Monday 6 August 2012

ಜ್ಯೋತಿರ್ಮಯಿ



ಕೊರೆವ ಚಳಿ ಓತಪ್ರೋತ ಮಳೆ,ನಡುಕವೆಲ್ಲೆಲ್ಲೂ 
ಹುಚ್ಚು ನೆರೆಯಲಿ ಕೊಚ್ಚಿ ಹೋದವರೆಷ್ಟೋ 
ನರಳುತಿರೆ ತುತ್ತನ್ನವಿಲ್ಲದೆ ಜನ, ಹಳ್ಳಿ ಮೂಲೆಯ 
ಗುಡಿಸಲಿಂದ ಕೇಳುತಿದೆ ನಿಲ್ಲದ ಚೀರಾಟ 

ದೀಪಗಳಾರಿರೆ  ಹತ್ತಾರು ಮನೆಯಲಿ 
ಬೆಳಕ ನೀಡಿರುವ ದೇವ ಆ ಗುಡಿಸಲಲಿ 
ದೂರದಿ ಬೀಡಿ ಸೇದುತ್ತಿದ್ದಪ್ಪನ ಕಿವಿ ನೆಟ್ಟಗಾಯ್ತು
ಮನೆ ಬೆಳಗುವ ಲಕ್ಷ್ಮಿ ಬಂದಳೆಂದು ಕೇಳಿದೊಡೆ 
ಸಿಡಿಲಿನಬ್ಬರದಲೂ ಕ್ಷಣದಿ ಮೌನ 

ಹೊಸಕಿದನವ  ಕಾಲಿಂದ  ಬೀಡಿಯ 
ಕತ್ತು ಹಿಸುಕಿದಂತಾಗಿ  ಚೀರಿತ್ತು  ಹಸುಳೆ 
ಆ ಜ್ಯೋತಿಯಲವಗೆ  ಮನೆ ಸುಡುವ ಜ್ವಾಲೆ ಗೋಚರ 
ಹಸುಳೆಯ ರೋದನವಾಯ್ತು ಕರ್ಕಶ ಅಪಸ್ವರ 

ಎಸೆದ ಕೂಸನು ಕಸವೆಂದು ತೊಟ್ಟಿಯಲಿ 
ಬೇಕಂತೆ ತನುಜ ಸತ್ತರೆ ಕೊಳ್ಳಿ ಇಡಲು 
ಬಂದ ಸುಪುತ್ರ  ಕೊನೆಗೂ, ರಾಜೋಪಚಾರವವಗೆ 
ವಂಶ ಬೆಳೆಸುವ ಕುಲೋದ್ಧಾರಕನೆಂದು 

ವರುಷಗಳುರುಳಿ, ಅಪ್ಪ ಎಣಿಸಿದಂತೆ ಇಟ್ಟಿದ್ದ ಮಗ ಕೊಳ್ಳಿ 
ಸತ್ತ ಮೇಲಲ್ಲ , ಬದುಕಿರುವಾಗಲೇ ಸಾಯಲೆಂದು 
ಝಲ್ಲೆಂದಿತ್ತು  ತುಂಬು ಮನೆಯ ಸೊಸೆಯಾಗಿ 
ಸಂಸಾರದಕ್ಷಿಯಾಗಿ ಜ್ಯೋತಿ ಬೆಳಗುತ್ತಿದ್ದ ಮಗಳೆದೆ 
ಅಂದು ತನ್ನ ಕೂಗು ಕೇಳದ ಅಪ್ಪನ ಕೂಗು ಕೇಳಿತೇನೋ!!??

3 comments:

  1. ಲಿಂಗ ತಾರತಮ್ಯದ ಮನೆ ವಾತಾವರಣದ ಧಾರುಣ ಚಿತ್ರಣ. ಗಂಡು ಮಕ್ಕಳನ್ನು ರೇಸು ಕುದುರೆಗಳಂತೆ ಪೋಷಿಸುವ ಕೆಲ ತಂದೆ ತಾಯಿಗಳು ಹೆಣ್ಣೂ ಮಕ್ಕಳನ್ನು ಊಳಿಗೆಯವರಂತೆ ನೋಡಿಕೊಳ್ಳುತ್ತಾರೆ. ವಾಸ್ತವಕ್ಕೆ ಕನ್ನಡಿ ಹಿಡಿದ ಕವನ.

    ReplyDelete
  2. ಕರುಳು ಹಿಂದಿದ ಅನುಭವವಾಯ್ತು...
    ಹೆಣ್ಣು ಮಗಳ ರೋದನೆ, ಪೋಷಕರು ಮಾಡೋ ತಪ್ಪು, ಕೊನೆಗೆ ಗಂಡು ಮಕ್ಕಳಿಂದ ಅದೇ ಪೋಷಕರಿಗಗೋ ನೋವು...ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದೀರಿ...
    ಚಂದದ ಕವಿತೆ...

    ReplyDelete