Tuesday 18 December 2012

ಹನಿಕಥೆಗಳು



ಪ್ರಳಯ 
=====
ಅವನಿಗೆ ಪ್ರಳಯದ ಭಯ. "ಇನ್ನೂ ಜೀವನದಲ್ಲಿ ಏನೇನೋ ಮಾಡುವುದಿದೆ, ಎಷ್ಟೋ ಈಡೇರದ ಆಸೆಗಳಿವೆ, ಎಷ್ಟೋ ಕನಸುಗಳಿವೆ" ಎಂದು ಯೋಚನೆ ಮಾಡುತ್ತಾ ಬೈಕ್ ಓಡಿಸುತ್ತಿದ್ದಾಗ ಆಯ ತಪ್ಪಿ ಲಾರಿಯ ಅಡಿಗಾದ.


ತುತ್ತು 
====

ಅಮ್ಮ ಉಪ್ಪಿಟ್ಟು ಮಾಡಿಕೊಟ್ಟಳು. ತನಗೆ ಉಪ್ಪಿಟ್ಟು ಇಷ್ಟವಿಲ್ಲ ಎಂದು ಕೆಂಡಕಾರಿ ಕಾಲೇಜಿಗೆ ನಡೆದ. ಈಗ ಬೆಂಗಳೂರಿನಲ್ಲಿ ಹಾಸ್ಟೆಲ್ ನಲ್ಲಿ ಇದ್ದಾನೆ. ಪ್ರತಿದಿನ ಬೆಳಿಗ್ಗೆ ಅಮ್ಮನ ಉಪ್ಪಿಟ್ಟು ನೆನಪು ಮಾಡಿಕೊಳ್ಳುತ್ತಾನೆ. ಜೊತೆಗೆ ತನ್ನ ವರ್ತನೆಯನ್ನು ಕೂಡ.

ಹಣ-ಸುಖ 
======

ಸಂಬಳದಲ್ಲಿ ೧೦೦ % ಏರಿಕೆ ಸಿಕ್ಕಿತೆಂದು ಹಿರಿ ಹಿಗ್ಗಿ ಬೇರೆ ಕಂಪೆನಿಗೆ ಹಾರಿದ. ಬೆಳಿಗ್ಗೆಯಿಂದ ಮಧ್ಯರಾತ್ರಿಯ ವರೆಗೆ ಕೆಲಸ. ಖಾತೆಯಲ್ಲಿ ಲಕ್ಷ ಲಕ್ಷ ಕೂಡಿತು. ಸ್ವಲ್ಪ ವಿರಾಮ ಬೇಕೆಂದು, ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗುವುದೆಂದು ನಿಶ್ಚಯ ಮಾಡಿದ. ಪ್ರವಾಸದ ಮುಂಚಿನ ದಿನ ಕಾಲ್ ಬಂತು- "ನಾಳೆ ಕ್ಲೈಂಟ್ ವಿಸಿಟ್ ಇದೆ. ರಜೆ ರದ್ದು" ಎಂದು. ಲಕ್ಷ ಕೋಟಿಯಾಗಿ ಖಾತೆಯಲ್ಲೇ ಇತ್ತು.


ಆ ಸಾಫ್ಟ್ವೇರ್ ಇಂಜಿನಿಯರ್ 
============
ದಿನಪೂರ್ತಿ ಕೆಲಸ ಮಾಡಿ ಕೊನೆಗೂ ಆ ಕೆಲಸ ಮುಗಿದಿತ್ತು. ಖುಷಿಯಿಂದ ಮನೆಗೆ ಬಂದು ಮಲಗಿದ. ಬೆಳಿಗ್ಗೆ ಎದ್ದಾಗ ಯೋಚನೆ- "ನಾನು ಏನು ಮಾಡುತ್ತಿದ್ದೇನೆ? ಯಾರಿಗೋಸ್ಕರ. ಆ ಕಂಪೆನಿಯಲ್ಲಿ ನಾನು ಏನು?" ಎಂಬ ಯೋಚನೆ ಬಂದು  ಹತಾಶನಾಗಿ ಮತ್ತೆ ಹೊದ್ದು ಮಲಗಿದ. ಐದು ನಿಮಿಷದಲ್ಲಿ ಮ್ಯಾನೇಜರ್ ಕನಸಲ್ಲಿ ಬಂದಿದ್ದರು. ಎದ್ದು ಬಿದ್ದು ಆಫೀಸಿಗೆ ಓಡಿದ.


ಮಾಯಾ'ವಿ'
=======
ಅವನದು ಆ ಕಂಪೆನಿಯಲ್ಲಿ ಮೊದಲ ದಿನ. ಹೋದವನೇ ಆಫ಼ರ್ ಲೆಟರ್ ತೋರಿಸಿದ. ರೆಸೆಪ್ಶನಿಸ್ಟ್ ಅದನ್ನು ನೋಡಿ ಹೇಳಿದ "ನಿಮ್ಮ ಮ್ಯಾನೇಜರ್ ಮಾಯಾವಿ. ಮೂರನೇ ಫ್ಲೋರ್ ನಲ್ಲಿ ಮೂರನೇ ಕ್ಯಾಬಿನ್". ಅವನು ಹೆದರಿ "ಛೇ, ಎಂಥ ಗತಿ ಬಂತು, ಎಂಥ ಮ್ಯಾನೇಜರ್ ಸಿಕ್ಕಿದರು" ಎಂದು ಯೋಚನೆ ಮಾಡುತ್ತಾ ಅವರ ಕ್ಯಾಬಿನ್ ಹತ್ತಿರಕ್ಕೆ ಬಂದು ನೋಡಿದರೆ ಮ್ಯಾನೇಜರ್ ಹೆಸರು ಮಾಯಾ ವಿ.

No comments:

Post a Comment