Showing posts with label ಕವಿ ಕಿಂಡಿ. Show all posts
Showing posts with label ಕವಿ ಕಿಂಡಿ. Show all posts

Saturday, 18 January 2014

ದೇವರನು ಕಂಡೆ, ನಾ ದೇವರನು ಕಂಡೆ


ಉಷೆಯ ಎಳೆ ಕಿರಣಗಳು 
ಮೈಸೋಕಿ ಮರುಕ್ಷಣಕೆ 
ಸುಮವರಳಿ ನಿಂತಾಗ 
ದೇವರನು ಕಂಡೆ, ನಾ ದೇವರನು ಕಂಡೆ

ಪುಟ್ಟ ಮೊಟ್ಟೆಯ ಒಳಗೆ
ಜೀವ ದ್ರವ್ಯವ ತುಂಬಿ 
ಮರಿ ಪುಟಿದು  ಹೊರ ಬರಲು 
ದೇವರನು ಕಂಡೆ, ನಾ ದೇವರನು ಕಂಡೆ

ಮಣ್ಣು ಗೊಬ್ಬರ ತಿನುವ  
ಹಸುರುಟ್ಟ ವೃಕ್ಷವದು 
ಸಿಹಿ ಹಣ್ಣು ಕೊಡುವಾಗ 
ದೇವರನು ಕಂಡೆ, ನಾ ದೇವರನು ಕಂಡೆ

ಅಂಧನೊಬ್ಬನು, ಅವಳ 
ಮೈಗಾಳಿ ಸೋಕಿದೊಡೆ 
ಅಮ್ಮ ಬಂದಳು ಎನಲು 
ದೇವರನು ಕಂಡೆ, ನಾ ದೇವರನು ಕಂಡೆ

ಎಲ್ಲಿಯೋ ಇರುವ ಮಗು 
ಜಾರಿ ತಾ ಬಿದ್ದಾಗ 
ತಾಯಿಯೆದೆ ಝಲ್ಲೆನಲು 
ದೇವರನು ಕಂಡೆ, ನಾ ದೇವರನು ಕಂಡೆ

ನವಜಾತ ಶಿಶುವದುವು 
ಸೊಂಪಾದ ನಿದ್ದೆಯಲಿ 
ಪುಟ್ಟ ನಗು ಬೀರುತಿರೆ 
ದೇವರನು ಕಂಡೆ, ನಾ ದೇವರನು ಕಂಡೆ

Monday, 8 April 2013

ಆತ್ಮ ಶುದ್ಧಿ

ಮಾನ ಮರ್ಯಾದೆ ಬಿಟ್ಟು 
ಪ್ರಜೆಗಳ ದುಡ್ಡನು ತಿಂದು,
ಸಭೆಗಳಲಿ ಸನ್ಮಾನ ಮಾಡಿಸಿಕೊಂಡು 
"ದೇಶದ ಅಭಿವೃದ್ಧಿ ನಮ್ಮ ಹೊಣೆ"
ಎಂದು ರಾಜಕಾರಣಿ ಭಾಷಣ ಮಾಡುತಿರುವಾಗ 

ಕಂಡವರ ಮನೆ ಹೆಂಗಸರ ಮೇಲೆ 
ಕಣ್ಣು ಹಾಕುತ್ತ ಹೆಂಡತಿಗೆ ಮೋಸ 
ಮಾಡುತ್ತಿದ್ದ ಪೂಜಾರಿ
"ಧರ್ಮೇಚ ಅರ್ಥೇಚ ಕಾಮೇಚ
ನಾತಿ ಚರಾಮಿ" ಎಂದು ಪ್ರಮಾಣ ಮಾಡಿಸಿ
ವರನಿಗೆ ಉಪದೇಶ ಕೊಡುವಾಗ

ಮಾನವೀಯತೆ, ನೀತಿ, ಧರ್ಮ ಎಂದು
ಮಾರುದ್ದ ಕವಿತೆ ಬರೆದ ಕವಿ
ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಕುತಂತ್ರ ಮಾಡಿ
ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ
ಬಕೀಟು ಹಿಡಿದಾಗ

ದೇಶ ಸ್ವಚ್ಚವಾಗಿಡಿ ಎಂದು
ಉಪದೇಶ ಕೊಡುವ ಶಿಕ್ಷಕ
ಎಲ್ಲ ಮಲಗಿರುವ ಸಮಯದಲ್ಲಿ ಸದ್ದು ಮಾಡದೆ
ಪಕ್ಕದ ಮನೆಯ ಕಾಂಪೌಂಡಿನೊಳಗೆ
ಕಸ ಎಸೆದಾಗ

ಮನಸಲಿಹ ಹೊಲಸೆಲ್ಲ ಉಕ್ಕಿತ್ತು
ಅವರಾತ್ಮವೇ ನೋಡಿ ನಕ್ಕಿತ್ತು

ವೇಷ ತೊಡಿಸದಿರೋ ಮಾನವ...

ಇವನೆಂದ ತಾ ಹಿಂದು, ಅವನೆಂದ ತಾ ಮುಸ್ಲಿಂ 
ಮತ್ತೆ ಮೂರನೆಯವ ಬಂದ ಕ್ರೈಸ್ತ ತಾನೆಂದು 
ಎಲ್ಲರೂ ಅಂದರು ನಾ ಮುಂದು ತಾ ಮುಂದು 
ಹರಿದು ಕಿತ್ತಾಡಿದರು ಅಲ್ಲಿ ಅಂದು 

ರಕ್ತದ ಕೋಡಿಯದು ಎಲ್ಲೆಡೆಯೂ ಹರಿದಿತ್ತು 
ಯಾವ ಧರ್ಮದ್ದೆಂದು ತಿಳಿಯಲಿಲ್ಲ 
ಹಿಂದುವಿನ ಪಕ್ಕದಲಿ ಮುಸ್ಲಿಮನ ಹೆಣವಿತ್ತು 
ಆದರೂ ಆಶ್ಚರ್ಯ, ಜಗಳವಿಲ್ಲ

ಆದರಿವರನು ನೋಡಿ ಹಲವು ಮತಬಾಂಧವರು
ಸೇಡಿನಲಿ ಉರಿದರು ಜ್ವಾಲೆಯಾಗಿ
ಧರ್ಮ ರಕ್ಷಣೆಯನ್ನು ಮಾಡುವೆವು ತಾವೆಂದು
ದ್ವೇಷವನು ಬಿತ್ತಿದರು ಕೂಗಿ ಕೂಗಿ

ಕ್ರಿಸ್ತ ಅಲ್ಲಾ ರಾಮ ಶಾಂತಿಯನು ಸಾರಿದ್ದು
ಮಾಡಿರೆಂದರು ಜಗವ ಪ್ರೇಮ ಧಾಮ!
ದ್ವೇಷದ ಬೆಂಕಿಯಲಿ ತುಪ್ಪವನು ಸುರಿಯುತ್ತ
ಆಗುತ್ತಲಿಹುದಿಲ್ಲಿ ಮೃತ್ಯು ಹೋಮ

ಎಲ್ಲಕ್ಕೂ ಮಿಗಿಲಾದ್ದು ಮಾನವೀಯತೆ ಗೆಳೆಯ
ಧರ್ಮವೂ ಹೇಳಿದ್ದು ಇದನೇ ನೋಡ
ಧರ್ಮವನು ಪಾಲಿಸಲು ಧರ್ಮವದು ಪಾಲಿಪುದು
ಧರ್ಮಕ್ಕೆ ವೇಷ ತೊಡಿಸುವುದು ಬೇಡ ;

Tuesday, 5 February 2013

ಪಯಣ

ಕಾಯುತ್ತಿದ್ದರೆಲ್ಲ ನಿಲ್ದಾಣದಲಿ ರೈಲಿಗೆ,
ಕುಳಿತಿರುವರು ಕೆಲ ಜನ ಜಗಲಿಗೆ 
ತಲೆಯೊಡ್ಡಿ, 
ರಿಸರ್ವೇಶನ್ ಆಗಿದೆಯೆಂದು ಮನ ನಿರಾಳ;
ಎಸಿಯಲಿ ತಣ್ಣಗೆ ಮಲಗುವ ಹಿಗ್ಗು 
ಕೆಲವರದಾದರೆ, 
ಸ್ಲೀಪರ್ ಆದರೂ ಸಿಕ್ಕಿತೆಂಬ ಖುಷಿ ಕೆಲವರದು.

ಇನ್ನು ಹಲವು ಅತೃಪ್ತ ಆತ್ಮಗಳು,
ಓಡಾಡುತಿವೆ ಅತ್ತಿಂದಿತ್ತ, ಇತ್ತಿಂದತ್ತ
ದೂರದಿಂದ ಸೈರನ್ ಕೇಳಿದಂತನಿಸಿದ್ದೇ ತಡ,'
ಓಡುವರು ಪ್ಲಾಟ್ಫಾರ್ಮ್ ನ ಅಂಚಿಗೆ
ಜನರಲ್ ಬೋಗಿಯ ಜನ ಜಂಗುಳಿ ಸೀಳಿ
ಹೋಗಬೇಕೊಳಗೆ,
ಹೊಡೆದಾಡಿ ಸೀಟು ಸಿಕ್ಕರೆ ಪುಣ್ಯ;
ಬೋಗಿ ತುಂಬಿ, ಇರುವೆಗೂ ಜಾಗವಿಲ್ಲ,
ಹೊರಗೆ ಹಲವರು ನಿರಾಶರಾಗಿರೆ,
ಒಳಗೆ ನಿಂತವನೆಂದ-
"ನಿಲ್ಲಲಾದರೂ ಸಿಕ್ಕಿತಲ್ಲ ನಾ ಧನ್ಯ"

ಪಯಣ ಆರಂಭ
ರೈಲು ಹೊರಟಿತು ಗಮ್ಯದೆಡೆ.
ಎಸಿಯಲ್ಲಿದ್ದರೂ ಅವನಿಗೆ ನಿದ್ದೆಯೇ ಇಲ್ಲ
ಬ್ಯಾಗು ತೆಗೆದು ನುಂಗಿದನೆರಡು ಮಾತ್ರೆ;
ಅಲ್ಲಿ ಜನರಲ್ ಬೋಗಿಯಲ್ಲೊಬ್ಬನಿಗೆ
ನಿಂತಲ್ಲಿಯೇ ಗಡದ್ದು ನಿದ್ದೆ.

ಅಂತೂ ಬಂತು ಕೊನೆಯ ನಿಲ್ದಾಣ,
ಎಸಿ ಬೋಗಿಯಿಂದಿಳಿದ ಶ್ರೀಮಂತ ಮಡದಿಗೆಂದ-
"ಅಯ್ಯೋ ಎಂತ ಸೆಕೆ, ಹೊಲಸು ನರಕ";
ಸ್ಲೀಪರ್ ನಿಂದ ಇಳಿದವ ತಟಸ್ಥ;
ಜನರಲ್ ಬೋಗಿಯವನಿಗೆ ಒಮ್ಮೆಲೇ
ಸ್ವಾತಂತ್ರ್ಯ ಸಿಕ್ಕಂತನಿಸಿ ಹೇಳಿದ-
"ಈ ಜಗ ಸ್ವರ್ಗ";

ಎಲ್ಲ ನಡೆದರು ಅವರವರ ದಾರಿ ಹಿಡಿದು
ರೈಲು ತಯಾರು ಮತ್ತೊಂದು ಪಯಣಕೆ

Wednesday, 9 January 2013

ಹರ್ಷ ಗೀತ



ನಿನ್ನ ಕಣ್ಣ ಕಡಲಿನಲ್ಲಿ ನನ್ನ ಪ್ರೀತಿ ಬಿಂಬ ಕಂಡೆ 
ಮಬ್ಬಾಗಿಹ ಮನದಿ ನವ್ಯ ದೀಪ್ತಿ ಬೆಳಗಿತು 
ನಿನ್ನ ರೆಪ್ಪೆ ಬಡಿತದಲ್ಲಿ, ಕುಣಿವ ನವಿಲ ಗರಿಯ ಕಂಡೆ 
ಎದೆಯ ಗೂಡಿನಲ್ಲಿ ಹರ್ಷ ಗೀತ ಮೊಳಗಿತು 

ವಿರಹದಲ್ಲಿ ಬೆಂದು ಎನ್ನ ಭಾವ ಬತ್ತಿ ಬರಡಾಗಲು 
ಅನುರಾಗದ ಜಿನುಗು ಮಳೆಯ ನೀನು ಸುರಿಸಿದೆ 
ಹೊತ್ತಿಲ್ಲದೆ ಗೊತ್ತಿಲ್ಲದೆ ಸುತ್ತುವ ಅಲೆಮಾರಿ ಸುತ್ತ 
ಕಾಳಜಿಯ ಗೋಡೆ ಕಟ್ಟಿ ಪ್ರೀತಿ ಹರಿಸಿದೆ 

ಹತ್ತು ಹಲವು ನೋವುಗಳು ತುಂಬಿರುವ  ಮನದ ಭಾರ 
ನೀನು ಬಂದ ಮೇಲೆ ತಾನೆ ಕಡಿಮೆಯಾದುದು 
ಹುಚ್ಚು ಹುಚ್ಚು ಯೋಚನೆಯಲಿ ಮನವು ಕೊಚ್ಚಿ ಹೋಗುತಿರಲು 
ಮತ್ತೆ ಜೀವ ಕೊಟ್ಟಂತಹ ಹಿರಿಮೆ ನಿನ್ನದು 

ಕತ್ತಲೆಯಲು ಬೆಳಕಿಹುದು, ಸುತ್ತ ಮುತ್ತ ನೀನಿರಲು 
ಸಮಯ ಕಳೆಯುತಿರುವುದನ್ನೆ  ತಿಳಿಯದಾಗಿಹೆ 
ಅಲ್ಲಿ ಇಲ್ಲಿ ಎಲ್ಲೆಲ್ಲೂ ನಿನ್ನಪಾರ ಪ್ರೀತಿ ಕಡಲು 
ಅದರ ತೀರದಲ್ಲಿ ನಾನು ಕಳೆದು ಹೋಗಿಹೆ 

Friday, 28 December 2012

ಎದೆಯ ಕೂಗು


ತಿಳಿಯದಾಗಿದೆ ನಲ್ಲ, ಎಲ್ಲಿ ಹೋಗಿರುವೆ ನೀ  
ಬಾ ಬೇಗ ಮನವನ್ನು  ತಣಿಸಲೆಂದು 
ಹೊತ್ತು ಮುಳುಗುವ ಸಮಯ, ಕತ್ತಲದು ಎಲ್ಲ ಕಡೆ 
ದುಗುಡ ಆವರಿಸಿಹುದು ಮನದಿ ಇಂದು 

ಎನಗೆ ಸಾಂತ್ವನವನ್ನು ನೀಡುತಿದೆ ತೆಂಗು ಗರಿ 
ತಲೆ ಆಡಿಸುತ ನೀನು ಬರುವೆ ಎಂದು
ಬಾಗಿಲಿನ ಮೂಲೆಯಲಿ ಉದ್ದ ಇರುವೆಯ ಸಾಲು 
ಹೇಳುತಿದೆ-"ನಿನ್ನೊಡನೆ ಇರುವೆ ಎಂದು"

ಒಲೆಯ ಮೇಲಿಟ್ಟಿರುವ ಕುಕ್ಕರದು ಕೂಗುತಿದೆ 
ತನ್ನೊಡಲ ಬೇಗೆಯನು ಹೇಳಲೆಂದು 
ಅದರ ಕೂಗನು ಕೇಳಿ ಓಡಿದಾಗರಿವಾಯ್ತು 
ಬೆಂದ ಅಕ್ಕಿಯೇ, ಅನ್ನವಾಗ್ವುದೆಂದು 

ಒಳಗೊಳಗೆ ವಿರಹದಾ ಜ್ವಾಲೆ ಇದ್ದರು ಕೂಡ  
ಯಾರಿಗೂ ಹೇಳದೆಯೆ  ಬೇಯುತಿಹೆನು 
ನನ್ನೆದೆಯ ಕೂಗನ್ನು, ನೀ ಕೇಳಿ ನನ್ನ ಬಳಿ 
ಬರುವಂಥ ಕ್ಷಣಕಾಗಿ ಕಾಯುತಿಹೆನು

Monday, 10 December 2012

ಡಿಮಾಂಡು

ಇಂಜಿನಿಯರು ಹುಡುಗ ಬೇಕು ಉಳಿದುದೆಲ್ಲ 
ಮತ್ತೆ,
ಬೆಂಗಳೂರಿನಲ್ಲಿ ನಾವು, ದೂರ ಮಾವ ಅತ್ತೆ!

ಇರಲು ಒಂದು ಫ್ಲ್ಯಾಟು ಬೇಕು, ತಿರುಗಲೊಂದು ಕಾರು 
ವೀಕೆಂಡಲಿ ಅವನ ಜೊತೆಗೆ ಸುತ್ತಬೇಕು ಊರು 

ಪ್ರತಿ ತಿಂಗಳು ಬೇಕೆನಗೆ ಬೆಲೆಬಾಳುವ ಗಿಫ್ಟು 
ಮೆಟ್ಟಿಲನ್ನು ಹತ್ತಲೊಲ್ಲೆ, ಮನೆಗೆ ಬೇಕು ಲಿಫ್ಟು 

ಮನೆಯ ಒಳಗೆ ಬಂದೊಡನೆಯೆ,ನೀಡಬೇಕು ಮುತ್ತು 
ಅಡಿಗೆ ಮಾಡಿ ಬಡಿಸಬೇಕು ತೋರಿಸದೆ ಗತ್ತು 

ಬೇಸರದಲಿ ನಾ ಕುಳಿತಿರೆ, ಮಾಡಬೇಕು ಫೋನು 
ಕೇಳಬೇಕು-"ಈ ಕೂಡಲೇ ಮನೆಗೆ ಬರಲೆ ನಾನು?"

ಪ್ರತಿ ವರ್ಷವೂ ಬೇಕೊಂದು ಫಾರಿನ್ನಿನ ಟ್ರಿಪ್ಪು 
ಚಿಕನ್, ಮಟನ್ ಮೀನು ಬೇಕು, ತಿನ್ನಲಾರೆ ಸೊಪ್ಪು 

ಇಷ್ಟಿದ್ದರೆ  ಸಾಕು, ಅವನು ಕಟ್ಟಲೆನಗೆ ತಾಳಿ 
ಕೊಂಚ ಹೆಚ್ಚು, ಕಡಿಮೆಯಾದ್ರೆ ಆಗುವೆನು ಕಾಳಿ 

Thursday, 22 November 2012

ಅವ್ಯಕ್ತ ಶಕ್ತಿ

ಕಪ್ಪು ಹಣದಲ್ಲಿ ಕಟ್ಟಿಹ ಮನೆಯಡಿ 
ಬಡವನ ಬೆವರಿನ ಹನಿಯಿದೆ 
ಅದಕೇ, ಮನೆ ನೆಲಕಚ್ಚದೆ ನಿಂತಿದೆ 

ಭ್ರಷ್ಟರಾಳುತಿಹ ದೇಶದ ಮಣ್ಣಲಿ 
ಯೋಧರ ನೆತ್ತರು ಬೆರೆತಿದೆ 
ಅದಕೇ, ದೇಶಕ್ಕಿನ್ನೂ ಬಲವಿದೆ 

ಕುಡುಕ ಗಂಡನ ಕಾಟದ ನಡುವೆಯೂ 
ಸತಿಯ ಛಲ ಮತ್ತು ಒಲವಿದೆ 
ಅದಕೇ, ಬಾಳಲಿ ಇನ್ನೂ ಕಸುವಿದೆ 

ಹೊಲಸು ತುಂಬಿರುವ ಆತ್ಮದ ಮಧ್ಯದಿ 
ದೇವನು ಇಟ್ಟಿಹ ಬೆಳಕಿದೆ 
ಅದಕೇ, ದೇಹದಲಿನ್ನೂ ಉಸಿರಿದೆ 

Wednesday, 10 October 2012

ನಾ ಸತ್ತಿದ್ದೆ

ಚಳಿಯಿಲ್ಲದಿರೂ ಮೈ ಮೇಲೆ ಚಾದರ 
ಉಸಿರು ಬಂದರೆ ತಿಳಿಯಲೆಂದೇನೋ,
ಮೂಗಿನ ಹೊಳ್ಳೆಗಳೆರೆಡರಲೂ ಹತ್ತಿಯುಂಡೆ
ಓಡಿ ಹೋಗುವೆನೆಂಬ ಭಯವಿರಬಹುದು 
ಕಟ್ಟಿದ್ದರು ಹೆಬ್ಬೆರಳುಗಳೆರಡನೂ ಜೋಡಿಸಿ 
ನನ್ನ ಸಮಯ ಮುಗಿದು ನಾ ಸತ್ತಿದ್ದೆ 

ಅಮ್ಮ ಕಿರುಚಿತ್ತಿದ್ದಳು ಮತ್ತೆ ಬಾ ಮಗನೇ ಎಂದು 
ಹಾತೊರೆದೆ, ಎದ್ದು ಗಟ್ಟಿಗೆ ಅಪ್ಪಿಕೊಳ್ಳಲವಳ 
ಶಕ್ತಿಯೇ ಇರಲಿಲ್ಲ, ಕೈಕಾಲುಗಳಲ್ಲಿ
ಅಪ್ಪ ದಿಗ್ಭ್ರಾಂತ, ದೂರ ದೇಶಕೆ ಹೋಗಿ 
ಚೂರು ಪಾರು ದುಡಿದು ಹೊತ್ತಿದ್ದ ಸಂಸಾರ ಭಾರ 
ಅವನೊಡನೆ ಕೈ ಜೋಡಿಸಿ ವರ್ಷವಾಗಿತ್ತಷ್ಟೇ
ನನ್ನ ಸಮಯ ಮುಗಿದು ನಾ ಸತ್ತಿದ್ದೆ 

ತಮ್ಮಂದಿರೀರ್ವರು, ಹೂವಾಗಿ ಅರಳುವ ಹೊತ್ತು 
ನೀರೆರೆಯುತ್ತಿದ್ದೆ ಪ್ರೀತಿಯಿಂದ
ನನ್ನ ಮೊಗವನೇ ದಿಟ್ಟಿಸಿ ನೋಡುತಿಹರು 
ಎಲ್ಲಾದರೂ ಒಂದುಸಿರು ಮಿಕ್ಕಿರಬಹುದೋ ಎಂದು 
"ನಿಮಗೋಸ್ಕರ ಕೂಡಿಟ್ಟಿದ್ದೇನೆ ಕೊಂಚ ಹಣ 
ಜೊತೆಗೆನ್ನ ಜೀವ ವಿಮೆ, ರಶೀದಿ  ರೂಮಿನ 
ಕಪಾಟಿನಲಿರುವ ಕಡತದಲ್ಲಿದೆ" ಎಂದು 
ಹೇಳ ಹೊರಟರೆ ಬಾಯಿಂದ ಮಾತೇ ಬರುತ್ತಿಲ್ಲ 
ನನ್ನ ಸಮಯ ಮುಗಿದು ನಾ ಸತ್ತಿದ್ದೆ 

ಅಷ್ಟರಲೇ  ಹಾಕಿದ್ದರು ಚಟ್ಟದ ಮೇಲೆ 
ಬಟ್ಟೆಯೆಲ್ಲ ತೆಗೆದರು, ನಾನು ನಗ್ನ 
ಭೂಮಿಗೆ ಭಾರವೆಂದು ಸುಟ್ಟು ಹಾಕುತಿಹರು 
ಕೊಂಚ ಗಾಯವಾದರೆ ಕಂಗಾಲಾಗುವ ಅಪ್ಪ 
ನಿಂತಿದ್ದ ಸ್ತಬ್ಧನಾಗಿ ನೋಡುತ್ತ
ಆಗ ತಿಳಿಯಿತು "ನಾನು" ಒಂದು ಪಾತ್ರವಷ್ಟೇ 
ಈಗಿಲ್ಲ ನನ್ನದೆಂಬುದೇನೂ  ಇಲ್ಲಿ 
ಬದುಕ ನಾಟಕಕೆ ತೆರೆ ಬಿದ್ದು  ನಾ ಸತ್ತಿದ್ದೆ 

Tuesday, 18 September 2012

ವಿಚ್ಛೇ(ನಿವೇ)ದನ


ಯಾಕಿಂತು ಕುಳಿತಿರುವೆ ಯಾತಕದು ಮುನಿಸು 
ನಿನ್ನ ಪರಿಯನು ನೋಡಿ ನಡುಗುತಿದೆ ಮನಸು 
ಎದೆಯಂಗಳದಿ ನೀನು ಹಚ್ಚಿರುವ ಜ್ಯೋತಿ 
ಕಿಚ್ಚಾಗಿ ಮೂಡಿಸಿದೆ ಮನದೊಳಗೆ ಭೀತಿ 

ಅಂದು ನೀ ಎಂದಿದ್ದೆ ನಾ ಮನೆಯ ಚಿನ್ನ 
ಇಂದೇಕೆ ಹೋಗೆಂದು ದೂಡುತಿಹೆ ಎನ್ನ 
ಹೃದಯದಾಲಯದೊಳಗೆ ಕುಳಿತಿರಲು ನೀನು 
ಮನೆಯ ತೊರೆಯಲು ನಿನ್ನ ಮರೆಯಬಹುದೇನು

ಅಕ್ಕರೆಯ ಸಕ್ಕರೆಯ ತಿನಿಸುತ್ತ ಬಂದೆ 
ಕಷ್ಟ ಕೋಟಲೆಯಲ್ಲಿ ನಿನ ಜೊತೆಗೆ ನಿಂದೆ 
ಇಂದೇಕೆ ಉರಿಯುತಿದೆ ಈ ತರದ ಉಲ್ಕೆ 
ಹುಚ್ಚೆದ್ದು ಓಡುತಿದೆ ಬದುಕಿನಾ ನೌಕೆ 

ಕೋಪ ತಾಪದಿ ನೀನು ಉರಿಯುತಿರೆ ಹೀಗೆ 
ಎನ್ನ ಎದೆಯದು ಬಡಿವುದಾದರೂ ಹೇಗೆ 
ಕೊಂದುಬಿಡು ಒಮ್ಮೆಲೇ ಬರಲೆನಗೆ ಸಾವು 
ಸುಖವ ನಿನ ಬಳಿಯಿಟ್ಟು ಹೊತ್ತೊಯ್ವೆ ನೋವು 

Monday, 3 September 2012

ಮತ್ತೆ ನೀ ಬರುವರೆಗೆ



ತಬ್ಬಿಕೋ ಒಮ್ಮೆ
ಹೋಗುವ ಮುನ್ನ 
ಮಲಗಬೇಕು ಹಾಯಾಗಿ 
ಬಾಹುಬಂಧನದಿ
ನೆನೆಸಿಕೊಳುವೆನದನು 
ಬೇಕೆನಿಸಿದಾಗೆಲ್ಲ ಸಾಮೀಪ್ಯ
ಮತ್ತೆ ನೀ ಬರುವರೆಗೆ 

ಕಟ್ಟಿ ಕೊಡುವೆ ಡಬ್ಬಿಯಲಿ 
ಕೈಯ್ಯಾರೆ ಮಾಡಿದು-
ಪ್ಪಿನಕಾಯಿ 
ನೀ ತಿಂದು 
ಬಾಯ್ಚಪ್ಪರಿಸಿದ 
ಶಬ್ದ ಕೇಳಿದೊಡೆ 
ನನದಿಲ್ಲಿ ಊಟ ಗೆಳೆಯ 
ಮತ್ತೆ ನೀ ಬರುವರೆಗೆ 

ಒಮ್ಮೆ ಕರೆ 
ಜೋರಾಗೆನ್ನ ಹೆಸರ,
ಪ್ರತಿಧ್ವನಿಸೆ  ಧ್ವನಿಯು 
ಮನದಿ
ಜೊತೆ ಇರುವ 
ಭಾವ ಸೃಷ್ಟಿಪುದು 
ಮತ್ತೆ ನೀ ಬರುವರೆಗೆ 

ಒಮ್ಮೆ 
ಬೈದುಬಿಡೆನ್ನ
ನಲ್ಲೆಯೆಂಬ ಹಕ್ಕಲಿ 
ತಡೆವುದದೆನ್ನ 
ಮಾಡದಂತೆ ತಪ್ಪು 
ಮತ್ತೆ ನೀ ಬರುವರೆಗೆ 

ಹಚ್ಚೊಮ್ಮೆ 
ಸಿಂಧೂರ ಹಣೆಗೆ,
ಪ್ರೇಮದಿ ನೀ 
ದೇಶ ಕಾಪಾಡುವ ತೆರದಿ,
ನೋಡಿಕೊಳುವೆ
ಅಳಿಸಿ ಹೋಗದಂತೆ 
ಮತ್ತೆ ನೀ ಬರುವರೆಗೆ 

ನೀ ಬಲ್ಲೆ 
ಎನಿತು ಕಷ್ಟ ವಿರಹ 
ಆದರೂ 
ಬೀಳ್ಕೊಡುತಿರುವೆ
ತಿಲಕವನಿಟ್ಟು 
ಧೈರ್ಯದಿ ಕಾಯುವೆ 
ಮತ್ತೆ ನೀ ಬರುವರೆಗೆ 








Saturday, 1 September 2012

ಬರ್ತಿದ್ದಾನೆ ಗಣಪ್ಪ



ಪ್ರತಿವರ್ಷದಂತೆ ಬರುವ ಗಣಪ್ಪ 
ಮನ್ನಿಸಿ ತಿದ್ದಲು ನಮ್ಮಯ ತಪ್ಪ 
ಮನೆಯಲಿ ಚಕ್ಕುಲಿ ಮೋದಕ ಲಡ್ಡು 
ಖರ್ಚಿಗೆ ಅಜ್ಜ ಕೊಡುವರು ದುಡ್ಡು

ಒಂದೊಂದು ಕೇರಿಯಲೊಂದೊಂದು ಭಂಗಿ 
ಹೊಟ್ಟೆ ಉಬ್ಸಿ ನಿಲ್ಲುತ್ತಾನೆ ಭಕ್ಷ್ಯವ ನುಂಗಿ 
ಎಲ್ಲೆಲ್ಲೂ ವಾದ್ಯ, ಗಂಟೆಯ ಘೋಷ
ನೋಡಲು ಸುಂದರ ಮಕ್ಕಳ ವೇಷ 

ಪೇಟೆಯಿಂದ ಹೂ ತರುವನು ಅಪ್ಪ 
ಅಮ್ಮ ಕೊಡುವಳು ಹೋಳಿಗೆ ತುಪ್ಪ 
ಎಲ್ಲರೂ ಸೇರಿ ಆಡ್ವೆವು ಗೋಲಿ 
ಆಮೇಲೆ ಹಾಕ್ಬೇಕು ಚೆಂದ ರಂಗೋಲಿ 

ಎಲ್ಲರೂ ಸೇರಿ ಗಣಪನ ಕರೆವ 
ಕೇಳುತ ವಿದ್ಯಾ ಬುದ್ಧಿಯ ವರವ 
ಪ್ರತಿ ಮನೆಯಲ್ಲೂ ನೆಲೆಸಲಿ ಗಣಪ 
ಕಳೆಯಲಿ ಸರ್ವರೂ ಮಾಡಿದ ಪಾಪ 

Friday, 31 August 2012

ಲೀನ



ನಲ್ಲೆ ನಿನ್ನ ಕಂಗಳಲ್ಲಿ ಇಹುದು ಎನ್ನ ಕನಸು 
ಅದಕೇ ನಿನ್ನ ನೋಡಲೆಂದು ಹಾತೊರೆವುದು ಮನಸು 
ದೇಹ ನನದು, ಭಾವ ನಿನದು ನನ್ನಾಸರೆ ನೀನು 
ಎದೆಯ ಬರಿದು ಗೂಡಿನಲ್ಲಿ ಇಟ್ಟೆ ಪ್ರೀತಿ ಜೇನು 

ತಪ್ಪ ಮರೆತು, ಒಪ್ಪಿ, ಅರಿತು ಮುಂದೆ ನೀನು ನಡೆವೆ 
ಅನುಕ್ಷಣವೂ  ನನ್ನ ಸನಿಹವಿರಲು ಆಸೆ ಪಡುವೆ 
ನನ್ನ ಕವಿತೆ ಪದಗಳಲ್ಲಿ ನೀ ತುಂಬಿದೆ ಜೀವ 
ನಗುವನ್ನೇ ಕೊಡುವೆಯಲ್ಲ ತಿಂದು ಕೂಡ ನೋವ 

ಬದುಕ ವಿಧಿಯ ಆಟದಲ್ಲಿ ನಿಂತು ಹೋಗೆ ಉಸಿರು
ಮತ್ತೆ ಜೀವ ಕೊಟ್ಟೆ ಸಖಿಯೆ  ಮಾಡಿ ಬಾಳ ಹಸಿರು 
ನನ್ನ  ರಾಗ ನಿನ್ನ  ಶೃತಿಯು ಬಾಳು ಒಂದು ಗಾನ 
ನಿನ್ನ  ಒಲವ  ಧಾರೆಯಲ್ಲಿ  ಆದೆ ನಾನು ಲೀನ 

Monday, 6 August 2012

ಜ್ಯೋತಿರ್ಮಯಿ



ಕೊರೆವ ಚಳಿ ಓತಪ್ರೋತ ಮಳೆ,ನಡುಕವೆಲ್ಲೆಲ್ಲೂ 
ಹುಚ್ಚು ನೆರೆಯಲಿ ಕೊಚ್ಚಿ ಹೋದವರೆಷ್ಟೋ 
ನರಳುತಿರೆ ತುತ್ತನ್ನವಿಲ್ಲದೆ ಜನ, ಹಳ್ಳಿ ಮೂಲೆಯ 
ಗುಡಿಸಲಿಂದ ಕೇಳುತಿದೆ ನಿಲ್ಲದ ಚೀರಾಟ 

ದೀಪಗಳಾರಿರೆ  ಹತ್ತಾರು ಮನೆಯಲಿ 
ಬೆಳಕ ನೀಡಿರುವ ದೇವ ಆ ಗುಡಿಸಲಲಿ 
ದೂರದಿ ಬೀಡಿ ಸೇದುತ್ತಿದ್ದಪ್ಪನ ಕಿವಿ ನೆಟ್ಟಗಾಯ್ತು
ಮನೆ ಬೆಳಗುವ ಲಕ್ಷ್ಮಿ ಬಂದಳೆಂದು ಕೇಳಿದೊಡೆ 
ಸಿಡಿಲಿನಬ್ಬರದಲೂ ಕ್ಷಣದಿ ಮೌನ 

ಹೊಸಕಿದನವ  ಕಾಲಿಂದ  ಬೀಡಿಯ 
ಕತ್ತು ಹಿಸುಕಿದಂತಾಗಿ  ಚೀರಿತ್ತು  ಹಸುಳೆ 
ಆ ಜ್ಯೋತಿಯಲವಗೆ  ಮನೆ ಸುಡುವ ಜ್ವಾಲೆ ಗೋಚರ 
ಹಸುಳೆಯ ರೋದನವಾಯ್ತು ಕರ್ಕಶ ಅಪಸ್ವರ 

ಎಸೆದ ಕೂಸನು ಕಸವೆಂದು ತೊಟ್ಟಿಯಲಿ 
ಬೇಕಂತೆ ತನುಜ ಸತ್ತರೆ ಕೊಳ್ಳಿ ಇಡಲು 
ಬಂದ ಸುಪುತ್ರ  ಕೊನೆಗೂ, ರಾಜೋಪಚಾರವವಗೆ 
ವಂಶ ಬೆಳೆಸುವ ಕುಲೋದ್ಧಾರಕನೆಂದು 

ವರುಷಗಳುರುಳಿ, ಅಪ್ಪ ಎಣಿಸಿದಂತೆ ಇಟ್ಟಿದ್ದ ಮಗ ಕೊಳ್ಳಿ 
ಸತ್ತ ಮೇಲಲ್ಲ , ಬದುಕಿರುವಾಗಲೇ ಸಾಯಲೆಂದು 
ಝಲ್ಲೆಂದಿತ್ತು  ತುಂಬು ಮನೆಯ ಸೊಸೆಯಾಗಿ 
ಸಂಸಾರದಕ್ಷಿಯಾಗಿ ಜ್ಯೋತಿ ಬೆಳಗುತ್ತಿದ್ದ ಮಗಳೆದೆ 
ಅಂದು ತನ್ನ ಕೂಗು ಕೇಳದ ಅಪ್ಪನ ಕೂಗು ಕೇಳಿತೇನೋ!!??

Tuesday, 31 July 2012

ಬೊಜ್ಜ



ಮಾರುಗಟ್ಟಲೆ ಹೂ ಹಾರ ಹಾಕಿ 
ಬಾಯಲ್ಲಿ ತುಳಸಿ ನೀರ ಬಿಟ್ಟು 
ಚಟ್ಟದ ಮೇಲೆ ಮಲಗಿಸಿ 
ಕಳಿಸಿದರವನ, 
ಮಕ್ಕಳ, ಸೊಸೆಯರ 
ಕಣ್ಣಲ್ಲೆರಡು ಮೊಸಳೆ ಕಣ್ಣೀರು.
ಮಡದಿಯ ಗೋಗರೆತ 
ಗಂಡನಿಲ್ಲದ ಮನೆಯಲಿ ತಾನಿದ್ದೂ 
ಇಲ್ಲದಂತೆಂಬ ಕರಾಳ ಭಾವ 

ಸಂವತ್ಸರ ಕಳೆದು ಬಂದಿದೆ ಬೊಜ್ಜ
ಅಪ್ಪನ ದೊಡ್ಡ ಫೋಟೋ 
ಅದರ ಮೇಲಿಷ್ಟು ಹೂ 
ಎದುರು ಧೂಪ,ದೀಪ 
ವಡೆ ಪಾಯಸದ ಘಮ ಘಮ 
ಬ್ರಾಹ್ಮಣರಿಗೆ ದಾನ ಧರ್ಮ
ಕೈ ಮುಗಿದರು ಭಕ್ತಿಯಿಂದ 

ಮೂಲೆಯಲಿ ಅಮ್ಮ ಗೊಣಗುತ್ತಿದ್ದಾಳೆ 
"ಇದ್ದಾಗ ಒದ್ದಿರಿ, ಈಗೇನು
ಬಂದು ತಿನ್ನುವನೇ ಅಪ್ಪ?
ಅವನ ಮನೆ ಮೂಲೆಯ ಕಸ ಮಾಡಿ
ಈಗ ಮಾಡಲು ದಾನ,
ತೊಳೆದು ಹೋಗ್ವುದೇ ಪಾಪ ?

ಇದ್ದಾಗ ಅಂದಿರಿ ಕೆಲಸಕೆ ಬಾರದ ಮುದಿ ಅಜ್ಜ 
ಈಗ್ಯಾರ ಖುಷಿಗೀ ಅದ್ದೂರಿ ಬೊಜ್ಜ ?"

Wednesday, 25 July 2012

ವಿಶ್ವರೂಪಿ




ದೇವಮ್ಮಗೆ ಹೊನ್ನಿನಾ ಕಿರೀಟ ತೊಡಿಸಿಹ
ಶ್ರೀಮಂತಿಕೆ ಅಬ್ಬರವನು ಅಲ್ಲಿ ಮೆರೆದಿಹ
ಊರ ಗಣ್ಯರೆಲ್ಲ  ಸೇರಿ ಹಾರ ಹಾಕಲು 
ತಾನೇ ದೊಡ್ಡ ಮನುಜನೆಂದು ಉಬ್ಬಿ ಹಾರಿಹ  

ಅಮ್ಮಳೇನು ಮುತ್ತು ರತ್ನ ಚಿನ್ನ ಕೇಳ್ವಳೇ?
ಜಗವೆಲ್ಲಾ ಅವಳದಿರಲು ಆಸೆ ಪಡುವಳೇ?
ಕೆರೆಯ ನೀರನದುವೆ ಮತ್ತೆ ಕೆರೆಗೆ ಚೆಲ್ಲಿರೆ 
ಆತನೇನು ಮಹಾನ್ ದಾನಶೂರನಾಗ್ವನೇ?

ತಬ್ಬಲಿಗಳು, ಅನ್ನವಿರದೆ ಕೊರಗುತಿರುವರು 
ಹೆಬ್ಬುಲಿಗಳು ಹಣದ ಮದದಿ ಮೆರೆಯುತಿರುವರು
ಅನ್ನವಿತ್ತ ದೇವನಿಗೆ ನೈವೇದ್ಯವಿಕ್ಕುತ
ಅನ್ನವಿರದ ಬಡವರನ್ನು ಸಾಯಗೊಡುವೆವು

ದೇವನವನು ವಿಶ್ವರೂಪಿ ಗುಡಿಯ ಮೀರಿಹ 
ಸಹೃದಯದ ಸೇವೆಯಲ್ಲಿ ಅವನು ಕಾಣುವ 
ಅಹಂ ಎಂಬ ರಾಕ್ಷಸನನು ದಮನ ಮಾಡುತ 
ಧರ್ಮವನ್ನು ಎಂದೆಂದೂ ಎತ್ತಿ ನಡೆಸುವ 





Saturday, 14 July 2012

ಮತ್ತೆ ಬರಲಿ ಮುಂಗಾರು



ಮತ್ತೆ ಬರಲಿ ಮುಂಗಾರು 
ಹೊತ್ತು ನೂರು ಕನಸು 
ಬಿಸಿಲ ಬೇಗೆಯೆಲ್ಲ ತಣಿದು 
ಹಸನಾಗಲಿ ಮನಸು 

ಅನ್ನದಾತ ಖಿನ್ನನಾಗಿ 
ಬೇಡುತಿಹನು, ಉಳಿಸು 
ಸ್ಥಬ್ಧಳಾಗಿ ಕುಳಿತೆಯಲ್ಲ
ಇನ್ನು ಏಕೆ ಮುನಿಸು?

ಜೀವ ರಾಶಿ ಭಾವರಹಿತ 
ಹೊಸ ಚಿಲುಮೆಯ ಹರಿಸು 
ಕೋಪದಲ್ಲಿ ಸುಡುವ ಭುವಿಯ 
ನಲ್ಮೆಯಿಂದ ತಣಿಸು 

Friday, 6 July 2012

ಬಾಳ ಬಂಡಿ







ಜನುಮ ತಳೆದಾಗ ನಾ ವಿಶ್ವಮಾನವನಿದ್ದೆ 
ಬೆಳೆಯುತ್ತ ಹಾಕಿದೆನು ಸುತ್ತ ಗಡಿಯ 
ಬಿಸಿರಕ್ತದಮಲಿನಲಿ, ನಾನೆಂಬ ಅಹಮಿನಲಿ 
ಎಂದುಕೊಂಡೆನು ಜಗಕೆ ನಾನೇ ಒಡೆಯ

ತುಕ್ಕು ಹಿಡಿದಿದೆ ಮನವು, ಒಣ ಜಂಭ ಸೊಕ್ಕಿನಲಿ
ಸುಕ್ಕುಗಟ್ಟಿದೆ ತನುವು ಕಾಲದೊಡನೆ
ಬಿಕ್ಕುತಿಹೆ ಬದುಕಿನಾ ಬವಣೆ ಮಧ್ಯದಲಿಂದು
ಪುಣ್ಯ ಠೇವಣಿ ಮಾಡ ಮರೆತೆ ಅಂದು

ಕಾಲದಾ ಹಾದಿಯಲಿ, ಬದುಕ ಬಂಡಿಯ ಮೇಲೆ
ನಮ್ಮಯಾ ಪಯಣವದು ಸಾಗುತಿಹುದು
ಬಂಡಿ ಚಾಲಕನವನೆಣಿಸಿದಂತೆಮ್ಮ ಕರೆಯೊಯ್ವ
ಪುಣ್ಯದೆರೆಯಿಂ ಪಯಣ ಹಸನಾಗ್ವುದು

Friday, 29 June 2012

ಭಾವ ಸ್ರಾವ



ಭಯಾನಕ ದೃಶ್ಯವ
ನೋಡಿದ 
ಪ್ರಚೋದನೆ 
ಥಟ್ಟನೆ ತಟ್ಟಿತ್ತು 
ಅಮೈಗ್ದಲವೆಂಬ
ಮೆದುಳಿನ ಚಿಕ್ಕ ಗೂಡನು 
ಛಕ್ಕನೆ ಹಾರಿದಂತಾಯ್ತು
ಜೀವ 
---

ಅನಾಥ ಕಂದನ 
ತಲೆಯ ಮೆತ್ತಗೆ 
ಸವರಿ, ಮುತ್ತಿಕ್ಕಿದಾಗ 
ಒಕ್ಸಿಟೋಸಿನ್ ಸ್ರವಿಕೆಯ 
ಪರಿಣಾಮ 
ಹೊಸ ಪ್ರೀತಿಯ ಭರವಸೆ 
ಕಂದನ ಮನಸು 
ನಿರಾಳ 
---

ವರ್ಷಗಳ ಬಳಿಕ 
ನನ್ನವಳ ಮುಖ ನೋಡಿದ 
ಕ್ಷಣಕೆ 
ಎನ್ದೊರ್ಫಿನ್ 
ಸ್ರವಿಸಿ 
ರಕ್ತದ ಕಣ ಕಣದಿ
ಸಂತಸದ ಹೊನಲು 
---

ಜೀವದ ಗೆಳೆಯ 
ಜೀವವಿಲ್ಲದೆ ಬಿದ್ದ ಪರಿಯ 
ನೋಡಿ, ಒಳಗೆ 
ಪ್ರೊಲಾಕ್ಟಿನ್ ಸ್ರಾವ 
ಕಣ್ಣೀರ ಕಟ್ಟೆಯೊಡೆದು 
ಗದ್ಗದಿತ ಭಾವ 

---

ಯೌವ್ವನ
ಟೆಸ್ಟೋಸ್ಟಿರಾನ್ ಸ್ರವಿಕೆ
ಹುಚ್ಚು ಮನ 
ಹತ್ತು ಹಲವು ಪ್ರಚೋದನೆ 
ಕುತೂಹಲಗಳ 
ನಡುವೆ 
ಮನದ ಹಿಡಿತ ಮೀರಿದ ದೇಹ 
ಹುಟ್ಟಿಸಿತ್ತು 
ಇನ್ನೊಂದು ಜೀವ 

Monday, 25 June 2012

ಮುಂಜಾವು



ಮುಂಜಾವಿನ ಮಂಜಿನ ಹನಿ ಭುವಿಯ ಸ್ಪರ್ಷಿಸೆ
ಮಣ್ಣ ಕಂಪು ಘಮ್ಮೆನ್ನುತ ಮೂಗ ಸೋಕಿದೆ 
ಮುದುಡಿದ್ದಾ ತಾವರೆಯದು ಮೈಯ್ಯ ಚಾಚುತಾ 
ವೈಯ್ಯಾರದಿ ಗಾಳಿಯ ಜೊತೆ ನೃತ್ಯವಾಡಿದೆ

ದುಂಬಿ ಗಣವು ಮಧು ಹೀರುತ ಹಮ್ಮು ಬಿಮ್ಮಲಿ 
ಅತ್ತ ಇತ್ತ ಉತ್ಸಾಹದ ಚಿಲುಮೆ ಚೆಲ್ಲಿದೆ
ಮರದ ಮೇಲೆ  ಪುಟ್ಟ ಪಕ್ಷಿ   ಕಣ್ಣು ಪಿಳುಕಿಸಿ 
ಸಂಗಾತಿಯ ನೋಡುತ್ತಾ ಮೈಯ್ಯ ಮರೆತಿದೆ 

ಬಾನ ಮೂಲೆಯಿಂದ ರವಿಯ ಹೊನ್ನ ಕಿರಣಕೆ
ಗುಡಿಯ ಶಿಖರ ಕಳಶ ಶುಭ್ರ ಕಾಂತಿ ಚಿಮ್ಮಿದೆ 
ಸುಪ್ರಭಾತ ಗಾನದೊಡನೆ ಧೂಪದಾರತಿ 
ಶಂಖ ವಾದ್ಯ, ಗಂಟೆಯಾ ನಿನಾದ ಮೊಳಗಿದೆ 

ಭಾನುತೇಜ ವೀರನಾ ಶೌರ್ಯ ದೃಷ್ಟಿಗೆ 
ದುಷ್ಟ ಶಕ್ತಿ ಅಂಜಿಕೆಯಲಿ ಅಡಗಿ ಕೂತಿದೆ 
ಎಲ್ಲೆಡೆಯೂ ಸ್ವಚ್ಛ ಶುಭ್ರ ಬೆಳಕಿನೋಕುಳಿ 
ಜನ ಗಣವದು ಹೊಸ ಪಯಣಕೆ ಹೆಜ್ಜೆ ಹಾಕಿದೆ