Friday 10 August 2012

ಸಾಕ್ಷರತೆ -- ನಾವು ಎಲ್ಲಿದ್ದೇವೆ?



ಆಫೀಸಿನಿಂದ ಮನೆಗೆ ಬರ್ತಾ ಇದ್ದೆ.. ರೋಡ ಮೇಲೆ ಒಬ್ಬ ಲಿಫ್ಟ್ ಕೊಡಿ ಎಂದು ಕೈ ತೋರಿಸಿದ. ಬೈಕ್ ನಿಲ್ಲಿಸಿದೆ. ಖುಷಿಯಿಂದ ಬಂದು ಕೂತ. ಹಾಗೆ ಮಾತಿಗೆ- "ಏನಪ್ಪಾ,, ಎಲ್ಲಿಯವರು ನೀವು?" ಎಂದಾಗ "ನಾವ್ ರಾಯಚೂರ್ ನವರು ರೀ ಸ್ವಾಮಿ" ಎಂದ.ಅಪ್ಪಟ ಕನ್ನಡಿಗ ಎಂದು ತಿಳಿದು ಬಹಳ ಆನಂದವಾಯಿತು.ಹೆಸರು ನಿಂಗಪ್ಪ. ಹಾಗೆ ಅವನ ಬಗ್ಗೆ ಕೇಳಿ ತಿಳಿದುಕೊಳ್ಳುವ ಕುತೂಹಲದಿಂದ ಹಲವು ಪ್ರಶ್ನೆಗಳನ್ನು ಕೇಳಿದೆ. ಮೇಸ್ತ್ರಿ ಕೆಲಸ ಮಾಡುವುದಂತೆ.  ಎಲ್ಲಿ ಕೆಲಸವಿದೆಯೋ ಅಲ್ಲೆಲ್ಲ ಸಂಸಾರ ಸಮೇತ ಹೋಗಿ ಅಲ್ಲೇ ಕಟ್ಟಡ ಕಟ್ಟುವ ಸ್ಥಳದ ಪಕ್ಕದಲ್ಲೇ ಟೆಂಟ್ ಹಾಕಿ ಉಳಿಯುವುದು. ಮತ್ತೆ ಅಲ್ಲಿ ಕೆಲಸ ಮುಗಿದ ಮೇಲೆ ಬೇರೆಡೆ ಮತ್ತೆ ಕೆಲಸ. ಎಲ್ಲೆಲ್ಲಿ ಹೋಗಿದ್ದೀರಿ ಎಂದು ಕೇಳಿದಾಗ, "ನಮಗೇನೂ ಗೊತ್ತಿಲ್ರೀ ಸ್ವಾಮೀ.. ಓನರ್ ಕರ್ಕೊಂಡು ಹೋಗೋ ಜಾಗಕ್ಕೆಲ್ಲ ಹೋಗ್ತೀವಿ" ಎಂದ. ಅವನ ಮುಗ್ಧತೆಯಿಂದ ಅವನಿಗೆ ಮತ್ತಷ್ಟು ಆಪ್ತನಾದೆ. 

ಮಾತು ಮುಂದುವರೆಯಿತು. ಎಷ್ಟು ಮಕ್ಕಳು ಎಂದು ಕೇಳಿದಾಗ. "ಮೂರು ಮಕ್ಕಳು ಸ್ವಾಮೀ" ಎಂದ. ಏನು ಓದುತ್ತಿದ್ದಾರೆಂದು ಕೇಳಿದಾಗ.-"ನಮಗೆಲ್ಲಿ ಸ್ವಾಮೀ ಓದು ಬರಹ.. ಅದೆಲ್ಲ ನಮಗೆ ಸರಿ ಹೊಂದಲ್ಲ" ಎಂದು ಖಡಾಖಂಡಿತವಾಗಿ ಹೇಳಿದ. ನನಗ್ಯಾಕೋ ಅವನ ಮಾತಿನ ಧಾಟಿ ಸರಿ ಎನ್ನಿಸದೇ ಚರ್ಚೆಗಿಳಿದೆ. ಆ ಚರ್ಚೆಯ ಕೆಲ ಆಯಾಮಗಳು ಹೀಗಿವೆ:

೧. ಮೊದಲನೆಯದಾಗಿ ಅವನು ಹೇಳಿದ್ದು, "ನಮ್ಮ ಹತ್ರ ಮಕ್ಕಳಿಗೆ ಕಲಿಸ್ಲಿಕ್ಕೆ ದುಡ್ಡಿಲ್ಲ ಸ್ವಾಮೀ.. ದುಡಿದಿದ್ದು ಊಟ ತಿಂಡಿಗೆ ಸಾಲಲ್ಲ, ಮತ್ತೆ ಕಲ್ಸೋ ಮಾತು ಎಲ್ಲಿಂದ ಬಂತು." ಸರ್ಕಾರಿ ಶಾಲೆಗೆ ಕಳಿಸಿ. ಅಲ್ಲಿ ಎಲ್ಲಾ ಉಚಿತ. ನೀವೇನು ಖರ್ಚು ಮಾಡ್ಬೇಕಂತಿಲ್ಲ ಅಂತ ಹೇಳಿದೆ." ಈಗ ಫ್ರೀ ಸ್ವಾಮೀ.. ಆಮೇಲೆ ೧೧ ನೆ ಕ್ಲಾಸ್, ಹನ್ನೆರಡನೆ ಕ್ಲಾಸ್ ತನಕ ಓದ್ತಾರೆ.. ಅದಾದ್ಮೇಲೆ ನಮ್ಹತ್ರ ಕಲ್ಸಕ್ಕೆ ಆಗಲ್ಲ. ಅಷ್ಟು ಓದಿದ್ದಕ್ಕೆ ನೌಕರೀನು ಸಿಗಲ್ಲ.. ಮತ್ತೆ ಮೇಸ್ತ್ರಿ ಕೆಲಸ ಮಾಡಕ್ಕೆ ಇಲ್ಲೇ ಬರ್ತಾರೆ. ಏನ್ ಉಪಯೋಗ ಆಯ್ತು ಅಂದ." 

೨. ಆಗ ನಾ ಕೊಟ್ಟ ಉತ್ತರ- ಕಲಿಯೋದು ಬರೀ ನೌಕರಿ ಮತ್ತು ದುಡ್ಡಿನ ಸಲುವಾಗಿ ಅಲ್ಲಪ್ಪ. ಮನೋ ವಿಕಸನಕ್ಕೆ, ಬದುಕಲು ಕಲಿಯೋದಕ್ಕೆ,ಮಾಡುವ ಕೆಲಸದಲ್ಲಿ ಕಲಿತದ್ದನ್ನು ಅಳವಡಿಸಿ ಮುಂದೆ ಬರುವುದಕ್ಕೆ. ಕಲಿತು ಮೇಸ್ತ್ರಿ ಕೆಲಸ ಮಾಡುವುದು ತಪ್ಪಲ್ಲ.. ಯಾವುದೇ ಕೆಲಸ ಮೇಲು ಕೀಳಲ್ಲ. ಆ ಕೂಡಲೇ ಅವ ಹೇಳಿದ- "ಸ್ವಾಮೀ, ಮಕ್ಳಿಗೆ ಕಲ್ಸಿ ಬಿಟ್ರೆ ಆಮೇಲೆ ಮೈ ಬಗ್ಗಿಸಲ್ಲ. ಇಂಥ ಕೆಲ್ಸಕ್ಕೆಲ್ಲ ಬರಲ್ಲ. ಆಮೇಲೆ ನೌಕರೀಗೂ 
ಹೋಗದೆ, ಕೆಲ್ಸಾನು ಮಾಡ್ದೆ ವೇಸ್ಟ್ ಆಗ್ಬಿಡ್ತಾರೆ" ಎಂದು. 

೩. "ಊಟ ತಿಂಡಿಗೆ ದುಡ್ಡು ಸಾಲಲ್ಲ ಎಂದೆ. ನಿನ್ನ ಮಕ್ಳಿಗೂ ಇದೇ ಗತಿ ಬರಬೇಕಾ.. ಈಗ ಮಕ್ಕಳನ್ನು  ಸರಿ ದಾರಿಯಲ್ಲಿ ನಡೆಸಿದರೆ ಮುಂದೆ ಅವರಾದರೂ ಸುಖವಾಗಿರ್ತಾರೆ" ಎಂದು ಹೇಳಿದೆ. ಅವನಿಗದು ಸ್ವಲ್ಪ ಸರಿ ಅಂತ ಅನಿಸಿದರೂ ಸಂಪೂರ್ಣ ಮನದಟ್ಟು ಆಗಲಿಲ್ಲ. "ನೀವು ಹೇಳಿದಷ್ಟು ಸುಲಭ ಇಲ್ಲಾ ಸ್ವಾಮೀ. ಊರೂರು ಸುತ್ತಾಡ್ತಾ ಇರ್ತೀವಿ. ತಿಂಗಳಿಗೊಂದು ಊರಲ್ಲಿ ಇರ್ತೀವಿ. ಅಂಥದ್ರಲ್ಲಿ ಶಾಲೆಗೆ ಕಳ್ಸೋದೆಲ್ಲ ಆಗಿ ಬರಂಗಿಲ್ಲ" ಅಂದ.

ಅಷ್ಟರಲ್ಲಿ ಅವನು ಇಳಿಯಬೇಕಾದ ಜಾಗ ಬಂತು.  ಸುಮ್ಮನೆ ಯೋಚಿಸಿದೆ.ಸಾಕ್ಷರತೆ, ಉಚಿತ ಶಿಕ್ಷಣ ಎಂದು ಸ್ಲೋಗನ್ನುಗಳನ್ನು ಹೇಳಿ ಹಿಗ್ಗುತ್ತೇವೆ. ಒಬ್ಬ ನಿಂಗಪ್ಪನ ಕಥೆ ಕೇಳಿದೆ.. ಆದರೆ ಅದೇ ಕಟ್ಟಡದ ನಿರ್ಮಾಣದ ಸ್ಥಳದಲ್ಲಿ ಇಂತಹ ಎಷ್ಟೋ ಕುಟುಂಬಗಳಿವೆ. ಬೆಂಗಳೂರಿನಲ್ಲಿ ಇಂಥ ಎಷ್ಟೋ ಕಟ್ಟಡ ನಿರ್ಮಾಣಗಳು 
ನಡೆಯುತ್ತವೆ. ಅದೆಷ್ಟು ಮಕ್ಕಳು ಹೀಗೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೋ? ಅಂಕಿ ಅಂಶಗಳಲ್ಲಿ ನಾವು ಮುಂದಿದ್ದರೂ, ಒಂದು ಮಗು ಶಿಕ್ಷಣದಿಂದ ವಂಚಿತನಾದರೂ ಅದು ಗಣನೀಯವೇ ಸರಿ. ಪ್ರತಿಯೊಬ್ಬ ಸುಶಿಕ್ಷಿತನಾಗುವ ವರೆಗೂ "ಸಾಕ್ಷರ ದೇಶ ನಮ್ಮದು" ಎಂದು ಎದೆ ತಟ್ಟಿಕೊಂಡು ಹೇಳುವುದು ನೈತಿಕವಲ್ಲ. ಇದಕ್ಕೆ ಪರಿಹಾರ ಹುಡುಕುವ ಕೆಲಸ ನಮ್ಮದಾಗಲಿ. ಇಂಥ ಮಕ್ಕಳನ್ನು ಶಾಲೆಯ ಮೆಟ್ಟಿಲು ಹತ್ತಿಸುವ ಪ್ರಚೋದನೆ ನೀಡೋಣ. ಇಂಥವರಿಗೊಸ್ಕರ ಯಾವುದಾದರೂ ಸ್ವಯಂ ಸೇವಾ ಸಂಸ್ಥೆಗಳಿದ್ದರೆ ಅದರ ಬಗ್ಗೆ ಮಾಹಿತಿ ಹಂಚಿಕೊಳ್ಳೋಣ. ಸಾಕ್ಷರತೆಯ ಯಜ್ಞದಲ್ಲಿ ಎಲ್ಲರ ಹವಿಸ್ಸು ಇರಲಿ.

5 comments:

  1. ನಿಮ್ಮದೊಂದು ಅನುಭವ. ಇಂಥಹ ಜನ ಬೆಂಗಳೂರಿನ ಗಲ್ಲಿ ಗಲ್ಲಿಗೆ ಸಿಗ್ತಾರೆ. ವಿಧ್ಯಾವಂತರು ಅವರನ್ನು ಉಪಯೋಗಿಸಿಕೊಳ್ಳುತ್ತಾರೆ. ಅವರ ಮತ್ತು ಅವರ ಮಕ್ಕಳ ಜೀವನವೂ ಹಾರೆ ಕಮರಿಹೋಗುತ್ತದೆ. ವ್ಯವಸ್ಥೆ ಬದಲಾಗದ ಹೊರತು ಏನೂ ಸಾಧ್ಯವಿಲ್ಲ. ಇದಕ್ಕೊಂದು ಸೂಕ್ತ ಪರಿಹಾರ ನೀಡಿ ಪರೇಶ್ ನೀವೇ!!!

    ReplyDelete
  2. ನಿಮ್ಮ ಆಶಯ ಚೆನ್ನಾಗಿದೆ. ಗ್ಯಾರೇಜುಗಳಲ್ಲಿ, ಹೋಟೆಲುಗಳಲ್ಲಿ, ಅಂಗಡಿಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ದುಡಿಯುವ ಬಾಲ ಕಾರ್ಮಿಕರಿಗೆ ಶಾಲೆಗೆ ಕರೆತರುವ ನಿಟ್ಟಿನಲ್ಲಿ ನಿಜವಾಗಲೂ ಕೆಲಸ ಆಗಬೇಕಾಗಿದೆ.

    ReplyDelete
  3. ನಮ್ಮ ಮುಂದಿನ ಕಾರ್ಯಗಳಿಗೆ ಇದೊಂದು ಮುನ್ನುಡಿಯಾಗಲಿ ಪರೇಶ್. ಅಸಾಧ್ಯವಾದುದು ಯಾವುದೂ ಇಲ್ಲ. ಪ್ರಯತ್ನ ಮಾಡೋಣ.

    ReplyDelete
  4. ನಾನು SSLC ಓದುತ್ತಿದ್ದಾಗ ಯಾರಾದರೊಬ್ಬ ಅನಕ್ಷರಸ್ಥರಿಗೆ ಅಕ್ಷರ ಕಲಿಸಿದರೆ ಜಾಸ್ತಿ ಅಂಕ ಕೊಡ್ತೀವಿ ಎಂದಿದ್ದರು, ಆಗ ನಾವು ಮತ್ತು ಗೆಳೆಯರು ಅಂಕದ ಆಸೆಗಾಗಿ ಹಲವರಿಗೆ ಅಕ್ಷರದ ಅರಿವು ಮಾಡಿಸಿದ್ದೇವೆಂಬ ಹೆಮ್ಮೆ ಇದೆ.
    ಅನಕ್ಷರಸ್ಥರನ್ನು ಅಕ್ಷರ ಕಲಿಯುವಿಕೆಯತ್ತ ಸೆಳೆಯಲಾಗದೆ ಸೋತು ಆಗ ತಲೆಎತ್ತಿದ್ದ ಸಾಕ್ಷರತಾ ಕೇಂದ್ರ ಮುಚ್ಚಿದೆ. ಆಗ ಆ ಕೇಂದ್ರಕ್ಕೆ ಬರುತ್ತಿದ್ದ ಪೆನ್ಸಿಲ್ ಸೀಮೇಸುಣ್ಣ ಇತ್ಯಾದಿಗಳು ಆ ಕೇಂದ್ರದವರು ತಮ್ಮ ಮನೆಗೆ ತರುತ್ತಿದ್ದರು.
    ಅಕ್ಷರಜ್ಞಾನ ತುಂಬಾ ಮುಖ್ಯ಼ ಹಲವಾರು ರಾಜ್ಯಗಳನ್ನು ಸುತ್ತುವ ಟ್ರಾವೆಲ್ಸ್ ನ ಚಾಲಕನೊಬ್ಬ ತಾನು ರಸ್ತೆಯಲ್ಲಿರುವ ಅಕ್ಷರ ಓದುವಂತಿದ್ದರೆ ಸರ್ಕಾರಿ ಕೆಲಸವೇ ಆಗುತಿತ್ತು, ಅದಾಗದೆ ಈಗ ಗೆಳೆಯನ ಟ್ರಾವೆಲ್ ನಲ್ಲೆ ಇದೀನಿ ಎನ್ನುತಾನೆ.

    ReplyDelete
  5. ಒಳ್ಳೆಯ ಲೇಖನ... ಆದರೆ ಕೆಲವೊಮ್ಮೆ ಇಂತಹ ಜನರನ್ನು ಗಟ್ಟಿಯಾಗಿ ಹಿಡಿದು ಒಂದು ಕಡೆ ಸೇರಿಸುವುದೂ ಕಷ್ಟ ಪರೇಶ್ ಜೀ... ನಾನು ಈ ರೀತಿಯ ಎಷ್ಟೋ ಜನರನ್ನು ಕೆಲವು ಅನಾಥಾಶ್ರಮ, ವಿದ್ಯಾಲಯಗಳಿಗೆ ಸೇರಿಸಿದ್ದೆ. ಎರಡು ದಿನಗಳಷ್ಟರಲ್ಲಿ ಮಾಯವಾಗಿಬಿಡುತ್ತಾರೆ. 'ನಾಗರ ಬಾವಿ' ರಿಂಗ್ ರೋಡಿನಲ್ಲಿ ಕೆಂಗೇರಿಗೆ ಹೋಗುವಾಗ ಮಧ್ಯೆ ಬರುವ ಫ್ಲೈ ಓವರ್ ತಡಿಯಲ್ಲಿ ಯಾವಾಗಲೂ ಒಬ್ಬಳು ತಾಯಿ ಒಂದು ಎಳೆ ಮಗುವನ್ನು ಮಲಗಿಸಿಕೊಂಡು ರಸ್ತೆಬದಿಯಲ್ಲಿ ಸುಮ್ಮನೆ ಕುಳಿತಿರುತ್ತದೆ. ಆ ಮಗು ಕೆಲವೊಮ್ಮೆ ರಸ್ತೆ ಮಧ್ಯೆದಲ್ಲೇ ನಿಂತಿರುತ್ತದೆ. ಆ ತಾಯಿಯನ್ನು ಒಂದು ಅನಾಥಾಶ್ರಮಕ್ಕೆ ಸೇರಿಸಿಕೊಡುತ್ತೇನೆ ಅಂದರೆ ಅದು ಒಪ್ಪುವುದಿಲ್ಲ. "ತೂ ಅನಾಥಾಶ್ರಮ" ಎನ್ನುತ್ತದೆ. ನಿನ್ನ ಮಗುವನ್ನು ಅವರೇ ಓದಿಸಿಕೊಡುತ್ತಾರೆ ಎಂದರೆ ಬೇಡ ಬೇಡ ಎನ್ನುತ್ತದೆ. ಆ ರಸ್ತೆ ಬದಿಯಲ್ಲಿಯೇ ಯಾವಾಗಲೂ ಮಲಗಿರುತ್ತದೆ... ಒಳ್ಳೆಯ ಆಶಯ ಹೊತ್ತ ಲೇಖನ... ಎಲ್ಲರಿಗೂ ಒಳ್ಳೆಯದಾಗಲಿ... :)

    ReplyDelete