Friday 11 May 2012

ನನ್ನ ಓಟ






ಓಡುತಲಿರುವೆ ನಾ 
ದಾರಿಯರಿವಿಲ್ಲದೆಯೇ, ಸುತ್ತಲಿಷ್ಟು ಜನ
ನನ್ನಂಥವರೇ, ಮಂದೆಯೊಳು ನಾನೊಬ್ಬ 
ದಿಕ್ಕಿನರಿವಿಲ್ಲದೆ ಕಕ್ಕಾಬಿಕ್ಕಿ ಕೆಲವರು 
ಗುಂಪಿನಲ್ಲಿ ಗೋವಿಂದ ಎನ್ನುವರು ಮತ್ತಿಷ್ಟು 
"ನನ್ನದೇ ದಾರಿ" ಎಂಬ ಮದದಿ ಹಲವರು 
ಬೆರಳೆಣಿಕೆಯಷ್ಟು ಜನರದು ಗುರಿಯೆಡೆಗೆ ಓಟ 
ಮಧ್ಯದಲಿ "ನಾನು"

ದಾರಿಯುದ್ದಕೂ ಹೊಲಸು 
ಮೂಗ ಮುಚ್ಚಿ ಸಿಡುಕುತ್ತ, ಗೊಣಗುತ್ತ 
ಹೋಗುತಿಹೆ, "ಹೊಲಸು ಜಗ,
ಅವಿವೇಕದ ತೊಟ್ಟಿ" ಎಂದು 
ಹೊಲಸು ತೆಗೆಯಬೇಕಾದವ 
ನಾನೆಂದು ಅರಿಯದೆ, 
"ಹೊಲಸಿನೊಳಗೊಬ್ಬ  ಹೊಲಸಾದೆ"
ಒಳಗೊಂದು ಹುಸಿ ಕಲ್ಪನೆ 
ನಾ ಶ್ರೇಷ್ಠನೆಂದು 

ಹೊರಟಿರುವೆ ಸುಖ ಶಾಂತಿಯನರಸಿ
ಎಲ್ಲಿದೆಯದು, ಯಾವ ಊರಿನಲಿ?
ಮುಂದೆ ಸಿಗುವುದೆಂಬ ಆಸೆ 
ನೂರೂರು ಕಳೆದರೂ ಆ ಊರ ಸುಳಿವಿಲ್ಲ 
ಐಶ್ವರ್ಯದಾಸೆಯಲಿ ಲಕ್ಷಗಟ್ಟಲೆ ಕೂಡಿ 
ಆ ದುಡ್ಡಿನಲ್ಲಿ ತಿಂದ ಅನ್ನ ಜೀರ್ಣಿಸಲಿಲ್ಲ
ಮನದಿ ಮೂಡಿತಾಗ ಭಾವನೆ 
ಜೀವನ ಜಂಜಾಟವೆಂದು 

ಜೀವನ ಸಂಧ್ಯೆ, ದೇಹದಲಿ ನೆರಿಗೆ 
ಚೈತನ್ಯ ಮಾಯ, ಇಳಿ ಪ್ರಾಯ 
ಕಣ್ಣೆದುರು ಹಾದು ಹೋಗುತಿದೆ ಜೀವನ 
"ಎಲ್ಲಿದ್ದೆ ನಾನು? ಎಲ್ಲಿ ಬಂದೆ?"
ಸುಖ ಅಲ್ಲಿದೆಯೆಂದು ಎಲ್ಲ ಓಡಿದರು
ಓಡಿದೆ ನಾನೂ ಅವರ ಜೊತೆ
ನಾನಿದ್ದಲ್ಲೇ ಇತ್ತದು, ಬೆಪ್ಪ ನಾನು 
ಓಡಿದೆ ವಿರುದ್ಧ ದಿಕ್ಕಿನಲ್ಲಿ 
ಈಗ ಪ್ರಶ್ನೆ ಮನದಲಿ 
" ಇದೆಯೇ ಮತ್ತೆ ತಿರುಗಿ ಬರುವಷ್ಟು ಸಮಯ?"
ಮತ್ತೆ ಉತ್ತರ 
"ಕಾಲವೂ ಓಡಿತಲ್ಲವೇ ನನ್ನ ಜೊತೆ"

1 comment:

  1. ಓಟದೊಳಗೆ ಅಲ್ಲಲ್ಲಿ ನಿಂತು ಮನದೊಳಗಿನ ತುಡಿತಗಳನು ಅವಲೋಕನ ಮಾಡಿದ ಪರಿ ಚೆನ್ನಾಗಿದೆ. ಬಹಳಾನೇ ಶ್ರಮ ವಹಿಸಿದ್ದು ಕಾಣುತ್ತದೆ ಪದಗಳನ್ನು ಹೆಕ್ಕಿ ಕಟ್ಟುವಲ್ಲಿ. ಓಟಕ್ಕೊಂದು ಓಘ ಸಿಗಲಿ.

    ReplyDelete