Thursday 8 December 2011

ಕುನ್ನಿಯ ಕೂಗು





ಕುನ್ನಿಯೊಂದು ಕೂಗುತಿದೆ 
ಬೀದಿಯಾ ಮಧ್ಯದಲಿ ಜೋರಾಗಿ
ಮಧ್ಯರಾತ್ರೆಯದು 
ನಿದ್ದೆಯಲಿ ಸೊಂಪಾಗಿ ಮೈಮರೆತಿದೆ
ಮನುಜ ಗಣ 
ಕೇಳುವವರಾರು...?

ಕೂಗು ಜೋರಾಗೆ ಅಲ್ಲೊಬ್ಬ ಎದ್ದ,
ಅರ್ಧ ಪ್ರಜ್ಞೆಯಲಿ, ಹಿಡಿಶಾಪ
ಹಾಕುತ್ತ, ಮನದಲ್ಲೇ ಬೈಯುತ್ತ 
ಜಾರಿದ ನಿದ್ದೆಗೆ ಮತ್ತೆ,
ಅವನಿಗೆ ಕೂಗಿನ ಕಾರಣ ಗೊತ್ತೆ?

ಊರ ಸಂಪತ್ತೆಲ್ಲ ಲೂಟಿಯಾಗುತಲಿರಲು
ಜನರೆಲ್ಲ ಮೈಮರೆತು 
ಗೊರಕೆ ಹೊಡೆಯುತಲಿಹರು;
ಅಲ್ಲೊಬ್ಬ ರಸ್ತೆಯಲಿ ಪ್ರತಿಭಟಿಸಿ ಕೂಗುತಿರೆ
ತಮಗೇನು ಎಂಬಂತೆ 
ತಲೆಯೊಡ್ಡಿದರು ಶಯನ ಮಂಚಕೆ 

ಕುನ್ನಿಯೊಂದು ಕೂಗುತಿದೆ 
ಕೇಳುವವರಾರು?

No comments:

Post a Comment