Saturday 18 January 2014

ದೇವರನು ಕಂಡೆ, ನಾ ದೇವರನು ಕಂಡೆ


ಉಷೆಯ ಎಳೆ ಕಿರಣಗಳು 
ಮೈಸೋಕಿ ಮರುಕ್ಷಣಕೆ 
ಸುಮವರಳಿ ನಿಂತಾಗ 
ದೇವರನು ಕಂಡೆ, ನಾ ದೇವರನು ಕಂಡೆ

ಪುಟ್ಟ ಮೊಟ್ಟೆಯ ಒಳಗೆ
ಜೀವ ದ್ರವ್ಯವ ತುಂಬಿ 
ಮರಿ ಪುಟಿದು  ಹೊರ ಬರಲು 
ದೇವರನು ಕಂಡೆ, ನಾ ದೇವರನು ಕಂಡೆ

ಮಣ್ಣು ಗೊಬ್ಬರ ತಿನುವ  
ಹಸುರುಟ್ಟ ವೃಕ್ಷವದು 
ಸಿಹಿ ಹಣ್ಣು ಕೊಡುವಾಗ 
ದೇವರನು ಕಂಡೆ, ನಾ ದೇವರನು ಕಂಡೆ

ಅಂಧನೊಬ್ಬನು, ಅವಳ 
ಮೈಗಾಳಿ ಸೋಕಿದೊಡೆ 
ಅಮ್ಮ ಬಂದಳು ಎನಲು 
ದೇವರನು ಕಂಡೆ, ನಾ ದೇವರನು ಕಂಡೆ

ಎಲ್ಲಿಯೋ ಇರುವ ಮಗು 
ಜಾರಿ ತಾ ಬಿದ್ದಾಗ 
ತಾಯಿಯೆದೆ ಝಲ್ಲೆನಲು 
ದೇವರನು ಕಂಡೆ, ನಾ ದೇವರನು ಕಂಡೆ

ನವಜಾತ ಶಿಶುವದುವು 
ಸೊಂಪಾದ ನಿದ್ದೆಯಲಿ 
ಪುಟ್ಟ ನಗು ಬೀರುತಿರೆ 
ದೇವರನು ಕಂಡೆ, ನಾ ದೇವರನು ಕಂಡೆ

1 comment:

  1. ಅಸಲು ದೇವರ ನಿಜ ಸಾಕ್ಷಾತ್ಕಾರದ ಆಯಾಮಗನೆಲ್ಲ ಮನೋಜ್ಞವಾಗಿ ಚಿತ್ರಿಸಿಕೊಟ್ಟಿದ್ದೀರ.
    ಬ್ಲಾಗಿಗೆ ಹಿಂದಿರುಗಲು ಇದಕಿಂತಲೂ ಉತ್ತಮ ರಚನೆ ಮತ್ತೊಂದಿರಲಿಲ್ಲ.

    ReplyDelete