Wednesday 11 January 2012

ಹೃದಯವನು ಕಿತ್ತಿವರು ಎಸೆದಿರುವರೇ??




ಜೋತು ಬಿದ್ದಿದೆಯಲ್ಲಿ ಪೇಲವ ಮುಖ 
ಹೃದಯವದು ಸೋತಿದೆ ಬಡಿದು ಬಡಿದು
ಚೈತನ್ಯವಿಂಗಿ, ಜಡವಾಗಿದೆ ದೇಹ 
ಹಲ್ಲುಗಳಲುಗಾಡುತಿವೆ ಬೀಳುವಾತುರದಲಿ 
ನಡೆಯಲು ಬೇಕೊಂದು ಆಸರೆ 
ಮಲಗಿಹಳವಳು ಮೂಲೆಯಲಿ
ಮುದಿ ಅಮ್ಮ, ಮನೆಯ ಹಿರಿಯಮ್ಮ 

ಹತ್ತು ಮಕ್ಕಳ ಮಾತೆ, ಇನಿಯಗಾದಳು ಸೀತೆ 
ಹೊತ್ತಳಾ ಮನೆ ಭಾರ, 
ಬೆಳಗಿ ಪ್ರೀತಿಯ ಜ್ಯೋತಿ 
ಮಕ್ಕಳಾ ಭವಿತವ್ಯ ಬೇರು ಬಲವಾಗಿಸಲು
ಸವೆಸಿದಳು ತನ ದೇಹ 
ತ್ಯಾಗದಾ ಮೂರ್ತಿ 

ಬೇರದುವೆ ಗಿಡವಾಗಿ, ಹೆಮ್ಮರವು ಆಗಿಹುದು 
ತನ್ನ ಕಾಲಲಿ ತಾನು ಧೃಡವಾಗಿ ನಿಂತಿಹುದು 
ನೀರೆರದ ತಾಯವಳು ಬಾಳ ಸಂಜೆಯಲಿಹಳು 
ತಾ ಬೆಳೆದ ಮರಗಳಾ ನೋಡಿ ತೃಪ್ತಳು ಅವಳು 
ಜೀ ಬಯಸುತಿದೆ ಕೊಂಚ ಪ್ರೀತಿಯ ನೆರಳು 
ವಾತ್ಸಲ್ಯ ಕೇಳುತಿದೆ ಹೆತ್ತ ತಾಯಿಯ ಕರುಳು 

ತನುಜರೆಲ್ಲರೂ ದೊಡ್ಡ ಮನುಜರಾಗಿಹರೀಗ 
ಮರೆತಿಹರು ಹೆತ್ತವಳು ಮುದಿಯಾಗುತಿಹಳೆಂದು
ಹೆತ್ತ ಮಾತೆಯ ಈಗ ಶನಿಯಂತೆ ನೋಡುತಲಿ 
ದರ್ಪದಲಿ, ವಿಷ ಕಾರೋ ಸರ್ಪವಾಗಿಹರು 
ಉಸಿರುಸಿರಿನಲಿ ಆಕೆ ಪ್ರೀತಿಯನು ಹರಿಸಿದಳು 
ತಾಯ ಕಣ್ಣೀರಲಿವರು ಹಬ್ಬ ಮಾಡುತಲಿಹರು

ಕಾಯುತಿದೆ ಮುದಿ ಜೀವ ಕೊಂಚ ಪ್ರೀತಿಗಾಗಿ 
ಹೃದಯವನು ಕಿತ್ತಿವರು ಎಸೆದಿರುವರೇ??

No comments:

Post a Comment