Friday 28 December 2012

ಎದೆಯ ಕೂಗು


ತಿಳಿಯದಾಗಿದೆ ನಲ್ಲ, ಎಲ್ಲಿ ಹೋಗಿರುವೆ ನೀ  
ಬಾ ಬೇಗ ಮನವನ್ನು  ತಣಿಸಲೆಂದು 
ಹೊತ್ತು ಮುಳುಗುವ ಸಮಯ, ಕತ್ತಲದು ಎಲ್ಲ ಕಡೆ 
ದುಗುಡ ಆವರಿಸಿಹುದು ಮನದಿ ಇಂದು 

ಎನಗೆ ಸಾಂತ್ವನವನ್ನು ನೀಡುತಿದೆ ತೆಂಗು ಗರಿ 
ತಲೆ ಆಡಿಸುತ ನೀನು ಬರುವೆ ಎಂದು
ಬಾಗಿಲಿನ ಮೂಲೆಯಲಿ ಉದ್ದ ಇರುವೆಯ ಸಾಲು 
ಹೇಳುತಿದೆ-"ನಿನ್ನೊಡನೆ ಇರುವೆ ಎಂದು"

ಒಲೆಯ ಮೇಲಿಟ್ಟಿರುವ ಕುಕ್ಕರದು ಕೂಗುತಿದೆ 
ತನ್ನೊಡಲ ಬೇಗೆಯನು ಹೇಳಲೆಂದು 
ಅದರ ಕೂಗನು ಕೇಳಿ ಓಡಿದಾಗರಿವಾಯ್ತು 
ಬೆಂದ ಅಕ್ಕಿಯೇ, ಅನ್ನವಾಗ್ವುದೆಂದು 

ಒಳಗೊಳಗೆ ವಿರಹದಾ ಜ್ವಾಲೆ ಇದ್ದರು ಕೂಡ  
ಯಾರಿಗೂ ಹೇಳದೆಯೆ  ಬೇಯುತಿಹೆನು 
ನನ್ನೆದೆಯ ಕೂಗನ್ನು, ನೀ ಕೇಳಿ ನನ್ನ ಬಳಿ 
ಬರುವಂಥ ಕ್ಷಣಕಾಗಿ ಕಾಯುತಿಹೆನು

1 comment:

  1. ಸ್ವಾಗತ ಗೀತೆಯು ಮುದ ನೀಡಿತು. ಆಧುನಿಕ ಸ್ಪರ್ಷದಿಂದ ಕಾವ್ಯವೂ ಇಂದಿಗೂ ಒಪ್ಪುವ ಶೈಲಿಯಲ್ಲಿದೆ.

    ReplyDelete