Monday 5 December 2011

ಚಟ್ಟದ ಮೇಲೆ ಕುಣಿದಾಡುತಿದೆ ಕರ್ಮ.........






ಚಟ್ಟದ ಮೇಲೆ ಕುಣಿದಾಡುತಿದೆ 
ಇವನು ಮಾಡಿದ ಕರ್ಮ 
ಇರುವನಿವ  ಚಿರ ನಿದ್ರೆಯಲಿ
ಹೊರಲು ನಾಲ್ವರು 
ಅಳುವ ಪ್ರಯತ್ನದಿ ಈರ್ವರು 
ಹೋಗುತಿರುವರು ಮಸಣದ ಜಾಡು ಹಿಡಿದು

ತಲೆ ಒಡೆದು ಕೂಡಿಟ್ಟ ನೋಟಿನ ಕಂತೆ
ಅದರ ಮೇಲೆರಡು ಮಕ್ಕಳ ಕಣ್ಣು
ಮಡದಿ ಇನಿಯನ ನೋಡುತಿಹಳು
ಅತ್ತಿತ್ತ ಕಣ್ಣು ಹಾಯಿಸದೆ ಏಕಾಗ್ರದಿ
ಅವನ ದೇಹದ ಮೇಲೆ 
ಬಂಗಾರದೊಡವೆ ಇದೆಯೇ ಎಂದು 

ಸತ್ಯ ನ್ಯಾಯವ ಒದ್ದೋಡಿದ
ಕುರುಡು ಕಾಂಚಾಣದ ಹಿಂದೆ
ಅಮಾಯಕರ ಕೂಗಿವಗೆ ಸಂಗೀತ 
ಅವರ ಕರುಳ ಬಳ್ಳಿ ಕಿತ್ತಾಡಿದ ಹಗ್ಗ ಜಗ್ಗಾಟ 
ಇವನ ಹಣ ನೋಡಿ ಜೊಲ್ಲು ಸುರಿಸಿ 
ಬಂದ ಒಂದಿಷ್ಟು ಗುಲಾಮರು 
ಹಾಕಿದರು ಒಂದೆರಡು ಜೈ ಜೈಕಾರ 
ಎದೆಯುಬ್ಬಿಸಿ ಮೆರೆದನೀತ 

ಈಗ ಯಾರಿಲ್ಲ ಇವ ಹೋದನೆಂದು ಅಳಲು
ಎಲ್ಲರ ಪ್ರೀತಿ ಇವನ ನೋಟಿನ ಕಂತೆಯ ಮೇಲೆ
ಇವನು ಹೋಗುತಿರುವ ಕತ್ತಲೆ ಜಗದಿಂದ
ಬೆತ್ತಲೆಯಾಗಿ, ಜೊತೆಗೆ ಜನರ ಹಿಡಿ ಶಾಪ
ರಣ ಹದ್ದುಗಳು ಕಾಯುತಿವೆಯಲ್ಲಿ ಆಸ್ತಿ ಹೊಡೆಯಲು 
ಗಳಿಸಿದ ದುಡ್ಡನು, ಪ್ರೀತಿ ಗಳಿಸುವುದ ಮರೆತ

ಚಟ್ಟದ ಮೇಲೆ ಕುಣಿದಾಡುತಿದೆ 
ಇವನು ಮಾಡಿದ ಕರ್ಮ 
ನಗುತಿಹುದು ಇವನ ನೋಡಿ ಗಹ ಗಹಿಸಿ..........

1 comment:

  1. ತುಂಬಾ ಚೆನ್ನಾಗಿದೆ ಪರೇಶರೆ.. ವಿಡಂಬನೆ ಚೆನ್ನಾಗಿ ಮೂಡಿ ಬಂದಿದೆ ಈ ಕವನದಲ್ಲಿ ..

    ReplyDelete