Thursday 26 July 2012

ಆ ಜೀವದ ಬೆಲೆ ಇನ್ನೂರು ರೂಪಾಯಿಯೇ ?


"ವೈದ್ಯೋ ನಾರಾಯಣೋ ಹರಿಃ" ಎಂದು ಪುರಾಣಗಳಲ್ಲಿ ವೈದ್ಯನನ್ನು ದೇವತೆಗಳಿಗೆ ಹೋಲಿಸುತ್ತಾರೆ. ಭೂಮಿಯಲ್ಲಿರುವ ದೇವರು ಎಂದು ನಾವು ವೈದ್ಯರನ್ನು ಗೌರವಿಸುತ್ತೇವೆ. ಎಲ್ಲ ವೃತ್ತಿಗಳಿಗೂ ಮೀರಿದ ಪವಿತ್ರ ಗೌರವವುಳ್ಳ, ಗುರುತರ ಜವಾಬ್ದಾರಿಯುಳ್ಳ ವೃತ್ತಿಯೆಂದರೆ ಅದು ವೈದ್ಯಕೀಯ ವೃತ್ತಿ. ಎಲ್ಲಕ್ಕೂ ಮೀರಿದ ನಂಬಿಕೆಯನ್ನು ವೈದ್ಯರ  ಮೇಲಿಟ್ಟು  ನಮ್ಮ ಮತ್ತು ನಮ್ಮವರ ಜೀವದ ಜವಾಬ್ದಾರಿಯನ್ನು ವೈದ್ಯರಿಗೆ ಒಪ್ಪಿಸುತ್ತೇವೆ ಮತ್ತು ವೈದ್ಯ ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾನೆ ಎಂದು ಅಪೇಕ್ಷಿಸುತ್ತೇವೆ.

ಆದರೆ ಈ ವೈದ್ಯವೃತ್ತಿಗಷ್ಟೇ ಅಲ್ಲ, ಮಾನವೀಯತೆಗೇ ಕಳಂಕ ತರುವ ಹೃದಯ ಕಲಕುವ ದುರಂತ ಘಟನೆ ಜಲಂಧರ್ ನಲ್ಲಿ ನಡೆದಿದೆ. ಪಾಲಕರು ೨೦೦ ರೂಪಾಯಿ ಕೊಡಲಿಲ್ಲ ಎಂಬ ಕಾರಣಕ್ಕೆ ೬ ದಿನದ ಹಸುಗೂಸನ್ನು ಇನ್ಕ್ಯುಬೇಟರ್ ನಿಂದ ತೆಗೆದು ಜೀವ ಉಳಿಸುವ ವೈದ್ಯರೇ ಅದನ್ನು ಸಾವಿನ ಕೂಪದಲ್ಲಿ ಹಾಕಿ ರಾಕ್ಷಸೀ ಪ್ರವೃತ್ತಿಯನ್ನು ಮೆರೆದಿದ್ದಾರೆ. ಈ ದುಡ್ಡಿನ ಆಟದಲ್ಲಿ ಮಡಿದಿದ್ದು ಏನೂ ತಿಳಿಯದ, ಏನೂ ತಪ್ಪಿಲ್ಲದ ಪುಟ್ಟ ಹಸುಗೂಸು. ಆ ಜೀವಕ್ಕೆ ಇರುವ ಬೆಲೆ ಬರೀ ಇನ್ನೂರು ರೂಪಾಯಿಯೇ?

ವೈದ್ಯಕೀಯ ವೃತ್ತಿಯ ಘನತೆಯನ್ನು ಅರಿತು, ಅದರಂತೆ ಪ್ರತಿಜ್ಞೆ ಮಾಡಿ ವೃತ್ತಿ ಸ್ವೀಕರಿಸಿದ ವೈದ್ಯರು ವೃತ್ತಿ ಧರ್ಮವಷ್ಟೇ ಅಲ್ಲದೆ, ಮಾನವೀಯತೆಯನ್ನೇ ಮರೆತು ದೇಶ ತಲೆ ತಗ್ಗಿಸುವ ಕೆಲಸ ಮಾಡಿರುವುದು ವಿಪರ್ಯಾಸ. ವೈದ್ಯಕೀಯ ಒಂದು ಉದ್ಯಮವಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣವೇನೋ ಎಂದನಿಸುವುದರಲ್ಲಿ ತಪ್ಪಿಲ್ಲ. ಎಲ್ಲ ಕ್ಷೇತ್ರಗಳಂತೆ ಈ ಕ್ಷೇತ್ರದಲ್ಲೂ ಭೃಷ್ಟತೆ ಎದ್ದು ಕಾಣುತ್ತಿದೆ. ದಿನಕ್ಕೊಂದು ರೋಗದ ಹಣೆಪಟ್ಟಿ ತೊಡಿಸಿ ವಾರಗಟ್ಟಲೆ ಆಸ್ಪತ್ರೆಯಲ್ಲಿಡಿಸಿ ದುಡ್ಡು ಲೂಟಿ ಮಾಡುವ ಕೆಲವು ಹೈ ಟೆಕ್ ಆಸ್ಪತ್ರೆಗಳು ವೈದ್ಯಕೀಯ ವೃತ್ತಿ ಧರ್ಮವನ್ನೇ ಮರೆತಂತಿವೆ. 

ಎಲ್ಲ ಕ್ಷೇತ್ರದಲ್ಲಿ ಭೃಷ್ಟತೆ ಇರುವಾಗ, ವೈದ್ಯಕೀಯದಲ್ಲಿ ಇಂಥ ಲೋಪ ದೋಷಗಳು ನಡೆದರೆ ತಪ್ಪೇನೆಂದು ವಾದ ಮಾಡುವ ಬಗ್ಗೆಯೂ ಕೇಳಿದ್ದೇನೆ. ಇದಕ್ಕೆ ಉತ್ತರವಿಲ್ಲದಿದ್ದರೂ ಇಷ್ಟು ಹೇಳಬಲ್ಲೆ- ಒಂದು ಜೀವದ ಸಾವು ಬದುಕು ಒಬ್ಬ ವೈದ್ಯನ ಕೈಯ್ಯಲ್ಲಿರುತ್ತದೆ. ಇಂಥ ಸಂದರ್ಭದಲ್ಲಿ ನಾವು ವೈದ್ಯನನ್ನು ದೇವರಿಗಿಂತ ಜಾಸ್ತಿ ದೈನ್ಯತೆಯಿಂದ ಬೇಡಿಕೊಳ್ಳುತ್ತೇವೆ. ಒಬ್ಬ ಒಳ್ಳೆಯ ವೈದ್ಯ ಖಂಡಿತ ದೇವರೇ. ಇತರ ಕ್ಷೇತ್ರಗಳನ್ನು ಹೋಲಿಸಿಕೊಂಡು ದೇವರೇ ತಪ್ಪು ದಾರಿ ಹಿಡಿಯುವುದು ಯಾವ ನ್ಯಾಯ? ಇಂಥ ಅಧರ್ಮದ ಖಂಡನೆಯಾಗಲಿ. ದುಡ್ಡಿಗಾಗಿ ನಮ್ಮವರನ್ನು ಪರಕೀಯರನ್ನಾಗಿ ಮಾಡುವ ಪ್ರವೃತ್ತಿ ವೈದ್ಯಕೀಯ ಕ್ಷೇತ್ರದಲ್ಲಾದರೂ ಸುಳಿಯದಿರಲಿ. ಎಲ್ಲ ವೈದ್ಯರೂ ನಾರಾಯಣರಾಗೇ ಇರಲಿ. ಆ ಮುಗ್ಧ ಆತ್ಮಕ್ಕೆ ಚಿರಶಾಂತಿ ಕೋರುತ್ತ.

2 comments:

  1. ಮೊದಲಿಗೆ ನಿಮಗೆ ಒಂದು ಮಾತು ಹೇಳಬೇಕು ಗೆಳೆಯ.

    ಈಗೀಗ ವೈದ್ಯಕೀಯ ಕ್ಷೇತ್ರದಲ್ಲು ಭ್ರಷ್ಟತೆ ತುಂಬಿದ್ದು, ಅವರೂ ಮೇಲಿನವರಿಗೆ ಲಂಚ ಕೊಡಬೇಕಿದೆ.

    ಇಂತಹ ಅಮಾನವೀಯ ಘಟನೆಯಿಂದಾಗಿ ಎಷ್ಟೊ ಉತ್ತಮ ವೈದ್ಯರ ಸದ್ವೈದ್ಯಕ್ಕೆ ಕಳಂಕ. ಸರಾಫ್ ಡಾಕ್ಟರ್ ಅವರ್ಂತಹ ಶೃದಯಗಳು ಎಲ್ಲರೂ ಆದಾಗ ಮಾತ್ರ ಮಾನವೀಯತೆ ಸಾಧ್ಯ.

    ReplyDelete
  2. ಇಂತಹ ಘಟನೆಗಳು ಮರುಕಳಿಸದಿರಲಿ ,ವೈದ್ಯರಿಗೆ ದೇವರು ಬಡವರ ಜೀವವನ್ನು ಉಳಿಸುವಂತಹ ಒಳ್ಳೆಯ ಬುದ್ದಿಯನ್ನು ನೀಡಲಿ

    ReplyDelete