Monday 18 June 2012

ಯುದ್ಧ ಮುಗಿದಿದೆ ,ಸದ್ದು ನಿಂತಿದೆ



ಬಾನಂಚಿನಲಿ ಮಾಯವಾಗುತಿಹ 
ಸೂರ್ಯನ ಕೆಂಗಣ್ಣಿನ ನೋಟ 
ಸುತ್ತ ಗಿಡುಗಗಳ ದಂಡು
ಹಾರುತಿವೆ,
ರುಚಿ ಮಾಂಸದ ನರನ 
 ಹೊಂಚು ಹಾಕುತ್ತ 
ನಾಯಿ ಬಾಯ್ತೆಗೆದು ನಿಂತಿದೆ 
ಜೊಲ್ಲು ಸುರಿಸುತ್ತ 

ಯುದ್ಧ ಮುಗಿದಿದೆ ,ಸದ್ದು ನಿಂತಿದೆ

ಸಾಮ್ರಾಜ್ಯ ಕಟ್ಟಿ, ಅದನಾಳುವಾ 
ಕಿಚ್ಚು, ಜಗವೆಲ್ಲ ತನ್ನದಾಗ-
ಬೇಕೆಂಬ ಹುಚ್ಚು 
ಯಾರದೋ ದುರಾಸೆ
ಯಾರದೋ ದ್ವೇಷ 
ಅವರಿಗೋಸ್ಕರ ಹೊಡೆದಾಡಲು 
ಅಮಾಯಕ ಸೈನಿಕರು 
ಗೆದ್ದವರ ಮೋಜಿನಾಟ 
ಸೋತವರ ಮೈ ಪರಚಾಟ 
ಅತ್ತ ದೂರದಲಿ ತನ್ನವರ ಕಳೆದುಕೊಂಡವರ 
 ಮೌನ ಆಕ್ರಂದನ 

ಯುದ್ಧ ಮುಗಿದಿದೆ ,ಸದ್ದು ನಿಂತಿದೆ

ನಾನೆಂಬ "ನಾನು" ಮೆರೆಯಲು 
ಅದೆಷ್ಟೋ ಸಾವು ನೋವು 
ನೋವು ಮಡುಗಟ್ಟಿದ ಮೌನ 
ದುಃಖ ತಡೆಯದೆ,
ಕಣ್ಣೀರು ಸುರಿಸಿದೆ ಬಾನು
ಅಮಾಯಕರ ರಕ್ತ ತೋಯ್ದು 
ಸೇರಿತು ಸಾಗರವ 
ಪ್ರತಿ ವರುಷ ಆ ಗಾಯ 
ಹಸಿ ಮಾಡುವುದು 
ಮತ್ತೆ ಸುರಿದು 

ಯುದ್ಧ ಮುಗಿದಿದೆ ,ಸದ್ದು ನಿಂತಿದೆ

No comments:

Post a Comment