Thursday, 14 February 2013

ಮೌಲ್ಯ ಕುಸಿದ ಶಿಕ್ಷಣ?


"ಎಲ್ಲವೂ ನಕಲಿ  ಅನಿಸುತ್ತಿದೆ. ಒಂದಕ್ಕೆ ಹತ್ತು ಸೇರಿಸಿ  ಮಾತಿಗೆ ಚಂದನ ಲೇಪಿಸಿ ಅಲಂಕಾರ ಮಾಡಿ ವ್ಯಕ್ತಪಡಿಸಬೇಕು. ಇದು ಮಾರ್ಕೆಟಿಂಗ್ ಅಂತೆ. ಆ ವಸ್ತುವಿನ ಕಾರ್ಯಕ್ಷಮತೆ ನಾವು ಹೇಳುವ ವಿವರಣೆಯ ಅರ್ಧದಷ್ಟೂ ಇರುವುದಿಲ್ಲ . ಸುಳ್ಳು ಹೇಳಬಾರದು ಎಂದು ಶಾಲೆಯಲ್ಲಿ ಹೇಳಿದರೆ ಇಲ್ಲಿ ಸುಳ್ಳು ಹೇಳುವುದನ್ನೇ ಕಲಿಸುತ್ತಿದ್ದಾರೆ. ಆದರೆ ಅದು ಸುಳ್ಳಲ್ಲವಂತೆ. ಸತ್ಯವನ್ನೇ ಅತ್ಯಂತ ಪರಿಣಾಮಕಾರಿಯಾಗಿ ಹೇಳುವ ರೀತಿಯಂತೆ. ಸುಳ್ಳೋ, ಸತ್ಯವೋ ಒಟ್ಟಿನಲ್ಲಿ ಎಲ್ಲವೂ ಕೃತಕ ಅನಿಸುತ್ತಿದೆ."  ದೇಶದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂ.ಬಿ.ಎ. ವ್ಯಾಸಂಗ ಮಾಡುತ್ತಿರುವ ನನ್ನ ಗೆಳೆಯ ಹೇಳಿದ ಮಾತುಗಳಿವು. 

ಊರಲ್ಲಿ ದಿನಸಿ ವ್ಯಾಪಾರಿಗಳು, ಹಾಲು ಮಾರುವವರು ಇದೇ ಥರ ನಯವಾಗಿ ಮಾತಾಡಿ ಆಮೇಲೆ ಅವನ್ನು ಖರೀದಿಸಿ ತಂದ ಮೇಲೆ ಅಮ್ಮ "ತೊಗರಿ ಬೇಳೆಯಲ್ಲಿ ಕಲ್ಲು", "ನೀರಿನಲ್ಲಿ ಹಾಲು ಹಾಕಿದ್ದಾನೆ ಪಾಪಿ" ಎಂದು ಹಿಡಿ ಶಾಪ ಹಾಕುವುದು  ನೆನಪಾಯಿತು. ಹೀಗೆ ಮಾತನಾಡುವುದನ್ನೇ ವ್ಯವಸ್ಥಿತ ರೀತಿಯಲ್ಲಿ, ಲಕ್ಷಾಂತರ ಫೀಸ್ ಪಡೆದು, ಎ ಸಿ ರೂಮಿನೊಳಗೆ   ಕಲಿಸುತ್ತಾರೇನೋ ಅನಿಸಿತು. ಪುತ್ತು ಮಾಮನ ಕಿರಾಣಿ ಅಂಗಡಿ ನೆನಪಾಯಿತು. ಯಾವುದೇ ಅತಿಶಯೋಕ್ತಿ, ಅಲಂಕಾರಗಳಿಲ್ಲದೆ ರೇಟು ಕಡಿಮೆಯೂ ಮಾಡದೆ, ಜಾಸ್ತಿಯೂ ಮಾಡದೆ ಸತ್ಯದಿಂದ ವ್ಯಾಪಾರ ಮಾಡಿ ಯಾವಾಗಲೂ ಜನರಿಂದ ತುಂಬಿರುವ ಅಂಗಡಿ ಅವರದು. ವ್ಯಾಪಾರದಲ್ಲಿ ಜಾಸ್ತಿ ಏರಿಳಿತ ಇಲ್ಲದಿದ್ದರೂ ಮನೆಗೆ ಹೋಗುವಾಗ ಅವರ ಮುಖದಲ್ಲಿ ತೃಪ್ತಿ ಇರುತ್ತಿತ್ತು. ಊರಲ್ಲಿ ಅವರಿಗೆ ಗೌರವ ಇತ್ತು. 

ಇನ್ನು ಊರಲ್ಲಿ ರಘು ಮಾಮ ಅಡುಗೆ ಭಟ್ಟರಾಗಿ ಫೇಮಸ್. ಎಷ್ಟೇ ಜನ ಇರಲಿ, ಎಷ್ಟೇ ದಿನಗಳ ಸಮಾರಂಭ ಇರಲಿ ವ್ಯವಸ್ಥಿತವಾಗಿ ರುಚಿಕರ ತಿಂಡಿ ಉಣಬಡಿಸಿ ಜನಪ್ರಿಯರಾದವರು. ಕಡು ಬಡವರಾಗಿದ್ದ ಇವರು ಈ ಉದ್ಯೋಗದ ಮೂಲಕ ಕೆಲವೇ  ವರ್ಷಗಳಲ್ಲಿ  ಶ್ರೀಮಂತರಾಗಿಬಿಟ್ಟರು. ಹಾಗೆಯೇ ನಿಧಾನವಾಗಿ ವ್ಯವಹಾರವನ್ನು ಸುಧಾರಣೆ ಮಾಡುತ್ತಾ ಹೋಗಿ ಮದುವೆ ಮುಂತಾದ ಸಮಾರಂಭಗಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲಾರಂಭಿಸಿದರು. ಒಂದು ಸ್ಟಾರ್ಟ್ ಅಪ್ ಸಾಫ್ಟ್ವೇರ್ ಕಂಪೆನಿಯಷ್ಟು ದೊಡ್ಡ ಸಂಸ್ಥೆಯೇ ಆಯಿತು. ಹಲವಾರು ಕೆಲಸಗಾರರು ಅವರಡಿ ಕೆಲಸ ಮಾಡುತ್ತಿದ್ದರು. ನೋಡು ನೋಡುತ್ತಾ ಊರಲ್ಲೇ ಅತಿ ಶ್ರೀಮಂತರಾಗಿ ಬಿಟ್ಟರು. ಅವರ ಒಬ್ಬನೇ ಸುಪುತ್ರ ಎಂ.ಬಿ.ಎ ಮಾಡಿ ಮುಗಿಸಿದ. "ಬೇರೆ ಕಂಪೆನಿಗೆ ಸೇರುವುದಿಲ್ಲ. ನಿನಗೂ ವಯಸ್ಸಾಗಿದೆ. ನಿನ್ನ ವ್ಯವಹಾರವನ್ನು ನಾನು ನೋಡಿಕೊಂಡು ನಾ ಕಲಿತದ್ದೆಲ್ಲವನ್ನು ಅಳವಡಿಸಿ ಈಗಿದ್ದುದಕ್ಕಿಂತ ನೂರು ಪಟ್ಟು ಜಾಸ್ತಿ ಲಾಭ ಗಳಿಕೆ ಮಾಡುತ್ತೇನೆ" ಎಂದು ಅಪ್ಪನ ಬಳಿ ಹೇಳಿದ. ಒಂದು ವರ್ಷದಲ್ಲೇ ಸಂಸ್ಥೆಯನ್ನು ಸಂಪೂರ್ಣ ಮುಳುಗಿಸಿದ್ದ. ಊರಲ್ಲಿ ಇದ್ದ ಹೆಸರೆಲ್ಲ ಮಣ್ಣು ಪಾಲಾಯಿತು. ಕೆಲಸಗಾರರೆಲ್ಲ ಬಿಟ್ಟು ಹೋದರು. 

ಮೇಲಿನ ಘಟನೆಗಳನ್ನು ನೋಡಿದರೆ ಅನಿಸುವುದು ಈಗಿನ ಶಿಕ್ಷಣ ವೆಚ್ಚ ಎಷ್ಟು ಅನುಪಾತದಲ್ಲಿ  ಏರುತ್ತಿದೆಯೋ ಮೌಲ್ಯ ಅದೇ ಅನುಪಾತದಲ್ಲಿ ಕುಸಿಯುತ್ತಿದೆ. ಕೆಲವೇ ದಿನಗಳಲ್ಲಿ ಶ್ರೀಮಂತರಾಗಿ ಮೆರೆಯುವ ದುರಾಸೆಯಿಂದ ಮಾನವೀಯ ಧರ್ಮ ಮರೆತು ಎಂತಹ ಅಭಿವೃದ್ಧಿಯ ಕಡೆ ನಾವು ಸಾಗುತ್ತಿದ್ದೇವೆ ಎಂಬುದನ್ನು ಆಲೋಚಿಸಬೇಕಾಗಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶಿಕ್ಷಣದ ಪ್ರತಿಯೊಂದು ಆಯಾಮದಲ್ಲೂ ಮೌಲ್ಯಗಳಿಗೆ ಒತ್ತು ಕೊಡಬೇಕಾದ ಅನಿವಾರ್ಯತೆ ಇದೆ. ದೊಡ್ಡ ದೊಡ್ಡ ಡಿಗ್ರಿ ಗಳಿಸಿ, ಮಾತಿನಲ್ಲಿ ಮಂಗ ಮಾಡಿದರೆ ಮಾತ್ರ ಮುಂದೆ ಬರುವುದು ಸಾಧ್ಯ ಎಂಬ ಮನಸ್ಥಿತಿ ಮಾಯವಾಗಬೇಕಾಗಿದೆ. ನೂರಾರು ಡಿಗ್ರಿ ಗಳನ್ನು ಮಾಡದೇ ಒಂದು ವ್ಯವಹಾರವನ್ನು ಆರಂಭಿಸಿ ಅದನ್ನು ಒಂದು ಸಂಸ್ಥೆಯಾಗಿ ಬೆಳೆಸಿದ ರಘು ಮಾಮ, ಸುಳ್ಳುಗಳ ಸರಮಾಲೆ ಹಾಕದೆ ಪಾರದರ್ಶಕ ವ್ಯಾಪಾರ ಮಾಡಿ ಊರಲ್ಲಿ ಜನಪ್ರಿಯರಾದ ಪುತ್ತು ಮಾಮನಂಥವರು ಈ ದಿಶೆಯಲ್ಲಿ ಮಾದರಿ ಅನಿಸುತ್ತಾರೆ.

No comments:

Post a Comment