Friday 19 October 2012

ತೆಳುಗೆರೆ-(ಮೂಢ)ನಂಬಿಕೆ


ಮಗ ಜೋರಾಗಿ ಚೀರುತ್ತಿದ್ದ. ಅಬ್ಬೆ ಹೆದರಿ, ಗಂಡನ ಮೊಬೈಲ್ ಗೆ ಫೋನ್ ಮಾಡಿದಳು. ತಿಮ್ಮಪ್ಪ ಬೋಟಿಗೆ ಹೋಗುವವ. ಬಂದರು ಸೇರಿದ್ದನಷ್ಟೇ. "ಅಯ್ಯೋ, ಇದೆಂಥ ಗ್ರಹಚಾರ" ಎನ್ನುತ್ತಾ ಮನೆ ಕಡೆ ಓಡಿದ. ಜ್ವರ ಜಾಸ್ತಿಯಾಗಿದೆ. ಹೊಟ್ಟೆ ನೋವೂ ಇದೆ. "ನಿನ್ನೆ ಬೈದಿಯವರ ಹತ್ರ ಕರ್ಕೊಂಡು ಹೋಗಿದ್ರಲೇ. ದೆವ್ವ ಓಡ ಹೋಯ್ತು. ಈಗ ಸರಿ ಆಗ್ತದೆ ಅಂತ ಅವ್ರು ಹೇಳ್ದ್ರು. ನಮ್ ಗ್ರಹಚಾರಕ್ಕೆ ಇನ್ನೊಂದು ದೆವ್ವ ಬಂದು ಸೇರ್ಕೊಳ್ಳಲಿಕ್ಕೂ ಸಾಕು. ಇನ್ನು ಡಾಕ್ಟರ್ ಬುಡ್ಕೆ ಹೋಗುದು ಲಾಯ್ಕು. ಅಮ್ಮನವರ ದೇವಸ್ಥಾನಕ್ಕೆ ಹೋಗಿ ಪ್ರಸಾದ್ ಕೇಳ್ಕೊಂಡು ಬರ್ತೆ ಮೊದ್ಲು" ಎಂದು ತಿಮ್ಮಪ್ಪ ದೇವಸ್ಥಾನದ ಕಡೆ ಹೊರಟ. ಭಟ್ಟರು ಅಮ್ಮನವರ ವಿಗ್ರಹದ ಮೂರ್ನಾಲ್ಕು ಭಾಗಗಳಲ್ಲಿ ಸಿಂಗಾರದ ಹೂ ಇಟ್ಟರು. "ಇದು ಬಿದ್ರೆ ಭಟ್ ಡಾಕ್ಟ್ರು, ಇದು ಬಿದ್ರೆ ಸರಾಫ್ ಡಾಕ್ಟ್ರು, ಇದು ಬಿದ್ರೆ ನಾಯಕ್ ಡಾಕ್ಟ್ರು.." ಎಂದು ಹೇಳಿ ಪೂಜೆ ಶುರು ಮಾಡಿದ್ರು. "ಸರಾಫ್ ಡಾಕ್ಟ್ರು ಅಂತ ಪ್ರಸಾದ ಆಯ್ತು, ಎಲ್ಲ ಸರಿ ಆಗ್ತದೆ. ಅಮ್ಮ ನೋಡ್ಕೊಳ್ತಾಳೆ. ಹೋಗ್ ಬಾ" ಎಂದು ಭಟ್ಟರು ಹೇಳಿದಾಗ ತಿಮ್ಮಪ್ಪನಿಗೆ ಏನೋ ಸಮಾಧಾನ. ಕುಂಕುಮ ತೆಗೆದುಕೊಂಡು ಹೋಗಿ, ಮಗನ ಹಣೆಗೆ ಹಚ್ಚಿ ಸರಾಫ್ ಡಾಕ್ಟರರ ಆಸ್ಪತ್ರೆ ಕಡೆ ಹೊರಟರು. 

ಆಸ್ಪತ್ರೆ ಬಾಗಿಲು ಮುಚ್ಚಿದೆ. ಹೊರಗೆ ಬೋರ್ಡ್ ಹಾಕಿದ್ದಾರೆ. "ಇಂದು, ಮತ್ತು ನಾಳೆ ಆಸ್ಪತ್ರೆಗೆ ರಜೆ" ಎಂದು. "ಎಂತ ಮಾಡುದು ಈಗ. ಸರಾಫ್ ಡಾಕ್ಟರ ಹತ್ತಿರ ಹೋಗ್ಬೇಕು ಅಂತ ಅಮ್ಮನವರ ಪ್ರಸಾದ ಆಗಿದೆ. ಮೈ ಬೇರೆ ಸುಡ್ತಾ ಉಂಟು. ಒಂದು ಕೆಲಸ ಮಾಡ್ವ. ಈಗ ಸದ್ಯಕ್ಕೆ ಭಟ್ ಡಾಕ್ಟರ್ ಹತ್ರ ಹೋಗ್ವಾ" ಎಂದು ಆಕಡೆ ಹೋಗುತ್ತಾರೆ. ಫ್ಲೂ ಜ್ವರ ಸರಿ ಆಗುತ್ತದೆ ಎಂದು ಭಟ್ ಡಾಕ್ಟರು ಇಂಜೆಕ್ಷನ್, ಗುಳಿಗೆಗಳನ್ನೆಲ್ಲ ಕೊಡುತ್ತಾರೆ. ಎರಡು ದಿನ ಆಯಿತು. ಗುಳಿಗೆ ತೆಗೆದುಕೊಳ್ಳುತ್ತಾ ಇದ್ದರು ಜ್ವರ ಬಿಟ್ಟು ಬಿಟ್ಟು ಬರ್ತಾ ಇದೆ. " ಇನ್ನು ಕಾಯೋದು ಬೇಡ. ಸರಾಫ್ ಡಾಕ್ಟರ್ ಹತ್ರ ಹೋಗೇ ಬರ್ವಾ." ಎಂದು ಹೊರಡುತ್ತಾರೆ.

ಡಾಕ್ಟರು ಪರೀಕ್ಷೆ ಮಾಡಿ, ಭಟ್ ಡಾಕ್ಟರು ಕೊಟ್ಟ ಮಾತ್ರೆಗಳನ್ನೆಲ್ಲ ನೋಡ್ತಾರೆ. "ಇದೇ ಗುಳಿಗೆ ಮತ್ತೆರಡು ದಿವ್ಸ ಕೊಡು. ಫ್ಲೂ ಜ್ವರ ಅಂದ್ರೆ ಮೂರು ನಾಲ್ಕು ದಿವ್ಸ ಇರ್ತದೆ. ಸರಿ ಆಗ್ತದೆ" ಎಂದು ಹೇಳಿ ಕಳಿಸ್ತಾರೆ. ಮರುದಿನ ಮಗ ಎಲ್ಲಿದ್ದಾನೆಂದು ತಿಮ್ಮಪ್ಪ ಹುಡುಕುತ್ತಿದ್ದರೆ, ಅವನು  ಬೆಳಿಗ್ಗೆಯೇ ಎದ್ದು  ಕ್ರಿಕೆಟ್ ಆಡಲಿಕ್ಕೆ ಹೋಗಿದ್ದಾನೆ.ಹೆಂಡತಿಯ ಬಳಿ- "ಸರಾಫ್ ಡಾಕ್ಟರ ಕೈಗುಣ ನೋಡೇ ಮಾರಾಯ್ತಿ. ಅವ್ರು ಮುಟ್ಟಿದ್ದೇ ನೋಡು ಹ್ಯಾಂಗೆ ಓಡ್ ಹೋಯ್ತು ಜ್ವರ. ಅಮ್ಮ ಪ್ರಸಾದ ಕೊಟ್ಟದ್ದೂ ಸರಿ ಉಂಟು. ಆ ದಿವ್ಸ ಅವ್ರ ಆಸ್ಪತ್ರೆ ಓಪನ್ ಇದ್ದಿದ್ರೆ ಮರುದಿನವೇ ಗುಣ ಆಗ್ತಿತ್ತೋ ಏನೋ. ಮೂರು ದಿನ ಆಯ್ತು ಬೋಟಿಗೆ ಹೋಗದೆ. ಹೋಗ್ ಬರ್ತೆ" ಎಂದು ಹೊರಟ. 

4 comments:

  1. Paresh..
    chennaagide bareda riti....
    idu nijavU saha....

    Ammana prasaadavO, Sharaaf doctor kaiguNavo ,hushaaraaytalla ade mukhya namage...

    ReplyDelete
  2. ಓದದೆ ಇರುವವರಲ್ಲ, ಡಾಕ್ಟರ್ ಕೈಗುಣದ ವಿಷಯ ಬಂದಾಗ ವಿದ್ಯಾವಂತರೂ ಕೂಡ ಈ ರೀತಿ ನಂಬಿ ಬಿಡುತ್ತಾರೆ, ಚೆನ್ನಾಗಿದೆ ಶುಭವಾಗಲಿ

    ReplyDelete
  3. ಸತ್ವಯುತ ಕಿರುಕಥೆ!
    ಬಹುಷಃ ಸರಾಫ ಡಾಕ್ಟರರ ಸಾಮಾಜಿಕ ಕಳಕಳಿಯ ಶುದ್ಧ ಮನಸ್ಸು ಶಿರಾಲಿ ಪರಿಸರಕ್ಕೆ ಈ ನಂಬಿಕೆ ಹುಟ್ಟಿಸಿದೆ ಎಂದರೆ ತಪ್ಪಿಲ್ಲ. ಮನದಾಳದ ನಂಬಿಕೆ!

    ReplyDelete
  4. ಮನುಜನನ್ನು ಎಂಥಾ ಕಷ್ಟದಲ್ಲೂ ಕಾಪಾಡುವುದು ಆತನ ನಂಬಿಕೆ, ಅಷ್ಟೇ.
    ಅದು ಮೂಢವೋ ಇನ್ನೊಂದೋ ಎನ್ನುವುದರ ವಿಶ್ಲೇಷಣೆ, ಆ ಕಷ್ಟದ ಸಮಯ ಪಾರಾದ ನಂತರವಷ್ಟೇ ಮಾಡುವ ಕೆಲಸ.

    ReplyDelete