Wednesday 20 June 2012

ಶೃಂಗಾರ ಸಂಜೆ



ಸೊಂಪಾದ ಸಂಜೆಯಲಿ ಸಂಗಾತಿ ಸಂಗದಲಿ 
ಸವಿನೆನಪ ಮೆಲುಕು ನಾ ಹಾಕುತಿರಲು 
ಮಾಮರದಿ ಕೋಗಿಲೆಯ ಇಂಪಾದ ಕಲರವವು 
ಹೊಸ ಪುಳಕ, ಆಹ್ಲಾದ ನೀಡುತಿತ್ತು

ಅವಳ ಅಕ್ಷಿಯ ನಡುವೆ ಸೂರ್ಯನಾ ಬಿಂಬವದು
ಹೊಸ ಕಾಂತಿಯಲಿ ವದನ ಮಿಂಚುತಿಹುದು 
ಹಿತವಾದ ತಂಗಾಳಿ ಚಾಮರವ ಬೀಸುತಿರೆ 
ಅವಳ ಕೇಶವು ಎನ್ನ ಚುಂಬಿಸಿಹುದು

ಅವಳ ಅವಿನಾಭಾವ ಹೊನ್ನ ಪ್ರೇಮದ ಕಿರಣ 
ಎನ್ನ ಎದೆ ಬಾಗಿಲನು ಅಪ್ಪಳಿಸಿತು 
ಬೆಳಕ ವೇಗವನು ಸಹ ಮೀರಿಸುವ ವರಸೆಯದು 
ಸಾಪೇಕ್ಷ ಸಿದ್ಧಾಂತ ಸುಳ್ಳಾಯಿತು 

ಮೇಲೆ ತಿಳಿಗೆಂಪಿನಾ ಬಾನ ಛಾವಣಿ ಇಹುದು 
ಕೆಳಗೆ ತಿಳಿ ಹೂವಿನಾ ಹಾಸಿಗೆಯದು 
ನಲ್ಲೆಯಾ ಅಪ್ಪುಗೆಯ ಸೊಂಪಾದ ಅನುಭೂತಿ 
ಶೃಂಗಾರ ಸಾಗರದಿ ತೇಲಿಸಿಹುದು

4 comments:

  1. ರಸಿಕ ಚಿತ್ತಕೆ ಒಲಿವ ಸರಸ ಸನ್ನಿವೇಶದ ಕಲ್ಪನೆ.

    ಆಹಾ ಅಂತಹ ರಸಮಯ ಗಳಿಗೆಯಲ್ಲಿ ಅವರಿಬ್ಬರೆ ನಡುವೆ ವಿಸ್ಮಯ ಪ್ರಪಂಚ! ನೆನಸಿಕೊಂಡರೆ ರೋಮಾಂಚನ.

    ಒಳ್ಳೆಯ ಭಾವನಾತ್ಮಕ ಶೈಲಿ ನಿಮ್ಮದು ಪರೇಶ್. ತುಂಬಾ ಆಪ್ತವಾಯಿತು.

    ReplyDelete
  2. ರಸಿಕ ಮನಕೆ ಲಗ್ಗೆ ಇತ್ತ
    ನೀವೊಂದು ಸಿಹಿನೀರ ಬುಗ್ಗೆ

    ReplyDelete
  3. ರಾಗ ಗೊತ್ತಿದ್ದರೆ ನನ್ನವಳ ಎದುರು ಹಾಡುತ್ತಿದ್ದೆ. ರಾಗವೂ ಇಲ್ಲ ನನ್ನವಳೂ ಇಲ್ಲ. ಹಾಗಾಗಿ ಶೃಂಗಾರ ರಸವನ್ನು ನಿಮ್ಮ ಕವಿತೆಯಲ್ಲೇ ಆನಂದಿಸಬೇಕು ಪರೇಶ್.

    ReplyDelete
  4. ಸುಂದರ ಪದ ಪುಷ್ಪಗಳಿಂದ ಅಲಂಕೃತವಾಗಿ ಮನೋಹರವಾಗಿ ಮೂಡಿರುವ ಕವಿತೆ ಇದು.ತುಂಬಾ ಇಷ್ಟವಾಗುವುದು.ಶೃಂಗಾರವು ರಮ್ಯತೆಯೊಂದಿಗೆ ಮಿಲನಗೊಂಡು ಆಯಾಸವನ್ನು ತಣಿಸಿದೆ.ಮನದ ವಾಂಛೆಯು ಅರ್ಥಪೂರ್ಣ.

    ReplyDelete