Monday, 19 November 2012

ಕಾರ್ಪೊರೇಟ್ ಗೋಡೆಗಳ ಮಧ್ಯೆ


ಎಂಟು ತಿಂಗಳ ಕೂಸು ಜೋರಾಗಿ ಚೀರಾಡುತ್ತಿದೆ. ಜ್ವರ ತಲೆಗೇರಿ ಕಣ್ಣುಗಳು ಮೇಲೆ ಹೋಗಿವೆ. ಆರತಿಗೆ ಏನು ಮಾಡುವುದೆಂದು ತೋಚುತ್ತಿಲ್ಲ. ಅಪಾರ್ಟಮೆಂಟ್ ನಲ್ಲಿ ಇದ್ದರೂ ಕೂಡ  ರಾತ್ರಿ ಒಂದು ಗಂಟೆಯಾಗಿರುವುದರಿಂದ ಎಲ್ಲರೂ ನಿದ್ರಾಲೋಕದಲ್ಲಿದ್ದಾರೆ.  ಗಂಡನಿಗೆ ಫೋನ್ ಮಾಡಿದರೆ ಅವನು ಫೋನ್ ರಿಸೀವ್ ಮಾಡುತ್ತಿಲ್ಲ. ಸೆಕ್ಯುರಿಟಿಗೆ ಫೋನ್ ಮಾಡಿದಳು. ಅವನಿಗೆ ಕನ್ನಡ ಬರುವುದಿಲ್ಲ. ಇವಳಿಗೆ ಹಿಂದಿ ಬರುವುದಿಲ್ಲ. ಆದರೂ ನಡುಗುವ ಧ್ವನಿಯಲ್ಲೇ ಆಟೋ ವ್ಯವಸ್ಥೆ ಮಾಡಿಸುವಂತೆ ಹೇಗೋ ಹೇಳಿದಳು. ಆಟೋ ಬಂದು ಆಸ್ಪತ್ರೆ ತಲುಪುವುದರೊಳಗೆ ಗಂಟೆ ಎರಡಾಗಿತ್ತು. ಜ್ವರ ತಲೆಗೆ ಏರಿ ಮಗುವಿನ ಆಯ ತಪ್ಪಿತ್ತು. ಕೈಯ್ಯಲ್ಲಿ ದುಡ್ಡಿರದಿದ್ದರೂ, ಗಂಡ ಈಗ ಬರುತ್ತಾನೆ, ಎಂದು ಹೇಳಿ ಅಡ್ಮಿಟ್ ಮಾಡಿಸಿದಳು. ಪರಿಸ್ಥಿತಿ ಹದಗೆಟ್ಟಿತ್ತು. ದೇಹದ ತಾಪವನ್ನು ಸಮತೋಲನಕ್ಕೆ ತರಲು ವೈದ್ಯರು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದರು. ಅಷ್ಟರಲ್ಲಿ ದಿವಾಕರ ಕಾಲ್ ಮಾಡಿದ. ಆರತಿಗೆನೋ ಸಮಾಧಾನ. ಫೋನ್ ಎತ್ತಿದೊಡನೆ ಅವನೆಂದ- "ಆಫೀಸಿನಲ್ಲಿ ತುಂಬಾ ಕೆಲಸವಿದೆ. ನಾಳೆ ರಿಲೀಸ್ ಇದೆ. ನಾಳೆ ಮಧ್ಯಾಹ್ನದ ಹೊತ್ತಿಗೆ ಮನೆಗೆ ಬರುತ್ತೇನೆ" ಎಂದ. ಅವಳು ಆದದ್ದನ್ನೆಲ್ಲ ಹೇಳಿದ ಕೂಡಲೇ- " ಒಹ್, ಛೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೀಯಲ್ಲ. ಈಗ ನಾನು ಬಂದೂ ಏನೂ ಪ್ರಯೋಜನವಿಲ್ಲ. ನಾಳೆ ಬೆಳಿಗ್ಗೆ ಬರುತ್ತೇನೆ" ಎಂದು ಫೋನ್ ಇಟ್ಟೇ ಬಿಟ್ಟ. ಆರತಿಯ ಹೃದಯ ಒಡೆದಂತಾಗಿ ಸ್ತಬ್ಧಳಾಗಿ ಕೂತುಬಿಟ್ಟಳು. 

********************

ಆರತಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದವಳು. ಶ್ಯಾಮರಾಯರ ನಾಲ್ಕನೇ ಮತ್ತು ಕಿರಿಯ ಮಗಳು. ಶಾಂತ ಸ್ವಭಾವದ ಹುಡುಗಿ. ಓದಿನಲ್ಲಿ ಜಾಸ್ತಿ ಚುರುಕಿಲ್ಲ. ಬಿ.ಎ. ಮುಗಿಸಿದ್ದಳು. ಲೋಕಜ್ಞಾನ ಬಹಳ ಕಡಿಮೆಯಿದ್ದರೂ ಸಂಸ್ಕಾರಕ್ಕೇನೂ ಕೊರತೆ ಇಲ್ಲ. ನೋಡಲು ತಕ್ಕ ಮಟ್ಟಿಗೆ ಚೆನ್ನಾಗಿದ್ದಳು. ಮೊದಲ ಮೂರು ಮಕ್ಕಳಿಗೆ ಶ್ಯಾಮರಾಯರು ಒಳ್ಳೆಯ ಸಂಬಂಧಗಳನ್ನು ನೋಡಿ ಮದುವೆ ಮಾಡಿ ಕೊಟ್ಟಿದ್ದರು. ಈಗ ಕೊನೆಯ ಮಗಳಿಗೂ ಮದುವೆ ಮಾಡಿ ಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳುತ್ತ ಆರತಿಗೆ ಗಂಡು ಹುಡುಕಲು ಪ್ರಾರಂಭಿಸಿದಾಗ, ಮೊದಲು ಬಂದ ಸಂಬಂಧ ಮೊದಲ ಅಳಿಯನ ಸೋದರ ಮಾವನ ಮಗ ದಿವಾಕರನದ್ದು. "ಒಳ್ಳೆಯ ಸಂಬಂಧ. ಹುಡುಗ ಬೆಂಗಳೂರಿನಲ್ಲಿ ಐ.ಟಿ. ಕಂಪೆನಿಯಲ್ಲಿ ಕೆಲಸಕ್ಕಿದ್ದಾನಂತೆ. ಮನೆ, ಕಾರು ಎಲ್ಲ ಇದೆ. ನೋಡಲಿಕ್ಕೂ ಚೆನ್ನಾಗಿದ್ದಾನೆ. ಆದಷ್ಟು ಬೇಗ ಸಂಬಂಧ ಪಕ್ಕಾ ಮಾಡಿ." ಎಂದು ಮೊದಲ  ಮಗಳು ಅನಿತಾ ಶ್ಯಾಮರಾಯರಿಗೆ ಫೋನ್ ಮಾಡಿ ಹೇಳಿದ ಪ್ರಭಾವದಿಂದ, ಜಾಸ್ತಿ ಯೋಚನೆ ಮಾಡದೆ ಕೂಡಲೇ ಮಾತುಕತೆ ನಡೆಸಿ ಸಂಬಂಧ ಪಕ್ಕಾ ಮಾಡಿ ಬಿಟ್ಟರು. ಒಳ್ಳೆಯ ಹುಡುಗ ಸಿಕ್ಕಿದ ಎಂಬ ಖುಷಿಗೆ ತಮ್ಮ ಶಕ್ತಿಗೂ ಮೀರಿ 
ಅದ್ದೂರಿಯಾಗಿ ಮದುವೆ ಮಾಡಿಸಿ ಮಗಳಿಗೆ ವಿದಾಯ ಹೇಳಿದರು. 

ಬೆಂಗಳೂರಿನಲ್ಲಿ ಆರತಿಯ ನವ ಜೀವನ ಪ್ರಾರಂಭವಾಯಿತು. ಕಂಪೆನಿಯಿಂದ ೧೦ ಕಿ.ಮೀ. ದೂರದ ಅಪಾರ್ಟಮೆಂಟ್ ನಲ್ಲಿ ದಿವಾಕರ ಒಂದು ಮನೆ ಕೊಂಡುಕೊಂಡಿದ್ದ. ಎಲ್ಲ ರೀತಿಯ ಸವಲತ್ತುಗಳಿದ್ದರೂ ಆರತಿಯ ಪಾಲಿಗೆ ಅದು ಕಾಂಕ್ರೀಟು ಕಾಡಾಗಿತ್ತು. ದಿವಾಕರ ಬೆಳಿಗ್ಗೆ ಹತ್ತಕ್ಕೆ ಹೋಗಿ, ರಾತ್ರೆ ೮ ಗಂಟೆಯ ಸುಮಾರಿಗೆ ಮನೆಗೆ ಬರುತ್ತಿದ್ದ. ಅಡಿಗೆ, ದೇವರ ಪೂಜೆ ಎಂದು ಸ್ವಲ್ಪ ಸಮಯ ಕಳೆದು, ಆಮೇಲೆ ಬೇಸರವಾಗುವ ವರೆಗೆ ಟೀವಿ ನೋಡಿದರೂ ಆರತಿಗೆ ಸಮಯ ದೂಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ವಾರ ಕಳೆಯಿತು. ಆರತಿ ಏಕಾಂಗಿತನದಲ್ಲಿ ಬೆಂದು ಹೋಗಿದ್ದಳು. ಮುಂದಿನ ವಾರ ಪೂರ್ತಿ ದಿವಾಕರ ರಜೆ ಹಾಕಿದ್ದ. ಕೇರಳಕ್ಕೆ ಹನಿಮೂನ್ಗೆ ಹೋಗುವುದೆಂದು ತೀರ್ಮಾನವಾಗಿತ್ತು. ಆಡಂಬರದ ಜೀವನ, ಫ್ಯಾಶನ್ ಮಾಡಿಕೊಳ್ಳುವುದರಲ್ಲೆಲ್ಲ ಆರತಿಗೆ ಆಸಕ್ತಿ ಕಡಿಮೆ. ಹಳ್ಳಿಯಲ್ಲೇ ಬೆಳೆದದ್ದರಿಂದ ಸಹಜವಾಗಿಯೇ ಸರಳ ಜೀವನ ಶೈಲಿಗೆ ಹೊಂದಿಕೊಂಡು ಇದ್ದವಳು. 
ತಕ್ಕ ಮಟ್ಟಿಗೆ "ಯೆಸ್, ನೋ" ಎಂದು ಇಂಗ್ಲೀಷು ಮಾತನಾಡುತ್ತಿದ್ದಳು. ಜನರೆದುರು ಮಾತನಾಡಲು ನಾಚಿಕೆ ಜಾಸ್ತಿ. ಇನ್ನೂ ನಗರ ಜೀವನಕ್ಕೆ ಹೊಂದಿಕೊಳ್ಳಬೇಕಷ್ಟೇ. ಹನಿಮೂನ್ ಮುಗಿಸಿ ವಾಪಸ್ ಬಂದರು. ಆ ಒಂದು ವಾರದೊಳಗೆ "ಆರತಿಯದು ಮಂಕು ಸ್ವಭಾವ. ನಾನು ಬಯಸಿದ್ದೆಲ್ಲ ಇಲ್ಲ ಅವಳಲ್ಲಿ" ಎಂಬ ಆಲೋಚನೆಗಳು ದಿವಾಕರನ ಮನಸ್ಸಿನಲ್ಲಿ ಮನೆ ಮಾಡಿಬಿಟ್ಟಿದ್ದವು. "ಪಾಪ, ಹಳ್ಳಿಯ ಹುಡುಗಿ. ಸ್ವಲ್ಪ ಸಮಯ ಕೊಟ್ಟರೆ, ಜೊತೆ ಕೊಟ್ಟರೆ ಸರಿಯಾಗುತ್ತಾಳೆ" ಎಂದುಕೊಳ್ಳುವಷ್ಟು ವ್ಯವಧಾನ ಕೂಡ ಅವನಲ್ಲಿರಲಿಲ್ಲ. ಅವಳಲ್ಲಿ ಅವನಿಗಿರುವ ಆಸಕ್ತಿ ಕಡಿಮೆಯಾಗುತ್ತಾ ಹೋಯಿತು. ಆಫೀಸಿನಿಂದ ಮನೆಗೆ ಲೇಟ್ ಆಗಿ ಬರುವುದು, ಸರಿಯಾಗಿ ಮಾತನಾಡಿಸದೆ ಇರುವುದು, ಸಿಡುಕುವುದು ಈ ಎಲ್ಲ ವರ್ತನೆಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆರತಿಯ ಬದುಕಲ್ಲಿ ಕೊಂಚ ಲವಲವಿಕೆ ತಂದ ವಿಚಾರವೆಂದರೆ ಅವಳು ಗರ್ಭಿಣಿಯಾಗಿದ್ದು. ಮಗುವಿನ ಹುಟ್ಟನ್ನೇ ಕಾಯುತ್ತ ದಿನ ದೂಡಲಾರಂಭಿಸಿದಳು.

ಇತ್ತ ದಿವಾಕರ ಜೀವನದಲ್ಲಿ ಬೇಸತ್ತಿದ್ದ. ತನ್ನ ಅಭಿರುಚಿಯ ಹುಡುಗಿಯೊಬ್ಬಳ ಸ್ನೇಹಕ್ಕೆಂದು ಹಪಹಪಿಸುತ್ತಿದ್ದ. ಹತ್ತು ಹಲವಾರು ಕಾಮನೆಗಳು ಅವನ ಮನಸಿನಲ್ಲಿ ಕನಸಿನ ಗೋಪುರವನ್ನು ಕಟ್ಟಿದ್ದವು. ಆಫೀಸಿನಲ್ಲಿ ಕೆಲವು ಹುಡುಗಿಯರ ಸಂಘಕ್ಕಾಗಿ ಪ್ರಯತ್ನಿಸಿದನಾದರೂ ಎಲ್ಲವೂ ಅಲ್ಲಲ್ಲೇ ನಿಂತು ಹೋದವು. ಅಷ್ಟರಲ್ಲೇ ಕ್ಯಾಂಪಸ್ ಇಂಟರ್ವ್ಯೂದಲ್ಲಿ ಕಾಲೇಜಿನ ಹಲವು ವಿದ್ಯಾರ್ಥಿಗಳಿಗೆ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತ್ತು. ಇವನ ಟೀಮ್ ಗೂ ಮೂರು ಹೊಸ ಹುಡುಗಿಯರು ಬಂದಿದ್ದರು. ಅವರಲ್ಲಿ ಅವನ ಮನಸ್ಸಿನಲ್ಲಿ ಹುಚ್ಚು ಆಲೋಚನೆಗಳ ಅಲೆ ಎಬ್ಬಿಸಿದ ಹುಡುಗಿ ಅನುಶ್ರೀ. ಬಹಳ ಆಕರ್ಷಕವಾದ ಮೈಮಾಟ ಹೊಂದಿದ್ದ ಅವಳು  , ಹುಡುಗರನ್ನು ಪ್ರಲೋಭನಗೊಳಿಸುವಂಥ ಉಡುಪಿನ ಶೈಲಿಯಿಂದ ಆಗಲೇ ಆಫೀಸಿನಲ್ಲಿ ಸುದ್ಧಿಯಾಗಿಬಿಟ್ಟಿದ್ದಳು . ದಿವಾಕರ ಬಯಸಿದಂತೆ ಅವಕಾಶ ಒದಗಿ ಬಂದಿತ್ತು. ಅವನೇ ಅವಳ ಮ್ಯಾನೇಜರ್ ಬೇರೆ. ಅವಳ ಸಂಘ ದಕ್ಕಿಸಿಕೊಳ್ಳಲೇಬೇಕೆಂಬ ಧೃಡ ನಿರ್ಧಾರ ಮಾಡಿಕೊಂಡ. ಆಕೆಯೋ ಉತ್ತರ ಭಾರತದಿಂದ ಇಲ್ಲಿ ಉದ್ಯೋಗಕ್ಕೆಂದು ಬಂದವಳು. ಗೆಳತಿಯರ ಜೊತೆ ಬೆಂಗಳೂರಿನಲ್ಲೊಂದು ರೂಂ ಮಾಡಿಕೊಂಡಿದ್ದಳು. ಬೆಂಗಳೂರಿನಲ್ಲಿ ಹತ್ತಿರದವರ್ಯಾರೂ ಇರಲಿಲ್ಲ. ಅವಳನ್ನು ಕೆಲಸವೆಂದು ರಾತ್ರಿಯವರೆಗೂ ಆಫೀಸಿನಲ್ಲೇ ಇರಲು ಹೇಳುತ್ತಿದ್ದ. ಆಫೀಸಿನಲ್ಲೇ ಪಿಜ್ಜಾ, ಬರ್ಗರ್ ತರಿಸಿ ತಿನ್ನಿಸುತ್ತಿದ್ದ. "ಒಳ್ಳೆಯ ಕೆಲಸ ಮಾಡಿದ್ದೀಯ, ಟ್ರೀಟ್ ಕೊಡಿಸುತ್ತೇನೆ" ಎಂದು ಹೊರಗೆ ಸುತ್ತಾಡಿಸಿ, ಅದು ಇದು ಎಂದು ಉಡುಗೊರೆಗಳನ್ನೂ ಕೊಡಿಸುತ್ತಿದ್ದ. ಅವಳಿಗೆ ಬೇಕಾಗಿದ್ದೂ ಅದೇ ಆಗಿತ್ತು. ದಿನಗಳೆದಂತೆ ಇಬ್ಬರೂ ಹತ್ತಿರವಾಗುತ್ತ ಹೋದರು. ಪಬ್ಬು, ಬಾರುಗಳ ಕಡೆಯೂ ಇವರ ಸವಾರಿ ಶುರುವಾಯಿತು. ಹಾಗೆಯೇ ನಿಧಾನವಾಗಿ ದೈಹಿಕ ಸಂಬಂಧ ಕೂಡ ಶುರುವಾಗಿ ಈ ಜೋಡಿ ಆಫೀಸಿನೆಲ್ಲೆಡೆ ಸುದ್ದಿಯಾಗಿ ಬಿಟ್ಟಿತು. ಅವಳೂ ನಯವಾಗಿ ಅವನಿಗೆ ತಿಳಿಯದಂತೆ ಎಲ್ಲ ಲಾಭಗಳನ್ನೂ ಪಡೆದುಕೊಳ್ಳಲು ಆರಂಭಿಸಿದಳು. ಕೆಲಸ ಮಾಡುವುದನ್ನೇ ಮರೆತು ಬಿಟ್ಟಳು. ಹೆಸರಿಗೆ ದಿವಾಕರ ಮ್ಯಾನೇಜರ್ ಆದರೂ ನಿಜವಾದ ಮ್ಯಾನೇಜರ್ ಅವಳೇ ಆಗಿದ್ದಳು. ದಿವಾಕರನೋ, ಅವಳು ನೀಡುವ ಸುಖದ ಗುಂಗಿನಲ್ಲಿ ಇಡೀ ಲೋಕವನ್ನೇ ಮರೆತುಬಿಟ್ಟಿದ್ದ. 

*************************
ಅತ್ತ ಮಗು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, ಮಧ್ಯ ರಾತ್ರಿ ದಿವಾಕರ ಆಫೀಸಿನಲ್ಲಿ ಅನುಶ್ರೀಯೊಡನೆ ಸರಸವಾಡುವುದರಲ್ಲಿ ಲೀನನಾಗಿದ್ದ. ಅವನ ಕುಟುಂಬ ಒಂದು ಇದೆಯೆಂದು ಕೂಡ ಮರೆತುಬಿಟ್ಟಿದ್ದ. ಅಂತೂ ಮಗು ಹುಷಾರಾಗಿತ್ತು. ಆರತಿ ನಿಟ್ಟುಸಿರು ಬಿಟ್ಟು ಮಗುವನ್ನು ಮನೆಗೆ ಕರೆದುಕೊಂಡು ಬಂದಳು. ದಿವಾಕರ ಆಗೋ ಈಗೋ ಒಮ್ಮೊಮ್ಮೆ ಮನೆಗೆ ಬರುತ್ತಿದ್ದ. ಆರತಿ ಅವನ ವರ್ತನೆಯಿಂದ ಸಂಪೂರ್ಣ ಬೇಸತ್ತಿದ್ದಳು. ಒಬ್ಬಳೇ ಮಗುವಿನ ಜವಾಬ್ದಾರಿ ತೆಗೆದುಕೊಳ್ಳಲು ಆಗುತ್ತಿಲ್ಲ ಎಂದು ಅಪ್ಪ ಅಮ್ಮನನ್ನು ಕರೆಸಿದಳು. ವಾರಗಳು ಕಳೆದವು. ಶ್ಯಾಮರಾಯರೂ ದಿವಾಕರನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಮನೆಗೆ ಯಾಕೆ ಇಷ್ಟು ತಡವಾಗಿ ಬರುವುದು ಎಂದು ಕೇಳಿದರೆ "ಕೆಲಸ ಅದು, ಇದು" ಎಂದು ಕಥೆ ಹೇಳಿ ಕ್ಷಣದಲ್ಲಿ ದಿವಾಕರ ಮಾಯವಾಗಿಬಿಡುತ್ತಿದ್ದ. ಶ್ಯಾಮರಾಯರಿಗೂ ಅನುಮಾನ ಬಂತು. ಆರತಿಯೂ ನಡೆದ ಕಥೆಯನ್ನೆಲ್ಲ ಹೇಳಿದ್ದಳು. ಗುಪ್ತವಾಗಿ ಪರಿಶೀಲನೆ ನಡೆಸಿದಾಗ ದಿವಾಕರನ ಅವಾಂತರಗಳೆಲ್ಲ ಇವರಿಗೆ ತಿಳಿಯಿತು. ಕೋಪದಿಂದ ಸಿಡಿದೆದ್ದ ಶ್ಯಾಮರಾಯರು "ಬೇಡ, ನೀನು ಇಂಥ ಮನೆಯಲ್ಲೇ ಇರುವುದೇ ಬೇಡ. ಕೂಡಲೇ ವಿಚ್ಚೇದನ ತೆಗೆದುಕೊಂಡು ಮನೆಗೆ ಬಾ. ನಿನ್ನನ್ನು ಸಾಕುವ ತಾಕತ್ತು ನನಗಿದೆ" ಎಂದಾಗ, ಆರತಿ-" ಇಲ್ಲ ಅಪ್ಪ, ನೀವು ದುಡುಕಬೇಡಿ. ಏನೋ ಕೆಟ್ಟ ಘಳಿಗೆ. ಆದದ್ದು ಆಗಿ ಹೋಯಿತು. ನನ್ನಲ್ಲಿ ಸಿಗದಿದ್ದದ್ದು ಅವಳಲ್ಲಿ ಸಿಕ್ಕಿತೇನೋ!? ನನಗೆ ವಿಷಯ ತಿಳಿಯಿತಲ್ಲ. ನಾನೇ ಅವರನ್ನು ಸರಿ ಪಡಿಸುತ್ತೇನೆ. ನನ್ನ ಸಂಸಾರದ ಬಟ್ಟೆ ಹರಿದು ಹೋಗಿದೆ ನಾನೇ ಹೊಲಿಗೆ ಹಾಕಬೇಕು. ನೀವು ಈಗ ಇಲ್ಲಿರುವುದು ಸರಿಯಲ್ಲ. ಹೋಗಿ" ಎಂದು ಅವರನ್ನು ಕಳಿಸಿದಳು.

ತನ್ನ ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಲು ಪ್ರಯತ್ನಿಸಿದಳು. ದಿವಾಕರನ ಮನವೊಲಿಸಲು ಆಧುನಿಕತೆಗೆ ಒಗ್ಗುವ ಪ್ರಯತ್ನ ಮಾಡಿದಳು. ಆದರೆ ಇವ್ಯಾವುದೂ ಫಲ ನೀಡಲಿಲ್ಲ. ಸೂಚ್ಯವಾಗಿ, ತನಗೆ  ಎಲ್ಲ ವಿಷಯ ತಿಳಿದಿದೆ ಎಂಬಂತೆ  ದಿವಾಕರನ ಬಳಿ  ಮಾತನಾಡಿದಳು. "ಆಗಿದ್ದು ಆಗಿ ಹೋಯಿತು, ಇನ್ನಾದರೂ ಚೆನ್ನಾಗಿ ಬಾಳೋಣ" ಎಂದು ಎಷ್ಟೋ ಬಾರಿ ಹೇಳಿದಳು. ದಿವಾಕರನಿಗೆ ಒಂದು ಕ್ಷಣಕ್ಕೆ ಹೌದೆನಿಸುತ್ತಿದ್ದಾರೂ ಆಮೇಲೆ ಗೆಳತಿಯ ಸಂಘದಲ್ಲಿ ಎಲ್ಲ ಮರೆತು ಬಿಡುತ್ತಿದ್ದ. ಇಷ್ಟಾದರೂ ಸುಧಾರಿಸದ ಗಂಡನನ್ನು ನೋಡಿ ಕೊನೆಗೂ ಕೆರಳಿ ಹೋಗಿದ್ದಳು ಆರತಿ. ದಿವಾಕರ ಆ ದಿನ ರಾತ್ರಿ ೨ ಗಂಟೆಗೆ ಮನೆಗೆ ಬಂದಿದ್ದ. ಬಂದ ಕೂಡಲೇ ಆರತಿ ತಾಳ್ಮೆಯ ಮಿತಿ ಮೀರಿ- " ಆಯಿತಾ, ಆಫೀಸಿನಲ್ಲಿ ಸರಸವಾಡಿದ್ದು. ಇದೇ ಥರ ಜೀವನ ನಡೆಸಿಕೊಂಡು ಹೋಗ್ಬೇಕು ಅಂತಿದ್ದೀರ? ನನಗೆ ಸಾಧ್ಯ ಇಲ್ಲ ಈ ಥರ ಬದುಕಲಿಕ್ಕೆ." ಎಂದು ಕಿರುಚಿದಳು. ಅನುಶ್ರೀ ಯ ಮಾಯಾ ಜಾಲದಲ್ಲಿ ಸಂಪೂರ್ಣ ಸಿಲುಕಿದ್ದ ದಿವಾಕರ ಮದದಿಂದ- " ಹೋಗು. ನನ್ನ ಜೊತೆ ಬಾಳ್ವೆ ಮಾಡುವ ಮನಸ್ಸಿಲ್ಲದಿದ್ದರೆ ಡೈವೋರ್ಸ್ ಕೊಟ್ಟು ಅಪ್ಪನ ಮನೆಗೆ ಹೋಗು. ನಿನಗೋಸ್ಕರ ನಾನು ಬದಲಾಗಲಿಕ್ಕೆ ಆಗುವುದಿಲ್ಲ" ಎಂದು ಮದದಿಂದ ಹೇಳಿ ಹೋಗಿ ಬಿಟ್ಟ. ಆರತಿ ಮತ್ತೊಂದು ತಿಂಗಳು ಕಾದಳು. ಅಪ್ಪ ಅಮ್ಮನ ಜೊತೆ ಎಲ್ಲವನ್ನೂ ಹಂಚಿಕೊಂಡಳು. ಕೊನೆಗೂ ಇಲ್ಲಿದ್ದು ಪ್ರಯೋಜನವಿಲ್ಲವೆಂಬ ನಿರ್ಧಾರಕ್ಕೆ ಬಂದು ಬೇರೆ ಉಪಾಯವಿಲ್ಲದೇ ವಿಚ್ಛೇದನ ಪಡೆದುಕೊಂಡು ಕೂಡ ಆಯಿತು. ಇನ್ನೂ ನವಜೀವನ ಆರಂಭಿಸಬೇಕಿದ್ದ ಆರತಿಯ ಜೀವನದಲ್ಲಿ ಆಗಲೇ ಬಿರುಗಾಳಿ ಬೀಸಿತ್ತು.

ಇತ್ತ ದಿವಾಕರನಿಗೆ ಈಗ ಹೇಳುವವರು, ಕೇಳುವವರು ಯಾರೂ ಇರಲಿಲ್ಲ. ಲೋಕವನ್ನೇ ಮರೆತುಬಿಟ್ಟಿದ್ದ. ಇವನ ಆಟ ಜಾಸ್ತಿ ಆಗುತ್ತಾ ಹೋಯಿತು. ಕಂಪೆನಿಯ ಮೇಲುಸ್ತುವಾರಿಯವರಿಗೆ ಕೂಡ ಇವನ ವಿಷಯ ತಿಳಿಯಿತು. ಕೆಲವೊಂದು ಬಾರಿ ಆಫೀಸಿನಲ್ಲಿ ಅವಳೊಂದಿಗೆ ಸರಸವಾಡುತ್ತ ಸಿಕ್ಕಿ ಕೂಡ ಬಿದ್ದ. ಪ್ರಾಡಕ್ಟ್ ರಿಲೀಸ್ ಸಮಯ ಬಂದಿತ್ತು. ದಿವಾಕರನ ಟೀಮ್  ಡೆಡ್ ಲೈನ್ ಮುಟ್ಟಲಿಲ್ಲ. ದಿವಾಕರನ ಮೇಲಧಿಕಾರಿಗಳು ಚರ್ಚೆ ನಡೆಸಿ- "ಅವನ ನಡತೆ ಕಂಪೆನಿಯ ಪಾಲಿಸಿಗೆ ಹೊಂದಿಲ್ಲ. ಅವನ ಟೀಮ್ ನಿಂದ ಕೆಲಸ ಕೂಡ ಸರಿಯಾಗಿ ನಡೆಯುತ್ತಿಲ್ಲ" ಎಂದು ಅವನನ್ನು ಕೆಲಸದಿಂದ ಕಿತ್ತು ಹಾಕುವ ನಿರ್ಧಾರಕ್ಕೆ ಬಂದರು. ದಿವಾಕರ ಅತಂತ್ರನಾಗಿದ್ದ. ಕೆಲಸದ ಹೋಗಿದ್ದಲ್ಲದೇ, ಹೆಸರು ಕೂಡ ಹಾಳಾಗಿತ್ತು. ಹೊಸ ಕೆಲಸ ಸಿಗುವುದೂ ಕಷ್ಟವಾಯಿತು. ತನ್ನ ಸುಖ ದುಃಖದಲ್ಲಿ ಅನುಶ್ರೀ ಜೊತೆಗಿದ್ದಾಳೆಂದು ಸಮಾಧಾನ ಮಾಡಿಕೊಂಡ.ಎರಡು ವಾರ ಅವಳ ಜೊತೆ ಸುತ್ತಾಡಿದ. ಅಷ್ಟರಲ್ಲೇ ಅನುಶ್ರೀಯ  ಟೀಮ್ಗೆ ಹೊಸ ಮ್ಯಾನೇಜರ್ ಬಂದ. ದಿವಾಕರ ಒಂಟಿಯಾಗಿದ್ದ. 

4 comments:

 1. ಕಥೆ ಚೆನ್ನಾಗಿದೆ ಪರೇಶ್. ನಿಜ ಕಥೆಯಾ..? ನಗರೀಕರಣ ದಿಂದಾದ ಪ್ರಭಾವ ಇದು.

  ReplyDelete
 2. ದಿವಾಕರನ ಚೆಲ್ಲಾಟದ ಮನಸ್ಥಿತಿ ಸಮರ್ಥವಾಗಿ ಮೂಡಿಸಿದ್ದೀರ. ಉತ್ತಮ ಕಥನ ಶೈಲಿ.

  ReplyDelete
 3. ಗುರುವೇ...ಕಥೆ really superb....
  ತಾಕತ್ತಿದೆ ಶೈಲಿಗೆ.. ಸಾಹಿತ್ಯದ ಮತ್ತೊಂದು ಮಗ್ಗುಲಿನಲೂ ಅಪ್ರತಿಮ ಪ್ರಬುದ್ಧತೆ ಕಂಡಿತು..
  ಎಂದಿನಂತೆ ಅಭಿಮಾನದ ಶುಭಹಾರೈಕೆಗಳು..!!!

  ReplyDelete
 4. Nice story. Narration muda needide.

  ReplyDelete