Saturday, 8 September 2012

ನಮ್ಮೊಳಗಿರುವ ಇಂಜಿನಿಯರ್


ಪ್ರತಿ ಸಲ ತಂಗಿಯ ಮನೆಗೆ ಹೋದಾಗಲೂ ಏನಾದರೊಂದು ಹೊಸದನ್ನು ಕಲಿತು ರೀ ಚಾರ್ಜ್ ಆಗಿ ಬರುತ್ತೇನೆ. ತಂಗಿಯ ಮಾವ ಬೆಂಗಳೂರಿನ ಬಿ.ಇ.ಎಂ.ಎಲ್. ಬಡಾವಣೆಯ ನಿವಾಸಿ ಶ್ರೀ ವಸಂತ ಶಾನಭಾಗರು  ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದವರು. ಶಿಸ್ತಿನ ಸಿಪಾಯಿ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿರತರಾಗಿರುವವರು. ಅವರ  ದೃಷ್ಟಿಯಲ್ಲಿ ಯಾವುದೇ ವಸ್ತು ನಿರುಪಯುಕ್ತವಲ್ಲ.ಕಸದಿಂದ ರಸ ಮಾಡುವ ಜಾಯಮಾನ ಅವರದು. ಯಾವುದೇ ಕೆಲಸ ಅಸಾಧ್ಯ ಎಂದು ಹೇಳುವವರಲ್ಲ. ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನೇ ಉಪಯೋಗಿಸಿಕೊಂಡು ಎಂತಹ ಕ್ಲಿಷ್ಟ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ತಾಕತ್ತು ಅವರಲ್ಲಿದೆ. ಅವರ ಯೋಚನಾ ಶೈಲಿ, ಜೀವನವನ್ನು ಸುಲಭೀಕರಿಸುವ ರೀತಿ ನನ್ನ ಕಣ್ಣಿಗೆ ವಿಸ್ಮಯ.

ಹಿಂದಿನ ವಾರ ಹೋದಾಗ,  ಮಳೆ ನೀರನ್ನು  ಸಂಗ್ರಹಿಸಿ ಉಪಯೋಗಿಸಿಕೊಳ್ಳುವ ವ್ಯವಸ್ಥೆ ಮಾಡಿದ್ದರು. ಅದನ್ನು ನೋಡಿ ಬಹಳ ಖುಷಿಯಾಯಿತು.ಹಾಗೆ ಮಾತನಾಡುತ್ತ ಊಟ ಮುಗಿಯಿತು. ಕೈ ತೊಳೆಯಲು ನೀರಿರಲಿಲ್ಲ. ಟ್ಯಾಂಕಿನಲ್ಲಿ ನೀರು ಖಾಲಿ. ತಂಗಿ ಹೋಗಿ ಪಂಪ್ ಚಾಲು ಮಾಡಿದಳು. ನೀರು ಬಂತು. ಸ್ವಲ್ಪ ಸಮಯದಲ್ಲಿ. ಹಾಗೇ ಮಾತಿಗೆ ಹೇಳಿದೆ. ಇದಕ್ಕೆ ಒಂದು ಸ್ವಯಂಚಾಲಿತ ಉಪಕರಣ ಬರುತ್ತದೆ. ಟ್ಯಾಂಕಿನಲ್ಲಿ ನೀರಿನ ಮಟ್ಟವನ್ನು ಗಮನಿಸಿ ಸೂಚನೆ ನೀಡುತ್ತದೆ. ಅದನ್ನು ಅಳವಡಿಸಬಹುದು ಎಂದೆ. ಆಗ ತಂಗಿಯ ಮಾವ ಥಟ್ಟನೆ- "ಅದ್ಯಾಕೆ. ನಾವೇ ಮಾಡಬಹುದು ಸುಲಭವಾಗಿ" ಎಂದು ಒಂದು ಪರಿಹಾರ ನೀಡಿದರು. ನನಗೆ ಸರಿಯಾಗಿ ಅರ್ಥ ಆಗದಿದ್ದರೂ ಅರ್ಥವಾದಂತೆ ತಲೆ ಅಲ್ಲಾಡಿಸಿದೆ. ಮತ್ತು ಆ ಚರ್ಚೆ ಅಲ್ಲಿಯೇ ನಿಂತಿತು.

ಈ ವಾರ ತಂಗಿ ಮನೆಗೆ ಹೋದಾಗ ನನಗೋಸ್ಕರ ಒಂದು ವಿಸ್ಮಯ ಕಾದಿತ್ತು. ಅವರು ತಾರಸಿಯ ಮೇಲಿರುವ ಟ್ಯಾಂಕಿನ ನೀರಿನ ಮಟ್ಟವನ್ನು ಮನೆಯಲ್ಲೇ ಕುಳಿತು ನೋಡುವ ವ್ಯವಸ್ಥೆಯನ್ನು ಅಳವಡಿಸಿದ್ದರು. ಮನೆಯಲ್ಲೇ ಲಭ್ಯವಿರುವ ಕೆಲವು ನಿರುಪಯುಕ್ತ ವಸ್ತುಗಳನ್ನೂ ಸಹ ಉಪಯೋಗಿಸಿ ಒಂದು ಸಮರ್ಥ ವ್ಯವಸ್ಥೆಯನ್ನು ರೂಪಿಸಿದ್ದರು. ಅದನ್ನು ಹೇಗೆ ತಯಾರಿಸಿದ್ದರು ಎಂದು ಈ ಚಿತ್ರಗಳಲ್ಲಿ ಕಾಣಬಹುದು.  • ಒಂದು ಉದ್ದದ ದಾರದ ಒಂದು ತುದಿಗೆ ಮರದ ತುಂಡು ಕಟ್ಟಿದ್ದರು.( ನೀರಲ್ಲಿ ತೇಲುವ ಯಾವುದೇ ಭಾರದ ವಸ್ತು )
 • ಮತ್ತೊಂದು ತುದಿಗೆ ವಿದ್ಯುತ್ ಬಲ್ಬಿನ ಕೆಟ್ಟು ಹೋದ ಹಿಡಿಕೆಯನ್ನು ಕಟ್ಟಿದ್ದರು (ನಿರ್ದೇಶಕದ ರೀತಿ ಕೆಲಸ ಮಾಡಲು)
 • ಮರದ ತುಂಡು ಕಟ್ಟಿದ ತುದಿಯನ್ನು ಟ್ಯಾಂಕಿನೊಳಗೆ ಬಿಟ್ಟಿದ್ದರು.
 • ಮತ್ತೊಂದು ತುದಿಯನ್ನು, ಮನೆಯ ಬಾಲ್ಕನಿಯ ಗೋಡೆ ಮೇಲೆ ಬಿಟ್ಟಿದ್ದರು.
 • ಕಸವೆಂದು ಬಿಸಾಕಿದ ಕಿಟಕಿ ಪರದೆಯ ಚಿಕ್ಕ ಚಿಕ್ಕ ರಾಟೆಗಳನ್ನು ಅಲ್ಲಲ್ಲಿ ಆಸರೆಗೆ ಹಾಗೂ ದಾರದ ಸ್ವತಂತ್ರ ಚಲನಕ್ಕೆಂದು ಉಪಯೋಗಿಸಿದ್ದರು. 
 • ಒಮ್ಮೆ ಟ್ಯಾಂಕನ್ನು ಖಾಲಿ ಮಾಡಿ ದಾರದ ಮತ್ತೊಂದು ತುದಿ ಎಲ್ಲಿಗೆ ಬರುತ್ತದೆ ಎಂದು ತಿಳಿದು ಆಮೇಲೆ ಟ್ಯಾಂಕ್ ತುಂಬಿದ ಮೇಲೆ ಎಲ್ಲಿ ಬರುತ್ತದೆ ಎಂದು ನಿರ್ಧರಿಸಿ ಗೋಡೆಯ ಮೇಲೆ ಒಂದು ಮಾಪಕವನ್ನು ತಯಾರಿಸಿದ್ದರು.
ಈ ರೀತಿ ಅದು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿತ್ತು. ತಾನು ಮಾಡಿದ್ದು ಎಂಬ ತೃಪ್ತಿ ಇತ್ತು ಅವರ ಮನದಲ್ಲಿ. ಇಂತಹ ಎಷ್ಟೋ ಚಿಕ್ಕ ಚಿಕ್ಕ ಆವಿಷ್ಕಾರಗಳನ್ನು ಇವರ ಮನೆಯಲ್ಲಿ ಕಾಣಬಹುದು. ಸಮಯ ಮತ್ತು ಸಂಪನ್ಮೂಲಗಳನ್ನು ಪೋಲು ಮಾಡಿದವರೇ ಅಲ್ಲ ಇವರು. ವಿದ್ಯೆ ಪುಸ್ತಕದ ಬದನೆಕಾಯಿಯಾಗಿರುವ ಈ ಕಾಲದಲ್ಲಿ ಇಂತಹ ವ್ಯಕ್ತಿತ್ವಗಳು ನಿಜವಾದ ಮಾದರಿ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿಲ್ಲದಿದ್ದರೂ ಯಾವ ಇಂಜಿನಿಯರ್ ಗೂ ಕಡಿಮೆ ಇಲ್ಲದ ಆಲೋಚನಾ ಮಟ್ಟ ಹೊಂದಿದವರು. ರಾಂಕ್ ಗಳಿಸಲು ಕೋಣೆಯೊಳಗೆ ಕೂತು ಓದುವ ಈಗಿನ ಶಿಕ್ಷಣ ಪದ್ಧತಿಯಲ್ಲಿ ಇಂತಹ ಸೃಜನಶೀಲತೆಯನ್ನು ಬೆಳೆಸುವ ಪ್ರಯತ್ನವಾಗಬೇಕಾಗಿದೆ. ಇವರ ಶೃದ್ಧೆ ಮತ್ತು ಸೃಜನಶೀಲತೆ ನಮಗೆಲ್ಲ ಮಾದರಿಯಾಗಲೆಂಬ ಆಶಯ. ನೀರು ಖಾಲಿಯಾದರೆ ಎಚ್ಚರಿಕೆ ಗಂಟೆ ಕೂಡ ಬರುವಂತಾದರೆ ಮತ್ತೂ ಉತ್ತಮ ಎಂದು ಈ ಸಲ ಅವರಿಗೆ ಹೇಳಿದ್ದೇನೆ. ಮುಂದಿನ ವಾರಾಂತ್ಯ ಯಾವಾಗ ಬರುವುದು ಎಂದು ಕಾಯುತ್ತಿದ್ದೇನೆ...

5 comments:

 1. great!! ಇದನ್ನು ನೋಡಿ ನನ್ನ ಅಪ್ಪನ ನೆನಪಾಯಿತು. ಅವರೂ ಹೀಗೆ ಕಸದಿಂದ ರಸ ತೆಗೆವ ಕೆಲಸ ಮಾಡುತ್ತಿರುತ್ತಾರೆ.

  ReplyDelete
 2. ತುಂಬಾ ಚೆನ್ನಾಗಿದೆ :-)
  ಅಳತೆಗೋಲಿನಲ್ಲಿ ಕನ್ನಡ ಪದಗಳನ್ನೂ ಬರೆದರೆ ಬೇಗ ತಿಳಿಯಬಹುದು (Empty = ಬರಿದು, Low = ಕಡಿಮೆ, Full = ತುಂಬಿದೆ)
  ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  ReplyDelete
 3. ಹವ್ಯಾಸಗಳು ಮನುಜನನ್ನು ಜೀವಂತವಾಗಿ ಇರಿಸುತ್ತವೆ. ಹವ್ಯಾಸಗಳಿಲ್ಲದೇ ಬರಿಯ ದಿನಚರಿಯಲ್ಲಿಯೇ ಬದುಕುವಂತಾದರೆ, ಬಾಳು ಅರ್ಥಹೀನವೆನಿಸುತ್ತದೆ.

  ReplyDelete
 4. ಯಾವ ಇಂಜಿನಿಯರ್’ಗೂ ಕಡಿಮೆಯಿಲ್ಲದವರು ತಂಗಿಯ ಮಾವ ಪರೇಶಣ್ಣ.. ನಾನು ಆ ಟೆಕ್ನಿಕ್ ಅನ್ನು ಅರ್ಥ ಮಾಡಿಕೊಳ್ಳಲು ಎರಡು ಸಲ ನಿಮ್ಮ ಫೋಟೋಗಳನ್ನು ನೋಡಬೇಕಾಯ್ತು.. ತಮಾಷೆಗಾಗಿ ಒಂದು ಸತ್ಯ ಹೇಳಲೇ? ನಿಮಗೆ ಸ್ವಯಂ ಆಗಿ ನೀರಿನ ಮಟ್ಟವನ್ನು ಹೇಗೆ ತಿಳಿದುಕೊಳ್ಳಬಹುದೆಂದು ಅವರು ವಿವರಿಸಿದ್ದಾಗ ನಿಮ್ಮ ಮುಖ ಭಾವದಿಂದಲೇ ನಿಮಗೆ ತಿಳಿಯಲಿಲ್ಲ ಎಂದು ತಿಳಿದಿರುತ್ತದೆ ಅದಕ್ಕೆ ಅವರು ಈ ಸಲ ಹೋದಾಗ ಡೆಮಾನ್’ಶ್ಟ್ರೇಷನ್ ಕೊಟ್ಟಿರುವುದು.. ನಿಜಕ್ಕೂ ಅವರೊಬ್ಬ ಇಂಜಿನಿಯರ್ರೇ ಹೌದು..:)))

  ReplyDelete
 5. ತುಂಬಾ ಕ್ರಿಯಾಶೀಲ ಮನಸ್ಸು ಅವರದು. ಮನೆಯ ನಿರುಪಯುಕ್ತ ಸಾಮಗ್ರಿಗಳಿಂದ ಒಳ್ಳೆಯ ವೈಜ್ಞಾನಿಕ ಉಪಕರಣಗಳನ್ನು ತಯಾರಿಸಬಲ್ಲ ಅವರ ಮೇಧಸ್ಸಿಗೆ ನನ್ನ ಶರಣು.

  ಇಂತಹವರಿಂದ ನಾವು ಕ್ರಿಯಾಶೀಲರಾಗಬೇಕು.

  ReplyDelete