Thursday 8 December 2011

ಪ್ರೀತಿಯಲಲ್ಲದಿದ್ದರೂ, ನೋಡೆನ್ನ ಮುನಿಸಿನಲಿ



ನನ್ನನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುವ ಸುಮಧುರ "ಪ್ಯಾರ್ ನಾಲ್" ಎಂಬ ಉರ್ದು ಗೀತೆಯಿಂದ ಪ್ರೇರೇಪ್ರಿತನಾಗಿ, ಅದರೊಡನೆ ನನ್ನ 
ಭಾವಗಳನ್ನು ಸೇರಿಸಿ ಬರೆದ ಕವಿತೆಯಿದು. ಆ ಕವಿತೆಯನ್ನು ಬರೆದ ಕವಿ: ಅಫ್ಜಲ್ ಆಜಿಜ್. 

ಪ್ರೀತಿಯಲಲ್ಲದಿದ್ದರೂ, ನೋಡೆನ್ನ ಮುನಿಸಿನಲಿ
----------------------------------------------------
ಎನ್ನೆದೆಯ ವಿಶ್ವದಲಿ, ನಿನ್ಹೊರತು ಪಡಿಸಿ 
ಬಂದರೆ ಮತ್ತೊಬ್ಬಾಕೆ, ಕರೆ ಎನ್ನ ದ್ರೋಹಿ ಎಂದು 
ನಿನ್ನೆದೆಯ ಬಾಗಿಲಲಿ, ಬಾಳೆಲ್ಲ ಬಗ್ಗಿಸಿ ನಿಂತ
ಶಿರವದನು ಎತ್ತಿದರೆ, ಕರೆ ಎನ್ನ ದ್ರೋಹಿ ಎಂದು 
ಎಂದಾದರು ನಿನ್ನ ಪೂಜಿಸುವಲಿ ಕೊರತೆ ಕಂಡಿರೆ
ಎನ್ನ ಕೊಲ್ಲಲು ಖಡ್ಗವದು ಬೇಡ 
ದೇವನೆನಗೆ ಸಾಕ್ಷಿ, ಹಿಂಪಡೆ ನಿನ್ನೊಲವನ್ನು
ಆ ಕ್ಷಣದಿ ನಾ ಸಾಯದಿರೆ, ಕರೆ ಎನ್ನ ದ್ರೋಹಿ ಎಂದು 

ಪ್ರೀತಿಯಲಲ್ಲದಿದ್ದರೂ, ನೋಡೆನ್ನ ಮುನಿಸಿನಲಿ 
ಸತ್ತ ಈ ಹೃದಯಕ್ಕೆ ಪ್ರಾಣವದು ತುಂಬುವುದು 
ನಿನ್ನ ಮೋರೆಯ ದರ್ಶನವು ನನಗದುವೆ ಕಡ್ಡಾಯ 
ನಿನ್ನ ನಿರೀಕ್ಷೆಯಲಿರುವುದು ನನ್ನವಶ್ಯಕತೆ 
ನೀ ಬರದಿರೆ, ನಿನ್ನ ಮನೆಯ ಬಾಗಿಲನು ಮುಟ್ಟಿ ಬರುವೆ 
ಸತ್ತ ಈ ಹೃದಯಕ್ಕೆ ಪ್ರಾಣವದು ತುಂಬುವುದು 

ದಿನವೆಲ್ಲ ಕಂಗಳವು, ನೆಟ್ಟಿಹವು ನೀ ನಡೆವ ದಾರಿಯಲಿ 
ನಗುತಿರಲು ಅಳು ಬಹುದು, ಅಳುತಿರಲು ನಗುವು 
ನಯನವದು ನಿನ ನೋಡೆ, ಮನದಲ್ಲಿ ತುಂಬಿತೋ ಆಹ್ಲಾದ 
ಸತ್ತ ಈ ಹೃದಯಕ್ಕೆ ಪ್ರಾಣವದು ತುಂಬುವುದು 

ಹರಿವನದ ನಡುವಲ್ಲಿ ಹೂವದುವೆ ಜಿಗಿದು ಬಹೆ  ಮೊಗ್ಗಿಂದ
ಮನ ಹೋಯಿತು ಶಾಂತಿ ಸಾಗರದೆಡೆ 
ಪ್ರೀತಿಯಾ ದಾರಿಯಲಿ, ನಿನ್ನಂಥ ಸಂಗಾತಿ ಇರೆ
ಸತ್ತ ಈ ಹೃದಯಕ್ಕೆ ಪ್ರಾಣವದು ತುಂಬುವುದು

ನಾನೇಕೆ ಹೀಗೆ, ಸದಾ ನಿನ್ನ ಧ್ಯಾನದಲಿ 
ಆಲೋಚಿಸುವೆ ನಾ ಸಮಯ ಸಿಕ್ಕರೆ
ನಿನ್ನಲ್ಲಿ ನಾ ಕಂಡೆ ಏನನ್ನು 
ಆಲೋಚಿಸುವೆ ನಾ ಸಮಯ ಸಿಕ್ಕರೆ
ಊರೆಲ್ಲ ತನ್ನದೆನ್ನುತಿದೆ 
ನಿನ್ನೆದೆಯೊಳಗಿರುವ ಚಿರ ಶಾಂತಿಯನು 
ಆಲೋಚಿಸುವೆ ನಾ ಸಮಯ ಸಿಕ್ಕರೆ
ನಾ ಬರೆದೆ ಅವಳಿಗೆ, 
ನನ್ನ ಸೇರುವ ದಾರಿ ಕಂಡುಕೊ ಎಂದು
ಬರೆದವಳವಳು ಪತ್ರವನು
"ಆಲೋಚಿಸುವೆ ನಾ ಸಮಯ ಸಿಕ್ಕರೆ"
ಸೂರ್ಯ, ಚಂದ್ರ, ಮುಂಜಾನೆಯ ತಂಗಾಳಿ 
ಕಾಮನಬಿಲ್ಲು, ಪುಷ್ಪದಿಂ ಸೂಸುವ ಸುವಾಸನೆ 
ಯಾವುದನು ಹೋಲುವೆ ನೀ
ಆಲೋಚಿಸುವೆ ನಾ ಸಮಯ ಸಿಕ್ಕರೆ
ಕೇಳು ನಿನ್ನೆದೆಯ ಮಾತನು 
ಅಥವಾ ಜಗದ ಜನರ ಮಾತನು
ಎಲ್ಲ ಹೇಳುವವು "ಅವಳ ಮಾತದು ಅಮೂಲ್ಯ"
ಆಲೋಚಿಸುವೆ ನಾ ಸಮಯ ಸಿಕ್ಕರೆ

ಪ್ರೀತಿಯಲಲ್ಲದಿದ್ದರೂ, ನೋಡೆನ್ನ ಮುನಿಸಿನಲಿ 
ಸತ್ತ ಈ ಹೃದಯಕ್ಕೆ ಪ್ರಾಣವದು ತುಂಬುವುದು 

1 comment:

  1. ಸುಂದರವಾದ ಭಾವದ ಕವಿತೆ. ಮೂಲ ಕವಿತೆ ಹೇಗಿದೆಯೋ ಗೊತ್ತಿಲ್ಲ.ಸಾಲುಗಳಲ್ಲಿ ಬೆರೆದ ನವಿರು ಭಾವಗಳು ಅಚ್ಚೊತ್ತುತ್ತವೆ.

    ReplyDelete