Thursday 29 December 2011

ಬೆಂಕಿ ಪೊಟ್ಟಣಕ್ಕೆ ಬೆಂಕಿ ಹಚ್ಚುವವರು

ಇಲ್ಲಿರುವರಿಷ್ಟು ಜನ ಭಂಡರು 
ನಾಡ ಸುಡುವ ಬೆಂಕಿ ಕಡ್ಡಿಗಳು 
ಅಮಾಯಕರ ಚಡ್ಡಿ ಸುಟ್ಟು
ಅದರ ಬಿಸಿಯಲಿ ಚಳಿ 
ಓಡಿಸಿಕೊಳ್ಳುವವರು
ಯಾರದೋ ಹಣದ ಬಡ್ಡಿಯಲಿ
ಬಾಳು ನಡೆಸುವವರು 

ಯಾರಪ್ಪನ ದುಡ್ದೋ ತಿಳಿಯದು
ಹೋದರು ಯಲ್ಲಮ್ಮನ ಜಾತ್ರೆಗೆ 
ಪೀಪಿ ಖರೀದಿಸಿ ಊದುತಿಹರು
ಅದರ ಕರ್ಕಶ ರಾಗಕೆ 
ಕೂಗುತಿಹವಲ್ಲಿ ಕಾಗೆಗಳು 
ಇವರ ಭಂಡತನಕೆಲ್ಲಿ ಕೊನೆ?

ಬಂತಲ್ಲಿ ಚುನಾವಣೆಯು 
ನೀರೆರೆದರು ತಾವಿಟ್ಟ ಬೆಂಕಿಯ ಮೇಲೆ 
ಬೆಂಕಿ ಕಡ್ಡಿಗಳು ನುಸುಳಿದವು
ಪೊಟ್ಟಣದ ಒಳಗೆ 
ಕೇರಿ ಸುಟ್ಟ ಪೋರರು 
ಸಿಹಿಯ ಖೀರಿನ ಮಾತನು 
ಒದರುತಿಹರು 

ಬಂದವಲ್ಲಿ ವಿರೋಧ ಪಕ್ಷದ 
ಬೆಂಕಿ ಕಡ್ಡಿಗಳು  
ದೇಶ ಸುಡುವ ತಯಾರಿಯಲ್ಲಿವೆ.
ಉರಿಯುತಿರುವ ಬೆಂಕಿಗೆ 
ತುಪ್ಪ ಹಾಕುತ್ತ, 
ದೇಶ ಉದ್ಧಾರ ಮಾಡುವ ಶಪಥ
ಮಾಡುವ ಆಪತ್ಬಾಂಧವರು 

ಇವರಿಗೇನು ದೇಶದ ಚಿಂತೆ 
ದೇಶವಿವರಿಗೆ ಬಿಟ್ಟಿ ಸಂತೆ 
ದೇಶ ಧಗ ಧಗಿಸಿ ಉರಿಯುತಿರೆ 
ಕಾಮನ ಹುಣ್ಣಿಮೆ ಆಚರಿಸಿ 
ಕುಣಿಯುತಿಹರಿವರು
ಬೇರೆಯವರು ಹಚ್ಚಿದ ಬೆಂಕಿಯ ಸುತ್ತ

ಬೆಂಕಿ ಪೊಟ್ಟಣಕ್ಕೆ  ಬೆಂಕಿ ಹಚ್ಚುವ ಬೆಂಕಿ ಕಡ್ಡಿಗಳಿವರು.....

1 comment:

  1. ದೇಶದ ಪರಿಸ್ಥಿತಿಗೆ ಪ್ರತಿಕ್ರಿಯಿಸುವ ನಿಮ್ಮ ಪರಿ ಎಲ್ಲರ ಮನದಲ್ಲೂ ವಿಚಾರ ಮೂಡಿಸುವಂತಿದೆ. ವಸ್ತು ಸ್ಥಿತಿ ಗೊತ್ತು ಪರೇಶ್, ಪರಿಹಾರವೇನು. ನಿಮ್ಮಂತಹ ಯುವಕರೇ ಏನಾದರೂ ಮಾಡಬೇಕು. ನಾವೂ ನಿಮ್ಮ ಹಿಂದೆ ಬರುತ್ತೇವೆ. ನೀವು ಮುನ್ನುಗ್ಗಿ.

    ReplyDelete