Monday 16 January 2012

ಮಾನವೀಯತೆಯ ಬೆತ್ತಲು ಮಾಡಿದವರು




ಹರಕು ಬಟ್ಟೆ, ಸುರಿವ ಮೂಗು 
ಕನಸ ಹೊತ್ತ ದುಂಡು ಕಣ್ಣು 
ಹೊತ್ತಿಗೂಟದ ಗತಿಯು ಇಲ್ಲದೆ 
ಚಿತ್ತ ಹಿಂಡುವ ಬಡತನ 

ಬಿತ್ತ ಬೀಜವು ಫಲವ ನೀಡದೆ 
ಸತ್ತ ಪೈರದು ಜೋತು ಬಿದ್ದಿದೆ 
ದೇಶದೆಲುಬಲಿ ಬಿರುಕು ಬಂದು 
ಗೂನನಾಗಿ ನಡೆದಿದೆ 

ಅತ್ತ ಸೈನಿಕ ಕೊರೆವ ಚಳಿಯಲಿ 
ನಿದ್ದೆ ಬಿಟ್ಟು ದೇಶ ಕಾಯ್ವನು
ಶತ್ರು ಪಡೆಯ ಗುಂಡು ಬಂದದು
ಅವನ ಎದೆಯನು ಸೀಳಿದೆ 

ದೇಶ ನಾಯಕ, ತಾಯ ಸೇವಕ 
ಆದನವನು ದುಷ್ಟ ಭಕ್ಷಕ 
ದೇಶ ನಡೆಸುವ ಗಾಲಿಯದುವೆ 
ತಪ್ಪು ಹಾದಿಯ ಹಿಡಿದಿದೆ 

ಕ್ಷಾತ್ರ ರಕ್ಷಕ, ಭ್ರಾತ್ರ ಭಕ್ಷಕ 
ಒಂದೇ ತಾಯಿಯ ತನುಜರು 
ಒಬ್ಬ ದೇಶಕೆ ಜೀವ ಕೊಡುತಿಹ
ಮತ್ತೊಬ್ಬ ಜೀವವ ತೆಗೆಯಲು...

5 comments:

  1. ಹೃದಯ ಹಿಂಡುವ ನಿಮ್ಮ ಕವನ ಜಯ್ ಜವಾನ್ ಜಯ್ ಕಿಸಾನ್ ಎಂಬ ಒಂದು ಘೋಷಣೆಯ ಭಾವ ಪ್ರತಿಬಿಂಬಿಸುವ ನಿಮ್ಮ ಕವನ ತುಂಬಾ ಸುಂದರವಾಗಿದೆ. ಘೋರ ಭಾವವನ್ನು
    ಸರಳ ಪದ ವಿನ್ಯಾಸದಲ್ಲಿ ಜೋಡಿಸಿದ್ದೀರಿ. ಒಂದು ಕಡೆ ಕಿತ್ತು ತಿನ್ನುವ ಬಡತನ, ಮತ್ತೊಂದು ಕಡೆ ಅವರನ್ನೇ ಶೋಷಿಸಿ ಖುಷಿಪಡುವ ದುಷ್ಟಪ್ರವ್ರುತ್ತಿಯ ದೇಶ ಪಾಲಕರು,ಒಂದುಕಡೆ ದೇಶಕ್ಕಾಗಿ ಚಳಿ -ಬಿಸಿಲು-ಮಳೆ-ಗಾಳಿಯ ಚಿಂತೆಯನ್ನು ಬಿಟ್ಟು ಗಡಿ ಕಾಯುವ ಸೈನಿಕ ಮತ್ತೊಂದು ಕಡೆ ದೇಶವನ್ನೇ ಒತ್ತೆ ಇಡಲು ಸದಾ ಸಿದ್ದ ಹೊಲಸು ರಾಜಕೀಯ ನಾಯಕರು, ಇವರ ಚಿತ್ರಗಳನ್ನು ಹತ್ತಾರು ಸಾಲುಗಳಲ್ಲಿ ಅತೀ ಸುಂದರವಾಗಿ ಚಿತ್ರಿಸಿರುವ ನಿಮ್ಮ ಸಂವೇದಾನಾತ್ಮಕ, ಮನ ಅದನ್ನು ವ್ಯಕ್ತಪಡಿಸುವ ನಿಮ್ಮ ಕವಿತಾ ಕಲೆ ಎಲ್ಲಕ್ಕೂ ನನ್ನ ನಮನ.

    ReplyDelete
  2. ಪರೇಶ್,

    ಹಲ ವೈಪರಿತ್ಯಗಳ ಮನ ಕಲುಕುವ ಕವನ.

    ಕಾರುಣ್ಯ ಪೂರ್ಣ ಕವಿ ಮನಸ್ಸಿಗೆ ಮಾತ್ರ ಇಂತಹ ಮಿಡಿವ ಕಾವ್ಯ ಗೊಚರ.

    ReplyDelete
  3. ಸಕಾಲಿಕ ಲೇಖನ ವಾಸ್ತವದ ಅರಿವು ಮೂಡಿಸುತ್ತದೆ, ಭ್ರಷ್ಟರು ಹೆಚ್ಚಾಗಿ ಮಳೆಯೂ ಆಗದೆ ಬೆಳೆಯೂ ಕಡಿಮೆಯಾಗಿದೆ,.
    ಕಿವುಡು ಪ್ರಜೆಗಳ ಕಿವಿತಟ್ಟಲೆತ್ನಿಸುವ ಲೇಖನ

    ReplyDelete
  4. ’ಜೈ ಜವಾನ್, ಜೈ ಕಿಸಾನ್’ ಎಂಬ ಧ್ಯೇಯ ಘೋಷ ಕೊಟ್ಟ ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಕೈಯೆತ್ತಿ ಮುಗಿಯಬೇಕೆನಿಸುತ್ತಿದೆ ಪರೇಶ್.. ಮನಕಲಕುವ ಚಿತ್ರಣ, ವಿಷಯ ವಸ್ತುಗಳನ್ನು ಸಮಾಜಮುಖಿಯಾಗಿ ಹೇಗೆ ಒಗ್ಗಿಸಿಕೊಳ್ಳಬೇಕೆನ್ನುವವರು ನಿಮ್ಮನ್ನು ನೋಡಿ ಕಲಿಯಬೇಕು.. ಮನಸ್ಸು ತೇವವಾಯ್ತು ಈ ಕವಿತೆ ಓದಿ.. ಅದ್ಭುತ ಕವಿತೆ..:)))

    ReplyDelete
  5. ಪರೆಶಣ್ಣ, ಖಂಡಿತ ಇದನ್ನೊಂದು ಉನ್ನತಶಿಕ್ಷಣದ ಪಠ್ಯಪುಸ್ತಕದಲ್ಲಿ ಅಳವಡಿಸುವುದು ಉಚಿತ..

    ReplyDelete