Wednesday, 10 October 2012

ನಾ ಸತ್ತಿದ್ದೆ

ಚಳಿಯಿಲ್ಲದಿರೂ ಮೈ ಮೇಲೆ ಚಾದರ 
ಉಸಿರು ಬಂದರೆ ತಿಳಿಯಲೆಂದೇನೋ,
ಮೂಗಿನ ಹೊಳ್ಳೆಗಳೆರೆಡರಲೂ ಹತ್ತಿಯುಂಡೆ
ಓಡಿ ಹೋಗುವೆನೆಂಬ ಭಯವಿರಬಹುದು 
ಕಟ್ಟಿದ್ದರು ಹೆಬ್ಬೆರಳುಗಳೆರಡನೂ ಜೋಡಿಸಿ 
ನನ್ನ ಸಮಯ ಮುಗಿದು ನಾ ಸತ್ತಿದ್ದೆ 

ಅಮ್ಮ ಕಿರುಚಿತ್ತಿದ್ದಳು ಮತ್ತೆ ಬಾ ಮಗನೇ ಎಂದು 
ಹಾತೊರೆದೆ, ಎದ್ದು ಗಟ್ಟಿಗೆ ಅಪ್ಪಿಕೊಳ್ಳಲವಳ 
ಶಕ್ತಿಯೇ ಇರಲಿಲ್ಲ, ಕೈಕಾಲುಗಳಲ್ಲಿ
ಅಪ್ಪ ದಿಗ್ಭ್ರಾಂತ, ದೂರ ದೇಶಕೆ ಹೋಗಿ 
ಚೂರು ಪಾರು ದುಡಿದು ಹೊತ್ತಿದ್ದ ಸಂಸಾರ ಭಾರ 
ಅವನೊಡನೆ ಕೈ ಜೋಡಿಸಿ ವರ್ಷವಾಗಿತ್ತಷ್ಟೇ
ನನ್ನ ಸಮಯ ಮುಗಿದು ನಾ ಸತ್ತಿದ್ದೆ 

ತಮ್ಮಂದಿರೀರ್ವರು, ಹೂವಾಗಿ ಅರಳುವ ಹೊತ್ತು 
ನೀರೆರೆಯುತ್ತಿದ್ದೆ ಪ್ರೀತಿಯಿಂದ
ನನ್ನ ಮೊಗವನೇ ದಿಟ್ಟಿಸಿ ನೋಡುತಿಹರು 
ಎಲ್ಲಾದರೂ ಒಂದುಸಿರು ಮಿಕ್ಕಿರಬಹುದೋ ಎಂದು 
"ನಿಮಗೋಸ್ಕರ ಕೂಡಿಟ್ಟಿದ್ದೇನೆ ಕೊಂಚ ಹಣ 
ಜೊತೆಗೆನ್ನ ಜೀವ ವಿಮೆ, ರಶೀದಿ  ರೂಮಿನ 
ಕಪಾಟಿನಲಿರುವ ಕಡತದಲ್ಲಿದೆ" ಎಂದು 
ಹೇಳ ಹೊರಟರೆ ಬಾಯಿಂದ ಮಾತೇ ಬರುತ್ತಿಲ್ಲ 
ನನ್ನ ಸಮಯ ಮುಗಿದು ನಾ ಸತ್ತಿದ್ದೆ 

ಅಷ್ಟರಲೇ  ಹಾಕಿದ್ದರು ಚಟ್ಟದ ಮೇಲೆ 
ಬಟ್ಟೆಯೆಲ್ಲ ತೆಗೆದರು, ನಾನು ನಗ್ನ 
ಭೂಮಿಗೆ ಭಾರವೆಂದು ಸುಟ್ಟು ಹಾಕುತಿಹರು 
ಕೊಂಚ ಗಾಯವಾದರೆ ಕಂಗಾಲಾಗುವ ಅಪ್ಪ 
ನಿಂತಿದ್ದ ಸ್ತಬ್ಧನಾಗಿ ನೋಡುತ್ತ
ಆಗ ತಿಳಿಯಿತು "ನಾನು" ಒಂದು ಪಾತ್ರವಷ್ಟೇ 
ಈಗಿಲ್ಲ ನನ್ನದೆಂಬುದೇನೂ  ಇಲ್ಲಿ 
ಬದುಕ ನಾಟಕಕೆ ತೆರೆ ಬಿದ್ದು  ನಾ ಸತ್ತಿದ್ದೆ 

4 comments:

 1. ಸಾವಿನ ಚಿತ್ರಣ ಇಲ್ಲಿದೆ. ಆದರೆ ಗೆಳೆಯ ನೀನಿನ್ನೂ ಮದುವೆಯಾಗಿ ಮಕ್ಕಲನ್ನು ಎತ್ತಿ ಆಡಿಸಿ ಅವರ ಮದುವೆಯನ್ನೂ ನೋಡ ಬೇಕಾದವನು. ಇಂತಹ ಕವಿಯೆ ಏನಿದ್ದರೂ ನಮ್ಮಂತಹ ’ಕಳೆದುಕೊಂಡ’ ಪ್ರಾಪ್ತಿ ಇಲ್ಲದಿರುವವರಿಗೆ. ನೀವು ಬರೆಯ ಬೇಕಾದ್ದು ಕಡಲಷ್ಟಿದೆ, ಅದೂ ಉಪ್ಪು ಸಿಹಿಯಾಗಿಸಿ.

  ReplyDelete
 2. ಎಲ್ಲವೂ ಮುಗಿದ ಮೇಲಿನ ಸಿಂಹಾವಲೋಕನ!
  ಈಗ ಮೂಗಿಗೆ ಹತ್ತಿಯೇ ಗತಿ. ಇದ್ದವರದು ಎರಡು ಹನಿ ಕಣ್ಣೀರು ನಾಲ್ಕು ದಿನ ನೆನೆದು! ನಿಜ ಬಂದುಹೋಗುವವರದು ಒಂದು ಪಾತ್ರ ಮಾತ್ರ! ನಾಟಕ ರಂಗ! ಬರುತ್ತೇವೆ...ನೋಡುತ್ತೇವೆ...ಮೆರೆಯುತ್ತೇವೆ..ಮರೆಯುತ್ತೇವೆ.. ಮತ್ತೆ ಮರೆಯಾಗುತ್ತೇವೆ!

  ReplyDelete
 3. ರಚನೆ ಸ್ವಲ್ಪ ತ್ರಾಸದಾಯಕವಾಗಿದ್ದಿರಬಹುದು. ವಸ್ತುವಿಷಯದ ಆಯ್ಕೆ ಅನುಪಮ.

  ReplyDelete
 4. ಕವಿತೆಯ ವಸ್ತು ಅರಗಿಸಿಕೊಳ್ಳಲೂ ಬೆವತು ಹೋದೆ. ಹನಿಗಳ ಜಪದಲ್ಲಿ ನೀಳ್ಗವಿತೆ ಎಲ್ಲಿ ಮರೆತಿರೋ ಎಂದು ಭಯವಾಗಿತ್ತು. ಉದ್ದ ಶಿಲೆ ಕೆತ್ತುವಾಗಲೂ ಬೆಳಕಿಂಡಿಯ ಕತ್ತಿಗೆ ಹಿಂದಿನದೇ ಹಿಡಿತವಿದೆ. ಆದರಿ ಇಲ್ಲಿ ಕತ್ತಿಯಲುಗಿಗೆ ಸಿಕ್ಕಿದ್ದು ಕಲ್ಪನೆಯಲ್ಲಿ ತೆರೆದುಕೊಂಡ ಸಾವೆಂಬ ಪ್ರತಿಮೆ. ಸಾವಿನ ಚಿತ್ರಣ ಕಣ್ ಕಟ್ಟುವಂತಿದ್ದು, ಮಾನವನ ಕ್ಷಣಿಕ ಜೀವನದ ಉದ್ದಗಲಗಳನ್ನು ಸಮರ್ಥವಾಗಿ ಅಂದಾಜಿಸಿದ್ದೀರಿ. ಸಾರವನ್ನು ಹಿಂಡಿದ ಮೇಲೆ ನನ್ನ ಸಾಹಿತ್ಯ ಕೃಷಿಗೊಂದಷ್ಟು ಚೈತನ್ಯ ಒದಗಿಸಬಹುದು ಈ ಕವಿತೆ. ಚೆನ್ನಾಗಿದೆ ಪರೇಶಣ್ಣ. :)

  ReplyDelete