Wednesday 4 July 2012

ನಮ್ಮ ಕನ್ನಡ ಬ್ಲಾಗಮ್ಮನಿಗೆ ಒಂದು ವರುಷ



ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಬಂದು ಒಂದು ವರ್ಷವಾಗಿತ್ತು. ಕೆಲಸ ಕಾರ್ಯಗಳ ನಡುವೆ, ಹೈ ಟೆಕ್ ಸಂಸ್ಕೃತಿಯ ಮಧ್ಯೆ ನನ್ನತನ ಕಳೆದುಕೊಳ್ಳುವ ಹಾದಿಯಲ್ಲಿ ಸುಗಮವಾಗಿ ಸಾಗಿತ್ತು ಪಯಣ. ಕನ್ನಡ ಭಾಷಣ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ನನಗೆ ಕನ್ನಡ ಮಾತನಾಡುವಾಗ ಶಬ್ಧಗಳ ಅಭಾವ ಕಾಡುತ್ತಿತ್ತು ಎಂದರೆ ಎಷ್ಟರ ಮಟ್ಟಿಗೆ ಈ ನಗರ ಸಂಸ್ಕೃತಿಗೆ ಒಗ್ಗಿ ಹೋಗಿದ್ದೆ ಎಂದು ತಿಳಿಯುತ್ತದೆ. ಬಾಯ್ತುಂಬ ಕನ್ನಡದಲ್ಲಿ ಮಾತನಾಡಬೇಕು ಎಂದರೂ ಕನ್ನಡಿಗರನ್ನು ಹುಡುಕಬೇಕಾದ ಪರಿಸ್ಥಿತಿ. ಕನ್ನಡ ತಿಳಿದವರೂ ತಮ್ಮ ಅಂತಸ್ತಿಗೆ ಭಂಗ ಬರುವುದೆಂದು ಆಂಗ್ಲ ಭಾಷೆಯಲ್ಲಿ ಮಾತನಾಡುವುದು. ಇಂಥ ಸಂದರ್ಭದಲ್ಲಿ "ಕನ್ನಡ ಬ್ಲಾಗ್" ಎಂಬ ಒಂದು ಗುಂಪು ಫೇಸ್ಬುಕ್ ನಲ್ಲಿ ಇರುವುದು ನೋಡಿ ಸೇರಿಕೊಂಡೆ.

ಮೊದಲು ಗುಂಪಿನ ಕುರಿತು ಜಾಸ್ತಿ ಜ್ಞಾನ ಇಲ್ಲ. ಏನೇ ಆಗಲಿ ನಾನೂ ಏನಾದರೂ ಬರೆಯುತ್ತೇನೆ ಎಂದು- "ಭ್ರಷ್ಟಾಚಾರದ ಬೇರು" ಎಂಬ ಲೇಖನ ಬರೆದು ಹಾಕಿದೆ. ಆ ಬಾಲಿಶ ಲೇಖನಕ್ಕೆ ಎಷ್ಟೋ ಸಹೃದಯಿಗಳ ಮೆಚ್ಚುಗೆ, ಪ್ರತಿಕ್ರಿಯೆಗಳು. ಒಬ್ಬ ಚಿಕ್ಕ ಸಾಹಿತ್ಯಾಸಕ್ತನನ್ನು ಪ್ರೋತ್ಸಾಹಿಸಲು ಇಷ್ಟು ಸಹೃದಯಿಗಳು ಇದ್ದಾರೆಯೇ ಎಂದು ಆಶ್ಕಾರ್ಯ ಪಟ್ಟಿದ್ದೆ ಆ ದಿನ. ಅದೇ ಸ್ಪೂರ್ತಿಯಾಯಿತು. ಬರೆಯುತ್ತಾ ಹೋದೆ. ಸಹೋದರರ ಪ್ರೋತ್ಸಾಹ ಮಾರ್ಗದರ್ಶನದಿಂದ ನನ್ನದೇ ಆದ ಬ್ಲಾಗ್ ಮಾಡಿಕೊಂಡು ಮನಸ್ಸಿಗೆ ತೋಚಿದ್ದನ್ನು ಗೀಚುತ್ತ ಇದ್ದೇನೆ. ಒಂದು ಸಾಮಾಜಿಕ ತಾಣದಲ್ಲಿ ಈ ರೀತಿಯ ಕ್ರಾಂತಿ ಎಬ್ಬಿಸಿ, ನಿಯಮಗಳನ್ನು ಹಾಕಿ ಅದನ್ನು ಕಾಪಾಡಿಕೊಂಡು ಶುದ್ಧ ಕನ್ನಡಮಯವಾಗಿ ಇಷ್ಟು ಶಿಸ್ತಿನಿಂದ ಒಂದು ಗುಂಪು ನಡೆಸುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಎಷ್ಟೋ ಸಲ ಮನಸ್ಸಲ್ಲಿ ಕೇಳಿಕೊಂಡಿದ್ದೇನೆ. ಆ ಪ್ರಶ್ನೆ ಮೂಡುವಾಗಲೆಲ್ಲ ಈ ಗುಂಪಿನ ಮೇಲೆ ಅಭಿಮಾನ ಜಾಸ್ತಿಯಾಗುತ್ತಾ ಹೋಯಿತು. ಅಭಿಮಾನ ಪ್ರೀತಿಯಾಯಿತು. 

ಇನ್ನು ನನ್ನ ಸಹೋದರರು ನನ್ನನ್ನು ಪ್ರೋತ್ಸಾಹಿಸಿದಂತೆ, ನಾನು ಇತರರ ಬರಹಗಳಿಗೆ ಪ್ರತಿಕ್ರಿಯಿಸಲು ಶುರು ಮಾಡಿದೆ. ಬೇರೆಯವರನ್ನು ಪ್ರೋತ್ಸಾಹಿಸುವುದರಲ್ಲಿ ಇರುವ ಖುಷಿ ಗೊತ್ತಾಗಿದ್ದೆ ಆಗ. ಅದನ್ನು ನನಗೆ ಕಲಿಸಿದ್ದು 'ಕನ್ನಡ ಬ್ಲಾಗ್'. ಪ್ರತಿಭೆಗಳು ಎಷ್ಟೋ ಇವೆ. ಆದರೆ ಆ ಪ್ರತಿಭೆಗಳನ್ನು ಮುಂದೆ ತರುವ ಹೆಚ್ಚುಗಾರಿಕೆ,ಸಹೃದಯ ಎಷ್ಟು ಜನರಲ್ಲಿದೆ? ಅಂತಹ ಸಹೃದಯಿ, ಸಮಾನ ಮನಸ್ಕ ಮಿತ್ರರು ಎಷ್ಟೋ ಸಿಕ್ಕರು ನನಗೆ ಈ "ಕನ್ನಡ ಬ್ಲಾಗ್' ನಿಂದ. ಇಂದು ಕನ್ನಡ ಬ್ಲಾಗ್ ನಲ್ಲಿ ಕನ್ನಡ ಸಾಹಿತ್ಯದ ರಸದೂಟವೇ ಇದೆ. ಹೊಸ ಚಿಗುರು, ಹಳೆ ಬೇರುಗಳ ಮಿಲನ ನಮ್ಮ ಬ್ಲಾಗ್. ಅದೆಷ್ಟೋ ಯುವಜನರ ಜಿಜ್ಞಾಸೆ, ಹಿರಿಯರ ಪಕ್ವ ವಿಚಾರಗಳ ಸಾಗರವೇ ಇದೆ. ಅಂದು ಕನ್ನಡ ಸಾಹಿತ್ಯದ ಸುಮ ಅರಳಿಸಬೇಕೆಂದು ಸತ್ತಾರಣ್ಣ ನವರು ನೆಟ್ಟ ಈ ಪುಟ್ಟ ಸಸಿ ಈಗ ಹೆಮ್ಮರವಾಗಿ ಅದೆಷ್ಟೋ ಸುಮಗಳನ್ನು ಅರಳಿಸಿ ಸಾಹಿತ್ಯದ ಕಂಪನ್ನು ಎಲ್ಲೆಡೆ ಪಸರಿಸುತ್ತಿದೆ. 

"ನನ್ನ ಬ್ಲಾಗಮ್ಮನಿಗೆ ಒಂದು ವರುಷ ತುಂಬಿದೆ. ಅವಳಿಗೆ ಚೊಚ್ಚಲ ಜನ್ಮ ದಿನದ ಶುಭಾಶಯ ಹೇಳುತ್ತಾ, ನನ್ನದೊಂದು ನಮನ. ಅವಳ ತೇರನ್ನು ಹೀಗೆಯೇ ಅವಿರತ ಎಳೆಯೋಣ."

1 comment:

  1. ಗೆಳೆಯ,

    ಒಂದು ಸಾಮಾಜಿಕ ತಾಣವನ್ನು ಒಳ್ಳೆಯ ಕೆಲಸಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂದು ತೋರಿಸಿದ ಗುಂಪು ’ಕನ್ನಡ ಬ್ಲಾಗ್".

    ಹೊಸ ಹಳೆ ಕವಿಗಳ ರಸ ಪಾಕ ಇಲ್ಲಿದೆ. ನನಗೆ ಇಲ್ಲಿ ಹಲವಾರು ಆಣಿಮುತ್ಯಗಳು ಸಿಕ್ಕವು ಪರೇಶ್, ರವಿ ಮೂರ್ನಾಡ್, ಹೂವಪ್ಪಾ, ಪಮ್ಮಿ, ಕೊಳ್ಳೇಗಾಲ, ಬನವಾಸಿ, ರಾಮನಗರ ಹೀಗೆ.

    ಸತ್ತಾರಣನ ಈ ಕೋಸಿಗೆ ವರ್ಷ ತುಂಬಿದ ಸಂದರ್ಭದಲ್ಲಿ ಇದೋ ನನ್ನ ಅಭಿನಂದನೆಗಳು.

    ReplyDelete