Monday 9 January 2012

ಅಸ್ತಮಾನವೋ?? ಹೊಸ ಉದಯವೋ??



ನಾಭಿ ಹಗ್ಗವು ಕಡಿದು, ಗರ್ಭದಾಲಯ ತೊರೆದು 
ಬಂತು ಶಿಶುವದು ಹೊರಗೆ ಮಾತೃ ಬಂಧವ ತೊರೆದು 
ಜಾರಿತಾ ತನುವದುವು ಮಾತೆಯಾ ಮಡಿಲಿಂದ 
ಲೋಕಕರ್ಪಣೆಯಾಯ್ತು ಜನಿಸಿದಾ ದಿನದಿಂದ 

ಮಾತೆ ಗರ್ಭದಲದಕೆ ಉಣಬಡಿಸಿ ಧೈರ್ಯವನು
ಛಲ ಸ್ಥೈರ್ಯ ಬಲ ಬೀಜ ಬಿತ್ತಿ ಚಿಗುರೊಡೆಸಿಹಳು 
ರಕ್ತದಲಿ ಅನುರಾಗ ಧಾರೆಯನು ಎರೆದವಳು 
ಕರುಳ ಬಳ್ಳಿಯ ಬಂಧ ಜೋಡಿಸದು ಕಳಿಸಿಹಳು 

ಅವಳ ಕೊನೆಯುಸಿರಿನಲಿ, ಶಿಶುವಿನಾ ಭುವಿ ಸ್ಪರ್ಷ
ಆ ಉಸಿರಿನಲಿ ಪ್ರೀತಿ ಸಾಗರವ ಹರಿಸಿಹಳು 
ತನ್ನೆದೆಯ ಜ್ಯೋತಿಯನು ಕೂಸ ಗುಂಡಿಗೆಯಲ್ಲಿ 
ಬೆಳಗಿ ಆ ತೃಪ್ತಿಯಲಿ ಪ್ರಾಣವಾ ತೊರೆದಿಹಳು 

ರವಿಗೆ ಮೊರೆಯಿಟ್ಟಿಹಳು ಬೆಳಕ ತೋರದಕೆಂದು 
ಕಾಲನಿಗೆ ಕೈ ಹಿಡಿದು ನಡೆಸೆಂದಳು 
ತಂಗಾಳಿಗೆಂದಳು ಆಹ್ಲಾದ ನೀಡೆಂದು 
ಆಗಸದಿ ಆಶ್ರಯವ ಕೋರುತಿಹಳು

ದೇವನಾ ಮಡಿಲಲ್ಲಿ ಹಸುಗೂಸ ತಾನಿಟ್ಟು
ಪ್ರೀತಿಯರಮನೆ ಕೀಲಿ ಕೊಡು ಎಂದಳು 
ಭುವಿಯೇ ಅರಮನೆಯಿವಗೆ, ದೇವ ಪಾಲಕನವನು 
ವಿಶ್ವವೇ ಪರಿವಾರ, ಭವ ಬಂಧವು....

2 comments:

  1. ಅದ್ಭುತವಾದ ಕವಿತೆ ಪರೇಶ್.. ತನ್ನ ಮಡಿಲ ಕಂದನ ಹುಟ್ಟಿಗಾಗಿ ತನ್ನ ಪ್ರಾಣವನ್ನೆ ಅರ್ಪಿಸಿದ ಆ ಮಹಾತಾಯಿಯ ಪರಿಚಯ ಮಾಡಿಸಿದೆ ನಿಮ್ಮ ಕವಿತೆ.. ಅದೆಷ್ಟು ಅಚ್ಚುಕಟ್ಟಾದ ನಿರೂಪಣೆ ಇದೆ ನಿಮ್ಮ ಶೈಲಿಯಲ್ಲಿ.. ಬಿಳಕಿಂಡಿ ಇಂತಹ ಸೂಕ್ಷ್ಮಗಳನ್ನು ಶೋಧಿಸಿ ಭಾವಗಳನ್ನು ಹೆಕ್ಕುತ್ತಿರುವುದು ತುಂಬಾ ಖುಷಿಯಾಗುತ್ತದೆ.. ಆ ತಾಯಿಯ ವೇಧಬೆ, ಚಡಪಡಿಕೆ ಮನಮುಟ್ಟೂವಂತೆ ಹರಳುಗಟ್ಟಿದೆ ಕವಿತೆಯಲ್ಲಿ.. ಕವಿತೆಯ ಭಾವ ತನ್ನ ಗಟ್ಟಿತನದಿಂದ ಅದ್ಭುತವಾದ ಪ್ರತಿಮೆಯಾಗಿ ನಿಂತಿದೆ.. ತುಂಬಾ ಹಿಡಿಸಿತು ಕವಿತೆ..

    ReplyDelete
  2. ಒಂದು ಪ್ರಶ್ನೆಯಂತಹ ಕವನ.

    ಒಂದು ಜನನ, ಮಾತೃ ಗರ್ಭದ ವಿಯೋಗ.

    ಹೊಕ್ಕಳ ಬಳ್ಳಿ ಕತ್ತರಿಸಿದ ಮೇಲೆ ಅದು ಸ್ವತಂತ್ರ.

    ನಿಮ್ಮ ಚಿಂತನೆಗೆ ಜೈಹೋ!

    ReplyDelete