Wednesday 4 January 2012

ಸಾವಿನ ಮನೆ





ಮೆತ್ತನೆಯ ತಂಗಾಳಿ ಕತ್ತ ಕೊಯ್ದಂತಿಹುದು
ಹೃದಯದಲಿ ಬಿರುಕೊಂದು ಬಿದ್ದಿರುವುದು 
ಬೇಸಿಗೆಯ ಬೆಳಕಲ್ಲು ಕತ್ತಲೆಯು ಮುಸುಕಿಹುದು 
ಕಾರ್ಮೋಡ ಗಹ ಗಹಿಸಿ ನಗುತಲಿಹುದು 

ಊರ ಪಡಸಾಲೆಯಲಿ ಘೋರ ಮೌನದ ಕುಣಿತ 
ಮುದಿಕಾಗೆ ಭಯದಿಂದ ಕೂಗುತಿಹುದು 
ಮನೆಯ ಮುದ್ದಿನ ಬೆಕ್ಕು ಬೆಚ್ಚಿ ಬೊಬ್ಬಿಡುತಿಹುದು
ಖೇದ ನಾದವು ಕಿವಿಯ ಒದೆಯುತಿಹುದು 

ಖಗ ಬಳಗ ತರ ತರದ ಅಪಸ್ವರವ ಬೀರುತ್ತ
ದಿಕ್ತಪ್ಪಿ ಎಲ್ಲೆಲ್ಲೋ ಹಾರುತಿಹುದು 
ಊರ ಮೂಲೆಯ ಪಾಳು ಗುಡಿಯ ಮಂಟಪದಿಂದ 
ನಾದಸ್ವರ ನಾದವದು ಗುನುಗುತಿಹುದು 

ಬಟ್ಟ ಬೇಸಿಗೆಯಲ್ಲಿ ಮೇಘ ಧಾರೆಯು ಸುರಿದು
ಭುವಿ ಅಶ್ರುತರ್ಪಣವ ಮಾಡಿರುವುದು 
ರವಿಯವನು ಈ ಘೋರ ದೃಶ್ಯ ನೋಡೆನು ಎಂದು 
ಮೋಡದಾ ಮರೆಯಲ್ಲಿ ಸರಿಯುತಿಹನು.........

No comments:

Post a Comment