Saturday 25 February 2012

ಬೋಳು ಮರ





ದಟ್ಟ ಕಾಡಿನ, ಹೃದಯ ಜಾಗದಿ 
ಇರುವುದೊಂದು ಬೋಳು ಮರ 
ಚೆಲುವು ಮಾಸಿದೆ, ಜೀವ ಸೋತಿದೆ 
ಬಳಲಿ ಬೆತ್ತಲೆ ನಿಂತಿದೆ 

ಪ್ರೀತಿ ಧಾರೆಯ ಹೀರ್ವ ಬೇರದು
ಧರೆಗೆ ಒರಗಿ ಮಲಗಿದೆ 
ನೆರಳ ನೀಡಿದ ಕೊಂಬೆಗಳವು
ಕೊರಳು ಮುರಿದು ಬಿದ್ದಿವೆ 

ಅಂದು ಹಸಿರು, ಎಂಥ ವೈಭವ 
ದೃಷ್ಟಿ ಬೀಳುವ ತರದಲಿ 
ಸುಮಂಗಲಿಯಾ ಸಿರಿಯ ವೈಖರಿ 
ಮಾಸಿ ವಿಧವೆಯು ಆಗಿದೆ 

ಸುತ್ತ ಮುತ್ತಲು ಹತ್ತು ಮರಗಳು 
ಹಸಿರನುಟ್ಟು ಕುಣಿಯಲು 
ಇದ್ದ ಊರಿನ ಪರಿವೆಯಿಲ್ಲದೆ 
ಸ್ಥಬ್ಧಳಾಗಿ ನಿಂತಿದೆ 

ಅಂದು ಹಕ್ಕಿಯ ಬಳಗಕೆಲ್ಲ 
ಆಯಿತದುವು ಆಲಯ 
ಇಂದು ಅದಕೇ ಇಲ್ಲ ಆಸರೆ 
ಬಿಟ್ಟು ನಿಂತಿದೆ ಆಸೆಯ 

ಏನೇ ಆದರೂ, ಎಷ್ಟು ಸೋತರೂ 
ಧೈರ್ಯಗೆಡದೇ ನಿಂತಿದೆ 
ಚಿಗುರಿಪನೋ, ಉರುಳಿಸುವನೋ
ದೈವ ಮನಸಿಗೆ ಬಿಟ್ಟಿದೆ 

4 comments:

  1. ಪರೆಶಣ್ಣ, ಬೋಳು ಮರದ ವ್ಯಥೆಯನ್ನ ತುಂಬಾ ಚಂದವಾಗಿ ಬಣ್ಣಿಸಿದ್ದೀರಿ.. ಕವಿತೆಯ ರೀತಿ ಉತ್ಕೃಷ್ಟವಾಗಿದೆ..

    ReplyDelete
  2. ಮನಸ್ಸು ಕದಲಿಸಿ ಹಾಕಿದ ಕವನ. ಇದು ನನ್ನದೇ ಭವಿಷ್ಯ ಚಿತ್ರಣ. ಯಾಕೋ ಮನಸ್ಸು ವಿಹ್ವಲವಾಯಿತು. ಕಣ್ಣಲ್ಲಿ ನೀರ ಪಸೆ.

    ನನ್ನ ಬ್ಲಾಗಿಗೂ ಸ್ವಾಗತ...

    ReplyDelete
  3. ಭಾವಪೂರ್ಣ ಕವಿತೆ ಸರ್.. ನಿಜಕ್ಕೂ ಇದನ್ನು ಯಾರಾದರೂ ಹಾಡಿದರೆ ಉತ್ತಮ ಭಾವಗೀತೆ.. ನಾವು ಓದುತ್ತ ಓದುತ್ತ ಹಾಡೋಕ್ಕೆ ಪ್ರಯತ್ನ ಮಾಡಿದೆವು.. ಆದರೆ ನಮ್ಮ ಹಾಡು ನಮಗಷ್ಟೇ ಚೆಂದ ಇರುತ್ತೆ.. ನೀವು ಕೇಳಿದರೆ ಅದು ಹಾಡು ಅನ್ನಿಸೋದಿಲ್ಲ .. ಬರೀ ಮಾತುಗಳ ಹಾಗಿರುತ್ತೆ.. ಹೌದು ಸರ್.. ಕೆಲವು ಕವಿತೆಯ ಸೊಗಸನ್ನು ಅನುಭವಿಸಲು ಓದುತ್ತಾ ಓದುತ್ತ ಹಾಡಲು ಪ್ರಯತ್ನ ಮಾಡುವುದು ನಮ್ಮ ಹವ್ಯಾಸಗಳಲ್ಲಿ ಒಂದು .. ಯಾರ ಬಳಿಯೂ ಇಲ್ಲಿ ಇದನ್ನು ಹೇಳಿರಲಿಲ್ಲ.. ಈಗ ನಿಮ್ಮ ಮುಂದೆ ಈ ಮನದ ಮಾತು.. ನಿಜಕ್ಕೂ ಇದು ಉತ್ತಮ ಹಾಡಾಗುವ ಸಾಧ್ಯತೆ ಗೋಚರಿಸುತ್ತಿದೆ.. ಒಮ್ಮೆ ಇದನ್ನು ಹಾಡಿಸಲು ಅಥವಾ ನೀವೇ ಹಾಡಲು ಪ್ರಯತ್ನ ಮಾಡಿ.. ಮತ್ತು ಶುಭದಿನ .. :)

    ReplyDelete
  4. ಓದುಗ ತನ್ನನ್ನೇ ತಾನು ಬೋಳು ಮರವೆಂದು ಕಲ್ಪಿಸಿಕೊಂಡು ಓದಿಸಿಕೊಳ್ಳುವ ಸಶಕ್ತ ಕವಿತೆ ಇದು ಪರೇಶಣ್ಣ.. ನನಗೆ ಬೋಳು ಮರದ ಪ್ರತಿಮೆ ನಮ್ಮ ನಿಮ್ಮ ನಡುವೆ ತನ್ನ ಕುಟುಂಬ, ಜನ ಮತ್ತು ಸಮಾಜಕ್ಕಾಗಿ ದುಡಿದು ಬಸವಳಿದ ಹಿರಿಯ ಜೀವಗಳೊಂದಿಗೆ ತಾಳೆಯಾಗುತ್ತಿದೆ.. ಒಬ್ಬ ಸಶಕ್ತ ಕವಿಯ ತಾಕತ್ತನ್ನು ಓದುಗರ ಮುಂದೆ ಜಗಜ್ಜಾಹೀರು ಮಾಡುವಂತಹ ಕವಿತೆ ಇದು.. ತಾನು ಹಸಿರಿನಿಂದ ಮೈದುಂಬಿಕೊಂಡು ನಲಿಯುವಾಗ ಜೊತೆಗಿದ್ದವರಿಗೆ ಪೋಷಕಾಂಶಗಳನ್ನೂ ದೊರಕಿಸಿ ಸಹಾನುಭೂತಿ ತೋರಿಸಿ ಮಮತೆ ಧಾರೆ ಎರೆದ ಮನಕ್ಕೆ ಅದು ವಯಸ್ಸಾದ ಸಮಯಕ್ಕೆ ಯಾರ ಗಣನೆಗೂ ಬರದೆ ನೋವನುಭವಿಸುವ ಚಿತ್ರಣ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ.. ಕವಿತೆಯ ಲಯ ಮತ್ತು ಪದಪ್ರಯೋಗ ಮನಸ್ಸಿಗೆ ಆಪ್ತವೆನಿಸುತ್ತದೆ.. ತುಂಬಾ ಚೆನ್ನಾಗಿದೆ, ಮನಸ್ಸಿನಲ್ಲುಳಿಯುವ ಕವಿತೆ ಇದು..

    ReplyDelete