್ತಿದ್ದ. ಮುಖವೆಲ್ಲ ಕಪ್ಪು ಕಪ್ಪು. "ರಸ್ತೆ ಮಾಡ್ತ್ರಂಬ್ರು. ದೊಡ್ಡ ದೊಡ್ಡ ಗಾಡಿ ತಂದಾರೆ. ನಮ್ಮನೆ ಬುಡಕೇ ನಿಲ್ಸ್ತ್ರಂಬ್ರು. ಸಂಜೀಕೆ ಬನ್ನಿ ಕೋಟೆಬಾಗ್ಲಿಗೆ." ಅವನ ಕೂಗು ರೋಡ್ ರೋಲರ್ ಗಳ ಶಬ್ಧವನ್ನೂ ಮೀರಿಸುವಂತಿತ್ತು. ಊರೆಲ್ಲ ಧೂಳು, ಹೊಗೆ. "ಎಂಥ ನಾಚಾನ ಮಾಡಿ ಹಾಕ್ಬಿಟ್ರು. ಇವ್ರ ವ್ಯಾಪಾರ ಬೇಡ. ಯಾವ ಕರ್ಮಕ್ಕೆ ರೋಡು ಮಾಡ್ತ್ರೋ" ಅಂತ ಎದುರಿಗೆ ಸಿಕ್ಕ ಗುಡಿಹಿತ್ತಲ ಪಾರ್ವತಿ ಹೇಳ್ತಿತ್ತು. ಆ ಕಡೆ, ಈ ಕಡೆ ಗಾಡಿಗಳು ಧೂಳು ಹಾರಿಸುತ್ತ ಹೋಗುತ್ತಿದ್ದವು. ಹೊಂಡದಲ್ಲಿ ಸಿಕ್ಕಿಬಿದ್ದ ಕಾರೊಂದನ್ನು ಕೂಲಿಯವರು ಸೇರಿ ದೂಡುತ್ತಿದ್ದರು. ಯಾವಗಾಲೂ ಫಳ ಫಳ ಹೊಳೆಯುತ್ತಿದ್ದ ಮಹಾಲೆ ಮಾಮನ ಗಾಡಿ ಕೆಂಪಾಗಿ ಹೋಗಿತ್ತು. ಅಂತೂ ಇಂತೂ ಶಿರಾಲಿ ಪೇಟೆಯಿಂದ ಮನೆ ಸೇರುವುದರೊಳಗೆ ಸುಸ್ತೋ ಸುಸ್ತು. 

******************

"ತಿರುಪತಿ ಗಿರಿವಾಸ ಶ್ರೀ ವೆಂಕಟೇಶ, ಶ್ರೀ ವೆಂಕಟೇಶಾ" ಟೇಪ್ ರಿಕಾರ್ಡರ್ ನಲ್ಲಿ ಎಂದಿನಂತೆ ಜೋರು ಹಾಡು. ಪೈ ಮಾಮ ಐದು ಬೆರಳುಗಳಲ್ಲಿ ನಾಲ್ಕು ಚಾ ಹಿಡ್ಕೊಂಡು ತಮ್ಮ ಎಂದಿನ ಶೈಲಿಯೊಂದಿಗೆ 'ಒಂದು ಮಸಾಲೆ, ಹಾಗೇ ಒಂದು ಚಾ ಸಕ್ರೆ ಕಮ್ಮಿ, ಮತ್ತೊಂದು ಜಾಸ್ತಿ' ಅಂತ ಕೂಗ್ತಿದ್ರು. ಹೌದು ಅವರು ಹಾಗೆ ಕೂಗಿದಾಗಲೇ ನಮ್ಮೂರಲ್ಲಿ ಬೆಳಗಾಗೋದು. ಅಷ್ಟರಲ್ಲೇ ಮಹಾಲೆ ಮಾಮ ಪೇಪರ್ ತಗೊಂಡು ಅಲ್ಲಿ ಬಂದ್ರು. "ಈ ವರ್ಷ ಮುಗೀತಿದ್ದ ಹಾಗೆ ರಸ್ತೆ ಕೆಲಸ ಶುರು ಆಗಬಹುದು ಮಾರಾಯ. ಪೇಪರ್ ನಲ್ಲಿ ನ್ಯೂಸ್ ಬಂದಿದೆ. ಹೋಗೋದಂತೂ ಗ್ಯಾರಂಟಿ ಅಂತಾಯ್ತು. ನೀನಾದ್ರೂ ಅಡ್ಡಿಲ್ಲ. ನಿನ್ನ ಹೋಟೆಲ್ ಹೈ ವೇ ಮೇಲಿಲ್ಲ. ನಮ್ಮ ಅಂಗಡಿ ಎಲ್ಲಿ ಮಾಡುದು ಮಾರಾಯ." ಅಂತ ಹೇಳಿ ನಗುವಾಗ, ಆ ನಗುವಿನಲ್ಲೂ ಅವರ ಆಕ್ರೋಶ ಎದ್ದು ಕಾಣುತ್ತಿತ್ತು. "ಅಬ್ಬಾ. ನಾನು ಬಚಾವಾದೆ" ಅಂತ ಮನಸಲ್ಲಿ ಅಂದುಕೊಳ್ಳುತ್ತಲೇ ಪೈ ಮಾಮ ಮಸಾಲೆ ದೋಸೆ ತರಲು ಒಳಗೆ ಓಡಿದರು. 

ಅಷ್ಟರಲ್ಲೇ ರಸ್ತೆ ಅಗಲ ಆಗುವ ಸುದ್ಧಿ ಊರಿಡೀ ಹರಡಿತ್ತು. ಗುಂಟೆಗೆ ೫೦ ಸಾವಿರ ಕೊಟ್ಟು ರಸ್ತೆ ಬದಿ ಜಾಗ, ಅಂತ ತಗೊಂಡು ಮನೆ ಕಟ್ಟಿದ್ದ ದೇವಪ್ಪ ಮೊಗೇರ್ರು ತಲೆ ಮೇಲೆ ಕೈ ಇಟ್ಟು ಕೂತಿದ್ರು. 'ಪರಿಹಾರ ಕೊಡ್ತರಂಬ್ರು' ಅವರ ಹೆಂಡತಿ ಒಳಗಿಂದ ಸಣ್ಣ ಧ್ವನಿಯಲ್ಲಿ ಹೇಳೋದೋ ಬೇಡವೋ ಅನ್ನೋ ಹಾಗೆ ಹೇಳಿದ್ರು. "ಹೌದು. ಕೊಡ್ತ್ರು. ಹತ್ತು ರೂಪಾಯಿಗೆ ಒಂದು ರೂಪಾಯಿ ಕೊಟ್ರೆ ನಾನೆಲ್ಲಿ ನನ್ನ ಮಂಡೆ ಮೇಲೆ ಮನೆ ಕಟ್ಟುದಾ? ನಮ್ದೆಲ್ಲ ತಲೆ ಬೋಳ್ಸಿ ಅವ್ರು ದೊಡ್ಡ ದೊಡ್ಡ ಬಂಗ್ಲೆ ಕಟ್ಟತ್ರು. ರೋಡ್ ಆದ್ಮೇಲೆ, ಎಲ್ಲಾದ್ರೂ ಬದಿಗೆ ಬೇಡ್ಲಿಕ್ಕೆ ಕೂತ್ರೆ ಸೈ" ಅಂತ ಮೊಗೇರ್ರು ತಮ್ಮ ಹೊಟ್ಟೇಲಿದ್ದ ಸಿಟ್ಟು, ರೋಷವನ್ನೆಲ್ಲ ಹೊರಗಡೆ ಹಾಕಿದರು. ಹೊರಗೆ ಅವರ ಮನೆ ನಾಯಿ ಕೂಡ ಜೀವ ಹೋದ ರೀತಿ ಬೊಗಳ್ತಾ ಇತ್ತು. ಅಲ್ಲೇ ಪಕ್ಕದಲ್ಲಿ ಸರಾಫ್ ಡಾಕ್ಟ್ರ ಆಸ್ಪತ್ರೆ. ಅವರು ಪೇಶೆಂಟ್ ನೋಡ್ತಾ- "ನಮ್ಮ ಆಸ್ಪತ್ರೆ ಬಾಗಿಲಿಗೇ ರೋಡ್ ಬರ್ತದೆ. ನಾನಿನ್ನು ರೋಡ್ ಮೇಲೇ ಕೂತು ಪರೀಕ್ಷೆ ಮಾಡುದು ಒಳ್ಳೇದಾ ಅಂತ." ಅಂತ ಹೇಳ್ತಿದ್ರೆ ಅಲ್ಲೇ ಕೂತಿದ್ದ ಮಾದೇವ- " ಎಲ್ಲಾದ್ರೂ ಕೂಕಣಿ ಒಡೆಯರೇ. ಒಟ್ನಲ್ಲಿ ನಮ್ಮ ಕಾಯಿಲೆ ಗುಣ ಆದ್ರೆ ಸಾಕು" ಅಂತ ಜೋರು ಕೆಮ್ಮಿದ. 

"ನಾವು ಹೋರಾಟ ಮಾಡ್ತೇವೆ, ರಸ್ತೆ ಆದರೆ ಊರಿಗೆ ಊರೇ ಹೋಗ್ತದೆ ಅಷ್ಟೇ ಅಲ್ಲ. ಊರ ಮಧ್ಯೆ ಇರೋ ದೇವಸ್ಥಾನ ಕೂಡ ಹೋಗ್ತದೆ. ರಸ್ತೆ ಬೇರೆ ಕಡೆ ಮಾಡುವ ಹಾಗೆ ಅಪೀಲ್ ಮಾಡ್ವಾ. ಇದಕ್ಕೆಲ್ಲ ನೀವು ಊರ ಜನ ಮುಂದೆ ಬರಬೇಕು. ಮೊದಲು ಮಂತ್ರಿಗಳಿಗೆ ಹೇಳಿ ಪಾರ್ಲಿಮೆಂಟ್ ನಲ್ಲಿ ಅವ್ರು ಇದನ್ನ ಹೇಳುವ ಹಾಗೆ ಮಾಡ್ಬೇಕು. ಹಾಗೇ ಕೋರ್ಟಿನಲ್ಲೂ ಒಂದು ಕೇಸ್ ಹಾಕ್ವಾ. ಹೋರಾಟ ಮಾಡಿದ್ರೆ ಇದನ್ನ ತಡೆಯೋದು ದೊಡ್ಡ ವಿಷಯ ಏನಲ್ಲ." ಅಂತ ಊರ ದೊಡ್ಡ ಮನುಷ್ಯ ಪರೋಬ ಮಾಮ  ಶಿರಾಲಿ ಪೇಟೇಲಿ ಹೇಳ್ತಿದ್ರಂತೆ. ನಮ್ಮ ರಾಜೇಶ್ ಟೇಲರ್ ನಿಗೆ ಇದು ಕೇಳಿ ಭಾರಿ ಖುಷಿ. "ಪರೋಬ್ ಮಾಮ  ಎದ್ರು ನಿಂತ ಮೇಲೆ ನಮ್ಮ ಅಂಗಡಿ ಎಲ್ಲ ಉಳೀಬಹುದು." ಅಂದಾಗ- " ಯಾರ ಹತ್ರವೂ ಏನು ಮಾಡ್ಲಿಕ್ಕೂ ಆಗುದಿಲ್ಲ. ಕುಂದಾಪುರ ಕಡೆ ಎಲ್ಲಾ ಆಗ್ಲೇ ಎಲ್ಲಾ ಅಂಗಡಿ, ಮನೆ ಬೀಳ್ಸಿ ಆಗದ್ಯಂತೆ. ಹೋರಾಟ ಮಾಡುದಿದ್ರೆ ಅವ್ರು ಮಾಡ್ತಿರ್ಲಿಲ್ವಾ? ಆಸೆ ಬಿಡೂದೆ" ಅಂತ ಅವನ ಪಕ್ಕದ ಅಂಗಡಿ ರಾಮನಾಥನವರು ಹೇಳಿದಾಗ ಅವನ ಮನಸಲ್ಲಿದ್ದ ಕೊಂಚ ಆಸೆಗೂ ನೀರೆರಚಿದಂತಾಯಿತು. 

ಒಂದು ಕಡೆ ಇವರೆಲ್ಲರ ದುಃಖ, ಆಕ್ರೋಶ ಆದರೆ ಕಾಂಟ್ರಾಕ್ಟರ್ ದಿನಕರಣ್ಣನಿಗೆ ಒಳಗೊಳಗೇ ಭಾರಿ ಖುಶಿ. "ನಮಗೆ ಜಬರ್ದಸ್ತ್ ಲಾಭ ಉಂಟು ಇದರಿಂದ. ಮನೆ ಕಟ್ಟಿ ಕೊಡು, ಅಂಗಡಿ ಮಾಡ್ಸಿ ಕೊಡು ಅಂತ ಜನ ಬಂದು ಕ್ಯೂ ನಿಲ್ತ್ರು ನೋಡು" ಅಂತ ತನ್ನ ಹೆಂಡತಿ ಎದ್ರಿಗೆ ಕೊಚ್ಚಿಕೊಳ್ಳಲು ಶುರು ಮಾಡಿದ. "ಒಳ್ಳೆ ಆಯ್ತು ಮಾರಾಯ್ರೇ. ಇದೇ ಖುಷೀಲಿ ರಾತ್ರೆ ಕೋಳಿ ಸಾರ್ ಮಾಡ್ವಾ. ಬರ್ತಾ ಎರಡು ಕೆಜಿ ಕೋಳಿ ತಗೊಂಡು ಬನ್ನಿ" ಅಂತ ಹೆಂಡತಿ ಪಾರ್ಟಿ ಮಾಡಲಿಕ್ಕೆ ತಯಾರಾದಳು. ಜಗತ್ತು ಹೀಗೆಯೇ ಅಲ್ಲವೇ. ಒಬ್ಬರ ದುಃಖ, ಇನ್ನೊಬ್ಬರಿಗೆ ಖುಶಿ. ಒಬ್ಬರ ನೋವು ಇನ್ನೊಬ್ಬರಿಗೆ ಆಹಾರ. ಒಂದು ಬದುಕಬೇಕೆಂದರೆ ಮತ್ತೊಂದು ಸಾಯಬೇಕು. ಮಹಲು ಏಳಬೇಕೆಂದರೆ ಮರ ಬೀಳಬೇಕು. ಇದು ಸಮತೋಲನವಂತೆ. 

ಊರಿಗೂರೇ ತಲೆಬಿಸಿಯಲ್ಲಿ ಮುಳುಗಿತ್ತು. "ಸರ್ಕಾರ ಬಿದ್ದು ಹೋಗ್ಲಿ. ಮುಂದಿನ ಸರ್ಕಾರ ಬಂದು ಅವರು ದುಡ್ಡು ಬಿಡುಗಡೆ ಮಾಡುವುದರ ತನಕ ಸ್ವಲ್ಪ ವರ್ಷ ಕಳೆದು ಹೋಗಿರ್ತದೆ. ಅಲ್ಲಿ ವರೆಗೆ ಆದರೂ ಆರಾಮಾಗಿ ಇರಬಹುದಲ್ಲ" ಅಂತ ಕೆಲವರು ಬೇಡಿಕೊಳ್ತಾ ಇದ್ರೆ, ಮತ್ತೆ ಕೆಲವು ಊರಿನ ಮಹಾಜನಗಳು ಸೇರಿ, ಕೆಲವು ದೊಡ್ಡ ಮನುಷ್ಯರ ಶಿಫಾರಸು ತೆಗೆದುಕೊಂಡು ದೆಹಲಿ ಕಡೆ ಹೊರಟರು. "ನಾವು ನಮ್ಮ ಪ್ರಯತ್ನ ಮಾಡಿದ್ದೇವೆ. ಬೈಪಾಸ್ ಮಾಡೋ ಆಲೋಚನೆ ಮಾಡ್ವಾ ಅಂತ ಮಂತ್ರಿಗಳು ಹೇಳಿದ್ದಾರೆ. ಕಡೇ ಪಕ್ಷ ದೇವಸ್ಥಾನ ಆದರೂ ಹೋಗದಿದ್ದ ಹಾಗೆ ನಾವು ಹೋರಾಟ ಮಾಡ್ತೇವೆ" ಅಂತ ದೆಹಲಿಗೆ ಹೋಗಿ ಬಂದ ಪರೋಬ್ ಮಾಮ ಜನರಿಗೆಲ್ಲ ಸುದ್ದಿ ನೀಡಿದರು. "ದೇವ್ರಿಗೆ ಇರಲಿಕ್ಕೆ ಜಾಗ ಬೇಕಾ ಮಾರಾಯ. ಈ ಜಗತ್ತೇ ಅವನದಲ್ವಾ? ನಮ್ಮ, ಮನೆ ಅಂಗಡಿ ಎಲ್ಲಾ ಹೋದ್ರೆ ನಾವು ದಾರಿ ಮೇಲೆ ಬರಬೇಕು. ಈಗಿನ ರೇಟಿನಲ್ಲಿ ನಮಗೆ ಕಟ್ಟಿಸಲಿಕ್ಕೆ ಆಗ್ತದಾ?" ಅಂತ ಮಾಸ್ತಿ ಎಲೆ ಅಡಿಕೆ ಜಗೀತ ಹೇಳ್ತಿದ್ದ. ದುರ್ಗಪ್ಪ, ನಾರಾಯಣ ಇಬ್ರೂ "ಹೌದು, ಹೌದು" ಅಂತ ತಲೆ ಆಡ್ಸ್ತಿದ್ರು. 

"ಅಳತೆ ತೆಗ್ದು ಕಲ್ಲು ಹಾಕೂಕೆ ಬಂದಾರಂತೆ", ವೆಂಕಟೇಶನ ಸೀಡಿ ಅಂಗಡೀಲಿ ದೊಡ್ಡ ಸುದ್ದಿ. ಎಲ್ಲ ಸೇರಿ ಅಳತೆ ತೆಗೆಯುವವರ ಹಿಂದೆಯೇ ಗುಂಪು ಕಟ್ಟಿಕೊಂಡು ಹೊರಟರು. "ಮೂವತ್ತು ಮೀಟರು ಹೋಗ್ತದ್ಯಾ. ಇಪ್ಪತ್ತೈದು ಮೀಟರ್ ಹೋಗ್ತದ್ಯಾ? ಈ ವರ್ಷವೇ ಹೋಗುದಾ? ಎಷ್ಟು ಪರಿಹಾರ ಕೊಡ್ತ್ರಂತೆ? ಬೇರೆ ಜಾಗ ಕೊಡ್ತ್ರಂತಾ. ಇಲ್ಲ ದುಡ್ಡೇ ಕೊಡ್ತ್ರಂತಾ?" ಊರವರ ಒಂದರ ಹಿಂದೆ ಒಂದು ಬರುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೇ, ಕೊಡದೇ ಇರಲಾಗದೇ ಅಳತೆ ಮಾಡುವವರು ಸುಸ್ತಾಗಿ ಹೋದರು. "ಪರೋಬರ ಬಟ್ಟೆ ಅಂಗಡಿ ಕಾಲು ಭಾಗ ಹೋಗ್ತದೆ. ಮಹಾಲೆಯವರ ಕಿರಾಣಿ ಅಂಗಡಿ ಫುಲ್ ಹೋಗ್ತದೆ. ಸರಾಫ್ ಡಾಕ್ಟ್ರ ಆಸ್ಪತ್ರೆ ಅರ್ಧ ಹೋಗ್ತದೆ. ಶಾಲೆ ಗ್ರೌಂಡು ಮುಕ್ಕಾಲು ಭಾಗ ಹೋಗ್ತದೆ." ಅಂತ ಒಂದೇ ಉಸಿರಲ್ಲಿ ಹೇಳ್ತಾ ಬಂದ್ರು ಸುಬ್ಬ ಭಟ್ರು. ತನ್ನ ಮನೆ ಹೋಗೋದಿಲ್ಲ, ಬೇರೆಯವರದೆಲ್ಲ ಹೋಗುತ್ತದೆ  ಅಂತ ಒಳಗೊಳಗೇ ಭಾರೀ ಖುಶಿ ಅವರಿಗೆ.  

ಇಷ್ಟು ಹೋರಾಟ ಮಾಡಿದರೂ ಮಂತ್ರಿಗಳು ಏನು ಮಾಡ್ಲಿಕ್ಕೂ ಸಾಧ್ಯ ಆಗಲಿಲ್ಲ. ಇನ್ನು ಎಲ್ಲ ಸೇರಿ ಕೋರ್ಟಿಗೆ ಹೊಗೊದೊಂದೇ ದಾರಿ ಅಂತ ಯೋಚನೆ ಮಾಡಿ ಊರಿನವರೆಲ್ಲ ವಕೀಲರ ಹತ್ತಿರ ಹೋಗಿ ಪೇಪರ್ ತಯಾರು ಮಾಡಿಸಿದರು. ಕೋರ್ಟು ಕೇಸ್ ಅಂದ್ರೆ ಮತ್ತೆ ಕೇಳಬೇಕೇ. ತಿರುಗುತ್ತಲೇ ಇರಬೇಕು. ವರ್ಷಗಳು ಕಳೆದರೂ ಮುಗಿಯುವುದೇ ಇಲ್ಲ. ಓಡಾಡುವುದು ಯಾರು? ಪರೋಬ್ ಮಾಮ ತಾನೇ ಮಾಡ್ತೇನೆ ಅಂತ ಹುರುಪಿನಲ್ಲಿ ಒಪ್ಪಿಕೊಂಡರು. ನಾಲ್ಕು ಸಲ ಓಡಾಡಿ, ಆಮೇಲೆ ಅವರೂ ಕೈ ಚೆಲ್ಲಿ ಕುಳಿತುಬಿಟ್ಟರು. 

****************************

ಒಂದು ವರ್ಷದ ಬಳಿಕ ಮತ್ತೆ ಊರಿಗೆ ಹೋಗಿದ್ದೆ. ರೋಡ್ ಪಕ್ಕ ಸಂತೆಯ ಗದ್ದಲವಿಲ್ಲ. ಊರ ಮಧ್ಯದಲ್ಲಿದ್ದ ದೇವಸ್ಥಾನ ಕಾಣುತ್ತಿಲ್ಲ. ಸದಾ ಜನ ತುಂಬಿರುತ್ತಿದ್ದ ಮಹಾಲೆ ಮಾಮನ ಕಿರಾಣಿ ಅಂಗಡಿ ನಾಪತ್ತೆ. ಮಕ್ಕಳು ಗಜಿ ಬಿಜಿ ಅನ್ನುತ್ತ ಆಟವಾಡುತ್ತಿದ್ದ ಗ್ರೌಂಡನ್ನು ರೋಡು ತಿಂದು ಬಿಟ್ಟಿದೆ. ಸರಾಫ್ ಡಾಕ್ಟರ ಆಸ್ಪತ್ರೆ ರಸ್ತೆ ಬದಿಯಲ್ಲಿ ಅಡಗಿ ಕೂತಂತಿತ್ತು. ಮಾಸ್ತಿ ದೇವಸ್ಥಾನಕ್ಕೆ ಹೋಗ್ಬೇಕು ಅಂದ್ರೆ ಒಂದು ಕಿಮೀ ದೂರ ಹೋಗಿ ಯು ಟರ್ನ್ ಹೊಡೆದು ಬರಬೇಕು. ಒಂದು ಕ್ಷಣ ಸ್ಥಬ್ಧನಾಗಿ ಬಿಟ್ಟೆ. ಪಕ್ಕದಲ್ಲಿ ಯಾರೋ ಮಾತಾಡೋದು ಕೇಳ್ತು- "ನಮ್ಮ ಊರು ಭಾರೀ ಅಭಿವೃದ್ಧಿ ಆಯ್ತು ಮಾರಾಯ.". ಯಾವ ಊರು? ನಾ ಹುಟ್ಟಿ ಬೆಳೆದ ಊರಾದರೂ ಎಲ್ಲಿದೆ? ನನಗೆ ಕಾಣುತ್ತಿದ್ದುದು ಊರು ನುಂಗಿ ನಾಲಿಗೆ ಹೊರಚಾಚಿ ನಿಂತಿರುವ 'ರಸ್ತೆ' ಮಾತ್ರ. 

Sunday, 9 June 2013

ಜ್ಞಾನೋದಯ

ಬುದ್ಧನಾಗಲು 
ಕಾಡಿಗೇ ಹೋಗಬೇಕಂತಿಲ್ಲ;
ಶ್ರದ್ಧೆಯಿದ್ದರೆ 
ಮನೆಯ ಮಾಡಿನ ಕೆಳಗೂ 
ಆಗಬಹುದು ಜ್ಞಾನೋದಯ!

ಯಾನ

ಮಲ್ಯರ ವಿಮಾನ 
ತೇಲದಿದ್ದರೂ
ಆಗಸದಲಿ,
ತೇಲುತ್ತಿದ್ದಾರೆ 
ಅವರ 
ಬೀರು ಕುಡಿದವರೆಲ್ಲ 
ಗಾಳಿಯಲಿ!

ಖುಷಿ

ಸಖೀ, ಒಮ್ಮೊಮ್ಮೆ 
ಯಾರಾದರೂ ನಮ್ಮ 
ಕಾಲೆಳೆಯುತ್ತಿದ್ದರೆ 
ಕೆಲವರಿಗೆ ಅದ ನೋಡುವುದು
ಭಾರೀ ಖುಷಿ;
ಇರಲಿ ಖುಷಿ ಪಡಲಿ,
ಅವರ ಖುಷಿಯೇ 
ನಮ್ಮ ಖುಷಿ!

ಆಶಯ

ಸಿದ್ರಾಮಯ್ಯನವರಿಗೆ 
ಶುಭ ಹಾರೈಕೆ,
ಆಗಲಿ ಕರ್ನಾಟಕ 
ಅಭಿವೃದ್ಧಿಯ ತಾವು;
ಮರೆಯಾಗದಿರಲಿ 
ರಾಜ್ಯದಲ್ಲಿ ಗೋವು!

ಮಳೆ

ವರ್ಷ ಧಾರೆ,
ಭೂಮಿಯ ಘಮ;
ನಿನ್ನ ಕಣ್ಣ 
ಮಿಂಚು!