Wednesday 16 November 2011

ತಾಯ ಆರತಿಯ ಎತ್ತೋಣ ಬಾರಾ....


ಯುವಕರಲಿ ಬಲವಿಹುದು
ಬದುಕುವಾ ಛಲವಿಹುದು
ಬಾ ಗೆಳೆಯ ನೀ ಬಂದು
ಕೈ ಜೋಡಿಸು
ಎಲ್ಲರಾ ರಟ್ಟೆ ಬಲ
ಗುಣಿಸಿದರೆ ಆನೆ ಬಲ
ದೇಶವನೆ ಬದಲಿಸುವ
ಶಕ್ತಿ ಇಹುದು
ದೇಶವದು ನರಳುತಿದೆ
ಭ್ರಷ್ಟರಾ ಕೈಯಲ್ಲಿ
ಕಿತ್ತು ತಿನುತಿಹರಲ್ಲಿ
ನಮ್ಮ ಹಣವ 
ಕೈಕಟ್ಟಿ ನಾವಿಲ್ಲಿ
ನಾಟಕವ ನೋಡುತಿರೆ
ಮಾಯ ಮಾಡುವರಿವರು
ಪ್ರಜಾಧನವ
ಗೆಳೆಯ ಗೆಳತಿಯರೆ
ಈ ದೇಶ ನಮ್ಮದು
ಕರ್ತವ್ಯ ತನದೆಂದು
ನಡೆ ನೀ ಮುಂದೆ
ಪ್ರಜೆಗಳೇ, ಪ್ರಜೆಯಿಂದ
ಪ್ರಜೆಗಾಗಿ ಈ ದೇಶ
ಎಂಬ ಸೂಕ್ತಿಗೆ
ಅರ್ಥ ಸಿಗಲಿ ಇಂದೇ
ದೇಶದಾ ಸಜ್ಜನರು 
ಮಲ್ಲಿಗೆಯ ಹೂವಂತೆ
ಹೂವ ಪೋಣಿಸಿ
ಮಾಡು ಒಂದು ಹಾರ
ಹಾರವನು ಭಾರತಿಯ
ಕೊರಳಿಗೆ ಹಾಕುತ್ತ
ತಾಯ ಆರತಿಯ ಎತ್ತೋಣ ಬಾರಾ....
                                                                                   

No comments:

Post a Comment