Tuesday 31 January 2012

ರಾಜಕೀಯ ಮತ್ತು ಸಾಹಿತ್ಯ: ಸಾಹಿತ್ಯದಿಂದ ಸೌಹಾರ್ದದೆಡೆಗೆ



"ಎಲ್ಲರೂ ಸಾಹಿತಿ, ಕವಿಯಾಗಲು ಸಾಧ್ಯವಿಲ್ಲ. ಒಂದು ಪೆನ್ನು ಪೇಪರು ಹಿಡಿದು ಒಂದೇನೋ ಬರೆದೊಡನೆ ಅವನು ಸಾಹಿತಿಯೋ ಕವಿಯೋ ಆಗುವುದಿಲ್ಲ. ಈಗಿನ ಸಾಹಿತಿ ಕವಿಗಳು ಸಮಾಜದಲ್ಲಿ ಬಿರುಕು ತರುವಂಥ ಕೆಲಸ ಮಾಡುತ್ತಿದ್ದಾರೆ. ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದ್ದಾರೆ." ಸಮಾರಂಭವೊಂದರಲ್ಲಿ ರಾಜಕಾರಣಿಯೊಬ್ಬ ಹೇಳಿದ ಮಾತುಗಳಿವು. 

ನಮ್ಮಲ್ಲಿ ಕನ್ನಡ ಓದುವವರ, ಬರೆಯುವವರ ಸಂಖ್ಯೆ ಕಡಿಮೆ ಇದೆ. ಯುವಕರು ಮುಂದೆ ಬರಬೇಕು. ಸಾಹಿತ್ಯ ರಚನೆಯಲ್ಲಿ ಕೈ ಹಾಕಬೇಕು ಎಂದು ಹಿತ ಚಿಂತಕರು ಚಿಂತಿಸುತ್ತಿರುವಾಗ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳಿಗಿದು ಕೊಡಲಿ ಏಟಾಗಿದೆಯೇ? ಒಬ್ಬ ಸಾಹಿತಿ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳನ್ನು ತನ್ನ ಲೇಖನಿಯಿಂದ ಪ್ರತಿಬಿಂಬಿಸುತ್ತಾನೆ. ಸಮಾಜದ ಒಡಕುಗಳನ್ನು, ತಪ್ಪುಗಳನ್ನು ಗುರುತಿಸಿ ಅದನ್ನು ವ್ಯಕ್ತಪಡಿಸಿ ಸರಿಪಡಿಸುವ ಪ್ರಯತ್ನ ಮಾಡುತ್ತಾನೆ. ಸಮಾಜದಲ್ಲಿ ಅಹಿತಕರ ಘಟನೆಯಾದಲ್ಲಿ ಅದಕ್ಕೆ ಕಾರಣ ದೇಶ ನಾಯಕರೆ ಹೊರತು ಒಬ್ಬ ನಿಸ್ವಾರ್ಥ ಸಾಹಿತಿಯಲ್ಲ ಎಂಬುದನ್ನು ಅರಿಯುವುದು ಇಂತಹ ರಾಜಕಾರಣಿಗಳಿಗೆ ಕಷ್ಟ ಸಾಧ್ಯವಾಗಿದೆ. ಸಾಹಿತಿ ಆ ಅಹಿತಕರ ಘಟನೆ ನಡೆದುದ್ದಕ್ಕೆ ಕಾರಣ ಹೇಳುತ್ತಾನೆ. ಇಂತಹ ಘಟನೆಗಳು ನಡೆಯದಂತೆ ಹೇಗೆ ನಾವು ಕ್ರಮ ಕೈಗೊಳ್ಳಬಹುದೆಂಬ ಸಲಹೆಗಳನ್ನು, ತನ್ನ ವಿಚಾರವನ್ನು ವ್ಯಕ್ತಪಡಿಸುತ್ತಾನೆ. ಇದು ದೇಶವನ್ನು ತಿಂದು ತೇಗಿದ ರಾಜಕಾರಣಿಯೊಬ್ಬನಿಗೆ ವಿಷವಾಗಿದ್ದು ವಿಪರ್ಯಾಸವೇನಲ್ಲ. ನಡೆದ ಸತ್ಯವನ್ನು ಜನರೆದುರು ಇಡುವ ನಿಸ್ವಾರ್ಥ ಕೆಲಸ ಸಾಹಿತಿಯದ್ದು. ಅದಕ್ಕವನು ಹೆದರುವ ಅವಶ್ಯವಿದೆಯೇ?

ಮತ್ತೊಂದು ಮಾತು.. "ಎಲ್ಲರೂ ಸಾಹಿತಿಯಾಗಲು ಸಾಧ್ಯವಿಲ್ಲ.. ಅದು ದೈವದತ್ತ ಕಲೆ" ಎಂಬ ಮಾತು. ಎಂತೆಂಥವರೋ ರಾಜಕಾರಣಿಯಾಗಿ ದೇಶ ಕಿತ್ತು ತಿನ್ನುತ್ತಿರುವಾಗ,ಸಾಮಾನ್ಯನೊಬ್ಬ ಸಾಹಿತಿಯಾಗಲೇಕೆ ಸಾಧ್ಯವಿಲ್ಲ. ಸಾಹಿತಿ ಸಮಾಜದ ಒಡಕುಗಳನ್ನು ಬೆಸೆಯುವ ದರ್ಜಿ. ಯಾವ ಮನುಷ್ಯ ನಿಸ್ವಾರ್ಥವಾಗಿ ತನ್ನ ಸುತ್ತ ಮುತ್ತಲ ಜನರ ಶ್ರೇಯೋಭಿವೃದ್ಧಿಗಾಗಿ ಬರೆಯುತ್ತಾನೋ ಅವನು ನಿಜವಾದ ಸಾಹಿತಿಯೇ. ಅದಕ್ಕೆ ಅವನು ಕಠಿಣ ಪದ ಪುಂಜಗಳನ್ನು ಜೋಡಿಸಿ ದೊಡ್ಡ ಕವಿತೆಯನ್ನೇ ಬರೆಯಬೇಕೆಂದಿಲ್ಲ.
ದೊಡ್ಡ ಪ್ರಶಸ್ತಿಗಳನ್ನು ಪಡೆಯಬೇಕೆಂದಿಲ್ಲ. ಅವನಿಂದ ಸಮಾಜದಲ್ಲಿ ಕೊಂಚ ಅಭಿವೃದ್ಧಿಯಾದರೂ ಸಾಕು.

ನಿಜವಾಗಿ ಹೇಳಬೇಕೆಂದರೆ ಎಲ್ಲಿ ಸಾಹಿತ್ಯವಿದೆಯೋ ಅಲ್ಲಿ ಸೌಹಾರ್ದವಿದೆ. ಎಲ್ಲಿ ಹೆಚ್ಚು ಹೆಚ್ಚು ಸಾಹಿತಿಗಳಿರುವರೋ ಅಂತಹ ಸಮಾಜದಲ್ಲಿ ಹಿತವಿದೆ, ಶಾಂತಿಯಿದೆ. ಎಲ್ಲಿ ಹೆಚ್ಚೆಚ್ಚು ಯುವಕರು ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವರೋ ಅಂತಹ ಸಮಾಜದಲ್ಲಿ ಒಗ್ಗಟ್ಟಿದೆ, ಅಭಿವೃದ್ಧಿಗೆ ಅನುವಿದೆ. ನಿಜವಾದ ಸಾಹಿತ್ಯ ದೇಶದ ಅಭಿವೃದ್ಧಿಗೆ ಹೊರತು ದೇಶದಲ್ಲಿ ಒಡಕು ತರಿಸಲಿಕ್ಕಲ್ಲ. ನಮ್ಮಂಥ ಯುವಕರು ಸಾಹಿತ್ಯಾಭಿರುಚಿ ಹೊಂದಿ ಇಂಥ ಭಂಡ ರಾಜಕಾರಣಿಗಳಿಗೆ ತೋರಿಸೋಣ--" ಒಬ್ಬ ಒಳ್ಳೆಯ ಮನುಷ್ಯ ಒಬ್ಬ 
ಒಳ್ಳೆಯ ಸಾಹಿತಿಯಾಗಬಹುದೆಂದು. ಸಾಹಿತ್ಯದಿಂದ ಸೌಹಾರ್ದವಿದೆ, ಒಲವಿದೆ, ಗೆಲುವಿದೆಯೆಂದು."

No comments:

Post a Comment