Tuesday 27 March 2012

ಪುನರ್ಜನ್ಮ





ಅಂಧಕಾರದ ಬೀದಿಯಲಿ ನಡೆಯುತಿರೆ ನಾನು 
ದಾರಿಯಲಿ ಎಡವಿದೆನೊಂದು ಮಾಯಾ ಸರೋವರವ ನೋಡಿ 
ಹತ್ತು ಹಲವು ಕಥೆಗಳ ಒಡಲಾಳದಲಿ ಅಡಗಿಸಿ ಮೆರೆಯುತ್ತಿದ್ದ 
ಮೋಹಕ ತಾಣವದು, ನಾ ಆ ಕಥೆಯೊಳು ಹೆಜ್ಜೆ ಇಡಲು 
ಪ್ರಪಂಚದಿರುವಿಕೆ ಮರೆತು ಕಳೆದು ಹೋದೆ 

ಮನ ಮೋಹಕ ದೃಶ್ಯವದು, ಕೊರೆವ ಚಳಿಯಲಿ 
ರಂಗು ರಂಗಿನ ಹೂವ ಹೊದಿಕೆಯ ಸಿಂಗಾರದಿ 
ಕಂಪು ಬೀಸುತ ನಿಂತ ಮರಗಳು, ಹೊನ್ನ ವರ್ಣದಿ
ಹೊಳೆವ ಬೀದಿಯು, ಮಾರು ಹೋಯಿತು ಮನ 
ಬೆಳಕ ದೀಪದಿ ಹೊಳೆವ ಅರಮನೆಯ ನೆರಳು 
ಅವಳಿಯಂತೆ ಕಂಡಿತಾಗ

ಕಥೆಯಾಳಕೆ ಇಳಿದು ನಾ ಹೋಗುತಿರೆ 
ಆ ಮೈ ಮರೆವು, ಆ ಸೆಳೆವು ಕಣ್ಣ ಅಂಚಿನಲಿ
ನೀರ ಹನಿ ಉರುಳಿದಂತೆ, ಅದರಲಿ ಮನ 
ತೋಯ್ದಂತೆ, ಚಿತ್ರ ವಿಚಿತ್ರ ಕಲ್ಪನೆ 
ಅಲ್ಲಿಹವು ಹಂಸ, ಜಿಂಕೆ, ಮೊಲ, ಪಕ್ಷಿ ಸಂಕುಲ 
ಮೈ ಮರೆತ ಗಾಳಿ, ಸರಸವಾಡುತಿಹ ರವಿ ಕಿರಣಗಳು 
ಸರೋವರ ಮೈದಳೆದು ನಿಂತಿತ್ತು ಮದುಮಗಳಂತೆ 

ಅದೇನೋ ಭಯ, ಅದರಲ್ಲೇ ಒಂದು ಶಾಂತ ಭಾವ, 
ಒಂದು ಕಿರುನಗೆ, ಮತ್ತೊಂದು ದಿಗಿಲು ನೋಟ, 
ಮತ್ತಿಷ್ಟು ಹನಿಧಾರೆ ಕಣ್ಣಲಿ, ಒಲವಿನ ಸಿಹಿ ಅಪ್ಪುಗೆಯನುಭವ 
ಮುಂದುವರೆಯಿತು ಭಾವ ಪರವಶತೆ 
ಅಷ್ಟರಲೇ ಈ ಲೋಕದಲಿ ಎಂದೋ ವಿಹರಿಸಿದ ನೆನಪು 

ತಾಯ ಗರ್ಭದಲಿ ಬೆಚ್ಚಗೆ ಒಲವಿನ ಧಾರೆ ನಡುವೆ
ಮಲಗಿದ್ದೆ, ಪ್ರೀತಿ ಅನುರಾಗದ ರಕ್ಷೆಯಿತ್ತು 
ಪಳಗಿಸಿತ್ತು ಆ ಭಾವ ಈ ಕ್ರೂರ ಜಗಕೆ ಬರಲು 
ಮೀನಿನಂತೆ ಉಸಿರಾಡುತ್ತಿದ್ದೆ ಅಲ್ಲಿ 
ಹೊರಗೆ ಬಂದೊಡೆ ಒದ್ದಾಡಿದೆ ವಿಲ ವಿಲನೆ
ಆಗಲೂ ಅತ್ತಿದ್ದೆ, ಆಸರೆ ನೀಡಿತ್ತವಳ ಒಲವಿನಪ್ಪುಗೆ
ಶಾಂತಿಯಾವರಿಸಿತು ನನ್ನಲಿ, ಬಾಳುವ ಹೊಸ 
ಆಸೆ ಅಂಕುರಿಸಿತಾಗ

ಅಷ್ಟರಲೇ ಒಂದು ಮೃದು ತಳ್ಳುವಿಕೆ
ಜಗದಂದ ಸವಿ ಕಂದ ಎಂದೆನಗೆ ಹೇಳಿದಳು 
ನಾನಾಗಲೂ ಪುಟ್ಟ ಮಗು, ಬಿಡಲೊಲ್ಲೆ ಅವಳಾಸರೆ
ಗಟ್ಟಿಯಾಗಿ ಹಿಡಿದಿದ್ದ ಅವಳ ಕೈ ಬಿಡಲು ಮನವಿಲ್ಲ 
ಆದರೂ ಆಗಸದೆತ್ತರಕೆ ಹಾರುವ ಧೃಡ ಆಸೆ ಮೂಲೆಯಲಿ 
ಒಡಿದೆನು ತುಸು ದೂರ, ಹಿಂತಿರುಗಿ ನೋಡಲು ಅವಳನು 
ಆಕೆಯ ತೀಕ್ಷ್ಣ ನೋಟ ಹೇಳಿತು--
"ಮತ್ತೆ ಹುಟ್ಟುವೆ ನೀನು, ಅಲ್ಲಿರುವೆ ನಾನು"

1 comment:

  1. ಆ ಮೃದು ತಳ್ಳುವಿಕೆಯಲ್ಲಿ ಈ ಬೆಳಕ ಜಗತ್ತಿಗೆ ಬಂದು ಕಣ್ಣು ಬಿಟ್ಟು ನಿಂತ ಮೇಲೆ ಮತ್ತೆ ತೆರಳುವಾಸೆ, ಆ ಮಾನಸ ಸರೋವರದ ಶಾಂತ ತಪ್ಪಲಲ್ಲಿ ನವಮಾಸದ ಬೆಸುಗೆಗೆ ಗಟ್ಟಿತನ ಕೊಡುವಾಸೆ. ಬಂದಾಗಿದೆ ಮತ್ತೆ ತಿರುತಿರುಗಿ ಅದೇ ಕರುಳಬಳ್ಳಿಗೆ ಹೂವಾಗುವಾಸೆ. ಪುನರ್ಜನ್ಮದ ಬಯಕೆ.
    ಚೆನ್ನಾಗಿದೆ ಪರೇಶ್, ಭಾವದುಂಧುಭಿ.

    ReplyDelete