Sunday 20 November 2011

ಹೊಚ್ಚ ಹೊಸ ದಿನಕದುವೇ ಸುಸ್ವಾಗತ.......







ಮೇಘಗಳು ಕೈ ಹಿಡಿದು ಕಿರುನಗೆಯ ಬೀರುತಲಿ
ರಾಜ ಗಾಂಭೀರ್ಯದಲಿ ನಡೆಯುತಿರಲು,
ಮುಂಜಾನೆ ಚುಮು ಚಳಿಯು ಮೆತ್ತಗದು ಮೈಸೋಕೆ
ಹೊಚ್ಚ ಹೊಸ ದಿನಕದುವೆ ಸುಸ್ವಾಗತ..

ಪಕ್ಷಿಗಳ ಕಲರವದಿ ತಣ್ಣನೆಯ ಒಲವಿಹುದು,
ಪ್ರೀತಿಯನು ಪಸರಿಸುವ ತತ್ವಗೀತ.
ಕತ್ತಲೆಯನಟ್ಟುತಲಿ ಪ್ರಜ್ವಲನು ಬಂದಿರುವ
ಜಗದ ಜನತೆಗೆ ಬೆಳಕು ನೀಡಲೆಂದು

ವಟ ವೃಕ್ಷಗಳು ಸೇರಿ ಗಾಳಿಯಾ ಲಯದ ಜೊತೆ
ದಿನಕರಗೆ ಚಾಮರವ ಬೀಸುತಿರಲು
ಸಾಗರದ ಅಂಚಿಂದ ಪುಣ್ಯ ಸ್ನಾನವ ಮಾಡಿ
ಅತ್ತ ರವಿ ಸಂಭ್ರಮದಿ ಉದ್ಭವಿಪನು

ದೂರದಾ ಬೆಟ್ಟದಲಿ ಗಿಡುಗವದು ಹಾರುತಿದೆ
ವೈರಿಗಳ ಸಂಚನ್ನು ಭೇದಿಸುತಲಿ
ಕ್ರಾಂತಿ ಗೀತೆಯ ಮೊಳಗಿ, ದುಷ್ಟರನು ಸಂಹರಿಸಿ
ಶಾಂತಿ ಸೆಲೆಯನು ಧಾರೆ ಎರೆಯುತಿಹುದು

ಕತ್ತಲೆಯ ಬೆನ ಹಿಂದೇ ಉದ್ಭವಿಪ ಜ್ಯೋತಿ ಇದೆ
ಇರುಳನ್ನು ಸುಡುತ ಅದು ಬರಲು ಮುಂದೆ
ಗಾಢಾಂದಕಾರವು ಹೆದರಿ ದೂರಕೆ ಓಡೆ,
ಹೊಚ್ಚ ಹೊಸ ದಿನಕದುವೇ ಸುಸ್ವಾಗತ.......



3 comments:

  1. ಬ್ಲಾಗಿನ ಸದಸ್ಯರಾಗಲು ಲಿಂಕ್ ಸಿಗುತ್ತಿಲ್ಲವಲ್ಲ.. ?

    ReplyDelete
  2. ಸೂರ್ಯೋದಯದ ಸುಂದರ ಸೊಬಗಿನ ನೋಟವನ್ನು ಚಿತ್ರ ಚಿತ್ತಾರದೊಂದಿಗೆ , ಸುಂದರವಾಗಿ ವರ್ಣನೆ ಮಾಡಿದ್ದೀರಿ... ಬಹಳ ಇಷ್ಟವಾಯಿತು... :)

    ReplyDelete
  3. ಧನ್ಯವಾದ ಹಿರಿಯರೇ:) ಪ್ರೋತ್ಸಾಹ ಪ್ರೀತಿ ಇರಲಿ :)

    ReplyDelete