Wednesday, 5 September 2012

ಎಂ.ಬಿ. ನಾಯ್ಕ ಮಾಸ್ತರರು


ಮುಂಜಾನೆ ಆರು ಗಂಟೆಯಾಗಿದೆ. ಕೋಳಿ ಕೂಗುವ ಸಮಯ. ಎಂ.ಬಿ. ನಾಯ್ಕ ಮಾಸ್ತರರು ಆಗಲೇ ಎದ್ದು ಸ್ವಚ್ಛ ಬಿಳಿ ವಸ್ತ್ರದ ಶರ್ಟು ಧರಿಸಿ ಎಂದಿನಂತೆ ಹಳ್ಳಿಯಲ್ಲಿರುವ ತಮ್ಮ ಮನೆಯಿಂದ ಹೊರಟಿದ್ದಾರೆ. ಮನೆಯಿಂದ ೩ ಕಿ.ಮೀ. ದೂರದಲ್ಲಿ ಶಾಲೆ ಇರುವುದು. ಪ್ರತಿದಿನ ನಡೆದೇ ಹೋಗುವುದು. ದಾರಿಯಲ್ಲಿ ಸಿಕ್ಕಿದವರೆಲ್ಲ ವಿನಯಪೂರ್ವಕವಾಗಿ ತಲೆ ಬಗ್ಗಿ ಅವರನ್ನು ನಮಸ್ಕರಿಸುವುದು ಸಾಮಾನ್ಯ ದೃಶ್ಯ. ಹೌದು, ಅವರ ವ್ಯಕ್ತಿತ್ವವೇ ಅಂಥದ್ದು. ನೋಡಿದರೆ ಗೌರವ, ಭಯ ಭಕ್ತಿ ಉಕ್ಕಿ ಬರಬೇಕು. ಅವರ ಗಾಂಭೀರ್ಯ, ಶಿಸ್ತು ಪಾಲನೆಗೆ ಅವರು ಕೊಡುವ ಒತ್ತು ಇವೆಲ್ಲವುಗಳಿಂದ ಕೆಲವು ಮಕ್ಕಳು ಅವರು ಬರುತ್ತಲೇ ದಾರಿಯಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದರು. 

ಆ ದಿನ ಎಂದಿಗಿಂತ ಬೇಗನೆಯೇ ಅವರು ಮನೆ ಬಿಟ್ಟಿದ್ದರು. ನೇರವಾಗಿ ಶಾಲೆಗೇ ಹೋಗುವ ಬದಲು ಅವರ ನಡಿಗೆ ಊರಿನ ಇನ್ನೊಂದು ಮೂಲೆಗೆ ಇರುವ ಹಳ್ಳಿಯ ಕಡೆ ಸಾಗಿತ್ತು. ಅವರ ಹಳೆಯ ಶಿಷ್ಯ ಈಶ್ವರನ ಮನೆ ಕಡೆಗೆ. ಒಂದು ಚಿಕ್ಕ ಮನೆ, ಅಲ್ಲೇ ಪಕ್ಕದಲ್ಲಿ ಚಿಕ್ಕ ತೋಟ, ದನ ಕರುಗಳು.ಅಪ್ಪ ಅಮ್ಮ ಕಲಿತವರಲ್ಲ. ಏನೋ ವ್ಯವಸಾಯ ಮಾಡಿ ತಮ್ಮ ಹೊಟ್ಟೆ ತುಂಬಿಕೊಳ್ಳುವಷ್ಟು ಹಣವಿತ್ತು ಅಷ್ಟೇ. ಬಾಹ್ಯ ಜ್ಞಾನ ಕಡಿಮೆ ಇತ್ತು. ಕನ್ನಡ ಶಾಲೆ ಮುಗಿದ ಮೇಲೆ ಎಂ.ಬಿ.ನಾಯ್ಕ ಮಾಸ್ತರರೇ ಒತ್ತಾಯ ಮಾಡಿ ಹಾಯ್ ಸ್ಕೂಲಿಗೆ ಕಳಿಸುವಂತೆ ಮಾಡಿದ್ದರು. ಕೊನೆಗೂ ಅವನು ಪಿ.ಯು.ಸಿ. ಎರಡನೇ ವರ್ಷವನ್ನು ಉತ್ತಮ ಅಂಕ ಗಳಿಸಿ ಮುಗಿಸಿದ್ದ. ಬಹಳ ಬುದ್ಧಿವಂತ ಹುಡುಗ. ಪಿ.ಯು.ಸಿ ಆಯಿತು. ಮನೆ ಮತ್ತು ತೋಟದ 
ಕೆಲಸ ನೋಡಿಕೊಳ್ಳಲಿ ಅಂತ ಮನೆಯವರು ನಿರ್ಧಾರ ಮಾಡಿದ್ದರು. ಅವನಿಗೂ ಲೋಕ ಜ್ಞಾನ ಜಾಸ್ತಿ ಇಲ್ಲದಿದ್ದುದರಿಂದ ಅಪ್ಪ ಅಮ್ಮನ ಮಾತಿಗೆ ಒಂದು "ಹೂಂ" ಹಾಕಿದ. 

ಮಾಸ್ತರರು ಅವರ ಮನೆಯೊಳಕ್ಕೆ ಹೋದರು. ಕೈಯ್ಯಲ್ಲಿ ಒಂದು ದಿನಪತ್ರಿಕೆ ಇತ್ತು. ಅದರಲ್ಲಿ ರಾಜ್ಯದ ಪ್ರತಿಷ್ಠಿತ ಇಂಜಿನೀಯರಿಂಗ್ ಕಾಲೇಜಿನ ಪ್ರವೇಶದ ಅರ್ಜಿ ಇತ್ತು. ಮಾಸ್ತರರು ಆಗಲೇ ಈಶ್ವರನ ಹೆಸರಿನಲ್ಲಿ ಅರ್ಜಿ ತುಂಬಿ ಕೂಡ ಆಗಿತ್ತು. ಮಾಸ್ತರರು ಒಳಗೆ ಬರುತ್ತಲೇ ಈಶ್ವರನ ಅಪ್ಪ ಬಗ್ಗಿ ಪ್ರೀತಿ ಮತ್ತು ಗೌರವದಿಂದ ನಮಸ್ಕರಿಸಿ ಚಾಪೆ ಹಾಕಿ ಕೂರಿಸಿ ಹಾಲು ನೀರು ತಂದು ಕೊಟ್ಟರು. ಈಶ್ವರ ಅಲ್ಲೇ ಹೊರಗೆ ದನ ಕರೆಯುತ್ತಿದ್ದ. ಎಂದಿನ ಗಂಭೀರ ದನಿಯಲ್ಲಿ ಮಾಸ್ತರರು ಈಶ್ವರನನ್ನು ಕರೆದು- "ನಿನ್ನ ಹೆಸರಿನಲ್ಲಿ ಇಂಜಿನಿಯರ್ ಕಾಲೇಜಿನ  ಅರ್ಜಿ ತುಂಬಿದ್ದೇನೆ.ಸಹಿ ಮಾಡಿ ಪೋಸ್ಟ್ ಮಾಡಿ ಕಳಿಸು." ಎಂದು ಹೇಳಿದರು. ಈಶ್ವರನ ಅಪ್ಪ ಇದೆಲ್ಲ "ಯಾಕೆ ಒಡೆಯಾ ನಮಗೆ ?"ಎಂದು ಭಯದಿಂದಲೇ ಕೇಳಿದರು. ಅವರಿಗೆ ಇವೆಲ್ಲಾ ಇಷ್ಟವಿರಲಿಲ್ಲ. ಒಬ್ಬನೇ ಮಗ. ಮನೆ ಕೆಲಸ ಮಾಡಿಕೊಂದಿರಲಿ ಎಂದು ಅವರು. ಆದರೆ ನೇರವಾಗಿ ಮಾಸ್ತರರ ಮಾತಿಗೆ ಅಲ್ಲಗಳೆಯುವಂತಿಲ್ಲ.ಒಲ್ಲದ ಮನಸ್ಸಿನಿಂದ "ಹೂಂ" ಎಂದರು. 

ಅರ್ಜಿ ಕಳಿಸಿ, ಪ್ರವೇಶ ಸಿಕ್ಕಿ ಆಯಿತು. ಇಂಜಿನಿಯರಿಂಗ್ ಮುಗಿದು, ಸ್ನಾತಕೋತ್ತರ ಪದವಿ ಸಹ ಮುಗಿದು ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು ಈಶ್ವರ. ಮಾಸ್ತರರು ಮಾಡಿದ ಕೆಲಸವನ್ನು ಈಗ ಅವರು ಮಾಡುತ್ತಿದ್ದಾರೆ. ಇದು ಒಂದು ಚಿಕ್ಕ ನಿದರ್ಶನ. ಇಂಥ ಎಷ್ಟೋ ಮನೆಗಳನ್ನು ಬೆಳಗಿದವರು ನಮ್ಮ ಮಾಸ್ತರರು. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳ ಹಾಗೆ ನೋಡಿಕೊಂಡು ಎಲ್ಲರೂ ಒಂದು ಸ್ಥಾನಕ್ಕೆ ಹೋಗುವಂತೆ ಮಾಡಲು ನಿಸ್ವಾರ್ಥ ದುಡಿದವರು. ಇಂದು ವಿದ್ಯಾರ್ಥಿಗಳು ಪ್ರತಿದಿನ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಗುರು ಶಿಷ್ಯ ಸಂಬಂಧದ ಸಾರ್ಥಕತೆ ಇದಲ್ಲವೇ?

2 comments:

  1. ಆಬ್ಬಾ... ಎಮ್.ಬಿ.ನಾಯ್ಕ್ ಮಾಸ್ತರರು ಎಂದರೇ ಮೈ ಜುಮ್ ಎನ್ನತ್ತೆ...... ಎಂಥಹ ವ್ಯಕ್ತಿತ್ವ ಅವರದು.....ಈಗಲೂ ಅವರಿಗೆ ಹೆದರುತ್ತೇನೆ ನಾನು..... ನಮಗೆ ಗಣಿತದ ಮಾಸ್ತರಾಗಿದ್ದರು.... ಅವರ ಬಗ್ಗೆ ಇದ್ದ ಗೌರವ , ಹೆದರಿಕೆ ನಮ್ಮನ್ನು ಇನ್ನೂ ಓದುವಂತೆ ಮಾಡಿತ್ತು..... ಶಾಲೆಯಲ್ಲಿ ನಮಗೆ ಆ ದಿನ ಪೆಟ್ಟು ಇದೆಯೋ, ಇಲ್ಲವೋ ಎಂದು ನಮಗೆ ಅವರ ಡ್ರೆಸ್ ನೋಡಿಯೇ ಗೊತ್ತಾಗುತ್ತಿತ್ತು.....ಬಿಳಿ ಅಂಗಿ, ಪಂಜೆ ಉಟ್ಟು ಬಂದರೆ "ಆರಾಮಿಲ್ಲ" ಅಂತ ಹೇಳಿ ಮನೆಗೆ ಓಡಿ ಹೋಗುತ್ತಿದ್ದವರೂ ಇದ್ದರು.... ಅಷ್ಟು ಪೆಟ್ಟು ಬೀಳುತ್ತಿತ್ತು.... ಬಡ ವಿಧ್ಯಾರ್ಥಿಗಳ ಮೇಲೆ ತುಂಬಾ ಅಕ್ಕರೆ ಅವರಿಗೆ......
    ಅವರ ಬಗ್ಗೆ ನೆನೆದು ನಿಜವಾದ ಗುರುಗಳಿಗೆ ವಂದನೆ ಹೇಳಿದ ಹಾಗಾಯಿತು......ಧನ್ಯವಾದ ಪರೇಶ್...

    ReplyDelete