Showing posts with label ಚುಟುಕಿಂಡಿ. Show all posts
Showing posts with label ಚುಟುಕಿಂಡಿ. Show all posts

Sunday, 9 June 2013

ಬೆಲೆ ಏರಿಕೆಯ ಭೂತ

ಕಾಡುತಿಹುದಯ್ಯ ಬೆಲೆ ಏರಿಕೆಯ ಭೂತ 
ಮಧ್ಯ ವರ್ಗದ ಪ್ರಜೆಯು ಇದರಿಂದ ಸೋತ 
ಸಿರಿವಂತನಿಗೆ ಇದರ ಪರಿವೆಯೇ ಇಲ್ಲ 
ಕೂತಲ್ಲೆ ಬಡಪ್ರಜೆಯ ಬಾಯಲ್ಲಿ ಬೆಲ್ಲ

ಗೆದ್ದವರ ನಿದ್ದೆ

ಓ ನಾಯಕನೆ, ನಮ್ಮ ಓಟಿಂದ ಗೆದ್ದೆ 
ಈಗ ಮಾಡುತಲಿರುವೆ ಸದನದಲಿ ನಿದ್ದೆ 
ಜಾಸ್ತಿ ತಿಂದರೆ ಹೀಗೆ ಆಗುವುದು ಉಂಟು 
ಹೊಟ್ಟೆಯೊಳಗಿದೆಯಲ್ಲ ಲಂಚದ ಗಂಟು

ಹುಸಿ ದೇಶಪ್ರೇಮ

"ರಾಷ್ಟ್ರ ನಿರ್ಮಾಣದಲಿ ನಿಮಗಿಹುದು ಹಕ್ಕು"
ಎಂಬ ಮಾತನು ಕೇಳಿ ಸುಸ್ತಾದೆ ನಕ್ಕು 
ಜನರ ದುಡ್ಡನು ನುಂಗಿ ಮಾಡಿ ನಿರ್ನಾಮ 
ಜಾಹಿರಾತುಗಳಲಿ ಮಹಾ ದೇಶ ಪ್ರೇಮ

Thursday, 9 May 2013

ಕೈ ರುಚಿ

ಊಟವನು ಬಡಿಸಿ ಬರುವಳು ಎನ್ನ ಬಳಿಗೆ 
ಕೇಳುವಳು, "ಓ ಸಖನೆ ಹೇಗಿಹುದು ಅಡುಗೆ" 
"ನಿನ್ನ ಕೈ ರುಚಿಯು, ಎನಗದು ಪಂಚಪ್ರಾಣ"
ಎಂದನ್ನದಿರೆ ಬೈದು ತೆಗೆಯುವಳು ಪ್ರಾಣ!

ಅಮರ

ಶಿಲ್ಪಿಯವ ಹೋದರೂ ಮಣ್ಣಲ್ಲಿ ಹೂತು 
ಅವನು ಕೆತ್ತಿಹ ಮೂರ್ತಿ ಆಡಿತದು ಮಾತು
ಹೀಗೆ, ಭುವಿ ಋಣ ತೀರಿ ನಿಂತರೂ ಉಸಿರು 
ನಿನ್ನ ಕೃತಿಯಿಂದ ಆಗಿರು ಸದಾ ಹಸಿರು

Tuesday, 16 April 2013

ನಾಗಿಯ ಹರಕೆ

ಭ್ರಷ್ಟ ಶಾಸಕನವನು ಮನೆ ತನಕ ಬಂದು 
ಬೇಡಿದನು ದಯವಿಟ್ಟು ಮತ ಹಾಕಿ ಎಂದು 
ನಾಗಿ ಎಂದಳು "ನನ್ನ ಚಿಹ್ನೆಯಿದು ಪೊರಕೆ,
ಈಗ ತೀರಿಸಿಕೊಂಬೆ ಬಹುದಿನದ ಹರಕೆ "

Monday, 8 April 2013

ರಾಜಕೀಯ ರಾಗ

ಮನೆಗೆ ಬರುವರು ಈಗ ವೋಟನ್ನು ಬೇಡಿ 
ಗೆದ್ದು ಬಂದರೆ ಕೊಳ್ಳೆ ಹೊಡೆಯುವರು ಕೂಡಿ 
ಮುಂದಿನ ಚುನಾವಣೆಯ ಸಮಯ ಬಂದಾಗ 
ಮತ್ತೆ ಶುರು ಪೊಳ್ಳು ಆಶ್ವಾಸನೆಯ ರಾಗ

ಮುಳ್ಳಾಗದಿರು

"ಬೆಟ್ಟದಡಿಯಲಿ ನೀನು ಹುಲ್ಲಾಗು" ಎಂದು 
ಕವಿವರ್ಯ ಗುಂಡಪ್ಪ ಹೇಳಿದರು ಅಂದು 
ಹುಲ್ಲಾಗಲಾಗದಿರೆ ಸಹ ಅಡ್ಡಿಯಿಲ್ಲ 
ಮುಳ್ಳಾಗಿ ಅನ್ಯರಿಗೆ ಚುಚ್ಚುವುದು ಸಲ್ಲ

ಮಿಂಚು ಹುಳ

ಕತ್ತಲಲ್ಲೂ ಕೂಡ ಬೆಳಕಿಹುದು ಕಂದ 
ನೋಡಬೇಕಾಗಿಹುದು ಒಳದೃಷ್ಟಿಯಿಂದ 
ನಿನ್ನೊಳಗೆ ಇಹ ಬೆಳಕ ಬೀರುತ್ತ ಸಾಗು 
ಕತ್ತಲನು ಓಡಿಸುವ ಮಿಂಚು ಹುಳವಾಗು

ನಾಳೆ

ನಾಳೆಗಳ ಚಿಂತೆಯಲಿ ಇಂದು ಕರಗಿತ್ತು 
ಮತ್ತೆ ನಾಳೆಯು ಕೂಡ ಹೀಗೇ ಆಗಿತ್ತು 
ಈ ರೀತಿ ಕಳೆದು ಜೀವನದರ್ಧ ಭಾಗ 
ಉಳಿದರ್ಧ ಭಾಗದಲಿ ನೂರೆಂಟು ರೋಗ

ಸಾಹಿತ್ಯ ಸಭೆ

ಸಾಹಿತ್ಯ ಸಂಸ್ಕೃತಿಯ ಸಭೆಗಳ ಒಳಗೆ 
ಭ್ರಷ್ಟ ನಾಯಕರಿರಲಿ ವೇದಿಕೆಯ ಕೆಳಗೆ 
ಮೈಕು ಹಿಡಿದರೆ ಇವರು, ಸಭೆಯ ರಸಭಂಗ 
ರಸ ಬಾಳೆ ತೋಟದಲಿ ಹೊಕ್ಕಂತೆ ಮಂಗ

ಜಾತಿ

ಆ ಜಾತಿ ಈ ಜಾತಿ ಮತ್ತೆ ಒಳ ಜಾತಿ 
ಇವುಗಳ ಭರಾಟೆಯಲಿ ಸತ್ತಿಹುದು ಪ್ರೀತಿ 
ನಾನೆಂಬೆ, ಮನದಿ ಹೊಲಸಿರುವವನೆ ಕೀಳು 
ಮಾನವೀಯತೆ ಇರಲು ಚಂದವೀ ಬಾಳು

Wednesday, 20 March 2013

ಗುಬ್ಬಚ್ಚಿ


ಗಾತ್ರದಲಿ ಅತಿ ಚಿಕ್ಕದಾದರೂ ಕೂಡ 
ಕ್ಷಣದಲ್ಲಿ ಮನವನ್ನು ಸೆಳೆಯುವುದು ನೋಡ 
ಹಮ್ಮು ಬಿಮ್ಮನು ತೊರೆದು ಆಗಿ ಗುಬ್ಬಚ್ಚಿ 
ಜನ ಮಾನಸದಿ ಸ್ನೇಹ ದೀಪವನು ಹಚ್ಚಿ 

Monday, 18 March 2013

ಕಲ್ಲು ಹೊಡೆಯುವವರು

ಒಳ್ಳೆ ಕೆಲಸದ ನಡುವೆ ಹೊಡೆಯುವರು ಕಲ್ಲು 
ಕೆಲಸ ಹಾಳಾದೊಡನೆ ಕಿಸಿಯುವರು ಹಲ್ಲು 
ಇಂಥವರನೆಲ್ಲ ಏನೆನ್ನುವುದು ಸ್ವಾಮಿ 
ಅನ್ಯರೇಳ್ಗೆಯ ಸಹಿಸಲಾಗದ ಹರಾಮಿ

ಮಂಕುತಿಮ್ಮಗೆ ನಮನ

ಮಂಕುತಿಮ್ಮನ ಕಗ್ಗಗಳಿಗೇನು ಸಾಟಿ 
ಓದಿ ಅರಗಿಸಿಕೊಳಲು ತತ್ವಗಳು ಕೋಟಿ 
ಪ್ರತಿ ಕಗ್ಗದಲ್ಲಿಹುದು ಜೀವನದ ಸಾರ 
ಗುಂಡಪ್ಪನವರು ಜ್ಞಾನದ ಮಹಾಪೂರ

ಸನ್ಮಾನ

ಸನ್ಮಾನ ಬೇಕೆಂದು ಮಾಡುತಿಹ ಕೆಲಸ 
ತಬ್ಬಿಕೊಂಡಂತದುವು ನಾರುತಿಹ ಹೊಲಸ 
ಪ್ರತಿಫ಼ಲದ ಆಸೆಯದು ಇಲ್ಲದಿರೆ ಚೆಂದ 
ನಿಜವಾದ ಗೌರವವು ಆಗಿಹುದು ಕಂದ

Wednesday, 6 March 2013

ಒಲವ ರಾಗ


ಹೇಳಿದೆನು- "ನೀನು ಮಾತಾಡುವುದು ಕಡಿಮೆ,
ಹೀಗಿರಲು ಹೇಗೆ ತೋರಿಸಬಲ್ಲೆ ಒಲುಮೆ 
ಆಕೆಯೆಂದಳು- "ಸಖನೆ ನೀನೇನು ಬಲ್ಲೆ,
ಒಲವ ಸಂವೇದನೆಗೆ ಇಹುದೇನು  ಎಲ್ಲೆ"

Thursday, 14 February 2013

ಉಡುಗೊರೆ

ಏನು ಉಡುಗೊರೆ ಬೇಕು ಹೇಳೆನಗೆ ನಲ್ಲೆ 
ಚಂದ್ರನನ್ನೂ  ಕೂಡ ತರಬಲ್ಲೆ ಇಲ್ಲೇ 
ಆಕೆಯೆಂದಳು- "ಮಾಡಬೇಡವೋ ಜೋಕು,
ಜೊತೆಗೆ  ನೀ ಇಹೆಯಲ್ಲ ಇನ್ನೇನು ಬೇಕು"

Wednesday, 30 January 2013

ಹೊಲಸು


ಏನೆಂದು ಬಣ್ಣಿಸಲಿ ಭಾರತದ ಸೊಗಸು 
ನಾರುತಿದೆ ರಾಜಕಾರಣವಾಗಿ ಹೊಲಸು 
ಲೋಕ ಸಭೆಯೊಳಗೆ ಗೆದ್ದವರದ್ದು  ನಿದ್ದೆ 
ಸೋತವಗೆ ರಾಜ್ಯಸಭೆಯಲ್ಲೊಂದು ಹುದ್ದೆ 

Thursday, 24 January 2013

ಉಗ್ರ


ಕೇಸರಿಯವರೆಲ್ಲ  ಉಗ್ರರು ಎಂದ ಶಿಂಧೆ 
ಯಾವ ದೇಶದಿ ಹುಟ್ಟಿ ನೀನಿಲ್ಲಿ ಬಂದೆ ?
ಇಂಥವರು ತುಂಬಿರುವ ನಮ್ಮ ಸರಕಾರ
ಮಾತಲ್ಲಿ ಬಲು ಮುಂದು, ಅಭಿವೃದ್ಧಿ ದೂರ v