Saturday 2 June 2012

ಬದುಕು - ಶಿಕ್ಷಣ


ಜಿ.ಎಸ್. ಜಯದೇವ ಅವರ "ಹಳ್ಳಿ ಹಾದಿ" ಪುಸ್ತಕ ಓದುತ್ತಿದ್ದಾಗ ಈ ಕೆಳಗಿನ ಸಾಲುಗಳು ಬಹಳ ಆಲೋಚನೆಗೆ ಎಡೆ ಮಾಡಿಕೊಟ್ಟವು:"ಒಂದನೇ ತರಗತಿಯ ಮಗುವನ್ನು ಅಧ್ಯಾಪಕನಿಗೆ ಹೋಲಿಸಿದಾಗ ಗಾತ್ರದಲ್ಲಿ ಚಿಕ್ಕದಿರಬಹುದು. ಆದರೆ ಅದಕ್ಕೂ ಕೂಡ ವ್ಯಕ್ತಿ ಸ್ವಾತಂತ್ರ್ಯವಿದೆ.ಆ ವ್ಯಕ್ತಿತ್ವವನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಸ್ವೀಕರಿಸಿದಾಗ ಮಾತ್ರ ಉತ್ತಮ ಶಿಕ್ಷಣ ಸಾಧ್ಯ. ಒಂದನೇ ತರಗತಿಯ ಪರಿಸರ ಪುಸ್ತಕ ನೋಡಿದರೆ-'ಉಸಿರಾಡಲು ಗಾಳಿ ಬೇಕು, ಬಾಯಾರಿಕೆಯಾದಾಗ ನೀರು ಬೇಕು' ಎಂದು ಪಾಠವಿದೆ. ಕಲಿಸಬೇಕಾದ ವಿಷಯಗಳು ಇವೇ ಎಂದು ಈ ಪುಸ್ತಕಗಳು ಅಧಿಕಾರವಾಣಿಯಿಂದ ಹೇಳುತ್ತವೆ. ಒಂದನೇ ತರಗತಿಗೆ ಪರಿಸರದ ಬಗ್ಗೆ ಒಂದು ಪುಸ್ತಕ ಪ್ರಕಟಿಸುವ ಪ್ರಮೇಯವಾದರೂ ಏನು? ಅಧ್ಯಾಪಕನಾದವನು ಮಗುವಿಗೆ ಈಗಾಗಲೇ ಇರುವ ಪರಿಸರ ಜ್ಞಾನವನ್ನು ಸೋಪಾನ ಮಾಡಿಕೊಂಡು ಅದನ್ನು ವಿಸ್ತರಿಸುವ ಕೆಲಸ ಮಾಡಬಹುದಿತ್ತಲ್ಲ? ಒಂದನೇ ತರಗತಿಯ ಮಗುವಿಗೆ ಬೋಧಿಸಬಹುದಾದಷ್ಟು ಪರಿಸರ ಜ್ಞಾನ ಅಧ್ಯಾಪಕನಾದವನು ಸ್ವತಂತ್ರನಾಗಿ ಗಳಿಸಲಾರನೆ?  ಇದನ್ನು ಮಗು ಇರುವ ಪರಿಸರದಲ್ಲೇ ಅದಕ್ಕನುಗುಣವಾಗಿ ಬೋಧಿಸಲಾರನೆ?"

ಇದನ್ನು ಮೊದಲ ಬಾರಿಗೆ ಓದಿದಾಗ ಅಸಮಾಧಾನವಾದರೂ, ಆಲೋಚಿಸುತ್ತ ಹೋದಾಗ ಬಹಳ  ಸಮಂಜಸ ಎನಿಸಿತು. ಪುಸ್ತಕದ ಬದನೆಕಾಯಿಯ ದಾಸನಾಗಿರುವ ವಿದ್ಯಾರ್ಥಿ. ಮಗುವಿನ ತಾತ್ಕಾಲಿಕ ಜ್ಞಾಪಕ ಶಕ್ತಿಯನ್ನು ಪರೀಕ್ಷಿಸುವ ಪರೀಕ್ಷಾ ಪದ್ಧತಿ. ಮಗುವಿನ ಸ್ವತಂತ್ರ ಚಿಂತನೆಗೆ ಅನುವೇ ಇಲ್ಲದಂತೆ ಮಾಡಿ ಒತ್ತಡಕ್ಕೀಡು ಮಾಡಿ ಆ ಮಗುವನ್ನು ಸಂಕುಚಿತನಾಗಿ ಮಾಡುವ ಸ್ಪರ್ಧಾತ್ಮಕತೆ. ಶಿಕ್ಷಣದ ಗುರಿ ಬದುಕಲು ಕಲಿಸುವುದು. ಆದರೆ ಈಗಿನ ಶಿಕ್ಷಣದ ಗುರಿ ದುಡ್ಡು ಮಾಡಲು ಕಲಿಯುವುದಾಗಿದೆ. ಮೂಲಭೂತ ತತ್ವಗಳು ಶಿಕ್ಷಣ ಪದ್ಧತಿಯಿಂದ ಮಾಯವಾಗಿ ಶಾಲೆಗಳು ವ್ಯಾಪಾರಿ ಸಂಸ್ಥೆಗಳಾಗಿವೆ. ಒಂದನೇ ಕ್ಲಾಸ್ ದಾಖಲಾತಿಗೆ ಲಕ್ಷಗಟ್ಟಲೆ ಡೊನೇಶನ್ ಕೊಡುವ ಪಾಲಕರು ಬರಿಯ ಹೆಸರಿಗೆ, ಮತ್ತು ಐಷಾರಾಮಿ ಸವಲತ್ತುಗಳಿಗೆ ಮಾರು ಹೋಗುತ್ತಿದ್ದಾರೆ. ಸಮಯಕ್ಕೆ ದುಡ್ಡಿನ ಬೆಲೆ ಕಟ್ಟುವ ಈ ಶಾಲೆಗಳು ಗುರು ಶಿಷ್ಯರ ಅವಿನಾಭಾವ ಸಂಬಂಧಕ್ಕೆ ಧಕ್ಕೆ ತರುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. 

ಇವೆಲ್ಲದರ ಬಗ್ಗೆ ಆಲೋಚನೆ ಮಾಡಿದಾಗ ಹಿಂದಿನ ಗುರುಕುಲ ಪದ್ಧತಿ ಮತ್ತೆ ಜಾರಿಯಾಗಬೇಕೆಂಬ ಆಲೋಚನೆ ಖಂಡಿತ ಬರುತ್ತದೆ. ಮತ್ತು ಕೆಲವು ಕಡೆಗಳಲ್ಲಿ ಇಂತಹ ಪ್ರಯೋಗಗಳು ಸಹ ನಡೆಯುತ್ತಲಿವೆ. ಬ್ರಿಟೀಷರು ಭಾರತಕ್ಕೆ ಬಂದಾಗ ದೇಶ ಒಡೆಯಲು ಪ್ರಯತ್ನಿಸಿದಾಗ ಅವರಿಗೆ ಸವಾಲಾಗಿ ನಿಂತಿದ್ದು ಇಲ್ಲಿನ ಶಿಕ್ಷಣ ಕ್ರಮ. ಇಂತಹ ಶಿಕ್ಷಣ ಪದ್ಧತಿ ಇರುವವರೆಗೂ ದೇಶ ಅಲ್ಲಾಡಿಸಲು ಸಾಧ್ಯವಿಲ್ಲ ಎಂದರಿತ ಇವರು, ನಮ್ಮ ಶಿಕ್ಷಣ ಕ್ರಮವನ್ನೇ ಅಲ್ಲಾಡಿಸಿ ಆ ತನ್ಮೂಲಕ ದೇಶ ಅಲ್ಲಾಡಿಸಿದರು. ಅದರ ಫಲ ಇಂದಿನ ಶಿಕ್ಷಣ. 

ಈ ನಿಟ್ಟಿನಲ್ಲಿ ಖಂಡಿತ ಕೂಲಂಕುಶ ಆಲೋಚನೆಯಾಗಬೇಕಾಗಿದೆ. ಕೇವಲ ವೃತ್ತಿ ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆ ಅಲ್ಲದೆ, ಮೂಲಭೂತ ತತ್ವ ಬೋಧನೆಗಳೊಂದಿಗೆ ಬದುಕಲು ಕಲಿಸುವ ಶಿಕ್ಷಣ ಪ್ರಾಥಮಿಕ ಹಂತದಿಂದಲೇ ಜಾರಿಯಾಗಬೇಕಾಗಿದೆ. ಸ್ಪರ್ಧೆಯ ಒತ್ತಡದಲ್ಲಿ ಸ್ವಂತ ಆಲೋಚನೆಯನ್ನೇ ಸಂಕುಚಿತಗೊಳಿಸುವ ಶಿಕ್ಷಣ ಹೋಗಿ, ಸ್ವತಂತ್ರವಾಗಿ ತನ್ನ ಜ್ಞಾನ ವಿಸ್ತರಿಸುವ ಅವಕಾಶ ಪ್ರತಿಯೊಬ್ಬ ಮಗುವಿಗೂ ದಕ್ಕಬೇಕು. ಈ ದಿಶೆಯಲ್ಲಿ ಪಾಲಕರು ಮತ್ತು ಶಿಕ್ಷಣ  ತಜ್ಞರೆಲ್ಲ  ಆಲೋಚಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

1 comment:

  1. ಪರೇಶ್, ಬಹುಶ ಇಂಥ ಮೇರು ಕೃತಿಗಳು ನಮ್ಮ ಯೋಚನಾ ಲಹರಿಯನ್ನು ಸಾಣೆ ಹಿಡಿದು ಮನಸು ಸಮಾಜಮುಖಿಯಾಗುವತ್ತ ಸಹಕರಿಸುತ್ತವೇನೋ. ಹಳ್ಳಿ ಹಾದಿಯೊಳಗಿನ ಲೇಖನ ಮಾಲೆಗಳ ಒಳಹೊಕ್ಕಬೇಕಾದ ಅವಶ್ಯಕತೆ ಇದೆ ಎಂದು ಅರಿವಾದದ್ದು ಈ ಕೃತಿ ಬಿಡುಗಡೆಯ ಸಂಧರ್ಭದಲ್ಲಿ ಕೃತಿ ಪರಿಚಯಿಸಿದ ಡಾ|ಎನ್. ಗಾಯತ್ರಿ ಮತ್ತು ಇದರ ಬಗ್ಗೆ ಸ್ಥೂಲವಾಗಿ ವಿಚಾರಧಾರೆ ಹರಿಸಿದ ಪ್ರೊ.ಹೆಚ್.ಎಸ್. ರಾಘವೇಂದ್ರ ರಾವ್ ಅವರ ಮಾತುಗಳನ್ನು ಕೇಳಿ. ಹಳ್ಳಿಹಾದಿಯಲ್ಲಿನ ಲೇಖನ ನಿಮ್ಮೀ ವಿಚಾರಧಾರೆಗೆ ಅನುವು ಮಾಡಿಕೊಟ್ಟದ್ದು ಖುಷಿ ಕೊಟ್ಟಿದೆ. ಈ ಚಿಂತನೆಗಳು ಸಾಮಾಜಿಕ ಬದಲಾವಣೆಯತ್ತ ಮುಖಮಾದುವುದನ್ನು ಎದುರು ನೋಡೋಣ. ಕೃತಿ ಕರ್ತೃ ಜಿ.ಎಸ್.ಜಯದೇವ ಅವರಿಗೂ ಪ್ರಣಾಮಗಳು.

    ReplyDelete