Wednesday 22 February 2012

ಬದುಕಿಗೊಂದು ಬೆಳಕಿಂಡಿ





ನನ್ನ ಅಪ್ಪ ಅಮ್ಮ ಬೆಂಗಳೂರಿಗೆ ಬಂದಿದ್ದರು. ನನ್ನ ಮನೆಯಲ್ಲಿ ಉಳಿಯಲು. ಕಾಂಕ್ರೀಟಿನ ಕಾಡಿನ ಮಧ್ಯೆ, ಬಿಡುವಿಲ್ಲದ ಜೀವನ ನಡೆಸುವ ಜನ ಜಂಗುಳಿಯ ನಗರಿಯಲ್ಲಿ ಅಕ್ಕ ಪಕ್ಕದ ಮನೆಯವರ ಜೊತೆ ಸ್ನೇಹ ಹೋಗಲಿ, ಪರಿಚಯವಿರುವುದೂ ಕಷ್ಟದ ಮಾತು. ಎಷ್ಟೋ ದಿನ ಕಳೆದಿದ್ದವು ಅಪರಿಚಿತನೊಬ್ಬನ ಜೊತೆ ಸ್ನೇಹದ ಕೊಂಡಿ ಬೆಳೆಸಿ.

ಅಮ್ಮನ ಜೊತೆ ಮನೆಯ ಬಾಲ್ಕನಿಯಲ್ಲಿ ನಿಂತಿದ್ದೆ. ಅಲ್ಲೇ ಎದುರು ಮನೆಯೊಂದು ಇದೆ ಎಂದು ಗಮನಿಸಿ ಎಷ್ಟು ದಿನವಾಗಿದೆಯೋ ತಿಳಿದಿಲ್ಲ.ಅಷ್ಟರಲ್ಲೇ ಯಾರೋ ಹೆಂಗಸು ನಮ್ಮ ಕಡೆ ಕೈ ಬೀಸಿ ಕರೆದಂತಾಯಿತು. ಮತ್ತೆ ನೋಡಿದೆ. ನಮಗೇ ಹೌದೋ ಅಲ್ಲವೋ ಎಂದು.. ಆಕೆ ನಮ್ಮನ್ನೇ ಕರೆಯುತ್ತಿದ್ದಳು. ಮನೆಯ ಎದುರಿರುವ ಗಿಡದಿಂದ ಕರಿಬೇವನ್ನು ಕಿತ್ತು ನಮಗೇ ಬೇಕೋ ಎಂದು ಸನ್ನೆಯಿಂದಲೇ ಕೇಳಿದಳು. ಆಶ್ಚರ್ಯ ನಮಗೆ. ಅವಳ ಇರುವಿಕೆಯ ಪರಿವೆಯೇ ಇಲ್ಲದ ನಮಗೆ ಪ್ರೀತಿಯಿಂದ ಏನನ್ನೋ 
ಕೊಡುವ ಮನಸ್ಸು ಮಾಡಿದ್ದಳು.

ಅವಳ ನಯ ವಿನಯಕ್ಕೆ ಮರುಳಾಗಿ ನಮ್ಮ ಅಮ್ಮ ಕೆಳಗೆ ಹೋಗಿ ನಸು ನಕ್ಕು ಅವಳಿಂದ ಕರಿಬೇವಿನ ಎಸಳಿಷ್ಟನ್ನು ತೆಗೆದುಕೊಂಡು ಧನ್ಯವಾದ ಅರ್ಪಿಸಿದರು. ದೂರದಿಂದ ನೋಡುತ್ತಿದ್ದೆ ನಾನು. ಅವಳ ಮುಖದ ಮೇಲಿನ ನಸು ನಗು ಪ್ರಕಾಶಮಾನ ಸೂರ್ಯ ಕಿರಣಗಳನ್ನೂ ಮೀರಿಸುವಂತಿದ್ದವು. ಆ ಕಿರಣಗಳು ನನ್ನೆದೆಯ ಕಣ್ತೆರೆಸಿ ಹೇಳಿದವು: "ಪ್ರೀತಿ ಸಮರಸ ಸ್ನೇಹದ ಸವಿ ಹಂಚಲು ಕೇವಲ ಒಂದು ನಿಮಿಷ ಸಾಕೆಂದು"......

1 comment:

  1. ಹೌದು ಒಂದು ಕಿರುನಗು ಕೂಡ ಅದೆಷ್ಟೋ ಬಂಧ ಕಟ್ಟುತ್ತದೆ

    ReplyDelete