Friday 9 December 2011

ದೇವದಾಸಿ



ಗೆಜ್ಜೆ ಕಟ್ಟಿ ಬಂದಳವಳು ವೈಯ್ಯಾರದಿ
ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತ
ಜನಗಣವದು ಶಿಳ್ಳೆ ಚಪ್ಪಾಳೆಯಲಿ ಮುಳುಗಿ
ತೇಲಿತವಳ ನೃತ್ಯದ ನಶೆಯಲಿ

ಹೊಳೆವ ಕಾಡಿಗೆ ಕಣ್ಣುಗಳು
ಮುಖದಲಿ ಮಂದಹಾಸದ ಮಿನುಗು
ಅದ ನೋಡಿ ತಮ್ಮ ಖುಷಿಯ ಜೋಳಿಗೆ
ತುಂಬಿಸಿಕೊಳ್ಳುತಿಹರು ಮಹಾಜನರು

ಹೋದರೆಲ್ಲ ತಂತಮ್ಮ ಮನೆಗೆ
ಗೆಜ್ಜೆ ಕಳಚಿದಳಿವಳು, ಒರೆಸಿದಳು ಕಾಡಿಗೆಯ;
ಕಾಣುತಿವೆ ನಗುವ ಹಿಂದಿನ ಕರಾಳ ಭಾವಗಳು
ಜೋಡಿ ಕಂಗಳಲಿ, ಹೊರಗೆ ಬರಲಾಗದೆ
ಒದ್ದಾಡುತಿರುವ ಕನಸಿನ ಛಾಯೆಗಳು

ಆಗಿನ್ನೂ ಪ್ರಪಂಚವನರಿಯದ ವಯಸು
ಕೇರಿಯಲಿ ಗೆಳತಿಯರೊಡೆ 
ಆಡುತಿಹಳಿವಳು ಚೆಲುವಲಿ ಆಟ,
ಕಣ್ಣಲ್ಲಿ ಹುದುಗಿದ ಮುಗ್ಧತೆ;
ಬಂದರು ನಾಯಕರ ಪಟ್ಟಿ ಕಟ್ಟಿ ತಿರುಗುವವರು
ತಳ್ಳಿದರಿವಳನು ಮಾಯಾ ಕೂಪಕೆ

ಬರುವರೀಗ ಕೆಲವರು ನೃತ್ಯದ ಸವಿ ಸವಿಯಲು
ಮತ್ಹಲವರು ತಂಪುಗೊಳಿಸಲು ಕಾಮದ ಕಣ್ಣನು
ಕೆಲವರು ಚೇಷ್ಟೆಗೆ, ಸಮಯ ಕಳೆಯಲು
ಕಾಯುತಿಹರು ಕಾಮತೃಷೆಯ ನೀಗಿಸಿಕೊಳ್ಳಲು

ಕುಣಿಯುತಿಹಳಿವಳು ಬದುಕಿನ ನಾಟಕದಲಿ
ಎಸೆದಿಹಳು ಮನಸನು ಕಾಮನ ಕೇರಿಯಲಿ
ಅನುಭವಿಸುತಿಹರು ಜನ ಚಿತ್ರ ವಿಚಿತ್ರ ಖುಷಿಯ,
ಇವಳ ಮಾನಸ  ಸಮಾಧಿಯ ಮೇಲೆ
ಹೆಣ್ಣಲ್ಲವೇ ಇವಳು, ಸಂಸಾರದ ಕಣ್ಣಲ್ಲವೇ?

No comments:

Post a Comment