Friday 1 June 2012

ಧರ್ಮೋ ರಕ್ಷತಿ ರಕ್ಷಿತಃ


"ಪ್ಲೇಟ್ಲೆಟ್ ಕೌಂಟ್ ತುಂಬಾ ಕಡಿಮೆಯಾಗಿದೆ. ಗಂಟಲಿನಿಂದ ರಕ್ತ ಸ್ರಾವ ಆಗುತ್ತಿದೆ. ಆದರೂ ಸರಿಯಾಗುತ್ತದೆ ಎಂದು ಸುಮ್ಮನೆ ಕೂತಿದ್ದಾರೆ ನಿಮ್ಮಪ್ಪ" ಎಂದು ಅಮ್ಮ ಗದ್ಗದಿತ ಕಂಠದಿಂದ ಫೋನಿನಲ್ಲಿ ಹೇಳುತ್ತಿದ್ದರು. ಅಪ್ಪನೋ, ನಮ್ಮ ಮಾತು ಕೇಳುವವರಲ್ಲ. ವೈದ್ಯರು ಬೇರೆ. "ಸರಿಯಾಗುತ್ತೆ, ನನಗೆ ಗೊತ್ತೋ, ನಿಮಗೆ ಗೊತ್ತೋ" ಎಂದು ನಮ್ಮ ಬಾಯಿ ಮುಚ್ಚಿಸಿ ತಮ್ಮ ವೈದ್ಯಕೀಯ ಸೇವೆಯಲ್ಲಿ ಮಗ್ನರಾಗುತ್ತಿದ್ದರು. ಅಂದು ಯಾಕೋ ಮನಸ್ಸು ಕಿತ್ತು ಬಂತು. ಏನೂ ಸರಿ ಆಗುತ್ತಿಲ್ಲ ಎಂದನಿಸಿ, ಉಟ್ಟ ಬಟ್ಟೆಯಲ್ಲೇ ಹಾಸ್ಟೆಲ್ನಿಂದ ಹೊರಟೆ.ಯಾಕೋ ದೇಹ ಮನಸ್ಸು ಎರಡೂ ಜೊತೆಗಿರಲಿಲ್ಲ. ಆಡುವಾಗ ಕೀಲಿಗೆ ಪೆಟ್ಟಾಗಿ ಕೈಗೆ ದೊಡ್ಡ ಬ್ಯಾಂಡೇಜ್ ಬೇರೆ ಇತ್ತು. ಇದ್ಯಾವುದರ ಪರಿವೆಯೇ ಇಲ್ಲ. ದೇಹ ಎಲ್ಲೋ ಇದ್ದರೆ,
ಮನಸ್ಸು ಎಲ್ಲೋ ಇದೆ. ಹತ್ತು ಗಂಟೆಗೆ ಮೆಜೆಸ್ಟಿಕ್ ತಲುಪಿದೆ. ಯಾವುದೋ ಬಸ್ ಸಿಕ್ಕಿತು. ಮೊದಲೇ ಹೇಳಿದ್ದರೆ ಅಪ್ಪ ಬೇಡ ಎಂದು ಬಾಯಿ ಮುಚ್ಚಿಸುತ್ತಿದ್ದರು ಎಂದು ಗೊತ್ತಿತ್ತು.ಅದಕ್ಕೆ ಬಸ್ ಮೇಲೆ ಕುಳಿತು ಅಪ್ಪನಿಗೆ ಫೋನಾಯಿಸಿದೆ.- "ನಾನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ನಾಳೆ ಬೆಳಿಗ್ಗೆ ಬಂದು ತಲುಪುತ್ತಿದ್ದೇನೆ. ಬೇಗ ಹೊರಟು ಬನ್ನಿ ಎಂದು".

ಅಂತೂ, ಬೆಳಿಗ್ಗೆಯಾಯಿತು. ಬಸ್ ಬೇಗ ತಲುಪಿತ್ತು. ನಾನು ಬೇಗ ಆಸ್ಪತ್ರೆ ತಲುಪಿದ್ದೆ. ಅಪ್ಪ ಬಂದು ಮುಟ್ಟುವುದು ಇನ್ನೂ ತಡವಿತ್ತು. ಹಾಗೇ ಸ್ತಬ್ಧನಾಗಿ ಆಸ್ಪತ್ರೆಯ ಹೊರಾಂಗಣದಲ್ಲಿ ಕೂತಿದ್ದೆ. ಮನಸಲ್ಲಿ ಯಾಕೋ ಏನೇನೋ ದುಗುಡ. ಅಷ್ಟರಲ್ಲಿ ಯಾವುದೋ ಅಂಬುಲೆನ್ಸ್ ಬಂತು. ಎಲ್ಲರ ಚೀತ್ಕಾರ. ಚಿಕ್ಕ ಹುಡುಗನೊಬ್ಬ ಅಪಘಾತದಲ್ಲಿ ತೀರಿ ಹೋಗಿದ್ದ. ನನ್ನ ಕರುಳು ಕಿತ್ತು ಬರಲಾರಂಭಿಸಿತು. ಅಷ್ಟರಲ್ಲಿ ಅಪ್ಪ ಬಂದು ಮುಟ್ಟಿದರು. ಜೀವನದಲ್ಲಿ ಯಾವುದಕ್ಕೂ ಹೆದರಿಕೆ ಪಟ್ಟವರಲ್ಲ ಅವರು. ಏನೇ ದುಗುಡ ಇದ್ದರೂ ಒಮ್ಮೆ ಅವರ ಮುಖ ನೋಡಿದರೆ ಎಲ್ಲ ಸರಿಹೋಗುತ್ತಿತ್ತು.ಅಪ್ಪನ ಮುಖ ನೋಡಿದೆ. ಎಂದಿನಂತೆ ಚೈತನ್ಯ ತುಂಬಿದ ಮುಖವೇ. ನೋಡಿ ಸ್ವಲ್ಪ ಸಮಾಧಾನವಾಯಿತು. ಆಸ್ಪತ್ರೆಯೊಳಗೆ ಹೋದೆವು. ಎಲ್ಲ ಅಪ್ಪನ ಪರಿಚಯಸ್ಥರು.ಅಪ್ಪನಿಗೆ ಪರೀಕ್ಷೆ ಮಾಡುತ್ತಿದ್ದ ವೈದ್ಯರೂ ಸಹ ಅಪ್ಪನ ಹೆಸರು ತಿಳಿದವರೇ. ಹಾಗೇ ಪ್ರಾಥಮಿಕ ಪರೀಕ್ಷೆ ನಡೆಸಿದರು. ಪ್ಲೇಟ್ಲೆಟ್ ಕೌಂಟ್ ಕಡಿಮೆಯಾಗುವುದಕ್ಕೆ ಹಲವಾರು ಕಾರಣಗಳಿರುತ್ತವೆ.ಅದನ್ನು ಪತ್ತೆ ಹಚ್ಚುವುದು ದೊಡ್ಡ ಕೆಲಸ. ಒಂದು ಮೂವತ್ತು ತರದ ಟೆಸ್ಟ್ ಗಳನ್ನೂ ಅವರು ಬರೆದು ಕೊಟ್ಟರು. 

ಈಗ ಟೆಸ್ಟ್ ಶುರುವಾಯಿತು. ಮೇಲಿನಿಂದ ಕೆಳಗೆ ಎಲ್ಲ ಅಂಗಾಂಗಗಳ ಪರೀಕ್ಷೆ. ರಕ್ತ, ಮೂತ್ರ ಪರೀಕ್ಷೆ. ಒಂದಾದ ಮೇಲೊಂದು ಪರೀಕ್ಷೆಗಳು ಮುಗಿದವು. ಮದ್ಯಾಹ್ನ ಊಟ ಮಾಡಿ ಅಲ್ಲೇ ಸ್ವಲ್ಪ ಕಣ್ಣು ಮುಚ್ಚಿ ಕುಳಿತೆವು. ನನಗೇನೋ ಸ್ವಲ್ಪ ನಿರಾಳ. ಟೆಸ್ಟ್ ಎಲ್ಲ ನಾರ್ಮಲ್ ಇದೆ. ಏನೋ ಸಣ್ಣ ತೊಂದರೆ. ಮನೆಗೆ ಹೋಗಬಹುದು ಆರಾಮಾಗಿ ಎಂದು. ಅಷ್ಟರಲ್ಲಿ ವೈದ್ಯರು ಬಂದು, ಅವರ ವೈದ್ಯಕೀಯ ಭಾಷೆಯಲ್ಲಿ ಏನೋ ಮಾತಾಡಿಕೊಂಡರು. ಅಲ್ಪ ಸ್ವಲ್ಪ ಅರ್ಥವಾಯಿತು. "ಎಲ್ಲ ಸರಿಯಿದೆ. ನನಗೆ ಬೋನ್ ಮ್ಯಾರೋ ಬಗ್ಗೆ ಸ್ವಲ್ಪ ಅನುಮಾನ ಇದೆ. ಒಂದೆರಡು ದಿನ ಇಲ್ಲೇ ಅಡ್ಮಿಟ್ ಆಗಿ. ಕೂಲಂಕುಶ ಪರಿಶೀಲನೆಯಾಗಬೇಕು" ಎಂದರು."ಬೋನ್ ಮ್ಯಾರೋ" ಎಂಬ ಶಬ್ದ ಕೇಳಿದೊಡನೆಯೇ ಹೃದಯ ಕೈಯಲ್ಲಿ ಬಂದಂತಾಯಿತು. ಹಾಗೆಯೇ ಸ್ವಲ್ಪ ಸುಧಾರಿಸಿಕೊಂಡು ಒಂದು ರೂಂ ಬುಕ್ ಮಾಡಿ ಅಲ್ಲಿ ಅಡ್ಮಿಟ್ ಮಾಡಿಸಿ ಆಯ್ತು. ಹಾಗೇ ಸಾಯಂಕಾಲ ಬೋನ್ ಮ್ಯಾರೋ ಪರೀಕ್ಷೆ. ಅದನ್ನು ತೆಗೆಯುವಾಗ ಬಹಳ ನೋವಾಗುವುದು ಎಂದು 
ಕೇಳಿದ್ದೆ. ಆ ಪರೀಕ್ಷೆ ಮಾಡಲು ಬಂದ ರೋಗಶಾಸ್ತ್ರಜ್ಞ ರು ಅಪ್ಪನ ಹಳೆಯ ಸ್ನೇಹಿತರು. ಅಪ್ಪ ಅವರೊಡನೆ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಬೋನ್ ಮ್ಯಾರೋ ಸಾಂಪಲ್ ತೆಗೆದಿದ್ದಾಯಿತು.ಇನ್ನೆರಡು ದಿನದಲ್ಲಿ ರಿಪೋರ್ಟ್ ಬರುತ್ತದೆ ಎಂದು ಹೇಳಿದರು. ರೂಮಿಗೆ ಹೋಗಿ ಮಲಗಿದೆವು. ಆ ದಿನ ರಾತ್ರಿ ಅಪ್ಪ ನೋವಿನಿಂದ ನಿದ್ದೆಯಿಲ್ಲದೆ ನರಳುತ್ತಿದ್ದರು. ( ಬೋನ್ ಮ್ಯಾರೋ ಸಾಂಪಲ್ಅನ್ನು ಎಲುಬಿಗೆ ತೂತು ಮಾಡಿ ತೆಗೆಯುವುದರಿಂದ ಯಮ ಯಾತನೆ ನೀಡುತ್ತದೆ.) ಮೊದಲ ಬಾರಿ ಅಪ್ಪ ಆ ಥರದ ಯಾತನೆ ಪಟ್ಟಿದ್ದನ್ನು ನೋಡಿದ್ದು. ಎಂಥ ನೋವಿಗೂ ಹೆದರಿದವರಲ್ಲ ಅವರು. ಸುಡು ಜ್ವರದ ನಡುವೆ ಆಸ್ಪತ್ರೆಗೆ ಹೋಗಿ ರೋಗಿಗಳ ಸೇವೆ ಮಾಡುವುದನ್ನು ನೋಡಿದ್ದೇನೆ.

ಮುಂದಿನ ದಿನ ರಕ್ತ ಪರೀಕ್ಷೆ ಮಾಡಿದಾಗ, ಪ್ಲೇಟ್ಲೆಟ್ ಕೌಂಟ್ ತುಂಬಾ ಕಡಿಮೆಯಾಗಿತ್ತು. ಶುಗರ್ ಸಹ ಜಾಸ್ತಿಯಾಗಿತ್ತು. ಕೂಡಲೇ ಪ್ಲೇಟ್ಲೆಟ್ ಅನ್ನು ಕೊಡಬೇಕು ಎಂದು ವೈದ್ಯರು ಹೇಳಿದರು. ನಾವು ಆಸ್ಪತ್ರೆಯಲ್ಲಿರುವ ವಿಷಯ ದೊಡ್ಡ ವಿಷಯವಾಗಬಾರದೆಂದು ಅಪ್ಪ ಯಾರಿಗೂ ಹೇಳಿರಲಿಲ್ಲ. ಅಪ್ಪನದು ಬಿ ನೆಗೆಟಿವ್ ಗ್ರೂಪ್ ಬೇರೆ. ಆ ಗುಂಪಿನ ರಕ್ತ ಸಿಗುವುದು ಬಹಳ ಕಷ್ಟ. ಎಲ್ಲ ಬ್ಲಡ್ ಬ್ಯಾಂಕ್ ಸುತ್ತಾಡಿದೆ. ಎಲ್ಲೂ ಇಲ್ಲ. ಆಸ್ಪತ್ರೆಗೆ ಬಂದು ತಲುಪಿದೆ. ಪೆಚ್ಚು ಮೋರೆ ಹಾಕಿ ಅಪ್ಪನ ಮುಖ ನೋಡುತ್ತಿದ್ದೆ. ಅಪ್ಪ ನಗುತ್ತ ಹೇಳಿದರು."ಬ್ಲಡ್ ಸಿಕ್ಕಿತು" ಎಂದು. ನನಗಾಶ್ಚರ್ಯ.ಅಪ್ಪ ಹಲವು "ರಕ್ತ ದಾನ ಶಿಬಿರಗಳ"ನ್ನು ನಡೆಸುತ್ತಿರುತ್ತಾರೆ. ತುರ್ತು ಸಮಯದಲ್ಲಿ ರಕ್ತ ಬೇಕಾದವರಿಗೆ ಮಾರ್ಗದರ್ಶನ ನೀಡಲು ಅಪ್ಪನ ಹತ್ತಿರ ಒಂದು ಲಿಸ್ಟ್ ಇದೆ. ಅದರಲ್ಲಿ ನಮ್ಮ ಊರಿನವರ ಹೆಸರುಗಳಿವೆ ಅಷ್ಟೇ. ಅದರಲ್ಲಿ ಒಂದು ಹೆಸರಿಗೆ ಅಪ್ಪ ಕಾಲ್ ಮಾಡಿದರು. ಅವನು ಮುಂಬೈನಲ್ಲಿದ್ದ. ಆತ ಕೂಡಲೇ ಮಂಗಳೂರಿನಲ್ಲಿರುವ ತನ್ನ ಇಂಜಿನಿಯರ್ ಮಿತ್ರನೊಬ್ಬನಿಗೆ ಕಾಲ್ ಮಾಡಿದ. ಕೇವಲ ಅರ್ಧ ಘಂಟೆಯ ಅವಧಿಯಲ್ಲಿ ಆ ಮಹಾನುಭಾವ ತನ್ನ ಕೆಲಸ ಬಿಟ್ಟು ಬಂದು ರಕ್ತ ಕೊಟ್ಟು ಹೋದರು. ಯಾರೋ ತಿಳಿಯದು. ಯಾವ ಜಾತಿಯೋ, ಯಾವ ಧರ್ಮವೋ. ಆ ಸಮಯದಲ್ಲಿ ನಮ್ಮ ದೇವರು. ಆಗ ಅರ್ಥವಾಯಿತು ನಾವು ಮಾಡಿದ ಒಳ್ಳೆಯ ಕೆಲಸ, ಹೇಗೆ ಯಾವ ರೂಪದಲ್ಲಾದರೂ ಬಂದು ನಮಗೆ ಸಹಾಯ ಮಾಡುತ್ತದೆ ಎಂದು. 

ಹಾಗೇ ಆ ದಿನ ಕಳೆಯಿತು. ಅಮ್ಮನ ಫೋನ್ ಬಂದಿತ್ತು. ಏನು ಹೇಳುವುದು, ಏನು ಬಿಡುವುದು ತಿಳಿಯದಾಯ್ತು. ತಂಗಿ ಚಿಕ್ಕವಳು. ಯಾರ ಹತ್ತಿರ ಹಂಚಿಕೊಂಡು ನನ್ನ ದುಗುಡ ಕಡಿಮೆ ಮಾಡಿಕೊಳ್ಳುವುದು ತಿಳಿಯದಾಯ್ತು. ಸಿಡುಕುತ್ತಲೇ ಅಮ್ಮನ ಹತ್ತಿರ ಮಾತಾಡಿ ಫೋನ್ ಇಟ್ಟೆ. ಊಟ ಒಳಗೆ ಹೋಗುತ್ತಿಲ್ಲ. ಕೈಗೆ ದೊಡ್ಡ ಬ್ಯಾಂಡೇಜ್. ಮೈಯೆಲ್ಲಾ ಸೆಕೆ ಬೊಕ್ಕೆ. ತಲೆಯಲ್ಲಿ ಹುಚ್ಚು ಆಲೋಚನೆಗಳು. ಆ ನರಕದಲ್ಲಿ ನನಗೆ ಸ್ವಲ್ಪ ಶಕ್ತಿ ನೀಡುತ್ತಿದ್ದವನು ಆಸ್ಪತ್ರೆಯ ಕೆಳಗಿನ ಚಿಕ್ಕ ದೇವಾಲಯದಲ್ಲಿದ್ದ "ಗಣೇಶ". ದಿನಕ್ಕೆ ಹದಿನೈದು ಬಾರಿ ಅವನ ಹತ್ತಿರ ಮಾತಾಡಿ ಧೈರ್ಯ ತುಂಬಿಕೊಳ್ಳುತ್ತಿದ್ದೆ. `ಈ ಸುದ್ಧಿ ನಮ್ಮ ಸಂಬಂಧಿಕರಿಗೆ ಊರ ಜನರಿಗೆಲ್ಲ ತಿಳಿಯಲಾರಂಭವಾಯ್ತು . ಅಪ್ಪನ ಆಪ್ತರು, ಸಂಬಂಧಿಕರು, ಊರ ಜನರೆಲ್ಲಾ ಅಪ್ಪನನ್ನು ನೋಡಲಿಕ್ಕೆಂದೇ ಕಾರ್ ಮಾಡಿಸಿಕೊಂಡು ಆಸ್ಪತ್ರೆಗೆ ಬರಲಾರಂಭಿಸಿದರು. ಬಿ ನೆಗೆಟಿವ್ ಗುಂಪಿನ ರಕ್ತವುಳ್ಳ ಯುವಕರ ದೊಡ್ಡ ಗುಂಪೇ ಊರಿನಿಂದ ಬಂದಿತ್ತು. ಮನಸ್ಸಿಗೆ ಧೈರ್ಯ ಬಂತು. ಅಷ್ಟರಲ್ಲಿ "ಬೋನ್ ಮ್ಯಾರೋ" ರಿಪೋರ್ಟ್ ಕೂಡ ಬಂದಿತ್ತು. ಅದು ನಾರ್ಮಲ್ ಅಂತ ವೈದ್ಯರು ಹೇಳಿದಾಗ, ಶರ ವೇಗದಲ್ಲಿ ಓಡಿ ಗಣೇಶನಿಗೆ ದೀರ್ಘ ದಂಡ ನಮಸ್ಕಾರ ಹಾಕಿದೆ. ಹಾಗೇ ವೈದ್ಯರು ಬಂದು ಹೇಳಿದರು ಇದು ಕಾರಣವಿಲ್ಲದ ಕಾಯಿಲೆ. ತನ್ನಿಂದ ತಾನೇ ಸರಿಯಾಗಬೇಕು ಎಂದರು. ಆಹಾರ ಕ್ರಮವನ್ನು ಸಹ ಹೇಳಿದರು.ಡಿಸ್ಚಾರ್ಜ್ ಮಾಡಿಸಿ ಮನೆಗೆ ಬಂದೆವು.

ಮನೆಗೆ ಬಂದಾಕ್ಷಣ, ಅಪ್ಪನನ್ನು ನೋಡಲು ಅದೆಷ್ಟೋ ಜನ. ದಿನ ದಿನವೂ, ತಮ್ಮ ತೋಟದಲ್ಲಿ ಬೆಳೆದ ಸೊಪ್ಪು ತರಕಾರಿಗಳನ್ನು, ಅಪ್ಪನ ಪೇಷೆಂಟ್ಗಳು ಪ್ರೀತಿಯಿಂದ ತಂದುಕೊಡುತ್ತಿದ್ದರು. ನಾವು ಕಾಳಜಿ ತೆಗೆದುಕೊಳ್ಳುವುದಕ್ಕಿಂತ ಜಾಸ್ತಿ ಅಪ್ಪನ ಕಾಳಜಿ ತೆಗೆದುಕೊಳ್ಳುತ್ತಿದ್ದರು. ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲವು ಮಾತ್ರೆಗಳನ್ನೂ ಸಹ ವೈದ್ಯರು ನೀಡಿದ್ದರು. ಒಂದು ಕೋರ್ಸ್ ಮಾಡಿ ನಿಲ್ಲಿಸುವಂತೆ ಹೇಳಿದ್ದರು. ಆಗ ಕೌಂಟ್ ಜಾಸ್ತಿಯಾಗುವ ೧% ಸಾಧ್ಯತೆ ಇದೆ. ಅದಾಗದಿದ್ದರೆ, ಶಾಶ್ವತವಾಗಿ ಆ ಮಾತ್ರೆ ತೆಗೆದುಕೊಳ್ಳಬೇಕು ಎಂದಿದ್ದರು. ಆ ಮಾತ್ರೆಯ ಹಲವು ದುಷ್ಪರಿಣಾಮಗಳಿವೆ. ಬಿ.ಪಿ. ಮತ್ತು ಶುಗರ್ ಅನ್ನು ಸಹ ಅದು ಜಾಸ್ತಿ ಮಾಡುತ್ತದೆ ಎಂದು ತಿಳಿದೂ ಸಹ ಉಪಾಯವಿಲ್ಲದೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂತು.ಒಂದು ಕೋರ್ಸ್ ಮುಗಿಯಿತು. ಕೌಂಟ್ ಜಾಸ್ತಿಯಾಯಿತು. ಎಲ್ಲರ ಪ್ರೀತಿ ಹಾರೈಕೆಯೋ, ದೇವರ 
ಆಶಿರ್ವಾದವೋ, ಪುಣ್ಯದ ಫಲವೋ ತಿಳಿಯದು, ಅಂದು ಜಾಸ್ತಿಯಾದ ಕೌಂಟ್ ಮತ್ತೆ ಜಾಸ್ತಿಯಾಗುತ್ತಾ ಹೋಯಿತೇ ವಿನಃ ಕಡಿಮೆಯಾಗಲಿಲ್ಲ. 

ಇದೊಂದೇ ಅಲ್ಲ, ಇಂತಹ ಹಲವು ವಿಚಿತ್ರ ಕಾಯಿಲೆಗಳನ್ನು ಅವರು ಗೆದ್ದು ಬಂದಿದ್ದಾರೆ. ವೈದ್ಯಕೀಯವನ್ನು ವೃತ್ತಿಯನ್ನಾಗಿಸದೇ ಒಂದು ನಿಸ್ವಾರ್ಥ ಸೇವೆಯನ್ನಾಗಿಸಿಕೊಂಡು- "ವೈದ್ಯೋ ನಾರಾಯಣೋ ಹರಿ"ಎಂಬಂತೆ ಜನರ ದೃಷ್ಟಿಯಲ್ಲಿ ನಿಜವಾದ ದೇವರಾಗಿ, ಹಗಲಿರುಳೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಇವರನ್ನು ನೋಡಿ ನನ್ನ ಮನಸ್ಸಿನಲ್ಲಿ ಯಾವಾಗಲೂ ಒಂದು ಆಲೋಚನೆ ಬರುತ್ತಿತ್ತು- "ಯಾಕೆ ಇಷ್ಟು ಕಷ್ಟ ಪಡ್ತಾರೆ. ಆರಾಮಾಗಿ ದುಡ್ಡು ಮಾಡಿ ಮಜಾ ಮಾಡಬಹುದಲ್ಲ ಎಂದು." ಆದರೆ ಈ ಇಡೀ ಘಟನೆಯಲ್ಲಿ ನಾನು ಕಲಿತಿದ್ದೆಂದರೆ ದುಡ್ಡಿನಿಂದ ಎಲ್ಲವನ್ನು ಖರೀದಿಸಲು ಸಾಧ್ಯವಿಲ್ಲ. ಅಂದು ಅವರಿಗೆ ಹುಷಾರಿಲ್ಲದಿದ್ದಾಗ ಎಷ್ಟೋ ಜನ ಮರುಗುತ್ತಿದ್ದರು. ಎಷ್ಟೋ ಜನ ಅವರ ಕಾಳಜಿ ವಹಿಸುತ್ತಿದ್ದರು. ಆ ಪ್ರೀತಿಯೇ ಅವರನ್ನು ಗುಣಪಡಿಸಿದ ಔಷಧಿ. ಅವರು ಹಿಂದೂ, ಮುಸ್ಲಿಂ, ಕ್ರೈಸ್ತ ಎಂದು ಇವ್ಯಾವುದೇ ಧರ್ಮ ನಂಬಿದವರಲ್ಲ. ಯಾವ ಧರ್ಮವನ್ನು ಹಳಿದವರೂ ಅಲ್ಲ. ದೇವರು ಎಂದು ದೇವಾಲಯಕ್ಕೆ ಓಡಿ ಕೈ ಮುಗಿದು ಪೂಜೆ ಮಾಡಲೂ ಇಲ್ಲ. ಹಾಗೆಂದು ಖಂಡಿತ ನಾಸ್ತಿಕರಲ್ಲ. ಅಪ್ಪನ ಆಸ್ಪತ್ರೆಗೆ ಹೋಗಿ ಸ್ವಲ್ಪ ಹೊತ್ತು ಕುಳಿತರೆ ಅಲ್ಲಿ ಸರ್ವ ಧರ್ಮ ಸಮನ್ವಯತೆಯ 
ದೃಶ್ಯ ಖಂಡಿತ ಕಾಣಬಹುದು. ವೇದ ಉಪನಿಷತ್ ಓದಿಲ್ಲದಿದ್ದರೂ ಅದಕ್ಕೆ ತಕ್ಕಂತೆ ನಡೆದು "ಜನ ಸೇವೆಯೇ ಜನಾರ್ಧನ ಸೇವೆ" ಎಂಬ ಒಂದು ಸರಳ "ಧರ್ಮ" ವನ್ನು ಪಾಲಿಸಿದರು. ಅದೇ ಅವರನ್ನು ರಕ್ಷಿಸಿತು.

5 comments:

  1. ನಾವು ಮಾಡಿದ ಪುಣ್ಯ ಕೆಲಸವೇ ನಮ್ಮನ್ನು ರಕ್ಷಿಸುತ್ತದೆ ,ಯಾರಿಗೂ ಉಪಕಾರವಾಗದೆ ಕೇವಲ ದೇವರ ಸ್ಮರಣೆಯಿಂದ ಪುಣ್ಯ ಕಟ್ಟಿ ಕೊಳ್ಳುತ್ತೇವೆ ಅಂದರೆ ಅದು ಸುಳ್ಳು .ಜಾತಿ ,ಧರ್ಮ, ಬಡವ ಬಲ್ಲಿಗರೆಂಬ ಭೇದಭಾವವ ಬಿಟ್ಟು ನಮ್ಮಿಂದಾಗುವಷ್ಟು ಸಹಾಯ ಮಾಡಿದರೆ ಆದೇ ಜೀವಮಾನವಿಡಿ ಮಾಡಿದ ಸಾಧನೆ ಮತ್ತು ಪುಣ್ಯದ ಕೆಲಸ .

    ReplyDelete
  2. ಪರೇಶ್ ನಿಮ್ಮ ಲೇಖನ ಓದುತ್ತಿರುವಾಗ ಅಪ್ಪನ ಚಿತ್ರ ಕಣ್ಣಮುಂದೆ ಬಂದು ಕಣ್ಣು ಮಂಜಾಗಲಿಲ್ಲ ಎಂದು ಹೇಳಲಾರೆ. ನಿಮ್ಮ ಪಿತೃ ಪ್ರೇಮಕ್ಕೆ ಶರಣು... ಅಪ್ಪಂದಿರು ಹೇಳಿಕೊಳ್ಳದೇ ಎಷ್ಟೋ ಶ್ರಮ, ಕಷ್ಟ ಸಹಿಸಿರ್ತಾರೆ ಅದು ಬಾಹ್ಯ ಜಗತ್ತಿಗೆ ಗೊತ್ತಾಗದು, ಅಮ್ಮನದು ಕರುಳಕುಡಿಯ ಕಾಳಜಿಯಾದರೆ ಅಪ್ಪನದು ಮಕ್ಕಳೆಂಬ ಆಪ್ಯಾಯತೆ....ಇಬ್ಬರೂ ಇಲ್ಲದಿರೆ ನಮ್ಮ ಜನ್ಮ ಶೂನ್ಯ... ನಿಮ್ಮ ತಂದೆಯವರಿಗೆ ದೇವರು ಆಯುರಾರೋಗ್ಯ ನೆಮ್ಮದಿ ನೀಡಲಿ ಎನ್ನುವುದೇ ನಮ್ಮ ಪ್ರಾರ್ಥನೆ.

    ReplyDelete
  3. ನನ್ನ ಬಳಿ ಮಾತಿಲ್ಲ ಪರೇಶ್. ಈ ಲೇಖನದ ಬಗ್ಗೆ ಟಿಪ್ಪಣಿ ಕೊಡಲು ನಾನು ಶಕ್ತನಲ್ಲ. ಶ್ರೀಯುತರನ್ನು ನನ್ನ ಆದರ್ಶ ವ್ಯಕ್ತಿಯಾಗಿ ಸ್ವೀಕರಿಸಿದ್ದೇನೆ ಎಂದು ಹೇಳಬಲ್ಲೆನೆ ಹೊರತು ಬೇರಾವ ಮಾತಾಡಲು ನನಗೆ ತಿಳಿಯದು.

    ReplyDelete
  4. ಇತ್ತೀಚೆಗೆ ನಮ್ಮ ಅತ್ತೆಗೂ ಪ್ಲೇಟ್ಲೇಟ್ ಕೊರತೆ ಬಂದಿತ್ತು ೭ ಉನಿಟ್ ಬ್ಲಡ್ ಬೇಕಾಗಿತ್ತು ಆಗ ಗೆಳೆಯರೆಲ್ಲ ಪಾಪ ರಕ್ತದಾನ ಮಾಡಿದರು, ನಾವು ಮಾಡಿದ ಒಳ್ಳೆಯ ಕೆಲಸ ನಮ್ಮನ್ನು ಎಂದೆಂದಿಗೂ ಕಾಪಾಡುತ್ತದೆ

    ReplyDelete
  5. ತುಂಬ ಚನ್ನಾಗಿದೆ...ಒಂದು ಕ್ಷಣ ಕಣ್ಣುಗಳು ತೆವವಾದವು...ಅದ್ಬುತ ರಚನೆ.. ನಿರಂತರವಾಗಿ ಬರೆಯುತ್ತಿರಿ.

    ReplyDelete