Sunday, 6 May 2012

ಸರಾಫ್ ಡಾಕ್ಟರ್
ಇದೊಂದು ವ್ಯಕ್ತಿಯ ಪರಿಚಯವಲ್ಲ. ವ್ಯಕ್ತಿತ್ವದ ಪರಿಚಯ. ಅದೆಷ್ಟೋ ಕಲಿತು ಕೋಟಿಗಟ್ಟಲೆ ದುಡಿದು ತೃಪ್ತಿಯಿಲ್ಲದೆ ದೂರದೂರಿನಲ್ಲಿ ಎಲ್ಲಿ ಹೋಗುತ್ತಿದ್ದೇವೆಂದು ಅರಿವಿಲ್ಲದ ಅಜ್ಞಾತ ಜೀವನ ಸಾಮಾನ್ಯವಾಗಿರುವ ಈ ಕಾಲದಲ್ಲಿ "ತೃಪ್ತಿ" ಎಂಬ ಪದದ ಅರ್ಥ ವ್ಯಾಖ್ಯಾನ. ಶಿಕ್ಷಣದ ಗುರಿ ಏನಾಗಬೇಕು ಎಂಬುದರ ಬಗ್ಗೊಂದು ಚಿಂತನೆ.

"ಡಾಕ್ಟರ್ರೆ, ನನ್ನ ಮಗ ಕಣ್ ತೆರೆಯುತ್ತಿಲ್ಲ. ಜ್ವರ ತಲೆಗೇರಿ, ಪ್ರಜ್ಞೆಯೇ ತಪ್ಪಿದೆ", ಮಧ್ಯ ರಾತ್ರೆ ಎರಡು ಗಂಟೆಗೆ ಮನೆ ಬಾಗಿಲು ತಟ್ಟಿ, ದಂಪತಿಗಳಿಬ್ಬರು ಕಕ್ಕಾಬಿಕ್ಕಿಯಾಗಿ, ದೇವರ ಮೊರೆ ಇಡುವುದಕ್ಕಿಂತ ಜಾಸ್ತಿ ಮುಗ್ಧರಾಗಿ ಡಾಕ್ಟರ್ ಹತ್ತಿರ ಹೇಳುತ್ತಿದ್ದಾರೆ.ಡಾಕ್ಟರು ನಿದ್ದೆ ಬಿಟ್ಟು ಚಿಕಿತ್ಸೆ ನೀಡಿ ಜ್ವರ ಕೆಳಗಿಳಿದ ನಂತರ, ಈಗೇನೂ ಹೆದರಬೇಕಾಗಿಲ್ಲ ಎಂದು ತಮ್ಮ ಎಂದಿನ ಗಡಸು ದನಿಯಲ್ಲಿ ಹೇಳಿದಾಗ, ಅವರ ಮನಸಲ್ಲೇನೋ ತೃಪ್ತಿ. "ಫೀಸ್ ಎಷ್ಟಾಯ್ತು ಸರ್" ಎಂದಾಗ "ಈಗ ಮನೆಗೆ ಹೋಗಿ,ಮತ್ತೊಂದು ಸಲ ತೆಗೆದುಕೊಳ್ಳುತ್ತೇನೆ"-- ಎಂದು ಅದೇ ಗಡಸು ದನಿಯಲ್ಲಿ ಹೇಳಿದರು  ಡಾಕ್ಟರ್. ಅವರು ದೇವರೆಂಬಂತೆ ಕೈ ಮುಗಿದು ಹೋಗುತ್ತಿದ್ದಂತೆ, ಡಾಕ್ಟರ್ರು ಏನೂ ಮಾತನಾಡದೆ ಮತ್ತೆ ದಿಂಬಿಗೆ ತಲೆಯೂರಿ ಮಲಗಿದರು. ಅಹುದು ಅವರಿಗಿದು ಪ್ರತಿದಿನದ ದೃಶ್ಯ.

ಕರಾವಳಿಯ ತಪ್ಪಲಿನಲ್ಲೊಂದು ಹಳ್ಳಿ-ಶಿರಾಲಿ. ಚಿಕ್ಕ ಹೋಟೆಲ್ ನಡೆಸುತ್ತಿದ್ದ ಒಬ್ಬ ಗೌರವಾನ್ವಿತ, ಛಲವಂತ ವ್ಯಕ್ತಿಯ ಮಗನಾಗಿ ಹುಟ್ಟಿದವರಿವರು. ಒಂಭತ್ತು ಮಕ್ಕಳ ಜೊತೆ ಇವರು ಒಬ್ಬ. ಮೈ ನಡುಗಿಸುವ ಬಡತನ. ಸಂಜೆ ಹೋಟೆಲ್ನಲ್ಲಿ ಗ್ಲಾಸು ತೊಳೆಯುವ ಕೈಯಲ್ಲಿ ಬೆಳಿಗ್ಗೆ ಪುಸ್ತಕ. ಆದರೆ ಅಪ್ಪನಲ್ಲಿ ಮಕ್ಕಳಿಗೆಲ್ಲ ಓದಿಸಬೆಕೆಂಬ ಛಲ. ಕಷ್ಟ ತನ್ನ ತಲೆಮಾರಿಗೇ ಮುಗಿದುಹೊಗಬೇಕೆಂಬ ಹಂಬಲ. ಹಾಗೆಯೇ ಕಷ್ಟದಲ್ಲಿ ದಿನ ಕಳೆದವು. ಸಹೋದರರೆಲ್ಲರೂ ಓದಿ ಬೊಂಬಾಯಿಯಲ್ಲಿ ಉದ್ಯೋಗ ಆರಂಭಿಸಿದರು. ಇವರು ಬಳ್ಳಾರಿಯಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ತನ್ನ ಊರಿನ ಜನರಿಗೆ ತನ್ನಿಂದ ಸೇವೆ ಆಗಬೇಕು ಎನ್ನುವ ಧೃಡನಿರ್ಧಾರದೊಂದಿಗೆ ಶಿರಾಲಿಗೆ ಬಂದರು. 

ಚಿಕ್ಕ ಕೋಣೆಯೊಂದರಲ್ಲಿ ಆಸ್ಪತ್ರೆ ಆರಂಭಿಸಿ, ಹಳ್ಳಿಯ ಜನರ ಕೈಗೆಟುಕುವ ದರದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡಿ ಮನೆಮಾತಾದರು. ಎಷ್ಟೋ ದೂರ ನಡೆದು ಹೋಗಿ ರೋಗಿಗಳಿಗೆ ಚಿಕಿತ್ಸೆ ನೀಡಿ, ಜನರ ಮನದಲ್ಲಿ ನಿಂತರು. ಹೌದು,ಡಾಕ್ಟರ್ ಬಳಿ ಹೋಗಲು ಹೆದರುತ್ತಿದ್ದ ಜನ, ಈಗ ಎಂಥದ್ದೇ ಕಾಯಿಲೆ ಇರಲಿ ಸರಾಫ್ ಡಾಕ್ಟರ್ ಆಸ್ಪತ್ರೆಯಲ್ಲಿ ಹಾಜರ್.ಶಂಖದಿಂದ ಬಂದರೆ ತೀರ್ಥ ಎಂಬಂತೆ, ಸರಾಫ್ ಡಾಕ್ಟರ್ ಏನು ಹೇಳುತ್ತಾರೋ ಅದೇ ರೀತಿ ನಡೆಯುವವರು ಜನ.ಅಷ್ಟೊಂದು ನಂಬಿಕೆ, ಪ್ರೀತಿ ಇವರ ಮೇಲೆ. ಇವರು ಗಳಿಸಿದ್ದೂ ಸಹ ಅದನ್ನೇ, ದುಡ್ದನ್ನಲ್ಲ. ಎಂಥ ಕಾಯಿಲೆಯನ್ನೂ ಗುಣ ಪಡಿಸಬಲ್ಲರು ಎಂದು ಜನ ನಂಬುತ್ತಿದ್ದರು. ಸಾವಿನ ಅಂಚಿನಲ್ಲಿರುವವರೂ ಸಹ ನನಗೆ ಎಲ್ಲೂ ಚಿಕಿತ್ಸೆ ಬೇಡ, ನಾನು ಸರಾಫ್ ಡಾಕ್ಟರ್ ಹತ್ತಿರ ಚಿಕಿತ್ಸೆ ಪಡೆಯುತ್ತೇನೆಂದು ಬಂದಿದ್ದೂ ಇದೆ.

ಇದೊಂದು ಕಡೆಯಾದರೆ," ಜನ ಸೇವೆಯೇ ಜನಾರ್ಧನ ಸೇವೆ ", ಎಂಬ ಉಕ್ತಿಯ ಧೃಡ ಪರಿಪಾಲಕನಾಗಿ ತಮ್ಮನ್ನು ನಿಸ್ವಾರ್ಥವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರಿವರು. ವರ್ಷಕ್ಕೆ ನೂರಾರು ಮಕ್ಕಳಿಗೆ ನವೋದಯ ಪ್ರವೇಶ ಪರೀಕ್ಷೆಗೆಂದು ಉಚಿತ ತರಬೇತಿ ನೀಡಿ, ಹಳ್ಳಿಯ ಎಷ್ಟೋ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ದೊರಕಿಸಿ ಕೊಟ್ಟವರು. ಉಚಿತ ಬೇಸಿಗೆ ಶಿಬಿರವನ್ನು ಅದ್ದೂರಿಯಾಗಿ ಹತ್ತು ವರ್ಷ ನಡೆಸಿ ಹಳ್ಳಿಯ ಎಷ್ಟೋ ಪ್ರತಿಭೆಗಳನ್ನು ಹೊರಗೆ ತಂದವರು. ಸಮಾಜದ ಎಷ್ಟೋ ಅಸಾಹಯಕರ ಕೂಗನ್ನು ತಾಳ್ಮೆಯಿಂದ ಆಲಿಸಿ, ಅವರಿಗೆ ಸಹಾಯ ಹಸ್ತವನ್ನು ಚಾಚಿದವರು. ಇದೊಂದೆಡೆಯಾದರೆ,ಸಾಹಿತ್ಯದಲ್ಲಿ ಬಹಳ ಆಸಕ್ತಿ ಹೊಂದಿದ ಇವರು, ಅದೆಷ್ಟೋ ಲೇಖನ, ಕಥೆ, ಕವನ ಬರೆದು ಅದರಲ್ಲೂ ಸಮಾಜದ ತತ್ವಗಳನ್ನು ಬಿಂಬಿಸಿದವರು. ತಮ್ಮದೇ ಪತ್ರಿಕೆ ಪ್ರಾರಂಭಿಸಿ, ಸಮಾಜದ ದುಷ್ಟ ಶಕ್ತಿಗಳನ್ನು ನಿರ್ಭಯವಾಗಿ ಟೀಕಿಸಿದರು. ಚಿಕ್ಕ ಮಕ್ಕಳ ಯಕ್ಷಗಾನ ಮೇಳ ಕಟ್ಟಿ ದೇಶದಾದ್ಯಂತ ಸಂಚರಿಸಿ ನಿಸ್ವಾರ್ಥ ಕಲಾ ಸೇವೆ ಮಾಡಿದರು. ಸಮಾಜದಲ್ಲಿ ಏನೇ ಜಗಳ ನಡೆದರೂ ನ್ಯಾಯದ ಪರ ಜಿದ್ದಿನಂತೆ ನಿಂತು ಗೆಲ್ಲುವವರು.

ಅಹುದು. ಇನ್ನೆಷ್ಟೋ ಕ್ಷೇತ್ರಗಳು. ಇವರು ಕೈ ಹಾಕದ ಕ್ಷೇತ್ರವಿಲ್ಲ. ಶಿರಾಲಿಯಲ್ಲಿ ವೈದ್ಯಕೀಯ ಸೇವೆ ಆರಂಭಿಸಿ ಮೂವತ್ತು ವರ್ಷ ಮೇಲಾಯಿತು. ಆದರೆ ಇಂದಿಗೂ ಸಹ, ಅದೇ ಸರಳ, ನಿಷ್ಟ್ಹುರವಾದಿ, ಕರುಣಾಳು ವ್ಯಕ್ತಿತ್ವ. ಇಂದಿಗೂ ಸಹ ಅಷ್ಟೇ ಫೀಸ್. ಪರೀಕ್ಷೆ ಮಾಡಿ, ಚಿಕಿತ್ಸೆ, ಔಷಧಿ ನೀಡಿ ಇಪ್ಪತ್ತು ರೂಪಾಯಿ ತೆಗೆದುಕೊಳ್ಳುವುದನ್ನು ನೋಡಿ ನಾನು ದಂಗಾಗಿದ್ದೂ ಇದೆ. ಅದೆಷ್ಟೆಷ್ಟೋ ದೂರದಿಂದ ರೋಗಿಗಳು ಬರುವುದನ್ನು ನೋಡಿದ್ದೇನೆ. ಏನೇ ಆದರೂ ತಮ್ಮ ಸರಳ, ಅಲ್ಪ ತೃಪ್ತ ಜೀವನ ಮುಂದುವರೆಸಿಕೊಂಡು ಹೋದವರಿವರು. ದುಡ್ಡು ಗಳಿಸಲಿಲ್ಲ, ಪ್ರೀತಿ ಗಳಿಸಿದರು. ಇಂತಹ ನಿಸ್ವಾರ್ಥ ಸೇವಕ, ವೈದ್ಯರನ್ನೆಷ್ಟು ಜನರನ್ನು ಕಾಣಬಹುದು ನಾವಿಲ್ಲಿ. ಕಲಿಯುವುದು ದುಡ್ಡು ಮಾಡಲಿಕ್ಕೆ ಎಂದು ದುಡ್ದ ಗಳಿಸಲು ನಾಗಾಲೋಟದಿಂದ ಓಡುತ್ತಿದ್ದೇವೆ. ಇಂಥವರ ಜೀವನ ನಮಗೆ ದಾರಿದೀಪವಾಗಲಿ.

8 comments:

 1. ಇಂಥ ಅದ್ಭುತ ವ್ಯಕ್ತಿತ್ವ ಬಹಳ ವಿರಳ ........ಸರಾಫ್ ಡಾಕ್ಟರರ ಪರಿಚಯ ತಿಳಿಸಿದ ತಮಗೆ ಧನ್ಯವಾದಗಳು ಪರೇಶ್......

  ReplyDelete
 2. ವ್ಯಕ್ತಿಯ ವ್ಯಕ್ತಿತ್ವದ ಪರಿಚಯ ತುಂಬಾ ಚನ್ನಾಗಿ ಮೂಡಿ ಬಂದಿದೆ :):) ಸರಾಫ್ ಡಾಕ್ಟರ್ರವರ ವ್ಯಕ್ತಿತ್ವ ,ನಡೆ-ನುಡಿ, ಹಣ ಗಳಿಕೆಯೆಡೆಗೆ ವಾಲಿರುವ ಇಂದಿನ ಯುವ ಪೀಳಿಗೆಗೆ ಒಂದು ಪಾಠವಿದ್ದಂತೆ. ಜೀವನದಲ್ಲಿ ಹಣ ಸಂಪಾದನೆಯೊಂದೇ ಮುಖ್ಯವಲ್ಲ, ಹುಟ್ಟಿದ ಮೇಲೆ, ಕನಿಶ್ಟ ನಾಲ್ಕು ದಿನವಾದರೂ ನಮ್ಮ ಸುತ್ತಮುತ್ತಲಿನ ಜನತೆಗೆ ನೆರವಾಗುವಂತೆ ಬದುಕಬೇಕು ಎನ್ನುವುದು ಅವರನ್ನು ನೋಡಿದಾಗ ಮನಸ್ಸಿಗೆ ಬರುವಂತಹ ವಿಚಾರ :):) ಸಮಾಜಮುಖಿ ಚಿಂತನೆಯಲ್ಲಿ ಸದಾ ನಿರತರಾಗಿರುವ ಇವರು ಸಮಾಜದ ಅಭಿವೃದ್ದಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇಂದಿನ ಈ ಆಡಂಭರದ ಸಮಾಜದಲ್ಲಿ ಇಂತಹ ಸರಳಜೀವಿ, ಸಮಾಜ ಸೇವಕ, ಸಾಹಿತ್ಯ ಹಾಗೂ ಸಂಸ್ಕೃತಿಯಲ್ಲಿ ಅಪಾರ ಆಸಕ್ತಿ ಇರುವ ವೈದ್ಯರನ್ನು ಹುಡುಕುವುದು ಕತ್ತಲಲ್ಲಿ ಸೂಜಿಗೆ ದಾರ ಪೋಣಿಸಿದಂತೆ ಎನ್ನುವುದು ನನ್ನ ಅಭಿಪ್ರಾಯ. ಹೀಗಿರುವಾಗ ಸರಾಫ್ ಡಾಕ್ಟರ್ ಅಂತಹ ಒಬ್ಬ ಮೇಧಾವಿ ನಮ್ಮ ಮಧ್ಯೆ ಇರುವುದು ಉತ್ತಮ ಸಮಾಜದ ನಿರ್ಮಾಣಕ್ಕೆ ಭದ್ರ ಬುನಾದಿ ಇದ್ದಂತೆ :)
  ಡಾಕ್ಟರ್ ಸರಾಫ್ರವರ ಮಾರ್ಗದರ್ಶನ ನಮ್ಮೆಲ್ಲರಿಗೂ ದಾರಿದೀಪವಾಗಲಿ ಎನ್ನುವುದೇ ನನ್ನ ಆಶಯ :):)

  ReplyDelete
 3. ‎"ಹಣ ಕೊಟ್ಟು ಓದಿದ್ದೇವೆ, ಹಣ ಮರಳಿ ಪಡೆಯುವುದೇ ವೃತ್ತಿ" ಎಂದು ಭಾವಿಸಿರುವ ಈ ಕಾಲದ ವೈದ್ಯರಿಗೆಲ್ಲಾ ಇವರು ದಾರಿದೀಪವಾಗಲಿ.. ನಿಜಕ್ಕೂ ಅಭಿಮಾನ ಮೂಡಿತು.. ಸತ್ಯ ಹೇಳುವುದಾದಲ್ಲಿ, ಭಾರತದ ಅಂತಃಸತ್ವ ಉಳಿದಿರೋದು, ಇಂಥಾ ಕೆಲವು ನಿಸ್ವಾರ್ಥ ಸೇವಾಮನೋಭಾವದ ಸಜ್ಜನರಿಂದಲೇ.. ಇಂಥವರ ಸಂತತಿ ಸಾವಿರವಾಗಲಿ..
  ವೈದ್ಯೋ ನಾರಾಯಣೋ ಹರಿಃ.

  ReplyDelete
 4. ಸರಾಫ್ ಡಾಕ್ಟರದು ಸರಳ ಸಜ್ಜನಿಕೆಯ ವ್ಯಕ್ತಿತ್ವ..ಜನರ, ಸಮಾಜದ ಉದ್ದಾರಕ್ಕೆ ನೀಡಿದ ಕೊಡುಗೆ ತುಂಬಾ ಇದೆ.. ಪುಟ್ಟದಾದ ಊರಲ್ಲಿ ತಮ್ಮ ಕೈಲಾದ ಸಹಾಯ ಮಾಡುತ್ತಿರುವ ಸರಾಫ್ ಡಾಕ್ಟರ ಅವರ ಉಪಯೋಗಕಾರಿ ಕಾರ್ಯಕ್ರಮಗಳ ಪಟ್ಟಿ ದೊಡ್ಡದಿದೆ.. ಹಾಡುವುದರಿಂದ ಹಿಡಿದು ನೃತ್ಯದ ತನಕ ಅದರೊಟ್ಟಿಗೆ ಸಾಹಿತ್ಯದಲ್ಲಿ ಸಹ ಆಸಕ್ತಿ ಹೊಂದಿರುವುದು ಬಹು ಸೋಜಿಗದ ಸಂಗತಿ.. ವೈರಸ ಎಂಬ ಕಾವ್ಯನಾಮದಲ್ಲಿ ಪರಿಚಯರಾಗಿದ್ದಾರೆ.. ಇಂತಹ ವ್ಯಕ್ತಿಯ ಕಿರು ಪರಿಚಯದಲ್ಲಿ ಸ್ಪುಟವಾಗಿ ಬರೆದದ್ದು ಶ್ಲಾಘನೀಯ :)

  ReplyDelete
 5. ಆಡಂಬರವಿಲ್ಲದ ವ್ಯಕ್ತಿತ್ವ ಇವರದು ನಾ ಕಂಡ ಅನುಭವದಲಿ. ಕ್ಷಣ ಭೇಟಿಯಲ್ಲಿ ಈ ಮಹಾನ್ ವ್ಯಕ್ತಿತ್ವದ ಕನ್ನಡ ಸಾಹಿತ್ಯದ ಬಗೆಗಿನ ಎರಡು ಮಾತುಗಳು ಬಹುಶ ಎಂದು ಮರೆಯಲಾರದಂತವು. ಅಂಥಹ ಅದ್ಭುತ ವ್ಯಕ್ತಿತ್ವದ ಕುಡಿಯೊಂದು ನಮ್ಮ ಜತೆಗಾರ ಅನ್ನುವದರಲ್ಲೂ ನಮಗೆ ಹೆಮ್ಮೆಯಿದೆ. ಅವರು ಹಾಕಿಕೊಟ್ಟ ಸತ್ ಪಥದಲ್ಲೇ ನಾವುಗಳು ಸಾಗೋಣ ಎಂಬ ಕಿರು ಆಸೆ ನಮ್ಮದಾಗಿರಲಿ ಎಂದಷ್ಟೇ ಹೇಳಲು ನಾನು ಶಕ್ತ.

  ReplyDelete
 6. ನನಗೆ ಈ ನಡುವೆ ಬಹಳ ಮನಸ್ಸಿಗೆ ನಾಟಿದ ಬರಹ ಇದು.

  ಇಂತಹ ನಿತ್ಯ ತೃಪ್ತ ತಂದೆಯನ್ನು ಪಡೆದ ನೀವೇ ಧನ್ಯರು.

  ಬಹು ಜನರಿಗೆ ಆದರ್ಶವಾಗಬಲ್ಲ ಇವರ ವ್ಯಕ್ತಿತ್ವ ನನಗೂ ಪ್ರೇರಣೆ ನೀಡಿತು.

  ಪರಾಶ್, ಮಹಾತ್ಮ ಪೋರಬಂದರಿನಲ್ಲೇ ಹುಟ್ಟ ಬೇಕೆಂದೇನಿಲ್ಲ. ಅವರು ನಮ್ಮ ನಡುವೆಯೂ ಹುಟ್ಟಿ ಸದ್ದಿಲ್ಲದೆ ಜಗತ್ತಿಗೆ ದೀವಿಗೆಯಾಗಿ ಪ್ರಚಾರವಿಲ್ಲದೆ ಇದ್ದುಬಿಡುತ್ತಾರೆ.

  ವೈದ್ಯೋ ನಾರಾಯಣೋ ಹರಿ:

  ReplyDelete
 7. ನನಗೆ ಇವರನ್ನು ಹತ್ತಿರದಿಂದ ಗೊತ್ತು....... ಇಂಥಹ ವ್ಯಕ್ತಿತ್ವ ಬಹಳ ವಿರಳ..... ಇಂಥಹ ತಂದೆ ಪಡೆದ ನೀವು ಧನ್ಯ...

  ReplyDelete
 8. ದೇವರು ತಮ್ಮ ತೀರ್ಥರೂಪರಿಗೆ ಒಳ್ಳೆಯ ಆರೋಗ್ಯ ಮತ್ತು ನೆಮ್ಮದಿಭರಿತ ದೀರ್ಘ ಆಯುಷ್ಯವನ್ನು ಕರುಣಿಸಲಿ.
  ಇಂಥವರ ಪೀಳಿಗೆ ಬೆಳೆಯಲಿ.

  ReplyDelete