Wednesday 28 March 2012

ಸುಡುಗಾಡಿನಲಿ ಸೂರ್ಯೋದಯ




ನಿನ್ನೆಯದು ಸುಡುಬಿಸಿಲು, ಬಿರುಗಾಳಿ  ಕಿರುಚಾಟ
ನರಕ ವಾತಾವರಣ ಸುತ್ತೆಲ್ಲವೂ 
ಭವ ಬಂಧ ಕಳೆದಿತ್ತು, ದೇವನಾ ಕರೆಯಿತ್ತು 
ಮರೆಯಾದ ಜಗ ತೊರೆದು ಅತಿ ದೂರಕೆ 

ಬಂಧನದ ಹಗ್ಗವದು ಕಡಿದ ಕತ್ತಿಯ ಗಾಯ 
ನರಕ ಯಾತನೆ ಮನವ ಹಿಂಡುತಿರಲು 
ದುಃಖ ಉಮ್ಮಳಿಸಿದುವೆ, ಅಪಸ್ವರದ ಭಾವಗಳು 
ಸೇರಿ  ಶೋಕದ ಗೀತೆ ಗುನುಗುತಿತ್ತು

ದಿನ ಕಳೆದು ಬೆಳಗಾಗೆ, ಕಣ್ಣೀರ ಹೊಳೆ ಬತ್ತಿ 
ಮನ ಸತ್ತ ಹೆಣದಂತೆ ಮಲಗಿರುವುದು 
ಮೋಡ ತೆರೆಯನು ಸೀಳಿ ಮುಂಜಾನೆ ರವಿ ರಶ್ಮಿ  
ಸ್ಪರ್ಷಿಸಿದೆ ಸುಡುಗಾಡ ನಡು ಮಧ್ಯದಿ 

ಕಲ್ಲು ಮುಳ್ಳು ನಡುವೆ ಎಲುಬು ಕೀಲಿನ ಶೇಷ 
ಸಾವ ಗಾಯಕೆ ಉಪ್ಪ ಹಾಕುತಿರಲು 
ಕಾಲವದು ಯಾವುದರ ಪರಿವೆ ಸಹ ಇಲ್ಲದೆಯೇ 
ತನ್ನ ಪಾಡಿಗೆ ತಾನು ಓಡುತಿಹುದು 

ನಮ್ಮಿಂದ ಜಗವಲ್ಲ, ಜಗದಿಂದ ನಾವೆಲ್ಲಾ 
ಯಾರು ಹೋದರೂ ಭೂಮಿ ತಾ ನಿಲ್ಲದು 
ಕತ್ತಲೆಯ ಅಂತ್ಯದಲಿ ಹೊಸ ಬೆಳಕ ನವಗೀತ 
ಹಳೆ ಗಾಯ ಮಾಸದುವೆ ಮುನ್ನಡೆಪುದು

2 comments:

  1. ಸಾವಿನ ಸುಡುಗಾಡಿನಲ್ಲಿ ಜೀವನದ ನಿಜ ಸತ್ಯ ಬಿಚ್ಚಿಕೊಂಡಿದೆ.. ಅಸ್ಪಷ್ಟ ಚಿತ್ರಣಕ್ಕೆ ಸ್ಪಷ್ಟ ಚಿತ್ತಾರವಿಟ್ಟ ಕವಿಮನದ ಸಶಕ್ತ ಪ್ರತಿಭೆಗೆ ವಂದನೆಗಳು.. ಚೆಂದದ ರಚನೆ ಪರೇಶಣ್ಣ.. ಜೀವನದ ವಿರಕ್ತ ಭಾವಗಳು ಜೊತೆಯಾದಂತೆನಿಸಿದರೂ ಮನಸ್ಸನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತದೆ ಕವಿತೆ..
    ಕತ್ತಲೆಯ ಅಂತ್ಯದಲಿ ಹೊಸ ಬೆಳಕ ನವಗೀತ
    ಹಳೆ ಗಾಯ ಮಾಸದುವೆ ಮುನ್ನಡೆಪುದು
    ಈ ಸಾಲುಗಳಲ್ಲಿನ ಸಾಂತ್ವಾನ ಮನಸ್ಸಿಗೆ ಹಿತೆನಿಸಿ ಕವಿತೆಯ ಮೆರುಗನ್ನು ಹೆಚ್ಚಿಸಿದೆ.. ಬೆಳಕಿಂಡಿಯ ಈ ಕಿರಣಕ್ಕೆ ಮೈಯೊಡ್ಡಿ ಖುಷಿಪಟ್ಟೆ..:)))

    ReplyDelete
  2. ನಿನ್ನೆ ಮೂಡಿದ ಭಾನುವಿಗೆ ಮತ್ತೆ ಸಂಜೆಯ ಮರಣ. ನಾಳೆಗಳ ಜನನ. ಇಂದಿನ ಕೊಲೆ. ಹೂತ ಬದುಕಿನ ಮೇಲೆ ಮತ್ತೊಬ್ಬರ ಗೋರಿ. ಹೀಗ್ ಸಾಗುತ್ತದೆ ಈ ಬದುಕ ಸುಡುಗಾಡಿನ ಬವಣೆ. ಏನೇ ಇರಲಿ
    "ನಮ್ಮಿಂದ ಜಗವಲ್ಲ, ಜಗದಿಂದ ನಾವೆಲ್ಲಾ ಯಾರು ಹೋದರೂ ಭೂಮಿ ತಾ ನಿಲ್ಲದು ಕತ್ತಲೆಯ ಅಂತ್ಯದಲಿ ಹೊಸ ಬೆಳಕ ನವಗೀತ ಹಳೆ ಗಾಯ ಮಾಸದುವೆ ಮುನ್ನಡೆಪುದು" ಇದಂತೂ ಸತ್ಯ. ಮಡುಗಟ್ಟಿದ ಚಿರಮೌನದ ನಡುವೆ ಹಾಗೆ ಸಣ್ಣ ಭಾವದೋಕುಳಿಯೊಂದು ಚೆಲ್ಲಿದಂತೆ.

    ReplyDelete