Saturday, 19 November 2011

ಡೊಂಬರಾಟದ ಹುಡುಗಿ......


       ಆ ದಿನ ಶನಿವಾರ ಮುಂಜಾನೆ. ಆಫೀಸಿಗೆ ರಜಾ ದಿನ. ವಾರದಲ್ಲಿ ತುಂಬಾ ಆಲಸ್ಯ ಮುತ್ತಿಕೊಳ್ಳುವ ದಿನ ಶನಿವಾರವೇ ಅನಿಸುತ್ತೆ. ಊಟದ ಹೊತ್ತಿನಲ್ಲಿ  ತಿಂಡಿ ಸಂಜೆಯಾದ ಮೇಲೆ ಊಟ ಮಾಡಿಕೊಂಡು ಆಗಾಗ ಮಲಗಿ ಎದ್ದು ಕತ್ತಲಾದ ಮೇಲೆ ದಿನ ಮುಗಿಯಿತೆಂಬ ಅರಿವಾಗುವುದು. ಅಂಥದ್ದರಲ್ಲಿ  ಆ ಶನಿವಾರ ಸ್ವಾತಂತ್ರ್ಯೋತ್ಸವ. ಏನೋ ಹುರುಪು. ಬೆಳಗ್ಗೆ ಬೇಗ ಎದ್ದು ಧ್ವಜಾರೋಹಣದಲ್ಲಿ ಪಾಲ್ಗೊಳ್ಳಬೇಕೆಂಬ ಗಟ್ಟಿ ಮನಸ್ಸು ಮಾಡೇ ಹಿಂದಿನ ದಿನ ರಾತ್ರಿ ಮಲಗಿದ್ದೆ. ಕೊನೆಗೂ ಬೆಳಿಗ್ಗೆ ಬೇಗ ಏಳುವಲ್ಲಿ ಸಫಲನಾದೆ. ಎದ್ದು ಸ್ನಾನ ಮಾಡಿ ಬಿಳಿ ಬಟ್ಟೆ ಹಾಕಿ, ಎಲ್ಲೋ ಇದ್ದ ನನ್ನ ಧೂಳು ಹಿಡಿದ ಬೂಟನ್ನು ತೆಗೆದು ಅದನ್ನು ಒರೆಸಿ ಹಾಕಿಕೊಂಡು, ಮುಂಜಾನೆಯ ಚುಮು ಚುಮು ಮಂಜಿನಲ್ಲಿ, ನನ್ನ ದ್ವಿಚಕ್ರ ವಾಹನದ ಮೇಲೆ ಹೊರಟಿತು ನನ್ನ ಸವಾರಿ. ಸ್ಮೃತಿಪಟಲದಲ್ಲಿ ಆ ಶಾಲಾ ದಿನಗಳ ಸ್ವಾತಂತ್ರೋತ್ಸವದ ದೃಶ್ಯಗಳು ಛಕ್ಕನೆ ಬಂದು ಹೋಗುತ್ತಾ ನನ್ನನ್ನು ಭಾವ ಪರವಶವಾಗಿಸುತ್ತಿದ್ದವು.
            ನನ್ನ ಮನೆಯಿಂದ ಒಂದು ಕಿಲೋ ಮೀಟರ್ ದೂರವಿರುವ ಒಂದು ಸರ್ಕಾರಿ ಶಾಲೆಯಲ್ಲಿ ಧ್ವಜಾರೋಹಣದಲ್ಲಿ ಪಾಲ್ಗೊಂಡು, ಆ ಮಕ್ಕಳನ್ನು ನೋಡುತ್ತಾ ಮೈ ಮರೆತೆ.ಅವರ ಆ ಸಮವಸ್ತ್ರ , ಆ ಶಾಲೆಯ ಕಟ್ಟಡ, ಆ ವಾತಾವರಣ ನನ್ನನ್ನು ಹತ್ತು ವರ್ಷ ಹಿಂದೆ ತೆಗೆದುಕೊಂಡು ಹೋಯಿತು. ಧ್ವಜಾರೋಹಣ ಮುಗಿಸಿ ಭಾವ ಪರವಶತೆಯಿಂದ ಶಾಲೆಯ ಕಾಂಪೌಂಡ್ ಹೊರಗೆ ಬಂದು ಶಾಲೆಯ ಎದುರೇ ಇರುವ ನನ್ನ ನೆಚ್ಚಿನ ಹೋಟೆಲ್ ಒಂದರಲ್ಲಿ ಇಡ್ಲಿ ವಡೆ ಮೇಯುತ್ತ, ಕಾಫಿ ಸವಿಯುತ್ತಿರುವಾಗ ನನ್ನ ಗಮನ ರೋಡಿನ ಆಚೆ ನಡೆಯುತ್ತಿದ್ದ ಡೊಂಬರಾಟದ ಕಡೆಗೆ ಹೋಯಿತು.
           ಊರಲ್ಲಿ ಚಿಕ್ಕವನಿದ್ದಾಗ ನೋಡಿದ್ದು. ಆಮೇಲೆ ಯಾವಾಗಲೂ ಡೊಂಬರಾಟ ನೋಡಿದ ನೆನಪಿಲ್ಲ.ಬೇಗ ಬೇಗ ತಿಂದು, ಹೊರಗೆ ಬಂದು ಕಾಫಿ ಸವಿಯುತ್ತ ಬಹಳ ಕುತೂಹಲದಿಂದ ಡೊಂಬರಾಟ ನೋಡಲಾರಂಭಿಸಿದೆ. ಅಲ್ಲಿನ ಕೇಂದ್ರಬಿಂದು ಅಜಮಾಸು ಎಂಟು ವರ್ಷದ ಮುದ್ದು ಬಾಲಕಿ. ಕಂಬಕ್ಕೆ ಕಟ್ಟಿರುವ ಹಗ್ಗದ ಮೇಲೆ ತಮಟೆಯ ಶಬ್ಧಕ್ಕೆ ತಕ್ಕಂತೆ ಲಯ ಬದ್ಧವಾಗಿ ನಡೆಯಲಾರಂಭಿಸಿದಳು. ನೋಡಿ ಒಮ್ಮೆ ಭಯವಾಯಿತು, ಹಾಗೆ ತಲೆ ಮೇಲೆ ತಂಬಿಗೆಯನ್ನಿಟ್ಟು ನಡೆಯಲು ಶುರು ಮಾಡಿದಳು.ನನಗೆ ಕುತೂಹಲ ಜಾಸ್ತಿ ಆಯ್ತು. ಸಂಪೂರ್ಣವಾಗಿ ಅದರೊಳಗೆ ಲೀನನಾಗಲಾರಂಭಿಸಿದೆ. ಆ ಗಲಾಟೆಯ ಮಧ್ಯೆ ನನಗೆ ಕಾಣುತ್ತಿದ್ದುದು ಆ ಪುಟ್ಟ ಕಂದಮ್ಮನೊಬ್ಬಳೇ. ವಿಧ ವಿಧವಾಗಿ ನಡೆಯಲಾರಂಭಿಸಿದಳು. ಒಂಟಿ ಕಾಲಿನಲ್ಲಿ, ಕಾಲ ಕೆಳಗೆ ತಟ್ಟೆ ಇಟ್ಟು, ಮತ್ತೂ ಹಲವು ಬಗೆಗಳು. ಆಟ ಮುಗಿಯಿತು.ಜನರೆಲ್ಲಾ ಖುಷಿಯಿಂದ ಚಿಲ್ಲರೆಯನ್ನು ತಟ್ಟೆಯಲ್ಲಿ ಹಾಕಿ ತಮ್ಮ ತಮ್ಮ ಕೆಲಸಕ್ಕೆ ಹೋದರು. ಆ ಕಂದನ ಅಮ್ಮ ಆಕೆಯನ್ನು ತನ್ನೆಡೆ ಎಳೆದು ಆಕೆಯ ಗಲ್ಲಕ್ಕೆ ಮುತ್ತಿಕ್ಕಿ, ಅವಳನ್ನು ಎತ್ತಿ ಕಂಕುಳಲ್ಲಿ ಇರಿಸಿ ಹೊರಡಳನುವಾಗುತ್ತಿರುವಾಗ ಓಡಿ ಹೋಗಿ ಅವಳನ್ನು ತಡೆಯುತ್ತಾ, ಆ ಕಂದಮ್ಮನಿಗೆ ಶಹಭಾಸ್ ಹೇಳಿ, ಅವಳ ತಾಯಿಯ ಹತ್ತಿರ ಕೇಳಿದೆ."ಈಕೆಯನ್ನು ಶಾಲೆಗೆ ಕಳಿಸುತ್ತಿರೇನು?". ಆಕೆಯ ಉತ್ತರ.."ಇಲ್ಲ..ಅವೆಲ್ಲ ನಮಗೆ ಆಗಿ ಬರಲ್ಲ". ಆ ಮುದ್ದು ಕಂದನ ಮುಗ್ಧತೆಯ ಕಣ್ಣುಗಳನ್ನೊಮ್ಮೆ ನೋಡಿ ಹೇಳಿದೆ-" ದಯವಿಟ್ಟು ಶಾಲೆಗೆ ಕಳಿಸಿ ಆಕೆಯನ್ನು. ತುಂಬಾ ಪ್ರತಿಭೆ ಇದೆ ಆಕೆಯಲ್ಲಿ. ಮುಂದೆ ದೊಡ್ಡ ವ್ಯಕ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ." ಅವಳು ನನ್ನ ಯಾವುದೇ ಮಾತನ್ನು ಕಿವಿಗೆ ಹಾಕಿಕೊಂಡಂತೆಕಾಣಲಿಲ್ಲ. ಮತ್ತೆ ಏನೇನೋ ಮನವೊಲಿಸುವ ಪ್ರಯತ್ನ ಮಾಡಿದೆ. ಅವರೆಲ್ಲಿರುವುದೆಂದು ಕೇಳಿದೆ. ಅವರು ಉಳಿಯುವುದಕ್ಕೆ ಯಾವುದೂ ಸ್ಥಿರವಾದ ಜಾಗವೊಂದಿಲ್ಲ ಎಂದು ತಿಳಿಯಿತು.ನನ್ನ ಪುಟ್ಟ ಪ್ರಯತ್ನ ಫಲ ಕಾಣಲಿಲ್ಲ. ಅವರ ತಂಡ ಮತ್ತೆಲ್ಲೋ ಡೊಂಬರಾಟ ಮಾಡಲು ಸನ್ನದ್ಧರಾಗಿ ಹೊರಟಿತು. ಪೆಚ್ಚು ಮೋರೆ ಹಾಕಿ ತಿರುಗಿ ಹೋಗಲಣಿಯಾದಾಗ ಆ ಪುಟ್ಟ ಬಾಲೆಯ ಪ್ರಕಾಶಮಾನ ಕಣ್ಣುಗಳು ನನ್ನನ್ನು ಪಿಟಿ ಪಿಟಿ ನೋಡುತ್ತಿತ್ತು.ಹತ್ತು ರೂಪಾಯಿ ತಟ್ಟೆಯಲ್ಲಿ ಹಾಕಿ ಮನೆಗೆ ಬಂದೆ. 
                      ಇಂತಹ ಎಷ್ಟು ಮಕ್ಕಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವರೋ ಎಂಬ ಯೋಚನೆ ಎಂದೂ ಕಾಡುತ್ತಿರುತ್ತದೆ. ಅಲ್ಲಿ ನಿಜವಾದ ಕಲೆ ಇದೆ. ಆ ಪುಟ್ಟ ಬಾಲೆಯ ಕಣ್ಣಲ್ಲಿ ದೊಡ್ಡ ಕನಸುಗಳಿವೆ. ಆಕೆಯ ಕೈ ಹಿಡಿದು ನಡೆಸುವ ಮನಸೊಂದು ಬೇಕಾಗಿದೆ. 

1 comment:

  1. ಚೆನ್ನಾಗಿದೆ ಪರೇಶರೇ.. ಒಳ್ಳೆಯ ಮಾಹಿತಿ Kannada Blog ಸತೀಶರಿಂದ :-)
    ಹಿಂದೊಮ್ಮೆ ನಾನು "ದೊಂಬರಾಟದ ಹುಡುಗರು ನಾವು" ಎಂದು ಬರೆದದ್ದು ನೆನಪಾಯಿತು :-)

    ReplyDelete