Sunday 15 January 2012

ಆನಂದವದು ಕಣ್ಣ ಹನಿಯಾಗಿ ಹೊರ ಬಂದಾಗ..




ನನ್ನ ತಂಗಿ 
ಲಂಗದಾವಣಿ ತೊಟ್ಟು
ಪುಟ್ಟ ಹೆಜ್ಜೆ ಇಡುತ್ತ ನಡೆವಾಗ
ಕೈ ಹಿಡಿದು ನಡೆಸಿದ ನೆನಪು
ಅವಳ ಸಂತಸದಿ ಅವಳ ಆಟದಿ 
ಅವಳ ಒಲವಿನ ನೋಟದಿ 
ಹರಿಸಿ ಪ್ರೀತಿ ಧಾರೆಯ 
ಕುಳಿತಳು ಮನದಂಗಳದಲಿ 

ಮನೆಯ ಕಿರಿ ಮಗಳು 
ಕೂಸಾಗಿ ನಮಗೆಲ್ಲ 
ಸಂತಸದ ಹೊಳೆ ತುಂಬಿಸಿ ಮನೆಯೆಲ್ಲ
ನಗುತ ನಗಿಸುತ ಬೆಳೆದಳಾಕೆ
ನಮ್ಮ ಪಾಲಿನ ಹಾಲು ಸಕ್ಕರೆ 
ಮನವು ಕುಣಿವುದು ಅವಳು ನಕ್ಕರೆ 

ಕೋಳಿ ಜಗಳದ ಮಧುರ ಕ್ಷಣಗಳು 
ಹಿರಿಯಣ್ಣನಾಗಿ ಬುದ್ಧಿ ಹೇಳಿದ ದಿನಗಳು 
ನಾ ಕೊಟ್ಟು ಉಡುಗೊರೆ ನೋಡಿದವಳ
ಕಂಗಳ ಮಿನುಗಿನಲ್ಲಿ ಮನ ಮೇರೆ ಮೀರಿ 
ಕುಣಿದಾಡಿದ ಪರಿಗಳು
ಕಣ್ಣ ಮುಂದೆ ಓಡಾಡುತಿವೆ

ಕಾಲದ ಜೊತೆ ಬೆಳೆದು ನಿಂತಳವಳು 
ಸುರ ಸುಂದರಿಯಾಗಿ 
ಪುಟ್ಟ ಕೂಸೇ ನಮಗೆಲ್ಲ 
ಜಗದ ನಿಯಮ, ಅನಿವಾರ್ಯ ಧರ್ಮ 
ಹೋಗಬೇಕಾಕೆ ಮತ್ತೊಂದು ಮನೆಗೆ 
ಬೆಳಕಾಗಿ
ಅರಗಿಸಲಾಗಲಿಲ್ಲ 
ಬರುತಿದೆಯೆಂದು ಆ ದಿನ ಹತ್ತಿರ 

ಮನದಲಿ ದುಗುಡವದು 
ಬರುವನೇ ಒಬ್ಬ ರಾಜ ಕುವರ ಕೈ ಹಿಡಿಯಲು??
ಎಂದೆಂದೂ ಅವಳ ಕಣ್ಣಲಿ ಸಂತೋಷ ಧಾರೆ ಹರಿಸಲು??
ತನ್ನ ಹೃದಯದಲ್ಲವಳ ದೇವತೆಯಂತೆ ಪೂಜಿಸಲು ??
ಯೋಚನೆಯಲಿ ಜೋರಾಗಲು ಹೃದಯ ಬಡಿತ 
ಅಷ್ಟರಲೇ ಬಂದನೊಬ್ಬ ರಾಜ ಕುವರ 
ಅವನ ಕಣ್ಣಲಿ ಅವಳ ಸಂತಸ ನೋಡಿ 
ಆನಂದವದು ಕಣ್ಣ ಹನಿಯಾಗಿ ಹೊರ ಬಂದಾಗ..

No comments:

Post a Comment