Saturday 7 January 2012

ನಲ್ಲೆಯ ಬಾಳಲಿ ಬರಲಿ ಹೊಸ ಬೆಳಕು




ನಿನ್ನ ಕಣ್ಣಂಚಿನಲಿ ಮಿಂಚುವಾ ಮಲ್ಲಿಗೆಯು
ಬಾಡುತಿರುವುದು ಎಂಬ ಭಾವವದು ಎದೆಯಲ್ಲಿ

ಕಣ್ಣೀರಿನಲ್ಲಿಯೂ ಪ್ರೀತಿಯಾ ಸವಿ ಇರುವ 
ನಿನ್ನ ನಗೆ ನೆನೆದಿಹುದು ನೋವಿನಾ ಸೆಲೆಯಲ್ಲಿ 

ಅಕ್ಷಿಯಲೇ ಮುಗ್ಧತೆಯ ಧಾರೆಯನು ಎರೆದೆ ನೀ
ಇಂದ್ಯಾಕೋ ಕಂಡೆ ನಾ ಅಬ್ಬರಿಸೋ ಅಲೆಯಲ್ಲಿ 

ಕರ ಪಿಡಿದು ನಡೆಸುವಾ ಅನುರಾಗ ಚಿಲುಮೆ ನೀ
ನೀರದುವು ಬತ್ತಿದೆಯೋ ಬೇಸಿಗೆಯ ಬಿಸಿಲಲ್ಲಿ ?

ಭಾವನೆಯ ಸಾಗರದಿ ಭಾವಯಾನಿಯು ನೀನು
ಇಂದು ನಿನ್ನನು ಕಂಡೆ ಬರಡು ಮರುಭೂಮಿಯಲಿ 

ಪ್ರೀತಿಯನು ಕಿತ್ತೊಗೆದೆ ಮನೆಯವರ ಖುಷಿಗಾಗಿ 
ಆದರೂ ನರಳುತಿಹೆ  ಹಳೆ ನೆನಪ ಗುಹೆಯಲ್ಲಿ 

ನಿನ್ನ ಈ ರೂಪವನು ಸಹಿಸಲೊಪ್ಪದು ಮನವು 
ಮತ್ತೆ ಅರಳಲಿ ಹೂವು ಮುಳ್ಳಿರುವ ವನದಲ್ಲಿ 

ಮತ್ತೆ ನಿನ್ನಲಿ ನಿನ್ನ ಕಾಣುವಾ ಆಶಯವು
ಬರಲೊಬ್ಬ ಯುವ ಕುವರ ಬೇಗನೆಯೇ ಬಾಳಲ್ಲಿ 

1 comment:

  1. ಪರೇಶ್ ಸುಂದರ ಚಿತ್ತಾರವಿದು, ಅದ್ಭುತವೆನಿಸುವ ನಿರೂಪಣೆ.. ನಿಮ್ಮ ಕಾವ್ಯದಲ್ಲಿನ ವೈವಿಧ್ಯತೆಗಿಡಿದ ಕೈಗನ್ನಡಿ ಈ ಕವಿತೆ.. ಪರೇಶ್ ಕೇವಲ ಸಮಾಜಮುಖಿಯಾದ ಧಾರೆಗಳನ್ನಲ್ಲದೆ ಅದ್ಭುತವೆನಿಸುವಂತಹ ಪ್ರೀತಿಯ ಧಾರೆಗಳನ್ನು ಹರಿಸಬಲ್ಲರು ಎಂದು ಸಾರುತ್ತಿದೆ ಈ ಕವಿತೆ.. ಕವಿಮನದ ಭಾವ ಮನಸ್ಸಿಗೆ ತುಂಬಾ ಹತ್ತಿರದ್ದೆನಿಸುತ್ತದೆ ಮತ್ತು ಆತನ ಪ್ರೀತಿಯಲ್ಲಿನ ನಿಸ್ವಾರ್ಥತೆಗೆ ಯಾವುದೂ ಸಾಟಿಯಲ್ಲ.. ತನ್ನನ್ನು ತೊರೆದ ಹುಡುಗಯ ಬಾಳಲ್ಲಿ ದೀಪಬೆಳಗಲಿ, ನನ್ನ ಬಾಳನ್ನು ಕತ್ತಲಾಗಿಸಿ ಹೋದರು ಅಡ್ಡಿಯಿಲ್ಲ ಎಂಬ ಭಾವ ಮನಸ್ಸೆಳೆಯುವಂತದ್ದು.. ಪಕ್ವ ಪದಗಳ ಪ್ರಯೋಗ ನಿಮ್ಮ ನಿರೂಪಣೆಯಲ್ಲಿನ ವೈಶಿಷ್ಠ್ಯ.. ಕವಿತೆ ತುಂಬಾ ಹಿಡಿಸಿತು..:)))

    ReplyDelete