Friday 30 December 2011

ಕಾಲನವ ಹೊಸ ಉಡುಗೆ ತೊಡುವ ಸಮಯ.........




ಕಾಲವದು ತನ್ನಯಾ ಉಡುಪನ್ನು ಕಳಚುತ್ತ 
ಪನ್ನೀರ ನೀರಲ್ಲಿ ಪುಣ್ಯ ಸ್ನಾನವ ಮಾಡಿ 
ಚಂದನದ ಲೇಪದೊಡೆ ಚೆಂದದಿಂ ಶೋಭಿಸುತ 
ಹೊಸ ಬಟ್ಟೆ ಧರಿಸುವಾ ಸಮಯವಿದುವು 

ಹೊಸದೊಂದು ದಿನವಿದುವು, ಎಲ್ಲೆಡೆಯೂ ಹುರುಪಿಹುದು 
ನವ ನವಿರು ಅನುಭೂತಿ ಭಾವ ಲಹರಿ 
ತಣ್ಣನೆಯ ತಂಗಾಳಿ, ಹೂವ ಕಂಪನು ಬೀರೆ
ಭುವಿಯಾಯ್ತು ಮೈದಳೆದು ನಿಂತ ಕುವರಿ 

ಕಾಲದಾ ಪುಸ್ತಕದಿ ಹೊಸ ಪುಟವ ತಿರುವಿಹನು 
ಆ ದೇವ, ಬರೆದಿಹನು ಹೊಸ ಗೀತೆಯ 
ಆ ಗೀತೆ ಲಯಕದುವೆ ಬಡಿಯುವುದು ನಮ ಹೃದಯ
ಕಾಲನವ ಹೊಸ ಉಡುಗೆ ತೊಡುವ ಸಮಯ.........

No comments:

Post a Comment