Wednesday 9 January 2013

ಹರ್ಷ ಗೀತ



ನಿನ್ನ ಕಣ್ಣ ಕಡಲಿನಲ್ಲಿ ನನ್ನ ಪ್ರೀತಿ ಬಿಂಬ ಕಂಡೆ 
ಮಬ್ಬಾಗಿಹ ಮನದಿ ನವ್ಯ ದೀಪ್ತಿ ಬೆಳಗಿತು 
ನಿನ್ನ ರೆಪ್ಪೆ ಬಡಿತದಲ್ಲಿ, ಕುಣಿವ ನವಿಲ ಗರಿಯ ಕಂಡೆ 
ಎದೆಯ ಗೂಡಿನಲ್ಲಿ ಹರ್ಷ ಗೀತ ಮೊಳಗಿತು 

ವಿರಹದಲ್ಲಿ ಬೆಂದು ಎನ್ನ ಭಾವ ಬತ್ತಿ ಬರಡಾಗಲು 
ಅನುರಾಗದ ಜಿನುಗು ಮಳೆಯ ನೀನು ಸುರಿಸಿದೆ 
ಹೊತ್ತಿಲ್ಲದೆ ಗೊತ್ತಿಲ್ಲದೆ ಸುತ್ತುವ ಅಲೆಮಾರಿ ಸುತ್ತ 
ಕಾಳಜಿಯ ಗೋಡೆ ಕಟ್ಟಿ ಪ್ರೀತಿ ಹರಿಸಿದೆ 

ಹತ್ತು ಹಲವು ನೋವುಗಳು ತುಂಬಿರುವ  ಮನದ ಭಾರ 
ನೀನು ಬಂದ ಮೇಲೆ ತಾನೆ ಕಡಿಮೆಯಾದುದು 
ಹುಚ್ಚು ಹುಚ್ಚು ಯೋಚನೆಯಲಿ ಮನವು ಕೊಚ್ಚಿ ಹೋಗುತಿರಲು 
ಮತ್ತೆ ಜೀವ ಕೊಟ್ಟಂತಹ ಹಿರಿಮೆ ನಿನ್ನದು 

ಕತ್ತಲೆಯಲು ಬೆಳಕಿಹುದು, ಸುತ್ತ ಮುತ್ತ ನೀನಿರಲು 
ಸಮಯ ಕಳೆಯುತಿರುವುದನ್ನೆ  ತಿಳಿಯದಾಗಿಹೆ 
ಅಲ್ಲಿ ಇಲ್ಲಿ ಎಲ್ಲೆಲ್ಲೂ ನಿನ್ನಪಾರ ಪ್ರೀತಿ ಕಡಲು 
ಅದರ ತೀರದಲ್ಲಿ ನಾನು ಕಳೆದು ಹೋಗಿಹೆ 

1 comment:

  1. ಬದಲಾವಣೆ ಗಾಳಿ ಎಲ್ಲ ಕಡೆ ಬೀಸಬೇಕು. ಎಲ್ಲೋ ಸಾಗುವ ಬಾಳಿಗೊಂದು ನೆಲೆಕಂಡುಕೊಳ್ಳುವುದಕ್ಕೆ, ಬೆಳಕು ಕಾಣುವುದಕ್ಕೆ ಆ ಸಂಗಾತಿಯೆಂಬ 'ಹರ್ಷದ' ಹೊನಲು ಇರಬೇಕು. ಒಲವ ಭದ್ರ ಬುನಾದಿ, ಹೊಂದಾಣಿಕೆಯ ಮಂತ್ರ, ನಂಬಿಕೆಗಳಿದ್ದಲ್ಲಿ 'ಸಂತಸ'ಗೀತವಾಗಬಹುದು.

    ಗೊತ್ತಿಲ್ಲ. ಅನುಭವವಿಲ್ಲ ನನಗೂ ನಿಮ್ಮಂತೇ... ಕಲಿಯಲು ಶುರು ಮಾಡಿದ್ದೇನೆ.


    "ಸಕಾಲಿಕ" ಹರ್ಷ ಗೀತ!

    ReplyDelete