Monday 3 September 2012

ಮತ್ತೆ ನೀ ಬರುವರೆಗೆ



ತಬ್ಬಿಕೋ ಒಮ್ಮೆ
ಹೋಗುವ ಮುನ್ನ 
ಮಲಗಬೇಕು ಹಾಯಾಗಿ 
ಬಾಹುಬಂಧನದಿ
ನೆನೆಸಿಕೊಳುವೆನದನು 
ಬೇಕೆನಿಸಿದಾಗೆಲ್ಲ ಸಾಮೀಪ್ಯ
ಮತ್ತೆ ನೀ ಬರುವರೆಗೆ 

ಕಟ್ಟಿ ಕೊಡುವೆ ಡಬ್ಬಿಯಲಿ 
ಕೈಯ್ಯಾರೆ ಮಾಡಿದು-
ಪ್ಪಿನಕಾಯಿ 
ನೀ ತಿಂದು 
ಬಾಯ್ಚಪ್ಪರಿಸಿದ 
ಶಬ್ದ ಕೇಳಿದೊಡೆ 
ನನದಿಲ್ಲಿ ಊಟ ಗೆಳೆಯ 
ಮತ್ತೆ ನೀ ಬರುವರೆಗೆ 

ಒಮ್ಮೆ ಕರೆ 
ಜೋರಾಗೆನ್ನ ಹೆಸರ,
ಪ್ರತಿಧ್ವನಿಸೆ  ಧ್ವನಿಯು 
ಮನದಿ
ಜೊತೆ ಇರುವ 
ಭಾವ ಸೃಷ್ಟಿಪುದು 
ಮತ್ತೆ ನೀ ಬರುವರೆಗೆ 

ಒಮ್ಮೆ 
ಬೈದುಬಿಡೆನ್ನ
ನಲ್ಲೆಯೆಂಬ ಹಕ್ಕಲಿ 
ತಡೆವುದದೆನ್ನ 
ಮಾಡದಂತೆ ತಪ್ಪು 
ಮತ್ತೆ ನೀ ಬರುವರೆಗೆ 

ಹಚ್ಚೊಮ್ಮೆ 
ಸಿಂಧೂರ ಹಣೆಗೆ,
ಪ್ರೇಮದಿ ನೀ 
ದೇಶ ಕಾಪಾಡುವ ತೆರದಿ,
ನೋಡಿಕೊಳುವೆ
ಅಳಿಸಿ ಹೋಗದಂತೆ 
ಮತ್ತೆ ನೀ ಬರುವರೆಗೆ 

ನೀ ಬಲ್ಲೆ 
ಎನಿತು ಕಷ್ಟ ವಿರಹ 
ಆದರೂ 
ಬೀಳ್ಕೊಡುತಿರುವೆ
ತಿಲಕವನಿಟ್ಟು 
ಧೈರ್ಯದಿ ಕಾಯುವೆ 
ಮತ್ತೆ ನೀ ಬರುವರೆಗೆ 








2 comments:

  1. ಇಂತ ಅಗಲಿಕೆ ಇದೆಯಲ್ಲ ಅದು ಮಿಡಿತದ ಕ್ಷಣ. ಒಲುಮೆಯ ಪತಿ ಕಾರ್ಯ ನಿಮಿತ್ತ ಹೊರಟಾಗ ಅವನ ಪತ್ನಿಯು ಬಾಗಿಲಲಿ ನಿಂತು ಕಳಿಸಿಕೊಡುವ ಒಲುಮೆಯ ಸಾಕ್ಷಾತ್ಕಾರದ ನಿಮಿಷ.

    ದೇವರು ಆದಷ್ಟು ಬೇಗ, ನಿಮ್ಮ ಬಾಳಲ್ಲೂ ಬೆಳಕು ಕೊಡುವ ಬಂಗಾರದಂತ ದೇವತೆಯನ್ನು ತರಲಿ. ನಮಗೂ ಹೋಳಿಗೆ ಊಟ ಬೀಳಲಿ.

    ಉತ್ತಮ ನವೋದಯ ಶೈಲಿಯ ಕಾವ್ಯ.

    ReplyDelete
  2. ಎಂತಹ ವಿರಹದ ಕ್ಷಣ....
    ಅದ್ಭುತವಾಗಿ, ಸಹಜವಾಗಿ, ಮನ ತಾಕುವಂತೆ ಕವಿತೆ ರಚಿಸಿದ್ದಿರಿ...
    ಇಷ್ಟವಾಯಿತು...ಬಹಳ ಇಷ್ಟವಾಯಿತು....

    ReplyDelete