Tuesday 31 July 2012

ಬೊಜ್ಜ



ಮಾರುಗಟ್ಟಲೆ ಹೂ ಹಾರ ಹಾಕಿ 
ಬಾಯಲ್ಲಿ ತುಳಸಿ ನೀರ ಬಿಟ್ಟು 
ಚಟ್ಟದ ಮೇಲೆ ಮಲಗಿಸಿ 
ಕಳಿಸಿದರವನ, 
ಮಕ್ಕಳ, ಸೊಸೆಯರ 
ಕಣ್ಣಲ್ಲೆರಡು ಮೊಸಳೆ ಕಣ್ಣೀರು.
ಮಡದಿಯ ಗೋಗರೆತ 
ಗಂಡನಿಲ್ಲದ ಮನೆಯಲಿ ತಾನಿದ್ದೂ 
ಇಲ್ಲದಂತೆಂಬ ಕರಾಳ ಭಾವ 

ಸಂವತ್ಸರ ಕಳೆದು ಬಂದಿದೆ ಬೊಜ್ಜ
ಅಪ್ಪನ ದೊಡ್ಡ ಫೋಟೋ 
ಅದರ ಮೇಲಿಷ್ಟು ಹೂ 
ಎದುರು ಧೂಪ,ದೀಪ 
ವಡೆ ಪಾಯಸದ ಘಮ ಘಮ 
ಬ್ರಾಹ್ಮಣರಿಗೆ ದಾನ ಧರ್ಮ
ಕೈ ಮುಗಿದರು ಭಕ್ತಿಯಿಂದ 

ಮೂಲೆಯಲಿ ಅಮ್ಮ ಗೊಣಗುತ್ತಿದ್ದಾಳೆ 
"ಇದ್ದಾಗ ಒದ್ದಿರಿ, ಈಗೇನು
ಬಂದು ತಿನ್ನುವನೇ ಅಪ್ಪ?
ಅವನ ಮನೆ ಮೂಲೆಯ ಕಸ ಮಾಡಿ
ಈಗ ಮಾಡಲು ದಾನ,
ತೊಳೆದು ಹೋಗ್ವುದೇ ಪಾಪ ?

ಇದ್ದಾಗ ಅಂದಿರಿ ಕೆಲಸಕೆ ಬಾರದ ಮುದಿ ಅಜ್ಜ 
ಈಗ್ಯಾರ ಖುಷಿಗೀ ಅದ್ದೂರಿ ಬೊಜ್ಜ ?"

3 comments:

  1. ವಾವ್ ಎಂತಹ ವಾಸ್ತವ ಕವಿತೆ ಗೆಳೆಯ. ಇಂತಹ ಘಟನೆಗಳಿಂದ ಮನಸ್ಸು ಮುದುಡಿ ಹೋಗುತ್ತದೆ.

    ಇದ್ದಾಗ ಉಪವಾಸ ಕೆಡುವೋ ಮಕ್ಕಳೇ ಅಪ್ಪನ ದೊಡ್ಡ ಕಾರ್ಯಕ್ಕೆ ಬಾಡು ಮಾಡಿಸುತ್ತಾರೆ!

    ReplyDelete
  2. ಸಂಸ್ಕಾರ ಸಂಪ್ರದಾಯಗಳು ಬದುಕಿನ ಸೌಂದರ್ಯಕ್ಕೆ, ಸತ್ತು ಮಲಗಿದವನೆದುರಿಗಿನ ಪ್ರದರ್ಶನಕ್ಕಲ್ಲ,
    ಆದರೆ ಬದುಕಿನ ರೀತಿಯೇ ಸೋಜಿಗ, ಇಲ್ಲಿ ಎಲ್ಲವೂ ಅಸಹಜವಾಗುವುದು ದುರಂತ...

    ಚೆನ್ನಾಗಿದೆ ಕವನ.

    ನನ್ನ ಬ್ಲಾಗ್ ಸಮುದ್ರ ತೀರದ ವಿಹಾರಕ್ಕೆ ಸ್ವಾಗತ - www.samudrateera.blogspot.com

    ReplyDelete
  3. ಸಂಬಂಧಗಳೆಲ್ಲ ನಾಟಕೀಯತೆಯ ನೆಲೆಯಲ್ಲಿ ಸಾಗುತ್ತಿರುವ ದುರಂತವೊಂದರ ಚಿತ್ರಣ. ಎಲ್ಲವೂ ತೋರ್ಪಡಿಕೆಯ ಪ್ರೀತಿ. ಕಡೆಗೊಂದು ದಿನ ಗಟ್ಟಿ ವಡೆ. ಎಲ್ಲರ ಬಾಯಿಯಲ್ಲೂ ಅದ್ದೂರಿ ಪಾಯಸ!

    ಅಷ್ಟಕ್ಕೆ ಕೊಳೆತ ಹಲ್ಲುಗಳ ನಡುವಿನ ವಾಸನೆ ಮೆಟ್ಟಿ ನಿಲ್ಲುತ್ತದೆ ಪಾಯಸದೊಳಗಿನ ಒಂಟಿ ಏಲಕ್ಕಿ!

    ಚೆನ್ನಾಗಿದೆ ಮೊಸಳೆಕಣ್ಣೀರಿಗೊಂದು ಗೋರಿಕಟ್ಟಿದ್ದು!

    ReplyDelete