Thursday 6 October 2011

ಹರೆಯದ ತಳಮಳ


"ಪಕ್ಕದ ಮನೆಯ ಹುಡುಗಿ ಅದ್ಯಾರದೋ ಜೊತೆ ಓಡಿ ಹೋದಳು.  ನನ್ನ ಮಗನ ಕ್ಲಾಸ್ ಮೇಟ್ ಒಬ್ಬ ಹುಡುಗಿ ಕೈ ಕೊಟ್ಟಳೆಂದು ಆತ್ಮಹತ್ಯೆ ಮಾಡಿಕೊಂಡ. ನನ್ನ ಮಗ ರಾಂಕ್ ಸ್ಟುಡೆಂಟ್ ಆಗಿದ್ದವನು ಇನ್ಜಿನಿಯರಿಂಗನಲ್ಲಿ ಫೇಲ್ ಆದ." ಇವೆಲ್ಲ ಸಾಮಾನ್ಯವಾಗಿ ನಾವು ದಿನ ನಿತ್ಯ ಕೇಳುವಂಥ ಮಾತುಗಳು. ಈ ಆಗು ಹೋಗುಗಳನ್ನು ನೋಡುವಾಗ ವರ್ತಮಾನ ಸಮಾಜದಲ್ಲಿ ಏನೋ ಒಂದು ಕುಂದು  ಕೊರತೆ ಇದೆ ಎಂದನಿಸುವುದರಲ್ಲಿ ತಪ್ಪೇನಿಲ್ಲ. ಇದಕ್ಕೆ ಸದ್ಯದಲ್ಲೇ ಬೆಂಗಳೂರಿನಲ್ಲಿ  ನಡೆದ ದುರಂತವೊಂದು ಸಮರ್ಪಕ ನಿದರ್ಶನ.

ಭಾರತದಲ್ಲಿ ಇನ್ನೂ ವಿವಾಹವೆನ್ನುವುದು ಒಂದು ಕ್ಲಿಷ್ಟವಾದ ಕ್ರಿಯೆಯಾಗಿಯೇ ಉಳಿದಿದೆ. ಇದಕ್ಕೆ ಮೊದಲನೇ ಕಾರಣ ತಲೆಮಾರಿನ ಅಂತರ. ಈಗಿನ ಆಧುನಿಕತೆ, ಶಿಕ್ಷಣದ ಗುಣಮಟ್ಟ , ಪಾಶ್ಹ್ಚಾತ್ಯೀಕರಣಗಳು  ನಮ್ಮ ಜೀವನ ಶೈಲಿಯನ್ನು ಬದಲಾಯಿಸಿವೆ. ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿ ಪ್ರಪಂಚವನ್ನು ಚಿಕ್ಕದಾಗಿಸಿದೆ. ಇಂತಹ ಸನ್ನಿವೇಶದಲ್ಲಿ ಹರೆಯದ ಹುಡುಗ ಹುಡುಗಿಯರಲ್ಲಿ  ಗೆಳೆತನ ಹುಟ್ಟುವುದು , ಅದು ಪ್ರೀತಿಯಾಗಿ ಬದಲಾಗುವುದು ಸಾಮಾನ್ಯ. ಆದರೆ ಇನ್ನು ನಮ್ಮ ಹಿಂದಿನ ತಲೆಮಾರಿನ ಜನರಲ್ಲಿ ವಿವಾಹ ಎನ್ನುವುದು ತಮ್ಮ ಜಾತಿ ಮತದೊಳಗೆ ಸೀಮಿತವಾಗಿರಬೇಕೆಂಬ ಭಾವನೆ ಇದೆ. ಅವರ ಆಲೋಚನೆಗಳು ಧ್ರಡವಾಗಿದೆ. ಆದರೆ ಆಧುನಿಕತೆಯಲ್ಲಿ ಬೆಳೆದ ಈಗಿನ ತಲೆಮಾರಿನವರ ಆಲೋಚನಾ ಶೈಲಿ  ಕಾಲಕ್ಕೆ ತಕ್ಕಂತೆ ಬದಲಾಗಿದೆ. ಜಾತಿ ಮತದಿಂದ ಜನರನ್ನು ಗುರುತಿಸುವುದು ತಾರ್ಕಿಕವಲ್ಲ ಎಂಬ ವಿಚಾರ ಅಚ್ಚೊತ್ತಿದೆ.  ಈ ಎರಡು ವಿಚಾರ ಧಾರೆಗಳು ಎರಡು ತಲೆಮಾರಿನ ಮಧ್ಯೆ ಒಂದು ಗೋಡೆಯಾಗಿ ನಿಂತು ಸಮಸ್ಯೆಯನ್ನು ಸೃಷ್ಟಿಸಿದೆ.  ಅಪ್ಪ ಅಮ್ಮ ಹಳ್ಳಿಯಲ್ಲಿದ್ದು ಮಕ್ಕಳು ಕಲಿತು ಪಟ್ಟಣದಲ್ಲಿ ವಾಸಿಸುವವರಲ್ಲಂತೂ ಬಹಳ ಸಾಮಾನ್ಯವಾಗಿ ನಡೆಯುವ ಘಟನೆಗಳು ಇವು.
ನೋಡಲು ಸರಳವಾಗಿ ಕಂಡರೂ ಇದರ ಪರಿಣಾಮ ಹತ್ತು ಹಲವಾರು.   ಇಂತಹ ಎಲ್ಲ ಘಟನೆಗಳನ್ನು ನೋಡಿದರೆ ಮಕ್ಕಳಿಗೆ ತಮ್ಮ ಅಪ್ಪ ಅಮ್ಮನಲ್ಲಿ ಈ ವಿಷಯ ಹೇಳುವಷ್ಟು ಸಲಿಗೆ, ಧೈರ್ಯ ಇಲ್ಲ. ಇದಕ್ಕೆ ಮುಖ್ಯ ಕಾರಣ ಈ ಸಮಾಜದ ಜೀವನ ಶೈಲಿ. ಅದೂ ಮುಖ್ಯವಾಗಿ ಹಳ್ಳಿಗಳಲ್ಲಿ. ಮಕ್ಕಳು ಅಪ್ಪ ಅಮ್ಮನಲ್ಲಿ ಈ ವಿಷಯವನ್ನು ವ್ಯಕ್ತಪಡಿಸಿದರೂ  ಈ ವಿಷಯದ ಬಗ್ಗೆ ಸರಿಯಾದ ಚಿಂತನೆ ನಡೆದು ಇದು ಬಗೆ ಹರಿದು ವಿವಾಹದ ತನಕ ಹೋಗುವ ಸನ್ನಿವೇಶಗಳು ಬೆರಳೆಣಿಕೆಯಷ್ಟು.  ಈ ಎಲ್ಲ ಕಾರಣಗಳಿಂದ ,"ಇದು ನಮಗೆ ಆಗುವಂಥದ್ದಲ್ಲ,ನಾವು ಈ ಪ್ರೀತಿ ಪ್ರೇಮ ಮರೆತು ಮುಂದೆ ಹೋಗುವುದೇ ಸರಿ" ಎಂದು ಹೇಳುವವರು ಕೆಲವರಾದರೆ, ಈ ಪರಿಸ್ಥಿತಿಯ ಒತ್ತಡವನ್ನು ಎದುರಿಸಲಾಗದೆ ಜೀವ ತ್ಯಾಗ ಮಾಡುವವರು ಕೆಲವರು, ಜೀವನದಲ್ಲಿ  ಆಸಕ್ತಿ ಕಳೆದುಕೊಂಡು ಜಿಗುಪ್ಸೆಯ ಜೀವನ ನಡೆಸುವವರು ಮತ್ತೆ ಕೆಲವರು. ಈ ಸನ್ನಿವೇಶಗಳಲ್ಲಿ ನಾವು ಯೋಚಿಸಬೇಕಾದ್ದು ಏನೆಂದರೆ ಇಷ್ಟವಿಲ್ಲದ ಮದುವೆಯನ್ನ ಸಂಪೂರ್ಣ ಮನಸ್ಸಿನಿಂದ ಸ್ವೀಕರಿಸಲು ಸಾಧ್ಯವೇ. ಮದುವೆಯ ಅರ್ಥವೇ ಕಾಯಾ ವಾಚಾ ಮನಸಾ ಒಬ್ಬರಿಗೊಬ್ಬರು ಸಮರ್ಪಿಸಿಕೊಳ್ಳುವುದು. ಎಂತಹ ಕಷ್ಟದ ಸನ್ನಿವೇಶದಲ್ಲೂ ಜೊತೆಗಿರುವುದು. ಆದರೆ ಮನಸ್ಸಿನಲ್ಲಿ ಒಬ್ಬನನ್ನು ಇಟ್ಟುಕೊಂಡು ಇನ್ನೊಬ್ಬನನ್ನು ವರಿಸಿ ಜೀವನ ನಡೆಸುವ ಎಷ್ಟು ಸನ್ನಿವೇಶಗಳು ಯಶಸ್ವಿಗೊಳ್ಳಬಹುದು. ಇಂತಹ ದಂಪತಿಗಳಲ್ಲಿ ಎಂತಹ ಕಷ್ಟ ಬಂದರೂ ಎದುರಿಸುವ ನಿಜವಾದ ಶಕ್ತಿ ಇರುತ್ತದೆಯೇ. ನಿಜವಾದ ಪ್ರೀತಿ ಮನಸ್ಸಿನಲ್ಲಿ ಮೊಳಕೆಯೊಡೆಯುತ್ತದೆಯೇ ಎಂಬುದು ಆಲೋಚಿಸಬೇಕಾದಂಥ  ವಿಚಾರ. ಈ ಥರದ ಸನ್ನಿವೇಶಗಳು ಹಲವು ದಾಂಪತ್ಯಗಳು ಒಡೆಯಲು ಮುಖ್ಯವಾದ ಕಾರಣವಾಗಿವೆ. ಹಲವು ಆತ್ಮ ಹತ್ಯೆಗಳಿಗೆ ಕಾರಣವಾಗಿವೆ.
ಇನ್ನೊಂದು ದೃಷ್ಟಿಕೋನದಲ್ಲಿ ಆಲೋಚಿಸಿದರೆ ಈಗಿನ ಈ ಪಾಶ್ಚ್ಯಾತ್ಯೀಕರಣದಲ್ಲಿ  ನಿಜವಾದ ಪ್ರೀತಿ ಸಿಗುವುದೇ ತುಂಬಾ ಕಡಿಮೆಯಾಗಿದೆ. ಕೇವಲ ತಮ್ಮ ಮನರಂಜನೆಗಾಗಿ ಪ್ರೀತಿಯ ಮುಖವಾಡ ತೊಡುವವರೇ ಜಾಸ್ತಿಯಾಗಿದ್ದಾರೆ.  ಪ್ರೀತಿಯೆಂದು ನಂಬಿಸಿ ಕೈ ಕೊಟ್ಟು ಹೋಗುವ ಸನ್ನಿವೇಶಗಳು ಜಾಸ್ತಿಯಾಗಿವೆ. ಇಂತಹ ಕೆಲವು ನಿದರ್ಶನಗಳು ಪಾಲಕರು ಮಕ್ಕಳ ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡಲು ಹಿಂಜರಿಯುವಂತೆ ಮಾಡಿವೆ. ಒಟ್ಟಿನಲ್ಲಿ ಹೇಳುವುದಾದರೆ ಈ ವಿಷಯದಲ್ಲಿ ದುಡುಕದೆ ಪಾಲಕರು ಮತ್ತು ಮಕ್ಕಳು ಸರಿಯಾಗಿ ವಿವೇಚನೆಯಿಂದ ಕುಳಿತು ಆಲೋಚನೆ ಮಾಡಿ ಸರಿಯಾದ ನಿರ್ಣಯಕ್ಕೆ ಬರುವುದು ಅತ್ಯವಶ್ಯ. ಯಾಕೆಂದರೆ ಇದು ಒಂದೆರಡು ದಿನಗಳ ಪ್ರಶ್ನೆಯಲ್ಲ. ಇಡೀ ಜೀವನದ ಪ್ರಶ್ನೆ. ಒಂದು ಕ್ಷಣದ ನಿರ್ಧಾರ ಇಡೀ ಬಾಳನ್ನೇ ನರಕವನ್ನಾಗಿಸಬಹುದು. ನಮ್ಮನ್ನು ನಾವೇ ಪ್ರಶ್ನಿಸಿಕೊಂಡು, ತಾರ್ಕಿಕವಾಗಿ ಆಲೋಚಿಸಿ ನಮ್ಮ ನಿರ್ಧಾರ ನಮ್ಮ ಬದುಕಿಗೆ ಅನುಗುಣವಾಗಿದೆಯೇ ಎಂದು ಯೋಚಿಸಿ ದುಡುಕದೆ, ಹಿರಿಯರ ಒಪ್ಪಿಗೆಯೊಂದಿಗೆ ಮುಂದೆ ಹೆಜ್ಜೆ ಇಟ್ಟು ಈ ಪವಿತ್ರವಾದ ವಿವಾಹ ಬಂಧನಕ್ಕೆ  ಅರ್ಥ ಕೊಡುವುದು ಎಲ್ಲರ ಜವಾಬ್ದಾರಿ.
 

2 comments:

  1. ಉತ್ತಮ ಲೇಖನ ಬರೆದಿದ್ದೀರಾ ಹಾಗು ಒಳ್ಳೆಯ ಸಂದೇಶವನ್ನೇ ಕೊಟ್ಟಿದ್ದೀರಾ.. ತುಂಬಾ ವಿವರವಾಗಿ ಮತ್ತು ಅರ್ಥಪೂರ್ಣವಾಗಿ ಆಲೋಚನೆ ಮಾಡಿ ಬರೆದ ವಿಚಾರ ಇಷ್ಟವಾಯಿತು.. :)

    ReplyDelete
  2. ಪರೇಶ್ ತುಂಬಾ ಅರ್ಥಗರ್ಭಿತವಾದ ಲೇಖನ.. ಸಮಾಜಮುಖಿಯಾಗಿ ತುಡಿಯುವ ನಿಮ್ಮ ಮನಸ್ಸು ತುಂಬಾ ಸೂಕ್ಷ್ಮ ವಿಷಯಗಳ ಸುತ್ತಾ ಹರಡಿಕೊಂಡ ಲೇಖನವನ್ನು ತೀಕ್ಷ್ಣವಾಗಿ ಓದುಗರ ಮನಕ್ಕೆ ನುಗ್ಗಿಸುವ ಪ್ರಯತ್ನವಾಗಿದೆ.. ಬೆಂಗಳೂರ್ ಮಿರರ್ ನ ಆ ಲೇಖನ ಓದಿದ ಮನಸ್ಸು ಈ ಲೇಖನ ನಿರೂಪಿಸಲು ಪ್ರೇರೇಪಿಸಿದ್ದು ಅಚ್ಚರಿಯಲ್ಲ ಮತ್ತು ಅದು ನಿಮ್ಮಲ್ಲಿನ ಸೂಕ್ಷ್ಮತೆಗೆ ಹಿಡಿದ ಕನ್ನಡಿ.. ಲೇಖನ ಮನಸ್ಸಿನಲ್ಲುಳಿದು ಪ್ರೀತಿಪ್ರೇಮಗಳು ಅಮಲುಗಳೋ, ಕಲ್ಪನೆಗಳೊ ಆಗದೆ ವಿಮರ್ಶಾತ್ಮಕ ಮತ್ತು ವಾಸ್ತವದ ನೆಲೆಗಟ್ಟಿನಲ್ಲಿ ಮಾನ್ಯತೆ ಪಡೆದಲ್ಲಿ ಅದು ಹೆಚ್ಚು ಗಟ್ಟಿಯಾಗಿ ನಿಲ್ಲುತ್ತದೆಂಬ ನಿಮ್ಮ ಭಾವಗಳನ್ನು ಓದುಗರಿಗೆ ಮುಟ್ಟಿಸುತ್ತದೆ..

    ReplyDelete