Monday 28 May 2012

ಲೇಖನಿ ದುರ್ಯೋಧನನ ಗದೆಯಾಗದಿರಲಿ



                               
"ಅವರ್ಯಾರೋ ಏನೋ ಹೇಳಿಕೆ ಕೊಟ್ಟರು.ಅದು ಸಹ್ಯವಲ್ಲ." ಎಂದು ಎಷ್ಟೋ ಜನರ ಮಾತುಗಳನ್ನು ತಿರುಚಿ ಅದಕ್ಕೆ ಬಣ್ಣ ಹಚ್ಚಿ ಸುಗಂಧ ಲೇಪಿಸಿ ಅನೇಕ ಲೇಖನಗಳು ಬರುತ್ತಿರುವುದನ್ನು ಇತ್ತೀಚಿಗೆ ನೋಡುತ್ತಿದ್ದೇವೆ. ಇಂತಹ ಲೇಖನಗಳ ಬಗ್ಗೆ ಹತ್ತು ಹಲವಾರು ಬಿಸಿ ಚರ್ಚೆಗಳು ಸಾಮಾಜಿಕ ತಾಣಗಳಲ್ಲಿ, ಮತ್ತು ಬುದ್ಧಿ ಜೀವಿಗಳ ನಡುವೆ ನಡೆಯುತ್ತಿವೆ. ಹೀಗೆ ಒಬ್ಬ ವ್ಯಕ್ತಿಯ ತೇಜೋವಧೆಯ ಮೂಲಕ ತಮ್ಮ ಜನಪ್ರಿಯತೆಯನ್ನು ದುಪ್ಪಟ್ಟು ಮಾಡುವ ಹುನ್ನಾರಗಳು ಈಗಿನ ಮಾಧ್ಯಮಗಳಲ್ಲಿ ವ್ಯಾಪಕವಾಗಿರುವಾಗ ಓದುಗರು ಆಲೋಚನೆ ಮಾಡಬೇಕಾದ ಅಗತ್ಯ ಇದೆ.

ಇಂದು ರಾಜಕೀಯ ಪಕ್ಷಗಳ ಚೇಲಾ ಆಗಿರುವ ಅದೆಷ್ಟೋ ಪತ್ರಿಕೆಗಳು, ಟಿ.ವಿ. ಚಾನೆಲ್ ಗಳು ತಮ್ಮ ಸ್ವಾರ್ಥಸಾಧನೆಗಾಗಿ ವೃತ್ತಿ ಧರ್ಮವನ್ನೇ ಮರೆತು ತಾಂಡವವಾಡುತ್ತಿವೆ. ದೇಶವನ್ನು ಮೇಯುತ್ತಿರುವ ರಾಜಕಾರಣಿಗಳನ್ನು ಹೊಗಳಿ ಬರೆಯುವ ಈ ಬುದ್ಧಿ ಜೀವಿಗಳು, ಇರುವೆಯಂತಹ ವಿಷಯವನ್ನು ಆನೆ ಮಾಡಿ ತೋರಿಸಿ ತನ್ಮೂಲಕ ಭಾವನಾತ್ಮಕವಾಗಿ ಜನರನ್ನು ಮೂರ್ಖರನ್ನಾಗಿಸುವಲ್ಲಿ 
ಪರಿಣಿತರಾಗಿದ್ದಾರೆ. ಸಮಾಜದ ಆಗು ಹೋಗುಗಳನ್ನು, ತೊಡಕುಗಳನ್ನು ಬಿಂಬಿಸಬೇಕಾದ ಮಾಧ್ಯಮಗಳು ತಮಗೆ ಬೇಕಾದ ರೀತಿಯಲ್ಲಿ ವಿಷಯವನ್ನು ತಿರುವು ಮುರುವು ಮಾಡಿ ಬಿತ್ತರಿಸಿ ಜನರನ್ನು ನಂಬಿಸುತ್ತಿದ್ದಾರೆ. ಮಾಧ್ಯಮಗಳೇ ದುಸ್ಶ್ಯಾಸನರಾಗಿ ನಿಂತಾಗ ಸಮಾಜದ ಸ್ವಾಸ್ಥ್ಯ ಬೆತ್ತಲಾಗುವುದರಲ್ಲಿ ಮತ್ತೇನು ಸಂಶಯ? 

ಇದರ ನಡುವೆ ಕನ್ನಡಿಗರು ನೀರೆರೆದು ಬೆಳೆಸಿದ ಹತ್ತು ಹಲವು ಲೇಖಕರು, ತಾವು ಬರೆದದ್ದು ಶಾಸನ ಎಂಬ ಅಹಂಕಾರದಿಂದ ಮನಸ್ಸಿಗೆ ಬಂದದ್ದು ಗೀಚಿ ಹೆಸರು ಮಾಡುವ ಧಾವಂತದಿಂದ ತಮ್ಮ ಮುಖಕ್ಕೆ ತಾವೇ ಕೆಸರನ್ನು ಎರಚಿಕೊಳ್ಳುತ್ತಿದ್ದಾರೆ. ಜನಪ್ರಿಯತೆಯ ಗುಂಗಿನಲ್ಲಿ ಸಣ್ಣ ವಿಷಯಗಳನ್ನು ವಿವಾದದೆಡೆಗೆ ಕೊಂಡೊಯ್ಯುವುದು ಒಂದು ಫ್ಯಾಶನ್ ಆಗಿ ಬಿಟ್ಟಿದೆ. ಇದೆಲ್ಲದರ ನಡುವೆ ಶಾಂತವಾಗಿ ನಿಸ್ವಾರ್ಥವಾಗಿ ಸಮಾಜ ಸೇವೆ, ಕನ್ನಡ ಸೇವೆ ಮಾಡುತ್ತಿರುವ ಎಷ್ಟೋ ಜನ ಮತ್ತು ಎಷ್ಟೋ ಸಂಘ ಸಂಸ್ಥೆಗಳು ಎಲೆ ಮರೆಯ ಕಾಯಾಗಿಯೇ ಉಳಿದಿವೆ.ಇರುವೆಯನ್ನು ಆನೆ ಮಾಡಿ ತೋರಿಸುವ ಇಂಥ ಲೇಖಕರು, ನಿಜವಾದ ಆನೆಯನ್ನು ಯಾಕೆ ತೋರಿಸುತ್ತಿಲ್ಲ? ಸಮಾಜಕ್ಕೆ ಮಾದರಿಯಾಗುವಂತಹ ಬರಹ ಲೇಖನಗಳಿಗೆ ಪ್ರಾಧಾನ್ಯತೆ ಕುಂದುವುದಕ್ಕೆ ಏನು ಕಾರಣ? ಪ್ರತಿ ಹಳ್ಳಿಯಲ್ಲೊಬ್ಬ ಗಾಂಧೀ ಸಿಗುತ್ತಾರೆ. ಅಂಥವರ ಬಗ್ಗೆ ಲೇಖನಗಳು ಬಂದರೆ ಖಂಡಿತ ಎಲ್ಲರಿಗೂ ಅದೊಂದು ಮಾದರಿಯಾಗುವುದಲ್ಲಿ ಸಂಶಯವಿಲ್ಲ. 

ಹೆಸರು ಗಳಿಸಬೇಕೆಂದು ಅಂತಹ ವಿಷಯಗಳನ್ನು ಹುಡುಕಿ ಬರೆಯುವ ಲೇಖಕರು ಜಾಸ್ತಿಯಾಗಿದ್ದಾರೆ. ಒಬ್ಬ ಲೇಖಕನ, ಕವಿಯ ಗುಣಮಟ್ಟ ಬರೀ ಅವನು ಬರೆದ ಲೇಖನ ಕವನಗಳಲ್ಲಿ ಅಳೆಯಲು ಅಸಾಧ್ಯ. ನಿಜವಾದ ಸಾಹಿತ್ಯದ ಹಿಂದೆ ಒಂದು ಸಹೃದಯವಿರಬೇಕು. ಅಹಂಕಾರವಲ್ಲ.ಅವನು ಬರೀ ಲೇಖನ ಬರೆಯುವುದಷ್ಟೇ ಅಲ್ಲ. ಅದನ್ನು ಬದುಕಬೇಕು. ಉಪದೇಶ ನೀಡುವ ಬುದ್ಧಿ ಜೀವಿಗಳು ಸಮಾಜದಲ್ಲಿ ತುಂಬಿ ತುಳುಕುತ್ತಿರುವಾಗ,ಬರೆದಂತೆ ಬದುಕಿ ಇತರರಿಗೆ ಮಾದರಿಯಾಗುವಂತಹ ಲೇಖಕರು ಬೇಕು. ಲೇಖನಿ ಸಮಾಜದ ಬಿರುಕುಗಳನ್ನು ಹೊಲಿಯುವ ಸೂಜಿಯಾಗಬೇಕೇಹೊರತು ಒಬ್ಬರನ್ನು ಇರಿದು, ನೋಯಿಸಿ ಆ ತನ್ಮೂಲಕ ಇನ್ನೊಬ್ಬನ ಸ್ವಾರ್ಥ ಸಾಧನೆಯ ಮಾಧ್ಯಮವಾದರೆ ಪತ್ರಿಕಾಂಗ ಎಂಬ ಪವಿತ್ರ ಅಂಗಕ್ಕೆ ಯಾವುದೇ ಅರ್ಥವಿಲ್ಲ. 

ಈ ನಿಟ್ಟಿನಲ್ಲಿ ಓದುಗರು, ಮತ್ತು ಲೇಖಕರೆಲ್ಲ ಜಾಗೃತರಾಗಬೇಕು. ಲೇಖನಿಗೆ ಒಂದು ಬಂದೂಕಿನ ಶಕ್ತಿಯಿದೆ. ಅದು ಒಬ್ಬ ದೇಶದ ಸೈನಿಕನ ಕೈಯಲ್ಲಿರುವ ಬಂದೂಕಾಗಲಿ. ಉಗ್ರಗಾಮಿಯ ಬಂದೂಕಾಗುವುದು ಬೇಡ. ಒಬ್ಬ ಸಾಹಿತಿ ನಿಜವಾದ ಸಾಹಿತಿಯಾಗುವುದು ಅವನಲ್ಲಿರುವ ಸಹೃದಯದಿಂದ. ನಮ್ಮ ಕನ್ನಡಿಗರು ಅಂತಹ ಸಾಹಿತಿಗಳಿಗೆ ಪ್ರೋತ್ಸಾಹಿಸಿ ಮೇಲೆ ತರುವಂತಾಗಲಿ. ಮಾಧ್ಯಮದಲ್ಲಿ ಬಿತ್ತರವಾಗುವ ವಿಷಯಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ ವಿಮರ್ಶೆಯಾಗಲಿ. ಒಂದು ಸ್ವಸ್ಥ ಪತ್ರಿಕಾಂಗ ಸೃಷ್ಟಿಯಾಗಲಿ. ಲೇಖನಿ ದುರ್ಯೋಧನನ ಕೈಯಲ್ಲಿರುವ  ಗದೆಯಾಗದಿರಲಿ. ಅರ್ಜುನನ ಬಿಲ್ಲಾಗಲಿ.

3 comments:

  1. ಒಳ್ಳೆಯ ಆಶಯದ ಲೇಖನ . ಚೆನ್ನಾಗಿದೆ.

    ReplyDelete
  2. ಲೇಖನಿಯ ಜಗತ್ತಿನ ಪರದೆಯ ಹಿಂದಿರುವ ಕೆಲವು ಸ್ವ್ವರ್ಥ ಸತ್ಯಾಮ್ಷಗಳ ಒಳಹೊಕ್ಕು ಬರೆದಿದ್ದೀರ . ಈಗ ಯಾವುದೇ ಕ್ಷೇತ್ರದಲ್ಲೂ ನೋಡಿ ,ಕೆಲವರು ಜನಪಪ್ರಿಯತೆ ಹೆಸರಿನಲ್ಲಿ ಹೂಡುವ ತಂತ್ರಗಳುನ್ನು ನೋಡಿದರೆ ಎಲ್ಲವೂ ಗಿಮಿಕ್ ಗಾಗಿ ,ಅಂತ ಅನ್ಸಿಸದೆ ಹೋಗುವುದಿಲ್ಲ .ನಂಬುವ ಜನ ಇರುವ ತನಕ ನಂಬಿಸುವ ಜನರೂ ಹೇರಳವಾಗಿ ಸಿಗ್ತಾರೆ .ಸದಾಶಯದ ಬರಹ .ಚನ್ನಾಗಿದೆ ಮನ ಮುಟ್ಟಿತು .

    ReplyDelete
  3. ಒಳ್ಳೆಯ ಆಶಯದ ಲೇಖನ. ನನ್ನ ವೈಯಕ್ತಿಕ ನಂಬಿಕೆ ಏನು ಅಂದ್ರೆ, "ಫೇಮಸ್" ವಿಷಯಗಳ ಬಗ್ಗೆ ಲೇಖನಗಳನ್ನ ಬರೆಯೋರು ಕಡಿಮೆ ಆಗುವ ಮೊದಲು ಸದಭಿರುಚಿಯ, ಒಳ್ಳೊಳ್ಳೇ ಆಶಯದ ಲೇಖನವನ್ನು ಇಷ್ಟಪಡುವ, ಆಸ್ವಾದಿಸುವ, ಅಯ್ಕೆ ಮಾಡಿಕೊಳ್ಳುವ, ಓದುವಂತಹ ಓದುಗ ಮಹಾಶಯರು ಸೃಷ್ಟಿಯಾಗಬೇಕಾದ್ದು ಕೂಡ ಬಹುಮುಖ್ಯ. ಲೇಖಕ ಜನ ಓದಲಿ ಎಂದೇ ತಾನೇ ಬರೆಯೋದು! ಏನೇ ಹೇಳಿದರೂ, ಲೇಖನಗಳು ಜೀರ್ಣೋದ್ಧಾರವಾಗಲು ಲೇಖಕನ ಪಾತ್ರದಷ್ಟೇ, ಓದುಗನ ಪಾತ್ರವೂ ಪ್ರಾಮುಖ್ಯ ಹೊಂದಿದೆ. ಈ ಲೇಖಕ ಮತ್ತು ಓದುಗ ರೈಲು ಮತ್ತು ಕಂಬಿ ಇದ್ದಹಾಗೆ. ಕಂಬಿ ಯಿಲ್ಲದೆಯೇ ರೈಲು ಓಡುವುದಿಲ್ಲ, ರೈಲೇ ಓಡದ ಮೇಲೆ ಕಂಬಿ ಇದ್ದು ಏನು ಸಾರ್ಥಕತೆ ಲಭಿಸಿದ ಹಾಗಾಯ್ತು :-) ಆದ್ದರಿಂದ, ಜಾಗೃತರಾಗಬೇಕಾದ್ದು ಲೇಖಕರು ಮಾತ್ರವಲ್ಲ, ಓದುಗನೂ ಸಹ ಎಂಬುದು ನನ್ನ ಅನ್ನಿಸಿಕೆ. ಹಾ ಆದರೆ, ರೈಲಿಗಿಂತ ಕಂಬಿಗಳು ಹೆಚ್ಚಿನ ಹೊಣೆಗಾರಿಕೆ ಹೊಂದಿರುತ್ತದೆ ಅದನ್ನು ಒಪ್ಪಬೇಕಾದ್ದೇ :-) ಶುಭವಾಗಲಿ..

    ReplyDelete