Sunday 21 October 2012

ಬದುಕೇ ಸಾಹಿತ್ಯ

ದಿನಕರ ದೇಸಾಯಿ ಎಂದರೆ ನಮ್ಮ ತಲೆಗೆ ಥಟ್ಟನೆ ಹೊಳೆಯುವುದು-"ಚುಟುಕು". "ಚೌಪದಿಯ ಬ್ರಹ್ಮ" ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದು ಬಿಟ್ಟರೆ, ಕನ್ನಡದ ಬಹುತೇಕರಿಗೆ ಇವರ ಬಗ್ಗೆ ಜಾಸ್ತಿ ತಿಳಿದಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಆದರೆ ನನ್ನ ಪ್ರಕಾರ ಕನ್ನಡ ನಾಡು ಕಂಡ ಅಗ್ರಗಣ್ಯ ಸಾಹಿತಿಗಳಲ್ಲಿ ದಿನಕರರು ಒಬ್ಬರು. ಯಾಕೆಂದರೆ ಇವರು "ಬದುಕನ್ನೇ ಬರಹವಾಗಿಸಿದವರು", "ಬರೆದಂತೆ ಬದುಕಿದವರು", "ಬರಹಗಳಿಂದ ಬದುಕಲು ಕಲಿಸಿದವರು", "ತಮ್ಮ ಬದುಕು ಅನ್ಯರ ಬರಹಕ್ಕೆ ಪ್ರೇರಣೆಯಾಗುವಂತೆ ಬದುಕಿದವರು". ಇವರ ಸಾಹಿತ್ಯ ಸರಳ, ನೇರ, ಶುದ್ಧ. ಹಾಗೇ ಬದುಕು ಕೂಡ.

ಅಂದು ಉತ್ತರ ಕನ್ನಡ ಜಿಲ್ಲೆಯ ಎಷ್ಟೋ ಹಳ್ಳಿಗಳಲ್ಲಿ ಮಕ್ಕಳು ಪ್ರಾಥಮಿಕ ವ್ಯಾಸಂಗ ಮುಗಿಸಿ ಚಾ ಅಂಗಡಿಗೋ, ಗದ್ದೆ ಹೂಳುವುದಕ್ಕೋ, ಬೊಂಬಾಯಿಗೋ ಹೋಗುವುದು ಸರ್ವೇ ಸಾಮಾನ್ಯವಾಗಿತ್ತು. ಯಾಕೆಂದರೆ ಮುಂದೆ ಓದಲು ಹೈಸ್ಕೂಲುಗಳೇ ಇರಲಿಲ್ಲ.ಅಂತಹ ಸಂದರ್ಭದಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಬದಲಾವಣೆಯ ಅಲೆ ಎಬ್ಬಿಸಿದವರು ಶ್ರೀಯುತ ದಿನಕರರು. "ಕೆನರಾ ವೆಲ್ಫೇರ್ ಟ್ರಸ್ಟ್" ಸ್ಥಾಪಿಸಿ ಉತ್ತರ ಕನ್ನಡದ ಹಳ್ಳಿ ಹಳ್ಳಿಗಳಲ್ಲಿ ಜನತಾ ವಿದ್ಯಾಲಯಗಳನ್ನು ಸ್ಥಾಪಿಸಿದರು. ಈ ಸಂಸ್ಥೆಯ ಶಾಲೆಗಳಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂದು ವಿಶ್ವದ ಮೂಲೆ ಮೂಲೆಗಳಲ್ಲಿ  ಕೀರ್ತಿ ಪತಾಕೆ ಹಾರಿಸಿದ್ದಾರೆ. ಉನ್ನತ ಹುದ್ದೆಗಳಲ್ಲಿದ್ದಾರೆ. ಸಮಾಜ ಸೇವೆ, ಸಾಹಿತ್ಯ ಸೇವೆಗಳಲ್ಲಿ ತೊಡಗಿದ್ದಾರೆ. ಶಾಸಕರಾಗಿ ಉತ್ತರ ಕನ್ನಡದಲ್ಲಿ ಅದೆಷ್ಟೋ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜಿಲ್ಲೆಗೊಂದು ಹೊಸ ರೂಪ ಕೊಟ್ಟ ಶಿಲ್ಪಿ ಕೂಡ. ಇಷ್ಟಾದರೂ ಸಾಯುವ ವರೆಗೆ ಅವರದೇ ಎಂಬ ಒಂದು ಚಿಕ್ಕ ಮನೆ ಕೂಡ ಇರಲಿಲ್ಲ ಎಂಬುದು ಅವರ ನಿಸ್ವಾರ್ಥ ಮತ್ತು ಸರಳ ಜೀವನಕ್ಕೆ ಜೀವಂತ ಸಾಕ್ಷಿ. 

ಇನ್ನು ಸಾಹಿತ್ಯ ಕ್ಷೇತ್ರಕ್ಕೆ ಬಂದರೆ, ಬರೀ ಚುಟುಕುಗಳಷ್ಟೇ ಅಲ್ಲದೆ ಅದೆಷ್ಟೋ ಅದ್ಭುತ ಭಾವಗೀತೆಗಳನ್ನು ಕೊಟ್ಟ ಮಹಾನ್ ಕವಿ ಇವರು. ಪುಸ್ತಕ ರೂಪದಲ್ಲಿ ಬಿಡುಗಡೆಯಾಗದಿದ್ದುದರಿಂದ ಎಷ್ಟೋ ಇವರ ಬರಹಗಳು ಗಮನಕ್ಕೆ ಬಾರದೆ ಮಾಯವಾಗಿವೆ. ಆದರೆ ಇವರ ಬರಹಗಳನ್ನೆಲ್ಲ ಒಂದೆಡೆ ಸೇರಿಸಿ ಪುಸ್ತಕವಾಗಿಸುವ ಶ್ಲಾಘನೀಯ ಕೆಲಸವನ್ನು ಶ್ರೀಯುತ ವಿಷ್ಣು ನಾಯ್ಕರವರು ಮಾಡುತ್ತಲೇ ಇದ್ದಾರೆ. ತಾವು ಕಟ್ಟಿದ ಶಾಲೆಗಳಿಗೆ ಆಗಾಗ ಹೋಗಿ ಮಕ್ಕಳ ಜೊತೆ ಕುಣಿದು, ಕುಪ್ಪಳಿಸಿ ಅಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದ ಧೀಮಂತ ವ್ಯಕ್ತಿ. ನನ್ನ ಅಪ್ಪ ಕಲಿಯುತ್ತಿರುವಾಗ ಥಟ್ಟನೆ ಒಮ್ಮೆ ಅವರ ಕ್ಲಾಸಿಗೆ ಬಂದು- "ಕಸಬರಿಗೆಯಾಗು ನೀ" ಎಂಬ ಅವರ ಗೀತೆಯನ್ನು ಹಾಡುತ್ತ ತಾವೂ ಮಗುವಾಗಿ, ಮಕ್ಕಳೊಂದಿಗೆ ಕುಣಿದಿದ್ದನ್ನು ಅಪ್ಪ ನೆನಪಿಸಿಕೊಳ್ಳುತ್ತಿರುತ್ತಾರೆ. ಅವರ ಬದುಕೇ ಒಂದು ಸಾಹಿತ್ಯ.

No comments:

Post a Comment