Monday 23 January 2012

ಕಣ್ಣೀರು ಹೊಳೆಯಾಗಿ ಹರಿಯುತಿದೆ ತವರಿನೆಡೆಗೆ...


ಕಣ್ಣ ಹನಿ ಮೆಲ್ಲಗದು ಬಿತ್ತವನ ಎದೆಯ ಮೇಲೆ 

ತಿಳಿಯದೆ ಮಲಗಿರುವನವ,ಆತ್ಮರಹಿತ ದೇಹ 
ಚಿತ್ತ ಚೂರಾಗಿ, ಕತ್ತುಬ್ಬಿ ಬರುತಿರಲು  ರೋದನೆ
ಎತ್ತುತಿಹರವನ ಚಟ್ಟದ ಮೇಲಿಡಲು 

ಹರೆಯದ ಹೆಣ್ಣು ತವರಿನ ಕಣ್ಣು 
ಬೆಳೆದಳಾಲಯಕೆ ರಾಣಿಯಾಗಿ 
ಪ್ರೀತಿ ಸ್ನೇಹವ ಬೆರೆಸಿ ಬೆಲ್ಲ ಪಾಕವ ಮಾಡಿ 
ಹಂಚಿದಳು ಮನೆಗೆಲ್ಲ ಮುದವ ಹರಿಸಿ 

ಆಯಿತು ಸಮಯ ಹೋಗಬೇಕವಳು 
ಮತ್ತೊಂದು ಪಯಣಕೆ 
ತವರಿನ ಹಸಿರಾದಳು 
ಇನಿಯನಾಲಯದ ಉಸಿರಾಗಬೇಕು 
ಹೆಣ್ಣೆಲ್ಲಿ ಶಾಶ್ವತ ಹುಟ್ಟಿದ ಮನೆಗೆ 
ಹೋಗಬೇಕು ಇನ್ನೊಬ್ಬ ಕಟ್ಟಿದ ಮನೆಗೆ..

ಧಾರೆಯೆರೆದನು ಜನಕ ತನ್ನ ಮನೆಯಾ ಕನಕ 
ಅವಳಿಗೋ ಹೊಸ ಬಾಳ ಸವಿಯ ಸವಿಯುವ ತವಕ 
ಮನದ ಮನೆಯಲ್ಲದುವೆ ಉಜ್ವಲಿಸಿ ಹೊಸ ಜ್ಯೋತಿ 
ಉಕ್ಕಿ ಹರಿಸಿದಳವಳು ದಾಂಪತ್ಯ ಪ್ರೀತಿ 

ಉದಯಿಸಿದ ಸೂರ್ಯನವ ಮುಳುಗುವಾ ತವಕದಲಿ 
ಮುಳುಗಿದನು ಹೊತ್ತು ಮುಳುಗುವ ಮುನ್ನವೇ 
ಹೊಸ ಬಾಳ ಅರಮನೆಯ ರಾಜನವ ಅಸ್ತಮಿಸಿ 
ಅರಮನೆಯು ಮಸಣವಾದುದು ನ್ಯಾಯವೇ 

ಚಿತ್ತ ಒಪ್ಪುತಲಿಲ್ಲ ಸತ್ತ ಇನಿಯನು ಎಂದು 
ದುಃಖ ಒತ್ತರಿಸುತಿದೆ ಕತ್ತ ಹಿಂಡಿ
ನವ ಬದುಕ ಸವಿಯನ್ನು ಸವಿಯಬೇಕಷ್ಟರಲೇ 
ಮುರಿದು ಒದ್ದಾಡಿತದು ಬಾಳ ಬಂಡಿ 

ಮನದಲ್ಲಿ ಅವನಿರಲು ಮನೆಯಲಿ ಅವನಿಲ್ಲ 
ತವರೆಂದೂ ಮಗಳಿಗದು ಸ್ವಂತವಲ್ಲ 
ಧುಮ್ಮಿಕ್ಕಿ  ಚಂಡಮಾರುತವದುವೆ ಹೃದಯದೊಳು  
ಹೊಳೆಯಾಗಿ ಹರಿಯುತಿದೆ ತವರಿನೆಡೆ....












1 comment:

  1. ಪರೇಶ ನಿಮ್ಮ ಮೇಲಿನ ನಿರೀಕ್ಷೆಗಳನ್ನು ಹೆಚ್ಚಸಿಕೊಂಡು, ಅವುಗಳನ್ನು ಉಳಿಸಿಕೊಂಡು ಬೆಳಸಿಕೊಳ್ಳುತ್ತಿದ್ದೀರಿ.. ಬೆಳಕಿಂಡಿ ಒಂದು ಸೂಜಿಗಲ್ಲಿನ ಬ್ಲಾಗ್ ಆಗಿ ಸೆಳೆಯುತ್ತಿದೆ.. ನಿಮ್ಮ ಕವಿತೆಗಳನ್ನು ನೋಡುತ್ತಿದ್ದಂತೆಯೆ ಏನೋ ಒಂದು ನಿರೀಕ್ಷೆ ಹುಟ್ಟಿಕೊಳ್ಳತ್ತದೆ ಅಷ್ಟರಮಟ್ಟಿಗೆ ಪ್ರಬುದ್ಧತೆ ಇಣುಕುತ್ತಿದೆ.. ಕವಿತೆಯ ಪ್ರೌಢಿಮೆ ನೋಡಿ, ನಿಜಕ್ಕೂ ಖುಷಿಯಾಯಿತು.. ತವರಿನಲ್ಲಿ ಆಡಾಡಿ ಬೆಳೆದ ಬಾಲೆ ಸಣ್ಣ ವಯಸ್ಸಿನಲ್ಲಿಯೆ ಗಂಡನನ್ನು ಕಳೆದುಕೊಂಡು ಪರಿತಪಿಸುವ ಸನ್ನಿವೇಶಗಳು ಮನಮುಟ್ಟುವಂತೆ ಚಿತ್ರಿತವಾಗಿವೆ.. ಓದಿ ಖುಷಿಪಟ್ಟೆ..

    ReplyDelete